Monday, July 24, 2023

ಯಕ್ಷ ಪ್ರಶ್ನೆ46 Yaksha prashne 46

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 46  ಸ್ವರ್ಗಕ್ಕೆ ಕಾರಣವಾದುದು ಯಾವುದು ?

ಉತ್ತರ - ಸತ್ಯ. 

ಸತ್ಯವನ್ನೇ ಹೇಳಬೇಕು. ಸತ್ಯಕ್ಕಾಗಿಯೇ ಜೀವಿಸಬೇಕು. ಸತ್ಯವೇ ನಮ್ಮ ತಾಯಿ-ತಂದೆ. ಹೀಗೆಲ್ಲಾ ಸತ್ಯದ ಬಗ್ಗೆ ಅನೇಕ ಮಾತುಗಳಿವೆ. ಈ ಮಾತುಗಳು ಜೀವನಕ್ಕೆ ಸತ್ಯ ಎಷ್ಟು ಅಗತ್ಯ ಎಂಬುದನ್ನು ತಿಳಿಸುತ್ತದೆ. ಆದರೆ ಸತ್ಯದ ಬಗ್ಗೆ ನಮ್ಮ ಅರಿವು ಬಹಳ ಮೊಟಕಾಗಿದೆ. ಸತ್ಯ ಎಂಬುದು ಕೇವಲ ಮಾತಿನ ರೂಪ ಎಂಬುದನ್ನು ಮಾತ್ರ ತಿಳಿದಿದ್ದೇವೆ. ಆದರೆ ಈ ಮಾತು ಯಾವ ಮೂಲದ್ದು? ಮಾತಿಗೂ ಒಂದು ಮೂಲ ಬೇಕಲ್ಲವೇ? ಅದೂ ಸತ್ಯವೇ ಆಗಿರಬೇಕಲ್ಲವೇ? ಆ ಸತ್ಯದ ಬಗ್ಗೆ ನಮಗೆ ಸರಿಯಾದ ಅರಿವನ್ನು ನೀಡಿ ನಿಜವಾದ ಸತ್ಯದ ಮಹಿಮೆಯನ್ನು ಅರುಹಿದವರು ಶ್ರೀರಂಗ ಮಹಾಗುರುಗಳು. ಅವರು ಆಡಿದ ಮಾತನ್ನೇ ಯಥಾವತ್ತಾಗಿ ಇಲ್ಲಿ ಹೇಳುತ್ತೇನೆ. 

"ಒ೦ದು ಉದಾಹರಣೆಯನ್ನು ಕೊಡಬಯಸುತ್ತೇನೆ. ಒಂದು ಬೀಜವನ್ನು ತೆಗೆದುಕೊಂಡರೆ ಆ ಬೀಜದಲ್ಲಿ ತನ್ನ ಬೆಳೆಯುವ ಅಭಿಪ್ರಾಯವನ್ನು ಕ್ರೋಡೀಕರಿಸಿಕೊಂಡು ತಿರುಳುರೂಪವಾಗಿರುವ ಭಾಗವೇ 'ಋತ' ಎಂದು ತಿಳಿಯಬೇಕು. 'ಸತ್ಯ' ಎನ್ನುವ ಪದ ಸಂಸ್ಕೃತ ಪದ. ಕನ್ನಡದ್ದಲ್ಲ. ಆ ಪದವನ್ನು ಸ ತಿ-ಯಂ' - ಎಂದು ವ್ಯವಹರಿಸುತ್ತಾರೆ. ಆ ಬೀಜದಲ್ಲಿರುವ ಆಶಯವು ಎಂದರೆ ಋತವು ಸ್ಥೂಲರೂಪವಾಗಿ ನಮ್ಮ ಕಣ್ಮುಂದೆ ನಿಲ್ಲುವ ರೀತಿಯಲ್ಲಿ ವೃಕ್ಷರೂಪವಾಗಿ ಬೆಳೆದರೆ ಅದು 'ಸತ್ಯ'. ಋತಕ್ಕೆ ವಿರೋಧವಿಲ್ಲದ ರೀತಿಯಲ್ಲಿ, ಮರೆಯಾಗಿರುವ ಋತದ ಕಡೆಗೆ ಒಯ್ಯಲು ತಿರುಗಿ ಬೀಜರೂಪಕ್ಕೆ ಹೋಗಲು ಅನುಕೂಲವಾದ ವೃಕ್ಷದ ಸ್ಥಾನದಲ್ಲಿರುವುದು 'ಸತ್ಯ', 'ಸ' ಎಂದರೆ ಅಮರವಾದದ್ದು. 'ತಿ' ಎಂದರೆ ಮರವಾದದ್ದು, ಎಂದರೆ ನಾಶವುಳ್ಳದ್ದು. ಇವೆರಡಕ್ಕೂ ವಿರೋಧವಿಲ್ಲದ ಸೇತುವೆಯಂತಿರುವುದು 'ಯಂ' ವ್ಯವಹಾರದಲ್ಲಿ ಅದೇ (ಮರ- ಅಮರಗಳ ಸಾಮರಸ್ಯವೇ) ಸತ್ಯ. ಇಂತಹ ವಿಷಯವನ್ನೇ ಮಾತಿನ ರೂಪದಲ್ಲಿ ಹೇಳುವುದನ್ನೇ ಸತ್ಯ ಎಂತಲೂ ಹೇಳುವುದು. ಅಂದರೆ ಸೃಷ್ಟಿಗೆ ವಿರೋಧವಾಗದ ರೀತಿಯಲ್ಲಿ ನಮ್ಮ ನಡೆಗಳಿರಬಹುದು, ಅಥವಾ ನುಡಿಗಳಿರಬಹುದು, ಅಥವಾ ಇನ್ನಾವುದೇ ವ್ಯವಹಾರಗಳಿರಬಹುದು ಅವೆಲ್ಲವನ್ನೂ ಸತ್ಯವೆಂಬ ಪದದಿಂದಲೇ ಕರೆಯುತ್ತೇವೆ. 

ಇಂತಹ ಸತ್ಯವೇ ಸ್ವರ್ಗಕ್ಕೆ ಕಾರಣವಾದುದು. ಸ್ವರ್ಗವೆಂದರೆ ನಾವು ಕಾಣುವ ರೀತಿಯಲ್ಲಿರುವ ಲೋಕವಲ್ಲ. ಅಂತರಂಗದಲ್ಲಿ ಸಾಧಕರಿಗೆ ಗೋಚರವಾಗುವ ಬೆಳಕಿನ ಲೋಕ. ಲೋಕವೆಂಬ ಪದಕ್ಕೂ ಅದೇ ಅರ್ಥ. 'ಲೋಕೃ-ದರ್ಶನೇ' ಎಂಬ ಧಾತುವಿನಿಂದ ಉತ್ಪನ್ನವಾದ ಲೋಕ ಎಂವ ಪದವು ದರ್ಶನಕ್ಕೆ ಅಥವಾ ಅನುಭವಕ್ಕೆ ಬರುವ ವಿಷಯ ಎನ್ನಬಹುದು. ಆನಂದದ ಒಂದು ಉನ್ನತವಾದ ಸ್ತರ. ಈ ಸೃಷ್ಟಿಯು ವಿಸ್ತಾರವಾದದ್ದೇ ಆ ಸತ್ಯವೆಂಬ ಪರಬ್ರಹ್ಮನಿಂದ. ಸ್ವರ್ಗವೂ ಅವನ ವಿಸ್ತಾರದ ಒಂದು ಸ್ತರವೇ ಆಗಿದೆ. ಬೀಜದಿಂದ ವಿಕಾಸವಾದ ವೃಕ್ಷವು ಹೇಗೆ ನಾನಾ ಸ್ತರಗಳನ್ನು ಹೊಂದಿ ಆ ರೂಪಕ್ಕೆ ಬಂದಿರುತ್ತದೆಯೋ, ಆ ವೃಕ್ಷದ ಪ್ರತಿಯೊಂದು ಭಾಗವೂ ಅದೇ ಬೀಜದ ನಾನಾ ರೂಪವಲ್ಲವೇ. ಹಾಗೆಯೇ ಸ್ವರ್ಗವೂ ಸತ್ಯದ ಒಂದು ರೂಪವಾದ್ದರಿಂದ ಈ ಸೃಷ್ಟಿಯ ಅರಿವೇ ಸತ್ಯದ ಅರಿವಾದ್ದರಿಂದ ಈ ಸೃಷ್ಟಿಯ ಅರಿವನ್ನು ಪಡೆಯುತ್ತಾ ಸಾಗಿದಾಗ ಯಾವುದೋ ಒಂದು ಕಾಲಘಟ್ಟದಲ್ಲಿ ಆ ಸ್ವರ್ಗದ ಅರಿವೂ ಆಗಲೇಬೇಕಲ್ಲವೇ. ಇದೇ ಆಶಯವನ್ನು ವ್ಯಕ್ತಪಡಿಸುವಂತಿದೆ ಧರ್ಮಜನಿಗೆ ಯಕ್ಷನು ಕೇಳಿದ ಪ್ರಶ್ನೆ.

ಸೂಚನೆ : 23/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.