Sunday, July 2, 2023

ಅಷ್ಟಾಕ್ಷರೀ​ - 38 ಸರ್ವಧರ್ಮಾನ್ ಪರಿತ್ಯಜ್ಯ (Astakshara Darshana 38 Sarvadharmān Parityajya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಣಾಂಗಣದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಮಾಡಿದ ಉಪದೇಶವೇ ಭಗವದ್ಗೀತೆ. ಗೀತೆಗೆ ನಾನಾಭಾಷ್ಯಗಳಿವೆ. ಇವೆಲ್ಲಾ ಇರುವುದೂ ಸಂಸ್ಕೃತದಲ್ಲೇ. ಸಂಸ್ಕೃತವನ್ನು ಕಲಿತು ಇವನ್ನರಿಯುವೆ – ಎಂದಂದುಕೊಳ್ಳಲೂ ಬಹುಮಂದಿಗಿಂದು ಸಮಯವಿಲ್ಲವಾಗಿದೆ.  ಗೀತಾಸಾರಾಂಶವನ್ನು ಯಾರಾದರೂ ಸರಳವಾಗಿ ತಿಳಿಸಿದರೆ ಅದೇ ಮಹೋಪಕಾರವಾದೀತು!

ಹೋಗಲಿ, ಶ್ರೀಕೃಷ್ಣನ ಕಟ್ಟಕಡೆಯ ಮಾತಾದರೂ ಏನು? - ಎಂಬ ಕುತೂಹಲವು ಹುಟ್ಟಬಹುದು. ಆ ಜಿಜ್ಞಾಸೆಯೇ ಇಲ್ಲಿಯ ವಸ್ತು. ಗೀತೆಯ ಕೊನೆಯ ಆರು ಶ್ಲೋಕಗಳು ಅರ್ಜುನ-ಸಂಜಯರ ನುಡಿಗಳು. ಅವಕ್ಕೂ ಹಿಂದಿನ ಆರು, ಕೃಷ್ಣನ ಉಪಸಂಹಾರದ ಉಕ್ತಿಗಳು: ಅರ್ಜುನನೇ, ನನ್ನೀ ಮಾತುಗಳು ರಹಸ್ಯವಾದವು; ರುಚಿ-ಆದರಗಳಿಲ್ಲದವರಿಗೆ ಅದನ್ನು ಹೇಳದಿರು; ನಮ್ಮೀ ಸಂವಾದವೇ ಒಂದು ಜ್ಞಾನಯಜ್ಞ; ಇದರ ಅಧ್ಯಯನವಿರಲಿ, ಶ್ರವಣಮಾತ್ರದಿಂದಲೂ ಸದ್ಗತಿಲಾಭವುಂಟು; ನನ್ನ ಮಾತಿನಿಂದ ನಿನ್ನ ಮೋಹ ಕಳೆಯಿತಷ್ಟೆ? - ಎಂದು ಹೇಳುವ ಕೇಳುವ ಮಾತುಗಳು.

ಈ ಹನ್ನೆರಡು ಶ್ಲೋಕಗಳ ಹಿಂದಿನ ಮಾತೇ ಶ್ರೀಕೃಷ್ಣನ ಉಪದೇಶದ ಕೊನೆಯ ನುಡಿ: ಸರ್ವಧರ್ಮಾನ್ ಪರಿತ್ಯಜ್ಯ - ಎಂದಾರಂಭವಾಗುವ ಶ್ಲೋಕ. ಇದನ್ನು ಚರಮಶ್ಲೋಕವೆಂದು ಜಪಿಸುವುದೂ ಉಂಟು. 'ಚರಮ' ಎಂದರೆ ಕೊನೆಯದು. ಈ ಅಂತಿಮೋಕ್ತಿಯಲ್ಲೇ ಗೀತಾಸಾರವೂ ಇದೆಯೆಂದರೆ ತಪ್ಪಲ್ಲ.

ಏನೆನ್ನುತ್ತದೆ ಈ ಶ್ಲೋಕ? : "ಅಯ್ಯಾ ಅರ್ಜುನನೇ, ಎಲ್ಲಾ ಧರ್ಮಗಳನ್ನೂ ಬಿಡು; ನನ್ನೊಬ್ಬನನ್ನೇ ಶರಣುಹೊಂದು; ಹಾಗೆ ಮಾಡಿದೆಯಾದರೆ ನಿನ್ನನ್ನು ಸರ್ವಪಾಪಗಳಿಂದಲೂ ಬಿಡಿಸುವೆನು, ಶೋಕಿಸಬೇಡ".

ಶ್ಲೋಕವು ಸುಲಭವಾಗಿದೆಯೆಂದು ಮೇಲ್ನೋಟಕ್ಕೆ ತೋರುತ್ತದೆ. ಆದರಿಲ್ಲಿ ಹಲವು ವಿಶೇಷಗಳಿವೆ. ಕೆಲವನ್ನು ವ್ಯಾಖ್ಯಾನಕಾರರು ಗುರುತಿಸಿದ್ದಾರೆ. ಆದರೆ ಮುಖ್ಯವಿಶೇಷವೊಂದನ್ನು ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.

ಮೊದಲನೆಯದಾಗಿ "ಎಲ್ಲ ಧರ್ಮಗಳನ್ನೂ ಬಿಡು" ಎಂದರೇನರ್ಥ? (ಈಚೆಗಂತೂ ಹಿಂದೂಧರ್ಮ, ಇಸ್ಲಾಂಧರ್ಮ, ಕ್ರೈಸ್ತಧರ್ಮ ಎಂದೆಲ್ಲ ಪದಪ್ರಯೋಗಗಳ  ರೂಢಿಯೇರ್ಪಟ್ಟು, ಅಪಾರ್ಥಕ್ಕೆ ದುಪ್ಪಟ್ಟು ಆಸ್ಪದವೇ ಆಗಿಹೋಗಿದೆ. ಗೀತೆಯ ಕಾಲಕ್ಕೆ ಇಸ್ಲಾಂ ಇರಲಿ, ಕ್ರೈಸ್ತವೂ ಹುಟ್ಟಿರಲಿಲ್ಲವಷ್ಟೆ? ಅಲ್ಲದೆ, ಅವನ್ನು ಪಂಥಗಳೆನ್ನಬಹುದು, ಅಷ್ಟೆ; ಧರ್ಮವೆಂದಲ್ಲ.)

ಯುದ್ಧಮಾಡುವುದು ಕ್ಷತ್ರಿಯಧರ್ಮ - ಎಂದು ಕೃಷ್ಣನೇ ಹೇಳಿರುವನಲ್ಲವೇ? ಕ್ಷತ್ರಸಹಜವಾದ ಅದನ್ನು ಅರ್ಜುನನು ಬಿಡಬೇಕೆಂದರ್ಥವೇ? ಅರ್ಜುನನು ಗೃಹಸ್ಥನೂ ಹೌದು; ಗೃಹಸ್ಥಧರ್ಮವನ್ನೂ ತ್ಯಜಿಸಬೇಕೆಂದೇ? 'ಧರ್ಮಂ ಚರ' ಎಂಬ ಉಪನಿಷದುಕ್ತಿಗೆ ಇವೆಲ್ಲ ವಿರುದ್ಧವಲ್ಲವೇ? ಎರಡನೆಯದಾಗಿ, ಧರ್ಮವೆಂಬುದು ಕರ್ತವ್ಯವೆಂದಾದಲ್ಲಿ ಕರ್ತವ್ಯವನ್ನೇ ತೊರೆಯುವುದೇ? ಕರ್ತವ್ಯಗಳೆಲ್ಲವನ್ನೂ ಬಿಟ್ಟುಬಿಟ್ಟು ಭಗವಂತನಲ್ಲಿ "ಶರಣಾಗಿಬಿಟ್ಟೆ"ನೆಂದರಾಯಿತೇ? ಇದು ಬೇಜವಾಬ್ದಾರಿತನವಾಗುವುದಿಲ್ಲವೇ? ಮೂರನೆಯದಾಗಿ, ಅಷ್ಟಕ್ಕೇ ಪಾಪಗಳೆಲ್ಲ ಕಳೆಯುವುದಾದಲ್ಲಿ, ಆಹಾ, ಎಲ್ಲವೂ ಸುಲಭವೇ ಆಗಿಹೋಯಿತು: ಶೋಕಿಸುವುದಕ್ಕೆ ಆಸ್ಪದವಾದರೂ ಇನ್ನೇನಿದೆ? - ಎಂದೆಲ್ಲಾ ಪ್ರಶ್ನೆಗಳು ಏಳುವುದಿಲ್ಲವೇ?

 ಭಗವಂತನಲ್ಲಿ ಶರಣಾಗತಿಯನ್ನು ಈ ಶ್ಲೋಕವು ಹೇಳುತ್ತದೆಂಬುದೇನೋ ಸುಸ್ಪಷ್ಟವೇ. 'ಧರ್ಮ'ವೆಂಬುದಕ್ಕೆ 'ಕರ್ತವ್ಯಕರ್ಮ'ಗಳು ಎಂಬುದಷ್ಟೇ ಅರ್ಥವಲ್ಲ. ಏನೇನನ್ನು ಬಿಟ್ಟಾಗ ಶರಣಾಗತಿಯು ಸಾಧ್ಯವೋ ಅದದನ್ನೆಲ್ಲ ಬಿಡತಕ್ಕದ್ದು; ಅದಕ್ಕಾಗಿ, ಯಾವ 'ಧರ್ಮ'ಗಳನ್ನು ಬಿಟ್ಟಾಗ ಶರಣಾಗತಿಯು ಸಾಧ್ಯ? - ಎಂಬುದನ್ನು ಮೊದಲರಿಯಬೇಕು.

ಕಣ್ಣು ಇಂದ್ರಿಯ; ನೋಡುವುದು ಅದರ "ಧರ್ಮ". ಧರ್ಮವೆಂದರೆ ಸಹಜ(ಪ್ರ)ವೃತ್ತಿ. ಉಳಿದ ಇಂದ್ರಿಯಗಳಿಗೂ ಹಾಗೆಯೇ ತಮ್ಮ ತಮ್ಮ ಧರ್ಮಗಳುಂಟು. ಹಾಗೆಯೇ ಮನೋಬುದ್ಧಿಗಳಿಗೂ: ಇವುಗಳ ಧರ್ಮವೆಂದರೆ ಸಾಧಾರಣವಾಗಿ ಹೊರಮುಖವಾಗಿ ಹರಿಯುವುದೇ. ಚಂಚಲತೆಯು ಚಿತ್ತಧರ್ಮ; ಅದು ಉತ್ಕಟವಾಗಿದ್ದಾಗ ಶರಣಾಗತಿಯೆಂತು ಘಟಿಸೀತು? ಮಾನಸಿಕಚಾಂಚಲ್ಯ-ಪ್ರಾಕೃತಿಕಜಂಜಾಟಗಳ ಗಲಾಟೆ ನಿಂತಾಗಲೇ ಭಗವಂತನಲ್ಲಿ ಶರಣಾಗತಿಯೆಂಬುದು ಶಕ್ಯವಾಗುವುದು .ಇಂದ್ರಿಯಧರ್ಮ-ಮನೋಧರ್ಮ-ಬುದ್ಧಿಧರ್ಮಗಳು ಪ್ರಕೃತಿಧರ್ಮಗಳು; ಪ್ರಕೃತಿಧರ್ಮಗಳನ್ನು ಮೀರಿದಾಗಲೇ ಭಗವಂತನು  ಲಭಿಸುವುದು.

ಭಗವಂತನಲ್ಲಿ ಸೇರಿಕೊಳ್ಳುತ್ತಿದ್ದಂತೆಯೇ ಸರ್ವಪಾಪಗಳೂ ದೂರವಾಗುವುವು. ಪಾಪಗಳೊಂದಿಗೆ ಪುಣ್ಯಗಳೂ ದೂರವಾಗುವುವೇ! ಏಕೆ? ಪುಣ್ಯಪಾಪಗಳೆರಡನ್ನೂ ಮೀರಿದುದಲ್ಲವೇ ಭಗವತ್ಸ್ವರೂಪವೆಂಬುದು? ಅದರಲ್ಲಿ ಒಂದಾಗುವುದೇ ಕರ್ಮಯೋಗ-ಭಕ್ತಿಯೋಗ-ಜ್ಞಾನಯೋಗಗಳೆಲ್ಲದರ ಗುರಿ. ಏಕಪುರುಷನಾದ ಭಗವಂತನೊಂದಿಗೆ ಸೇರ್ಪಡೆಯೆಂದರೆ ಪ್ರಕೃತಿಯಿಂದ ಬೇರ್ಪಡೆಯೇ. ಇಪ್ಪತ್ನಾಲ್ಕುತತ್ತ್ವಗಳಿಂದಾದ ಪ್ರಕೃತಿಯಿಂದ ಬೇರಾಗುವುದೇ ಯೋಗವಿದ್ಯೆಯ ಗುರಿಯಲ್ಲವೇ? ಆನಂದಸ್ವರೂಪನಾದ ಏಕಪುರುಷನಲ್ಲಿ ಏಕೀಭಾವವು ಮೂಡಿದಾಗ ಶೋಕಕ್ಕೆಡೆಯೆಲ್ಲಿ? ಹೀಗಾಗಿ, ಗೀತೆಯ ಆರಂಭವು ಶೋಕದಲ್ಲಿ; ಮುಡಿವು ಶೋಕಾತೀತದಲ್ಲಿ: ದುಃಖಸಂಯೋಗ-ವಿಯೋಗವೇ ಯೋಗವಲ್ಲವೇ? ಅಲ್ಲಿಗೆ, ಯೋಗಶಾಸ್ತ್ರವಾದ ಗೀತೆಯ ಈ ಚರಮಶ್ಲೋಕವು ಯೋಗದ ಚರಮಾವಸ್ಥೆಯನ್ನೇ ಹೇಳುತ್ತದೆಯೆಂದಾಯಿತು! 

ಭಗವಂತನಲ್ಲಿ ತನ್ಮಯತೆಯಿಂದ ಏಕೀಭೂತನಾಗಿದ್ದಾಗ ಇಂದ್ರಿಯವ್ಯಾಪಾರಗಳಿರವು, ಎಂದೇ ಯಾವುದೇ ಕರ್ಮಬಾಧ್ಯತೆಯೂ ಇರದು; ಎಂದೇ, ಕೆಲಕಾಲ ಹಾಗೆ ನೆಮ್ಮದಿ-ನೈಶ್ಚಲ್ಯಗಳಿಂದಿದ್ದು, ಇನ್ನುಳಿದ ಸಮಯದಲ್ಲಿ  ಸರ್ವಧರ್ಮಗಳನ್ನೂ, ಎಂದರೆ ವಿಹಿತವಾದ ಸರ್ವಕರ್ಮಗಳನ್ನೂ, ಅನುಷ್ಠಿಸಬೇಕಾದದ್ದೇ. ಒಟ್ಟಿನಲ್ಲಿ, ಧರ್ಮಪರಿಪಾಲನೆಯೆಂಬುದೆಲ್ಲಿ, ಧರ್ಮಪರಿತ್ಯಾಗವೆಂಬುದೆಲ್ಲಿ? (ಮತ್ತು ಹೇಗೆ?) - ಎಂಬ ವಿಭಾಗವನ್ನರಿತು ಜೀವನಮಾಡಬೇಕು - ಎಂಬ ಮಹೋನ್ನತ-ಮರ್ಮವನ್ನು ಮಹಾಗುರುಗಳು ಮನವರಿಕೆಮಾಡಿಕೊಟ್ಟಿದ್ದರು.

ಸೂಚನೆ: 2/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ