Friday, March 31, 2023

ಭಾವತರಂಗಗಳು ಬೀರುವ ಪ್ರಭಾವ (Bhavatarangagalu Biruva Prabhava)

ಲೇಖಕಿ ; ವಿದುಷಿ ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)  




ಪಾಂಡವರ ಅಜ್ಞಾತವಾಸವು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವ ಸಂದರ್ಭ.  ಕೌರವರ ಆಸ್ಥಾನದಲ್ಲಿ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಪಾಂಡವರನ್ನು ಹುಡುಕುವ ಸಲುವಾಗಿ, ದುರ್ಯೋಧನನಿಂದ ಕಳುಹಿಸಲ್ಪಟ್ಟ ಗುಪ್ತಚರ ತಂಡವು ವಿಫಲವಾಗಿ ಬಂದು, ಪಾಂಡವರನ್ನು ಕಾಡು, ಪರ್ವತ, ಹಳ್ಳಿ, ನಗರ, ಎಲ್ಲೆಡೆಯಲ್ಲಿಯೂ ಹುಡುಕಿದ್ದೇವೆ; ಅವರ ಸುಳಿವೇ ಇಲ್ಲ. ಬಹುಶಃ ಅವರು ಯಾವುದಾದರೂ ಪ್ರಾಣಿಗಳಿಗೆ ಆಹಾರವಾಗಿ ಪ್ರಾಣವನ್ನು ಕಳೆದುಕೊಂಡಿರಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಆದರೆ ಅಲ್ಲಿರುವ ಕೃಪಾಚಾರ್ಯರು ಮತ್ತು ದ್ರೋಣಾಚಾರ್ಯರು ಹಾಗಾಗಲು ಸಾಧ್ಯವೇ ಇಲ್ಲ; ಅಂತಹ ಧರ್ಮಿಷ್ಠರೂ, ಶೂರರೂ ಆಗಿರುವ ಅವರು ಪ್ರಾಣಿಗಳ ಬಾಯಿಗೆ ಸಿಕ್ಕಿ ಸಾಯುವುದು ಅಸಂಭವವೇ ಸರಿ!  ಇನ್ನೂ ಸೂಕ್ಷ್ಮನಡೆಯ ಗುಪ್ತಚರರನ್ನು ಕಳುಹಿಸಿ ಅವರನ್ನು ಹುಡುಕಿಸುವ ಪ್ರಯತ್ನ ಮಾಡಬಹುದು ಎಂಬ ತಮ್ಮ ಸಲಹೆಯನ್ನು ದುರ್ಯೋಧನನಿಗೆ ನೀಡುತ್ತಾರೆ. ಭೀಷ್ಮಾಚಾರ್ಯರೂ ಕೂಡ ಅವರ ಮಾತನ್ನು ಪುಷ್ಟೀಕರಿಸಿ, ಪಾಂಡವರನ್ನು ಎಲ್ಲಿ  ಹುಡುಕಬೇಕೆಂಬ  ಉಪಾಯವನ್ನು ಕೊಡುತ್ತಾರೆ. ಎಲ್ಲಿ ಧರ್ಮರಾಯನು ಇರುತ್ತಾನೆಯೋ ಆ ಪ್ರದೇಶದಲ್ಲಿ ಪ್ರಕೃತಿಯಲ್ಲಿ ಕೆಲವು ಉತ್ತಮ ಬದಲಾವಣೆಗಳು ಸಂಭವಿಸುತ್ತವೆ; ಮಳೆ-ಬೆಳೆ ಉತ್ತಮವಾಗಿರುತ್ತದೆ; ಜನರಲ್ಲಿ ಸನ್ನಡತೆ ಉಂಟಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಅವರನ್ನು ಹುಡುಕುವ ಪ್ರಯತ್ನ ಮಾಡಿಸಬಹುದು ಎಂದು ತಾನು ಸಲಹೆಯನ್ನು ಕೊಡುತ್ತಾನೆ. ಇಲ್ಲಿ ಮಹಾಪುರುಷನಾದ ಧರ್ಮರಾಯನ ವ್ಯಕ್ತಿತ್ವವನ್ನು ಅಳೆಯಲು ಮಹಾಪುರುಷರಾದಂತಹ ಭೀಷ್ಮರಂತಹವರೇ ಸಮರ್ಥರು ಎಂಬುದು ನಮಗೆ ತಿಳಿಯುತ್ತದೆ.


 ಧರ್ಮರಾಯನು ಎಂತಹ ಉದ್ವೇಗಕ್ಕೊಳಗಾಗುವ ಸಂದರ್ಭ ಬಂದರೂ ಮನಸ್ಸಿನ ಸ್ಥಿರತೆ, ಶಾಂತಿ - ಸಮಾಧಾನವನ್ನು ಕಳೆದುಕೊಳ್ಳದೇ, ಜೀವನದ ಹಿನ್ನೋಟ ಮುನ್ನೋಟಗಳನ್ನು, ಕರ್ಮದ ಗತಾಗತಿಯನ್ನು ಚೆನ್ನಾಗಿ ಅರಿತ ,ಧರ್ಮದ ನಡೆಯಿಂದ ಸ್ವಲ್ಪವೂ ವಿಚಲಿತನಾಗದ ಧರ್ಮಾತ್ಮ.


 ಮಹಾತ್ಮರು ವಾಸಿಸುವ ಸುತ್ತಲಿನ ಪರಿಸರವೂ ಅವರ ಮನಸ್ಸಿಗೆ ತಕ್ಕಂತೆ ಉತ್ತಮವಾಗಿರುತ್ತದೆ ಎಂಬುದಾಗಿ ರಾಮಾಯಣ,ಮಹಾಭಾರತಾದಿ ಗ್ರಂಥಗಳಲ್ಲಿ ಉಲ್ಲೇಖವಿದೆ. ಉದಾಹರಣೆಗೆ ರಾಮನಂತಹ ಮಹಾಪುರುಷರು ರಾಜರಾಗಿ ಆಡಳಿತ ಮಾಡುವಾಗ ಪ್ರಕೃತಿಮಾತೆಯು ಪ್ರಸನ್ನಳಾಗಿದ್ದಳು, ಯಾವುದೇ ವಿಕೋಪ ಸಂಭವಿಸುತ್ತಿರಲಿಲ್ಲ, ಪ್ರಜೆಗಳೂ ಕೂಡ ಅತ್ಯಂತ ಸಮಾಧಾನಚಿತ್ತರಾಗಿ ಜೀವನ ನಡೆಸುತ್ತಿದ್ದರು. ಕಣ್ವರಂತಹ ಮಹರ್ಷಿಗಳ ಆಶ್ರಮದ ಪರಿಸರದಲ್ಲಿ ಪ್ರಾಣಿಗಳೂ ಸಹ ತಮ್ಮ ಸ್ವಾಭಾವಿಕ ವೈರತ್ವವನ್ನು ತ್ಯಜಿಸಿ ಸಹಬಾಳ್ವೆಯನ್ನು ಮಾಡುತ್ತಿದ್ದವು. ಹೀಗೆ ಮಹಾತ್ಮರು ಆತ್ಮಸಾಧನೆಯಲ್ಲಿ ತೊಡಗಿ, ಆತ್ಮಗುಣಗಳನ್ನು ಮೈಗೂಡಿಸಿಕೊಂಡು,ಸದಾಕಾಲದಲ್ಲಿಯೂ ಮನಸ್ಸಿನ ಶುದ್ಧತೆ ಹಾಗೂ ಸಮಾಧಾನವನ್ನು ಕಾಪಾಡಿಕೊಳ್ಳುತ್ತಿದ್ದ ಪರಿಣಾಮ ಹೊರಗಿನ ಪರಿಸರದ ಮೇಲೆ ಉತ್ಕೃಷ್ಟವಾದ ಪ್ರಭಾವ ಬೀರುತಿತ್ತು. ನಮ್ಮ ಭಾರತ ಭೂಮಿಯಲ್ಲಿ ಅಂತಹ ಅನೇಕ ಮಹಾತ್ಮರು ಅವತರಿಸಿ ಈ ನೆಲದಲ್ಲೆಲ್ಲಾ ಓಡಾಡಿರುವ ಪರಿಣಾಮ, ಈ ಭೂಮಿಯು ಪುಣ್ಯಭೂಮಿಯಾಗಿದೆ; ತೀರ್ಥಕ್ಷೇತ್ರಗಳ ನೆಲೆವೀಡಾಗಿದೆ. "ಜ್ಞಾನಿಗಳು ತಾವು ಕಾಲಿಟ್ಟೆಡೆಗಳನ್ನೆಲ್ಲಾ ತೀರ್ಥರೂಪವಾಗಿ ಮಾಡುವರು. ತೀರ್ಥರೂಪರಾದ ಮಹಾತ್ಮರು ಪಾದವಿನ್ಯಾಸ ಮಾಡಿದೆಡೆಯೆಲ್ಲಾ, ಅದು ಕಾಡಾಗಲೀ ಮೇಡಾಗಲೀ, ತೀರ್ಥವೇ ಆಗುತ್ತದೆ. ಪರಮಗುರು ಮೆಟ್ಟಿದ ಜಾಗ ತೀರ್ಥವಾಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.


 ಸಾಮಾನ್ಯ ಜೀವನದಲ್ಲಿಯೇ ಮನಸ್ಸಿನ ಭಾವತರಂಗಗಳು ಹೇಗೆ ನಮ್ಮ ಸುತ್ತ ಮುತ್ತ ಪ್ರಭಾವ ಬೀರುತ್ತವೆ ಎಂಬುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ಅನುಭವಕ್ಕೆ ಬರುತ್ತದೆ. ಯಾವುದೇ ಒಬ್ಬ ವ್ಯಕ್ತಿ ಅತ್ಯಂತ ಸಂತೋಷವನ್ನು ಅನುಭವಿಸುತ್ತಿದ್ದರೆ ಅವನ ಸುತ್ತಲಿರುವವರ ಮೇಲೂ ಕೂಡ ಆ ಸಂತಸದ ಭಾವ ಸ್ವಲ್ಪಮಟ್ಟಿಗೆ ಮೂಡುತ್ತದೆ. ಹಾಗೆಯೇ ಅತ್ಯಂತ ದುಃಖದಲ್ಲಿರುವ ಅಥವಾ ಕೋಪದಲ್ಲಿರುವವರ ಬಳಿ ಇರುವವರಲ್ಲಿಯೂ ಕೂಡ ಆ ಭಾವವೇ ಉಂಟಾಗುತ್ತದೆ ಹಾಗೂ ಮನಸ್ಸಿನ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪುಟ್ಟ ಮಕ್ಕಳನ್ನು ದೇವರಿಗೆ ಸಮಾನ ಎಂದು ಕರೆಯುವುದುಂಟು.  ಅವುಗಳ ಮನಸ್ಸು ನಿರ್ಮಲವಾಗಿರುತ್ತದೆ.  ಮಕ್ಕಳು ಆನಂದದಿಂದ ಓಡಾಡಿಕೊಂಡಿರುವೆಡೆಯಲ್ಲಿ ಆನಂದದ ವಾತಾವರಣವೇ ಮನೆಮಾಡಿರುತ್ತದೆ. ಹಾಗಾಗಿ, ನಮ್ಮ ಭಾವ ತರಂಗಗಳು ಸುತ್ತಲಿನ ಪರಿಸರದಲ್ಲಿ, ಪದಾರ್ಥಗಳಲ್ಲಿ ಸಹಜವಾಗಿಯೇ ಪ್ರಭಾವ ಬೀರುತ್ತವೆ. 


ಆತ್ಮಸಾಧನೆಯಲ್ಲಿ ತೊಡಗಿ ಆ ಮಾರ್ಗದಲ್ಲಿ ಸಾಗುವಾಗ ಸಿಗುವ ಸಂಪತ್ತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು,ಮ ನಸ್ಸನ್ನು ಶಾಂತವಾಗಿ, ಸಂತೋಷವಾಗಿ ಇಟ್ಟುಕೊಂಡು ಧನಾತ್ಮಕ ಚಿಂತನೆಯಿಂದಿದ್ದರೆ ನಮ್ಮ ಜೀವನವೂ ಸುಂದರವಾಗಿರುವುದರ ಜೊತೆಗೆ ಸುತ್ತಲಿನ ಪರಿಸರವೂ ಉತ್ತಮವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಸೂಚನೆ: 30/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.