ಲೇಖಕರು : ರಾಜಗೋಪಾಲನ್ ಕೆ ಎಸ್
(ಪ್ರತಿಕ್ರಿಯಿಸಿರಿ lekhana@ayvm.in)
ಪರಮಭಾಗವತ ವಾಗ್ಗೇಯಕಾರ ತ್ಯಾಗರಾಜರನ್ನು ಕುರಿತು ಅವರ ಗುರುಗಳಾದ ಶುಂಠಿ ವೆಂಕಟರಮಣರು ಒಮ್ಮೆ ಒಂದು ಉದ್ಬೋಧಕ ಪ್ರಶ್ನೆ ಕೇಳುತ್ತಾರೆ- "ನಿನ್ನನ್ನು ಯಾರಾದರೂ ಹೊಗಳಿದರೆ ಏನು ಮಾಡುತ್ತೀಯೆ? ಯಾರಾದರೂ ಬೈದರೆ ಏನು ಮಾಡುತ್ತೀಯೆ?" ಎಂದು. ತ್ಯಾಗರಾಜರು ಒಡನೆಯೇ "ನನ್ನನ್ನು ಯಾರಾದರೂ ಹೊಗಳಿದರೆ ಅದನ್ನು ಭಗವಂತನಿಗೆ ಕೊಟ್ಟುಬಿಡುತ್ತೇನೆ. ನನ್ನನ್ನು ಬೈದರೆ ಅವರು ನನ್ನ ಪ್ರಕೃತಿಯನ್ನು ನೋಡಿ ಅಂದದ್ದು ಇದು ಎಂದು ಸುಮ್ಮನಿದ್ದುಬಿಡುತ್ತೇನೆ" ಎನ್ನುತ್ತಾರೆ. ಎಂತಹ ವೇದಾನ್ತಸಾರವನ್ನು ಒಳಗೊಂಡ ಉತ್ತರವಿದು! ತ್ಯಾಗರಾಜರಂತಹ ಪರಿಪಕ್ವ ಚೇತನರಿಗೆ ಸುಲಭಸಾಧ್ಯ. ಇತರರಿಗೆ ಶ್ರಮಿಸಿ ಸಂಪಾದಿಸಬೇಕಾದ ಮನಃಸ್ಥಿತಿ!
ಇತರರು ನಮ್ಮನ್ನು ಪ್ರಶಂಸೆ ಮಾಡಿದೊಡನೆ, ಅದಕ್ಕೆ ಈಡಾಗುವವರೇ ಹೆಚ್ಚು. ಯಾರಾದರೂ ಹೊಗಳಿದರೆ ಕೂಡಲೇ ಅಭಿಮಾನದಿಂದ ಅದನ್ನು ಜನ ಜೇಬಿಗಿಳಿಸಿಕೊಂಡು ಬಿಡುತ್ತಾರೆ. ಆದರೆ ಮಹಾತ್ಮರು "ಸೃಷ್ಟಿಯಲ್ಲಿ ಒಳ್ಳೆಯದೆಲ್ಲ ಭಗವಂತನದೇ" ಎಂಬ ಭಾವನೆಯಿಂದ ಕೂಡಿದವರಾಗಿ ಯಾರಾದರೂ ತಮ್ಮಲ್ಲಿನ ಒಳ್ಳೆಯದನ್ನು ಹೊಗಳಿದರೆ ಅದನ್ನು ಸಹಜವಾಗಿಯೇ ಭಗವಂತನಿಗೆ ತಲುಪಿಸಿಬಿಡುತ್ತಾರೆ. ಹೀಗಾಗಿ, ಅವರಿಗೆ ಲೌಕಿಕದ ಅಂಟು ಇರುವುದೇ ಇಲ್ಲ. ನಿರ್ಲಿಪ್ತರಾಗಿರುವುದೆಂದರೆ ಇದೇ.
ಮಹಾಗುರುಗಳೊಬ್ಬರ ಬಳಿ ಅವರ ಪ್ರಾಮಾಣಿಕ ಶಿಷ್ಯರೊಬ್ಬರು " ನನ್ನಲ್ಲಿ ಏನೇನು ಒಳ್ಳೆಯ ಗುಣಗಳಿವೆ? ಹೇಳಿ" ಎಂದರಂತೆ. ಗುರುಗಳ ಬಾಯಿಂದ ಅವುಗಳನ್ನು ಕೇಳಿ ಸಂತೋಷ ಪಡುವಾಸೆ ಇವರಲ್ಲಿ ಹುಟ್ಟಿತೋ ಏನೋ! ಗುರುಗಳು, ನಿರ್ವಿಕಾರವಾಗಿ "ನಿನ್ನಲ್ಲಿ ಯಾವ ಒಳ್ಳೆಯ ಗುಣಗಳೂ ಇಲ್ಲಾಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ಗಾಬರಿ! ತನ್ನಲ್ಲಿದ್ದ ಕೆಲವು ಸದ್ಗುಣಗಳ ಪಟ್ಟಿಯನ್ನು ಗುರುಗಳ ಮುಂದೆ ಒಪ್ಪಿಸಿ, ಇವೆಲ್ಲಾ ನನ್ನಲ್ಲಿ ಇಲ್ಲವೇ?" ಎಂದು ಕೇಳಿದರಂತೆ. ಶಾಂತಚಿತ್ತರಾಗಿ "ಇವೆಲ್ಲಾ ಪರಮಾತ್ಮನ ಗುಣಗಳಪ್ಪಾ" ಎಂದುಬಿಟ್ಟರಂತೆ. ಶಿಷ್ಯರಿಗೆ ತಮ್ಮ ತಪ್ಪಿನ ಅರಿವಾಗಿ "ಒಳ್ಳೆಯದೆಲ್ಲಾ ಭಗವಂತನಿಗೆ ಸೇರಿದ್ದು" ಎಂಬ ಭಾವ ನನ್ನಲ್ಲಿರಲಿ ಎಂದು ಮನಸ್ಸಿನಲ್ಲಿಯೇ ಗುರುವನ್ನು ಪ್ರಾರ್ಥಿಸಿದರಂತೆ.
ಇತರರು ನಮ್ಮನ್ನು ಅಜ್ಞಾನದಿಂದ ಬೈದರೆ ನಾವು ಯಾವಾಗಲೂ ಸುಮ್ಮನಿರಬೇಕೆಂದೇನಿಲ್ಲ. ಆತ್ಮ / ಧರ್ಮ ರಕ್ಷಣೆಗೆ ಏನು ಬೇಕೋ ಅದನ್ನು ಮಾಡಿಕೊಳ್ಳಬಹುದು. ಬೈದ ವ್ಯಕ್ತಿಗೆ ತಿಳಿಹೇಳುವುದರಿಂದ ಉಪಯೋಗವಿರುವುದಾದರೆ ಸೂಕ್ತಕಾಲದೇಶಗಳಲ್ಲಿ ಅದನ್ನು ಯಥೋಚಿತವಾಗಿ ಮಾಡಬಹುದು. ಇದು ವ್ಯಾವಹಾರಿಕ ಪ್ರತಿಕ್ರಿಯೆ. ಆದರೆ ನಮ್ಮ ಮನಸ್ಸಿನಲ್ಲಿ ನಿರ್ಲಿಪ್ತರಾಗಿರಬೇಕೆಂದರೆ "ಅಜ್ಞಾನದಿಂದ ಒಬ್ಬ ಜೀವಿಯು ನನ್ನ ಪ್ರಕೃತಿಯನ್ನು ನಿಂದಿಸುತ್ತಿದ್ದಾನೆ. ಹೇ ಭಗವಂತ! ಅವನಿಗೆ ಒಳ್ಳೆಯ ಬುದ್ಧಿಯನ್ನು ಕೊಡಪ್ಪ!" ಎಂಬ ಭಾವವಿರಬೇಕು. ಮತ್ತೊಬ್ಬರು ಬೈದಿರುವುದರಲ್ಲಿ ಸತ್ಯಾಂಶವೇ ಇದ್ದರೆ, ನಮ್ಮನ್ನು ತಿದ್ದಿಕೊಳ್ಳಲು ಮಾಡಬೇಕಾದದ್ದೇನು ಎಂಬ ಬಗ್ಗೆ ನಿಗಾ ಹರಿಸಬೇಕು.
ಇತರರು ನಮ್ಮನ್ನು ಹೊಗಳಿದಾಗ, ನಮಗೆ ಅದನ್ನು ಅಂಟಿಸಿಕೊಂಡರೆ ಹೇಗೆ ನಾವು ಪತಿತರಾಗುತ್ತೇವೆಯೋ, ನಮ್ಮನ್ನು ಇತರರು ತೆಗಳಿದಾಗ, ಅದನ್ನು ನಮಗೆ ಅಂಟಿಸಿಕೊಂಡರೆ ದುಃಖವೋ, ಅಸಮಾಧಾನವೋ ಕಟ್ಟಿಟ್ಟ ಸಂಗತಿಯೇ ಹೌದು. ಸಂತ ತ್ಯಾಗರಾಜರ ಉತ್ತರದಲ್ಲಿ ನನ್ನ ಪ್ರಕೃತಿಯನ್ನು ಒಬ್ಬ ಜರೆಯುತ್ತಿದ್ದಾನೆ ಎಂಬ ಭಾವವಿದೆಯಷ್ಟೆ. ಅಂತಹ ಸಾಕ್ಷೀಭಾವವು, ನಮ್ಮನ್ನು ಪ್ರಕೃತಿಗಂಟಿಕೊಳ್ಳದೇ ಜೀವನದ ಎಲ್ಲ ಆಗುಹೋಗುಗಳನ್ನು ಗಮನಿಸಿಕೊಳ್ಳುವ ಉದಾತ್ತ ಮನೋಭಾವವನ್ನು ಉಂಟು ಮಾಡುತ್ತದೆ. ಇಂತಹ ಆದರ್ಶ ಮನಃಸ್ಥಿತಿಯನ್ನು ಸಾಧಿಸಲು ಯತ್ನಿಸೋಣ.
ಸೂಚನೆ: 30/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.