Saturday, March 18, 2023

ಎಲ್ಲವನ್ನೂ ಅನುಭವಿಸಿಯೇ ಒಪ್ಪಬೇಕಾ? (Ellavannu Anubhavisiye Oppabeka?)

 ಲೇಖಕರು : ವಿದ್ವಾನ್ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)  



ಸಾಮಾನ್ಯವಾಗಿ ನಾವು ಈ ಮಾತನ್ನು ಹೇಳುವುದನ್ನು ಕೇಳಿದ್ದೇವೆ."ನನ್ನ ಮನಸ್ಸಿಗೆ ಬಂದರೆ ಮಾತ್ರ ಒಪ್ಪುತ್ತೇನೆ. ಇಲ್ಲ ಅಂದರೆ ಜಪ್ಪಯ್ಯ ಅಂದರೂ ಒಪ್ಪಲ್ಲ' ಅಂತ. ಇನ್ನೊಂದು ಮಾತಿದೆ 'ಕೆಲವೊಂದನ್ನು ನೋಡಿ ತಿಳಿಯಬೇಕು, ಕೆಲವೊಂದನ್ನು ಬಲ್ಲವರಿಂದ ಕೇಳಿ ತಿಳಿಯಬೇಕು' ಎಂದು. ಹಾಗಾದರೆ ಏನು ಮಾಡಬೇಕು? ಎಲ್ಲವನ್ನೂ ನಮ್ಮ ಅನುಭವಕ್ಕೆ ಬಂದೇ ಒಪ್ಪಬೇಕಾ? ಅಥವಾ ಅದಕ್ಕೆ ಬೇರೆ ಏನಾದರೂ ಉಪಾಯವಿದೆಯೋ? ಎಲ್ಲವೂ ಈಗಲೇ ಅನುಭವಕ್ಕೆ ಬರಬೇಕೆಂಬ ನಿಯಮವಿದೆಯೋ? ಮುಂದೆ ಏನಾದರೂ ಬರಬಹುದು, ಅಲ್ಲವೇ? ಗಿಡ ನೆಟ್ಟ ಕೂಡಲೇ ಫಲ ಬರುತ್ತದೆಯೋ? ಅದಕ್ಕೆ ಎಷ್ಟೋ ದಿನಗಳು ಬೇಕಾಗುತ್ತವೆ ಅಲ್ಲವೆ. ಒಂದೊಂದು ಅನುಭವ ಬರಲು ಭಿನ್ನ ಭಿನ್ನವಾದ ಕಾಲವೇ ಬೇಕಾಗಬಹುದು. ಸರಿಯಾಗಿ ನೀರು, ಗಾಳಿ, ಗೊಬ್ಬರ, ಬೆಳಕು ಎಲ್ಲವೂ ಕಾಲಕಾಲಕ್ಕೆ ಸಿಕ್ಕಾಗ ಅದರದ್ದೇ ಆದ ಸಮಯವನ್ನು ತೆಗೆದುಕೊಂಡು ಫಲವನ್ನು ಕೊಡುತ್ತದೆ. 


ಕೊತ್ತಂಬರಿ ಬೀಜವನ್ನು ನೆಟ್ಟರೆ ನಾಳೆಯೇ ಉಪಯೋಗವಾದೀತು. ನಾಳೆಗೇ ಅದರ ಸೊಪ್ಪನ್ನು ಕೊಯ್ದು ಸಾರಿಗೆ ಬಳಸಬಹುದು. ಅದೇ ತೆಂಗಿನ ಕಾಯನ್ನು ನೆಟ್ಟರೆ ಮೊಳಕೆ ಬರಲು ಒಂದು ವರ್ಷವೇ ಬೇಕಾಗಬಹುದು. ಬೀಜವನ್ನು ನೆಟ್ಟು ಮೊಳಕೆ ಒಡೆದು ಹೆಮ್ಮರವಾಗಿ ಹೂವು, ಕಾಯಿ ಬಿಟ್ಟು ಫಲಿಸಲು ಅನೇಕ ವರ್ಷಗಳನ್ನು ಕಾಯಬೇಕಾಗುತ್ತದೆ. ಕಾಯಿಗೆ ಕಾಯಲೇಬೇಕು.  ಆರಂಭವಾದ ಮೇಲೆ ಅನೇಕ ತಲೆಮಾರಿಗೆ ಸಾಕಾಗುವಷ್ಟು ಫಲವನ್ನು ಕೊಡುತ್ತದೆ. ಹೀಗೆ ಕೆಲವು ಶೀಘ್ರವಾಗಿ ಬರುತ್ತದೆ, ಇನ್ನು ಕೆಲವು ವಿಳಂಬವಾಗಿ ಬರುತ್ತದೆ. ಹಾಗಾಗಿ ನಾವು ಮಾಡಿದ ಕರ್ಮಕ್ಕೆ ಫಲವು ಕೆಲವೊಮ್ಮೆ ಸಾವಧಾನವಾಗಿ ಬರಬಹುದು, ಇನ್ನು ಕೆಲವೊಮ್ಮೆ ಬಹಳ ಬೇಗ ಬರಬಹುದು. ಹಾಗಾಗಿ ಎಲ್ಲವನ್ನೂ ನಮ್ಮ ಅನುಭವದಿಂದಲೇ ನಾವು ತಿಳಿದುಕೊಳ್ಳುತ್ತೇವೆ ಎಂದು ಹೊರಟರೆ ಸಾಧ್ಯವೇ? ಕೆಲವು ವಿಷಯವನ್ನು ನಮ್ಮ ಅನುಭವಕ್ಕೆ ಬಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು ನಿರ್ಣಯಿಸಬಹುದು. ಆದರೆ ಎಲ್ಲ ಕಡೆ ಅನುಭವ ಬರುವ ತನ ಕಾಯಬೇಕೇ? ಅನುಭವಿಸಿದವರ ಅನುಭವವನ್ನು ಆಧಾರವಾಗಿ ಇಟ್ಟುಕೊಂಟು ನಡೆದರೆ ಸಾಕಲ್ಲವೇ? ಚೆನ್ನಾಗಿ ಓದಿದರೆ ಮಾರ್ಕ್ಸ್ ಬರತ್ತದೆ ಅಂತ ನಮಗೆ ಗೊತ್ತಿದ್ದೆಯಾ? ಹೇಗೆ ಗೊತ್ತು? ಮತ್ತೊಬ್ಬರು ಚೆನ್ನಾಗಿ ಓದಿ ಉತ್ತಮ ಅಂಕವನ್ನು ಪಡೆದಿದ್ದರಿಂದ ಓದಿದರೆ ಅಂಕ ಬರುತ್ತದೆ. ಹತ್ತನೆಯ ತರಗತಿಯಲ್ಲಿ ಚೆನ್ನಾಗಿ ಓದಿದರೆ ಅಂಕ ಚೆನ್ನಾಗಿ ಬರುತ್ತದೆ ಅಂತ ಯಾರಿಗೆ ಗೊತ್ತು? ಓದಿದವರಿಗೆ ಮಾತ್ರ ಗೊತ್ತು. ಒಂಭತ್ತನೆಯ ತರಗತಿಯಲ್ಲಿ ಓದುವವನು ಅವನ ಹಿಂದಿನವರ ಅನುಭವವನ್ನು ಕೇಳಿಕೊಂಡು ಚೆನ್ನಾಗಿ ಓದುತ್ತಾನೆ. ಏಕೆಂದರೆ ನಂಬಿಕೆ ಇದೆ ಚೆನ್ನಾಗಿ ಓದಿದರೆ ಒಳ್ಳೆಯ ಅಂಕವನ್ನು ಪಡೆಯಬಹುದು ಎಂದು. ಅದಕ್ಕೆ ಅವನೇ ಅನುಭವವನ್ನು ಪಡೆಯಬೇಕೆಂದಿಲ್ಲ. ಚೆನ್ನಾಗಿ ಓದಿ ಅನುಭವವನ್ನು ಪಡೆದವನ ಅನಿಸೆಕೆ, ಅಭಿಪ್ರಾಯವನ್ನು ಪಡೆದರೆ ಸಾಕು. ನಮ್ಮ ಕೆಲಸ ಹಗುರವಾಗುತ್ತದೆ ಅಲ್ಲವೇ? ಅಷ್ಟು ಶ್ರಮ, ಅಷ್ಟು ಕಾಲ ಉಳಿತಾಯವಾಯಿತಲ್ಲ! 


ಇಂತಹ ವಿಷಯವನ್ನು ಯಾರು ಹೇಳಿದರೆ ಒಪ್ಪಿಕೊಳ್ಳುತ್ತೇವೆ. ನಮ್ಮವರು, ನಮ್ಮ ಸಂಬಂಧಿಕರು, ಅಣ್ಣ, ಅಕ್ಕ, ಅಪ್ಪ, ಅಮ್ಮ ಹೀಗೆ ನಮ್ಮ ಅಪ್ತೇಷ್ಟರು ಹೇಳಿದ್ದನ್ನು ಒಪ್ಪುತ್ತೇವೆ. ಅವರ ಅನುಭವವೇ ನಮ್ಮ ಕಾರ್ಯಕ್ಕೆ ಸ್ಫೂರ್ತಿಯಾಗುತ್ತದೆ. ನಾವೇ ಅನುಭವಿಸಿ ಕಾರ್ಯವನ್ನು ಆರಂಭ ಮಾಡಬೇಕೆಂಬ ನಿಯಮವೇನೂ ಇಲ್ಲ. ಕೆಲವು ವಿಷಯಗಳನ್ನು ಯಾರೋ ಹೇಳಿರುತ್ತಾರೆ, ಅವರು ಅನುಭವಿಸಿರುತ್ತಾರೆ,  ಅದನ್ನು ಅನುಭವಿಸಲು ಎಷ್ಟೋ ವರ್ಷಗಳನ್ನು ತೆಗೆದುಕೊಂಡಿರುತ್ತಾರೆ. ಅಂತಹ ಅನುಭವದಿಂದ ಹೇಳಿರುತ್ತಾರೆ. ಅವರ ಅನುಭವವನ್ನು ನಾವು ತೆಗೆದುಕೊಂಡರೆ ನಮ್ಮ ಆಯುಷ್ಯ ವ್ಯರ್ಥವಾಗುವುದಿಲ್ಲ. ಅಷ್ಟು ವರ್ಷ ನಮಗೆ ಉಳಿಯುತ್ತದೆ. ಅಪೇಕ್ಷಿತವಾದ ಕಾರ್ಯವನ್ನು ಮಾಡಲು ನಮಗೆ ಅಷ್ಟು ಕಾಲ ಸಿಕ್ಕಿತು ಎಂದರ್ಥ. 'ಬೆಂಕಿ ಮುಟ್ಟಿದರೆ ಕೈ ಸುಡುತ್ತದೆ' ಎಂದು ಅನುಭವಿಸಿಯೇ ಬೆಂಕಿಯಿಂದ ದೂರ ಇರಬೇಕೆ? ಬೆಂಕಿ ಸುಟ್ಟುಕೊಂಡವರು ಹೇಳಿದ್ದಾರೆ ' ಬೆಂಕಿ ಮುಟ್ಟಿದರೆ ಸುಡುತ್ತದೆ' ಎಂದು, ಅದನ್ನು ಒಪ್ಪಿಕೊಂಡು ನಾವು ಹೇಗೆ ಬೆಂಕಿಯನ್ನು ಮುಟ್ಟಲು ಹೋಗುವುದಿಲ್ಲವೋ, ಅಂತೆಯೇ ಎಲ್ಲವೂ ನಮ್ಮ ಅನುಭವಕ್ಕೆ ಬಂದ ಮೇಲೆ ಒಪ್ಪಿಕೊಳ್ಳಬೇಕೆಂಬ ಹಠ ಸಲ್ಲದು. ಇಂತಹ ಅನುಭವದ ಮೂಟೆಯನ್ನು ನಮ್ಮ ಭಾರತೀಯ ಮಹರ್ಷಿಗಳು ಕಠಿನ ತಪಸ್ಸು ಮಾಡಿ ಕಂಡುಹಿದ್ದಾರೆ. ಹಾಗಾಗಿ ಅವರು ಹೇಳಿದ್ದನ್ನು ಒಪ್ಪಿಕೊಂಡು ನಾವು ಆಚರಿಸಿದರೆ ನಮ್ಮ ಆಧ್ಯಾತ್ಮಕ ಪ್ರಯಾಣ ಸುಲಭ. 


ಸೂಚನೆ: 16/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.