Thursday, September 2, 2021

ಮನವು ಮರ್ಕಟವೋ? ಮೋಕ್ಷಸಾಧನವೋ? (Manavu markatavo? Moksha saadhanavo?)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)





ನಾವು ಮಾಡುವ ಸಮಸ್ತ ವ್ಯವಹಾರಗಳ ಹಿಂದೆಯೂ ಇರುವ ಸಾಮಾನ್ಯ ಉದ್ದೇಶ -  ಮನಸ್ಸಿನ ತೃಪ್ತಿಯೇ. ಮನಸ್ಸಿಗೆ ನೋವಾಗುವುದನ್ನು ಯಾರೂ ಇಚ್ಛಿಸುವುದಿಲ್ಲ. 'ಮನಸ್ಸಿದ್ದರೆ ಮಾರ್ಗ' ಎಂಬ ಗಾದೆಯಂತೆ  ಮನಸ್ಸು ಏನನ್ನಾದರೂ  ಬಯಸಿಬಿಟ್ಟರೆ ವ್ಯಕ್ತಿಯು ಅದನ್ನು ಹೇಗಾದರೂ ಮಾಡಿ ಗಳಿಸುವ ಪ್ರಯತ್ನವನ್ನು ಮಾಡಿಯೇ ತೀರುತ್ತಾನೆ. ಆದಕಾರಣ ಮನಸ್ಸೇ ನಮ್ಮನ್ನಾಳುವುದು  ಎಂದರೆ ತಪ್ಪಾಗಲಾರದು. 

ಮನಸ್ಸಿನ ಸ್ವಭಾವ :

ಮನಸ್ಸನ್ನು ಮರ್ಕಟಕ್ಕೆ(ಕೋತಿಗೆ) ಹೋಲಿಸುವುದುಂಟು. ಶಾಖಾಮೃಗದಂತೆ ಪ್ರತಿಕ್ಷಣವೂ ನಾನಾರೀತಿಯ ವಿಚಾರಗಳಲ್ಲಿ ಓಡಾಡುತ್ತಿರುತ್ತದೆ; ಒಂದೆಡೆಯಿಂದ ಮತ್ತೊಂದೆಡೆಗೆ ನೆಗೆದಾಡುತ್ತಿರುತ್ತದೆ; ಕ್ಷಣಮಾತ್ರವೂ  ಸುಮ್ಮನಿರುವುದಿಲ್ಲ. ಆದ್ದರಿಂದ ಅದು ನಿಜಕ್ಕೂ ಮರ್ಕಟವೇ ಸರಿ.

 ಜೊತೆಗೆ ಅದು ಅತ್ಯಂತ ವೇಗವಾಗಿಯೂ ಚಲಿಸಬಲ್ಲದು.  ಮಹಾಭಾರತದಲ್ಲಿನ ಯಕ್ಷಪ್ರಶ್ನೆಯ ಪ್ರಸಂಗ. ಯುಧಿಷ್ಠಿರನು ಯಕ್ಷನ  ಪ್ರಶ್ನೆಗೆ ಉತ್ತರಿಸುತ್ತಾ ಮನಸ್ಸು ವಾಯುವಿಗಿಂತಲೂ ಹೆಚ್ಚು ವೇಗವುಳ್ಳದ್ದು ಎನ್ನುತ್ತಾನೆ.  ಈ ಕ್ಷಣ ಇಲ್ಲಿದ್ದರೆ ಮರುಕ್ಷಣವೇ ಸಾವಿರಾರು ಮೈಲಿ  ದೂರದ ಸ್ಥಾನವನ್ನು ತಲುಪಿಬಿಡುತ್ತದೆ. 

ಮನಸ್ಸನ್ನು ಮನೆಯಲ್ಲಿ(ಶರೀರದಲ್ಲಿ) ಬಂಧಿಸಿ ಎಲ್ಲ ದ್ವಾರಗಳನ್ನೂ ಮುಚ್ಚಿದ್ದರೂ ಹೇಗಾದರೂ ಹೊಸದೊಂದು ದ್ವಾರವನ್ನು ಮಾಡಿಕೊಂಡು ಹಾರಿಹೋಗುತ್ತದೆ.  ಆದ್ದರಿಂದ ಅದನ್ನು ಒಬ್ಬ ಚತುರನಾದ ಕಳ್ಳನಿಗೆ ಹೋಲಿಸುವುದೂ ಉಂಟು. 



ಮನಸ್ಸಿನ ವಿಶೇಷ ಸಾಮರ್ಥ್ಯ : 

ಭೌತಿಕಪ್ರಪಂಚದಲ್ಲೇ  ಓಡಾಡುವ ನಮ್ಮಗಳ  ಮನಸ್ಸು ಸುಲಭವಾಗಿ ಲೌಕಿಕ ವಿಷಯಗಳಲ್ಲಿ ಎಳೆಯಲ್ಪಡುತ್ತದೆ. ರುಚಿಯಾದ ಆಹಾರ, ಭಕ್ಷ್ಯ-ಭೋಜ್ಯಗಳು, ಸುಂದರದೃಶ್ಯಗಳು, ಮಧುರಗಾನ ಮುಂತಾದ ಸಕಲಭೋಗಗಳನ್ನೂ ಅನುಭವಿಸುತ್ತದೆ. ಬೌದ್ಧಿಕವಾದ ವಿಚಾರಗಳಲ್ಲಿ  ಮನ ಒಲಿದಾಗ ಆ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಿ ಬೌದ್ಧಿಕವಾದ  ಆನಂದವನ್ನೂ ಅನುಭವಿಸುತ್ತದೆ.  ಸುಖನಿದ್ರೆಯನ್ನನುಭವಿಸುವುದೂ ಮನವೇ. ಅಂದರೆ, ಎಚ್ಚರ, ಕನಸು, ಗಾಢನಿದ್ರೆ - ಈ ಮೂರು ಅವಸ್ಥೆಗಳನ್ನೂ ನಾವು, ಅಂದರೆ ನಮ್ಮ ಮನಸ್ಸು, ಅನುಭವಿಸುವುದು ಸರ್ವರಿಗೂ ಸುಪರಿಚಿತ.


ಆದರೆ ಸಾಮಾನ್ಯವಾಗಿ ಅಪರಿಚಿತವಾದ ಅಂಶ ಒಂದನ್ನು  ಭಾರತೀಯಮಹರ್ಷಿಗಳ ಅನುಭವವು ಸಾರುತ್ತದೆ. ಅದೇ ನಾಲ್ಕನೆಯ ಅವಸ್ಥೆಯಾದ ತುರೀಯಾವಸ್ಥೆ-ಸಮಾಧಿಸ್ಥಿತಿ. ಮಾನವನ ಮನಸ್ಸು ಈ  ಅವಸ್ಥೆಯನ್ನೂ ಅನುಭವಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಅವರ ಅನುಭವವಾಣಿ. 

 

ಹಾಗಾದರೆ ನಮಗೇಕೆ ಆ ಆನುಭವವಾಗುತ್ತಿಲ್ಲ ಎಂಬ ಪ್ರಶ್ನೆಯೇಳುವುದು ಸಹಜ. ಜ್ಞಾನಿಗಳು ಒಂದು ಸುಲಭವಾದ ಉದಾಹರಣೆಯ ಮೂಲಕ ಇದನ್ನು ವಿವರಿಸುತ್ತಾರೆ. ನಿದ್ರೆಯೆಂಬುದು ಎಲ್ಲರೂ ನಿತ್ಯವೂ ಅನುಭವಿಸುವ ಒಂದು ಸ್ಥಿತಿಯೇ ಆದರೂ ರೋಗದಿಂದ ನರಳುವ ವ್ಯಕ್ತಿಗೆ ನಿದ್ರೆಯೇ ಬಾರದು. ನಿದ್ರೆಯ   ಸುಖವೇ ಮರೆತಂತೆ ಆಗಿಯೂ ಬಿಡಬಹುದು. ಅದೇ ರೀತಿಯಲ್ಲಿ ನಾವೆಲ್ಲರೂ ಹಿಂದೆ ಭಗವಂತನ   ಮಡಿಲಲ್ಲಿದ್ದವರೇ. ಅಲ್ಲಿಂದ ಜಾರಿ ಪ್ರಕೃತಿಗೆ ಸಿಲುಕಿದ್ದೇವೆ. ತತ್ಪರಿಣಾಮವಾಗಿ  ಭವರೋಗದಿಂದ ಬಳಲಿ ಭಗವಂತನನ್ನೂ, ಆತನನ್ನು ಸೇರಿ ರಮಿಸುವ ಅ ತುರೀಯಾವಸ್ಥೆಯನ್ನೂ ಮರೆತಿದ್ದೇವೆ. ಮತ್ತೆ ಅಲ್ಲಿಗೇರಬೇಕಾದರೆ  ಭವರೋಗದಿಂದ-ಅದರಿಂದಾದ ದೋಷಗಳಿಂದ  ಮುಕ್ತರಾಗಬೇಕು.   ಹಾಗಾದಲ್ಲಿ ಮನಸ್ಸು ವಿಶೇಷ ಸಾಮರ್ಥ್ಯವನ್ನು ಪಡೆದು ಅ ಸ್ಥಿತಿಗೆ ಪುನಃ ಏರುವುದು.


ವಿಶೇಷ ಸಾಮರ್ಥ್ಯವನ್ನು ಪಡೆಯುವುದು ಹೇಗೆ?

ಶ್ರೀರಂಗಮಹಾಗುರುಗಳು ಈ ನಿಟ್ಟಿನಲ್ಲಿ ನೀಡಿದ ಸುಂದರವಾದ ವಿವರಣೆಯು ಇಲ್ಲಿ ಸ್ಮರಣೀಯವಾಗಿದೆ -  ಒಂದು ಗಾಜಿನ ತುಂಡು ಸಾಮಾನ್ಯವಾಗಿ ಪಾರದರ್ಶಕವಾಗಿದ್ದರೂ ಸೂಕ್ಷ್ಮದರ್ಶಕವಾಗಿರುವುದಿಲ್ಲ. ಅದನ್ನೇ ವಿಧಿಪೂರ್ವಕವಾಗಿ ಉಜ್ಜಿ   ಅದಕ್ಕೊಂದು ಹೊಸ ರೂಪವನ್ನು ಕೊಟ್ಟಾಗ ಅದೇ  ಗಾಜಿನ ತುಂಡೇ  ಲೆನ್ಸ್(lens) ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಅದನ್ನು ಒಂದು microscopeನಲ್ಲಿಟ್ಟು ಸೂಕ್ತ ರೀತಿಯಲ್ಲಿ ನೋಡಿದಾಗ ಸಾಮಾನ್ಯದೃಷ್ಟಿಗೆ ಗೋಚರವಾಗದ ಅಂಶಗಳನ್ನೂ  ಅದು ತೋರಿಸಬಲ್ಲದು. ಅಂದರೆ, ಸೂಕ್ಷ್ಮದರ್ಶಕವಾಗುವ ಸಾಮರ್ಥ್ಯವು ಗಾಜಿನಲ್ಲಿ ಗುಪ್ತವಾಗಿದೆ. ಈ  ಸತ್ಯಾರ್ಥವನ್ನು ಮನಗಂಡ ವಿಜ್ಞಾನಿಯು ಸೂಕ್ತಕ್ರಿಯೆಯನ್ನು ಕೈಗೊಂಡಾಗ ಅದರ ಸಾಮರ್ಥ್ಯವು ಹೊರಹೊಮ್ಮುತ್ತದೆ. 

 ಮಾನವಮನವೂ  ಸಹ ಗಾಜಿನಂತೆಯೇ. ಅದಕ್ಕೆ ಸರಿಯಾದ ಸಂಸ್ಕಾರವನ್ನು ಕೊಟ್ಟಾಗ ಅದರಲ್ಲಿ  ಸುಪ್ತವಾಗಿರುವ ವಿಶೇಷ ಸಾಮರ್ಥ್ಯವು ಜಾಗೃತಗೊಂಡು ನಮ್ಮೊಳಗೆ ಬೆಳಗುವ, ಸಾಮಾನ್ಯದೃಷ್ಟಿಗೆ ಗೋಚರವಾಗದ, ಪರಮಾತ್ಮನನ್ನು ತೋರಿಸಿಕೊಡಲು  ಸಮರ್ಥವಾಗುತ್ತದೆ.   ತುರೀಯಸ್ಥಿತಿ/ಸಮಾಧಿಸ್ಥಿತಿಗೆ ಕೊಂಡೊಯ್ಯುತ್ತದೆ. ಅಷ್ಟೇ ಅಲ್ಲದೆ ನಮ್ಮೊಳಗಿದ್ದುಕೊಂಡು ನಮ್ಮ ಚಟುವಟಿಕೆಗಳೆಲ್ಲಕ್ಕೂ ಚೈತನ್ಯವನ್ನು ನೀಡುವ,  ಪರಮಾತ್ಮನ ವಿಭೂತಿಗಳಾದ ಅನೇಕಾನೇಕ ದೇವತಾಶಕ್ತಿಗಳನ್ನೂ ತೋರಿಸುತ್ತದೆ ಎಂಬುದನ್ನು ಸ್ವಾನುಭವದಿಂದ ಅರಿತು ಸಾರಿದವರು ಭಾರತೀಯ  ಮಹರ್ಷಿಗಳು.  


ಆದ್ದರಿಂದಲೇ ಜ್ಞಾನಿಗಳು ಮನಸ್ಸನ್ನು ಕುರಿತು ಹೇಳುವಾಗ 'ಅದು ಭೌತಿಕ(ಇಂದ್ರಿಯಪ್ರಪಂಚ)-ದೈವಿಕ(ದೇವಲೋಕ)-ಆಧ್ಯಾತ್ಮಿಕ(ಪರಮಾತ್ಮನಸ್ಥಾನ)ವೆಂಬ ಮೂರುಕ್ಷೇತ್ರಗಳಲ್ಲೂ  ಸಂಚರಿಸಬಲ್ಲದು; ಹೀಗೆ ಮೂರು ಸ್ತರಗಳಲ್ಲೂ ತಂಗುತಡೆಯಿಲ್ಲದೆ ಓಡಾಡುವ ಮನವುಳ್ಳ ವ್ಯಕ್ತಿಯೇ ನಿಜವಾದ ಅರ್ಥದಲ್ಲಿ 'ಅರೋಗ್ಯವಂತ' ಎಂಬುದಾಗಿ ಹೇಳುತ್ತಾರೆ. "ಅನಾಮಯೀ ಯಾವದಾತ್ಮಾನಂ ಸಮ್ಮನ್ಯತೇ" ಎಂಬ ಆಯುರ್ವೇದ ಸೂತ್ರವೂ ಇದನ್ನೇ ತಿಳಿಸುತ್ತಿದೆ. ಅಂತಹವನನ್ನೇ 'ಸ್ವಸ್ಥ'-(ತನ್ನದೇ ಆದ ಸ್ಥಾನದಲ್ಲಿರುವವನು) ಎಂಬುದಾಗಿ ಕರೆದಿದ್ದಾರೆ.  

ಮನಸ್ಸಿನಿಂದ ಲಭಿಸಬಹುದಾದ ಸಂಪೂರ್ಣ ಪ್ರಯೋಜನವನ್ನು ಪಡೆದರೆ ಮಾತ್ರವೇ, ಅಂದರೆ ಮೂರೂ ಕ್ಷೇತ್ರಗಳಲ್ಲೂ ಓಡಾಡುವ ಹಾಗಿದ್ದರೆ ಮಾತ್ರವೇ, ಜೀವನ   ಪೂರ್ಣಜೀವನ ಎನಿಸಿಕೊಳ್ಳುತ್ತದೆ. ಹಾಗಿಲ್ಲದೆ ನೂರುವರ್ಷಗಳು ಬದುಕಿದರೂ ಅದು ಜ್ಞಾನಿಗಳ ದೃಷ್ಟಿಯಲ್ಲಿ ಪೂರ್ಣಜೀವನವಾಗುವುದಿಲ್ಲ.


ಮಹರ್ಷಿಗಳು ಕಲ್ಪಿಸಿದ ಉಪಾಯಗಳು 

ಮನಸ್ಸಿನ ಪೂರ್ಣಸಾಮರ್ಥ್ಯವನ್ನು ಹೊರತರಲು ಮಹರ್ಷಿಗಳು ಅನೇಕ ಉಪಾಯಗಳನ್ನು ರೂಪಿಸಿದ್ದಾರೆ. ಪ್ರಸ್ತುತ  ಅವುಗಳಲ್ಲಿ ಕೆಲವನ್ನು ಕುರಿತು ಸಂಕ್ಷೇಪವಾಗಿ  ಸೂಚಿಸಲಾಗಿದೆ. 


1. ಯೋಗ 

ಸನಾತನ ಭಾರತೀಯಮಹರ್ಷಿಗಳ ವೈಜ್ಞಾನಿಕದೃಷ್ಟಿಯು ಮಾನವ ಶರೀರದಲ್ಲಿ ಪ್ರಾಣಕ್ಕೂ ಮನಸ್ಸಿಗೂ ಇರುವ ನಿಕಟವಾದ ಸಂಬಂಧವನ್ನು ಗುರುತಿಸಿತು.  ಆದಕಾರಣ ಪ್ರಾಣದ ನಿಯಂತ್ರಣದ ಮೂಲಕ ಮನಸ್ಸನ್ನು ನಿಯಂತ್ರಿಸಬಹುದೆಂಬುದನ್ನು ಪತ್ತೆಹಚ್ಚಿದರು. ಅದರ ಚಾಂಚಲ್ಯವನ್ನು-ಕಪಿತ್ವವನ್ನು ತಡೆಯಲು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ   ಎಂಬ  ಅಷ್ಟಾಂಗಯೋಗಗಳನ್ನು ವಿಧಿಸಿದರು. 

ಯೋಗಶಾಸ್ತ್ರದ ಪ್ರಕಾರ ಮನವೆಂಬ ಪಕ್ಷಿಗೆ ಇಂದ್ರಿಯಗಳೇ ಪಾದಗಳು, ಶ್ವಾಸನಿಶ್ವಾಸಗಳೇ ರೆಕ್ಕೆಗಳು. ಇದರ ರೆಕ್ಕೆಗಳನ್ನೂ, ಪಾದಗಳನ್ನೂ ಕತ್ತರಿಸಿ ಬಿಟ್ಟರೆ  ಅದು ಒಂದೆಡೆಯಲ್ಲಿ ಕೂರುತ್ತದೆ. ಅಂದರೆ ಕಣ್ಣು, ಕಿವಿ ಮುಂತಾದ ಇಂದ್ರಿಯಗಳನ್ನು ಹೊರವ್ಯಾಪಾರದಿಂದ ಬಿಡಿಸಿ, ಸ್ಥಗಿತಗೊಳಿಸಿ, ಪ್ರಾಣಗಳನ್ನು ನಿಯಂತ್ರಣ ಮಾಡಿದರೆ ಮನಸ್ಸು ಹೊರವ್ಯಾಪಾರದಿಂದ ಬಿಡಿಸಿಕೊಂಡು ಒಳಮಾರ್ಗದಲ್ಲಿ ಸರಿದು ದೈವೀಕ್ಷೇತ್ರವನ್ನೂ, ಅಧ್ಯಾತ್ಮಕ್ಷೇತ್ರವನ್ನೂ ಪ್ರವೇಶಿಸುವುದು. 


2. ಭಕ್ತಿ 

ಮೇಲಿನ ಉಪಾಯವು ಅತ್ಯಂತ ದುಷ್ಕರವಾದದ್ದು. ಆದರೆ ಎಲ್ಲರೂ ಎಲ್ಲ ಕಾಲದಲ್ಲೂ ಸುಲಭವಾಗಿ ಪ್ರಯತ್ನಿಸಬಹುದಾದ ಮತ್ತೊಂದು ಉಪಾಯವೆಂದರೆ  ಭಕ್ತಿ. ಮನಸ್ಸನ್ನು ಭಗವಂತನ ಪಾವನ ಚರಿತ್ರೆಗಳ, ಆತನ ಗುಣಕಥನಗಳ ಕಡೆ ತಿರುಗಿಸಿದಾಗ ಅವನಲ್ಲಿ ಪ್ರೀತಿಯು ಬೆಳೆದು ಕ್ರಮೇಣ ಅವನಲ್ಲೇ ಸದಾ ರಮಿಸುವ ಸ್ಥಿತಿಗೆ ಕೊಂಡೊಯ್ಯುತ್ತದೆ.    ಭಕ್ತಿಯಲ್ಲಿ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನಾ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ  ಎಂಬುದಾಗಿ  ಒಂಬತ್ತು ವಿಧಗಳನ್ನು ಪ್ರಧಾನವಾಗಿ ಗುರುತಿಸಿರುತ್ತಾರೆ.  ಪ್ರತಿಯೊಂದು ವಿಧಾನವನ್ನೂ ಆಶ್ರಯಿಸಿ ಮನಃಪಕ್ವತೆಯನ್ನು ಪಡೆದ ಭಾಗವತೋತ್ತಮರ ಕಥೆಗಳನೇಕ ಪುರಾಣಗಳಲ್ಲೂ, ಭಾರತದ ಇತಿಹಾಸದಲ್ಲೂ ಕಾಣಸಿಗುತ್ತವೆ.   ಆಂತಹ ಕಥೆಗಳು ನಮಗೆ ಆದರ್ಶವಾಗಿವೆ. 


ಭಕ್ತಿರಸದಲ್ಲಿ ಮನಸ್ಸು ಮಿಂದು ಮುಳುಗಿದ್ದರೆ  ಜೀವನದಲ್ಲಿ ಎಷ್ಟೇ ಕಷ್ಟಕಾರ್ಪಣ್ಯಗಳು ಒದಗಿಬಂದರೂ ಅವುಗಳೆಲ್ಲವನ್ನೂ ಸಹಿಸಿಕೊಂಡು, ಅವುಗಳಿಂದ ಪಾರಾಗಿ ಮನಸ್ಸು ಭಗವಂತನನ್ನು  ಕಂಡುಕೊಳ್ಳುತ್ತದೆ.  


3. ಪುರುಷಾರ್ಥಮಯ ಜೀವನ 

ಮನಸ್ಸು ತನ್ನ ಅಪೇಕ್ಷೆಗಳನ್ನು ಕಣ್ಣು, ಕಿವಿ, ನಾಲಿಗೆ ಮುಂತಾದ ಇಂದ್ರಿಯಗಳ ಮೂಲಕವೇ ಸಾಧಿಸಿಕೊಳ್ಳುತ್ತದೆ. ಇಂದ್ರಿಯಗಳೂ ಭಗವಂತನಿಂದಲೇ ಅನುಗ್ರಹಿಸಲ್ಪಟ್ಟವುಗಳಾದ್ದರಿಂದ ಅವುಗಳಿಗೂ ವಿಷಯವನ್ನು ಕೊಡಬೇಕಾಗುವುದು.  ಆದರೆ  ಅವುಗಳು ತಮ್ಮಿಷ್ಟದಂತೆ ನಮ್ಮನ್ನು ಎಳೆಯದಂತೆ ವರ್ತಿಸ ಬೇಕೆಂಬುದಾಗಿ ಎಚ್ಚರಿಸುತ್ತಾರೆ ಜ್ಞಾನಿಗಳು. ಅವುಗಳನ್ನು  ಸರಿಯಾದ ದಾರಿಗೆಳೆದು ತನ್ಮೂಲಕ ಮನಸ್ಸನ್ನು ಸುಸ್ಥಿತಿಗೆ ತಂದು ರಕ್ಷಿಸುವ ಉಪಾಯಗಳನ್ನೂ ಜ್ಞಾನಿಗಳು ರೂಪಿಸಿದ್ದಾರೆ.  


ಮಹರ್ಷಿಗಳು ಇಂತಹ ಉಪಾಯಗಳನ್ನು ನಿತ್ಯಜೀವನದ ಆಚಾರ-ವಿಚಾರ, ವೇಷ-ಭೂಷಣಗಳು ಮುಂತಾದವುಗಳಲ್ಲಿ  ಅತ್ಯಂತ ಕುಶಲತೆಯಿಂದ ಹೆಣೆದು ಜೀವನಕ್ರಮವನ್ನು ರೂಪಿಸಿದರು. ಜೀವನಕ್ಕೆ ಪುರುಷಾರ್ಥ(ಧರ್ಮ,ಅರ್ಥ,ಕಾಮ,ಮೋಕ್ಷ)ಗಳೆಂಬ ಚೌಕಟ್ಟನ್ನು ರಚಿಸಿಕೊಂಡು ಅದಕ್ಕೊಳಪಟ್ಟೇ  ಜೀವನಯಾತ್ರೆಯನ್ನು ಸಾಗಿಸುವಂತೆ ಮನಸ್ಸನ್ನು ಪಳಗಿಸಿದರೆ  ಅದು ಮೋಕ್ಷಕ್ಕೆ ದಾರಿಮಾಡಿಕೊಡುತ್ತದೆ.   ಮೋಕ್ಷವೆಂಬ ಗಮ್ಯಸ್ಥಾನಕ್ಕೆ(ಗುರಿಗೆ) ಧರ್ಮವೆಂಬ ಹಾದಿಯನ್ನು ಹಿಡಿದು ಸಾಗಿದರೆ ಅರ್ಥ-ಕಾಮಗಳೆಂಬ ಫಲಗಳು ತಾವಾಗಿಯೇ ಸಿಗುತ್ತವೆ ಎಂಬುದಾಗಿ ಮಹರ್ಷಿಗಳು ಸಾರಿದರು.  


ಮನವು ಮರ್ಕಟವೋ? ಮೋಕ್ಷಸಾಧನವೋ?  

ಮನಸ್ಸನ್ನು ಯಾವುದೇ ರೀತಿಯಲ್ಲೂ ನಿಯಂತ್ರಿಸದೆ,  ಇಚ್ಛೆ ಬಂದಂತೆ ವರ್ತಿಸಲು ಬಿಟ್ಟಾಗ ಅದು ಗೊತ್ತು ಗುರಿಗಳಿಲ್ಲದೆ ಅಲೆದಾಡುವ ಮರ್ಕಟವೇ ಹೌದು.   ಆದರೆ  ಮಹರ್ಷಿಗಳ ಆದೇಶದಂತೆ ಮೋಕ್ಷವೆಂಬ  ಗುರಿಯಿಂದ ಕೂಡಿ ಬಾಳಾಟವನ್ನು ನಡೆಸುವ  ಮನಸ್ಸು ಮಾಡಿದಾಗ  ಆ ಮರ್ಕಟವೇ ಮಹಾಸಾಧನವೂ-ಮೋಕ್ಷಸಾಧನವೂ ಆಗುವುದು ಎಂಬುದರಲ್ಲಿ ಸಂಶಯವಿಲ್ಲ. ಈ ಸತ್ಯಾರ್ಥವನ್ನೇ  "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:" ಎಂಬ ಆರ್ಷವಾಣಿಯು ಸೂಚಿಸುತ್ತದೆ.   ಮನಸ್ಸನ್ನು ಮರ್ಕಟವಾಗಲು  ಬಿಟ್ಟರೆ ಜನನ-ಮರಣ ಚಕ್ರದಲ್ಲಿ ಸಿಲುಕಿಸುವ ಬಂಧನ; ಮಹಾಸಾಧನವಾಗಿ ಪರಿವರ್ತಿಸಿಕೊಂಡರೆ ಮೋಕ್ಷ . 

ಮರ್ಕಟವನ್ನು ಮಹಾಸಾಧನವಾಗಿಸಿಕೊಳ್ಳುವ ಮಾರ್ಗವನ್ನು ತೋರಿದ ಮಹರ್ಷಿಗಳಿಗೆ ಅನಂತಾನಂತ ಪ್ರಣಾಮಗಳು. 


ಸೂಚನೆ: 2/9/2021 ರಂದು ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.