ಶ್ರೀರಂಗಮಹಾಗುರುಗಳ "ಯಾವ ಹೃದಯದಲ್ಲಿ ಭಗವಂತನು ವಾಸಮಾಡುತ್ತಾನೋ, ಆ ರಸಸಿಕ್ತಹೃದಯದ ರಸದಿಂದ ನಮ್ಮ ಜೀವನ ಬೆಳೆಯಬೇಕು. ಆತ್ಮರಸದಿಂದ ಇಂದ್ರಿಯಗಳು ಬೆಳೆಯಬೇಕು" ಎಂಬ ರಸವತ್ತಾದ ಮಾತು ಸ್ಮರಣೀಯ. ಅಂದರೆ ನಮ್ಮ ಶರೀರ, ಇಂದ್ರಿಯ, ಮನಸ್ಸುಗಳು ಒಂದು ನೇರದಲ್ಲಿ ಬೆಳೆಯಬೇಕಾದರೆ ಅದಕ್ಕೆ ಹೊರಗಿನ ಸಾಮಗ್ರಿಗಳು ಬಹು ಮುಖ್ಯವಾಗುತ್ತವೆ. ಇಂತಹ ಅನೇಕ ಪದಾರ್ಥಗಳಲ್ಲಿ ತಾಂಬೂಲವೂ ಒಂದು. ಇದಕ್ಕೆ ಆಯುರ್ವೇದದಲ್ಲಿ ವಿಶಿಷ್ಟಸ್ಥಾನವಿದೆ. ಭಗವಂತನಿಗೆ ಸಮರ್ಪಿಸಿ, ಇದನ್ನು ಸ್ವೀಕರಿಸಬೇಕು. 'ತಾಂಬೂಲ' ಎಂಬ ಉಪಚಾರವು ನೈವೇದ್ಯದ ಅನಂತರ ಸಮರ್ಪಿಸುವ ಉಪಚಾರವಾಗಿದೆ. ಊಟವಾದ ಮೇಲೆ ತಾಂಬೂಲಚರ್ವಣೆಯನ್ನು ನಾವು ಮಾಡುತ್ತೇವೆ. ಸ್ವೀಕರಿಸಿದ ಆಹಾರವು ಚೆನ್ನಾಗಿ ಪಚನವಾಗಬೇಕು ಎಂಬ ಉದ್ದೇಶವಿದೆ. ಕಟು, ತಿಕ್ತ, ಉಷ್ಣ, ಮಧುರ, ಕ್ಷಾರ, ಕಷಾಯ ವಾತನಿವಾರಕ, ಕ್ರಿಮಿನಾಶಕ, ಕಫಹರ, ದುರ್ಗಂಧನಾಶನ, ವದನಭೂಷಣ, ಮುಖಶುದ್ಧಿಕರ ಮತ್ತು ಕಾಮಾಗ್ನಿಸಂದೀಪನ ಎಂಬ ಒಟ್ಟು ಹದಿಮೂರು ಉತ್ತಮಗುಣಗಳಿಂದ ಕೂಡಿದ ತಾಂಬೂಲವು ದೇವದುರ್ಲಭವಾದುದು ಎಂದು ಅದನ್ನು ಪ್ರಶಂಸಿಸಿದ್ದಾರೆ. ಇಷ್ಟೆಲ್ಲಾ ಆಯುರ್ವೇದೀಯ ಗುಣಗಳಿಂದ ಕೂಡಿದ ತಾಂಬೂಲವನ್ನು ಭಗವಂತನಿಗೆ ಸಮರ್ಪಿಸುವಾಗ "ಪೂಗೀಫಲಸಮಾಯುಕ್ತಂ ನಾಗವಲ್ಲೀದಲೈರ್ಯುತಮ್| ಕರ್ಪೂರಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ್"II(ಅಡಿಕೆ,ವೀಳೆಯದೆಲೆ, ಕರ್ಪೂರ ಚೂರ್ಣಗಳಿಂದ ಕೂಡಿದ ತಾಂಬೂಲವನ್ನು ತೆಗೆದುಕೋ) ಎನ್ನುತ್ತೇವೆ. ತಾಂಬೂಲದಲ್ಲಿ ಬಳಸುವ ಈ ಪದಾರ್ಥಗಳ ಯೋಗವು ಆರೋಗ್ಯವರ್ಧಕ ಗುಣದಿಂದ ಕೂಡಿದೆ.
ತಾಂಬೂಲದ ಬಳಕೆಯು ನಮ್ಮ ಆರೋಗ್ಯಕ್ಕೆ ಉತ್ತಮವಾದುದು ಎಂಬ ವಿಷಯ ಸತ್ಯವಾದರೂ, ಇದನ್ನು ಭಗವಂತನಿಗೆ ನಿವೇದಿಸುವ ಉದ್ದೇಶವೇನು? ಭಗವಂತನೇನು ಆಹಾರವನ್ನು ಸ್ವೀಕರಿಸಿದನೇ? ಅಥವಾ ಅವನ ಬಾಯಿಯು ವಾಸನೆಯಿಂದ ಕೂಡಿತ್ತೇ? ಇತ್ಯಾದಿ ಪ್ರಶ್ನೆಗಳು ಬರುತ್ತವೆ. ಹಿಂದೆ ಹೇಳಿದಂತೆ ಈ ಉಪಚಾರವೂ ಪರ್ಯವಸಾನದಲ್ಲಿ ನಮ್ಮ ದೇಹ, ಮನಸ್ಸು, ಇಂದ್ರಿಯಗಳನ್ನು ಪ್ರಸನ್ನಗೊಳಿಸುವುದಕ್ಕಾಗಿ ಮಾತ್ರ. ದ್ರವ್ಯದ ಬಳಕೆಯು ನಮ್ಮ ದೇಹದಲ್ಲಿರುವ ಆಯಾ ದೇವತಾಶಕ್ತಿಕೇಂದ್ರಗಳನ್ನು ಜಾಗ್ರತಗೊಳಿಸುತ್ತದೆ. ಆದ್ದರಿಂದ ಇಂತಹ ದೇವತಾಪ್ರೀತಿಗಾಗಿ ಇಂತಹ ದ್ರವ್ಯವನ್ನೇ ಬಳಸಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ವಿಷ್ಣುಪ್ರೀತಿಯನ್ನು ಪಡೆಯಬೇಕೆಂದರೆ ಗಂಧಕರ್ಪೂರದಿಂದ ಕೂಡಿದ ತಾಂಬೂಲವನ್ನು ವಿಷ್ಣುವಿಗೆ ನಿವೇದಿಸಬೇಕೆಂಬ ಸಂಪ್ರದಾಯವಿದೆ. ಅಷ್ಟೇ ಅಲ್ಲ, ತಾಂಬೂಲದ ದಾನವನ್ನು ದಾನಗಳಲ್ಲೇ ಅತ್ಯಂತಶ್ರೇಷ್ಠವಾದ ದಾನ ಎಂದೂ ಕೊಂಡಾಡಿದ್ದಾರೆ. ಮತ್ತು ತಾಂಬೂಲವಿಲ್ಲದೆ ಉಳಿದ ದಾನಕ್ಕೂ ಅವಕಾಶವಿಲ್ಲ. ಹೀಗಿರುವುದರಿಂದ ತಾಂಬೂಲಕ್ಕೆ ಇರುವ ಮಹತ್ವವನ್ನು ಅರಿಯಬಹುದಾಗಿದೆ. ಅರ್ಚನೆಯ ಕಾಲದಲ್ಲಿ ತಾಂಬೂಲವು ಲಭ್ಯವಾಗದಿದ್ದರೆ ನೀರಿನಿಂದಲಾದರೂ ಅದನ್ನು ಕಲ್ಪಿಸಿಕೊಳ್ಳಬೇಕೆಂಬ ವಚನವು ಇದಕ್ಕಿರುವ ಹಿರಿಮೆಯನ್ನು ಸಾರುತ್ತದೆ.
ಸೂಚನೆ : 18/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.