Friday, September 10, 2021

ಗಣೇಶನ ಸ್ವರೂಪದ ತಾತ್ತ್ವಿಕಾವಲೋಕನ (Ganeshana Svarupada Tattvikavalokana)




ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



"ವಂದಿಸುವುದಾದಿಯಲಿ ಗಣನಾಥನ" ಎಂದೇ ಆರಂಭವಾಗುತ್ತದೆ, ಪುರಂದರದಾಸರ ಪ್ರಸಿದ್ಧ ಕೀರ್ತನೆ. "ಆದೌ ಪೂಜ್ಯೋ ವಿನಾಯಕಃ" ಎಂಬ ಪ್ರಾಚೀನೋಕ್ತಿಯ ಕನ್ನಡಾವತಾರವೇ ಇದು.

ಧರ್ಮಜನಂತೆಯೋ ರಾವಣನಂತೆಯೋ?

ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು "ಭಯಕೃದ್ ಭಯನಾಶನಃ" ಎಂದು ಚಿತ್ರಿಸಲಾಗಿದೆ. ಎಂದರೆ ಆತನೇ ಭಯಕಾರಿ, ಭಯಹಾರಿ. ಹಾಗೆಯೇ  ನಮ್ಮ ಗಣೇಶನೂ ವಿಘ್ನಕಾರಿಯೂ ವಿಘ್ನಪರಿಹಾರಿಯೂ. 

ಧರ್ಮಜ-ರಾವಣ - ಎಂಬೀ ಇಬ್ಬರ ಉದಾಹರಣ-ಪ್ರತ್ಯುದಾಹರಣಗಳನ್ನಲ್ಲಿ ದಾಸರಿತ್ತಿದ್ದಾರೆ. ದೊಡ್ಡ ತಪಸ್ಸೇ ಮಾಡಿ ಸಂಪಾದಿಸಿಕೊಂಡಿದ್ದ ವರಗಳನ್ನು ಕಳೆದುಕೊಂಡ, ರಾವಣ - ಗಣಪತಿಗೆ ಪೂಜೆ ಸಲ್ಲಿಸದಿದ್ದುದರಿಂದ. ಆದರೆ ಹರಿಯಿತ್ತ ಸೂಚನೆಯಂತೆ ಧರ್ಮರಾಯನು ಗಣನಾಥನಿಗೆ ಮೊದಲು ವಂದಿಸಿದನಾಗಿ, ಆತನ ಕಾರ್ಯ ನಿರ್ವಿಘ್ನವಾಗಿ ನೆರವೇರಿತು: ಯುದ್ಧಜಯ, ರಾಜ್ಯಪ್ರಾಪ್ತಿಗಳಾದುವು.

ಸುರರಿಗೆ ವಂದ್ಯ, ಶಿವನಿಗೂ ವಂದ್ಯ!

ರಾವಣನೊಬ್ಬ ಅಸುರ, ಧರ್ಮಜನು ಮಾನವ. ಅವರಿಗೆ ಮಾತ್ರ ವಂದನೀಯನೆಂದಲ್ಲ. ಬ್ರಹ್ಮ-ವಿಷ್ಣುಗಳೂ ಪುಟ್ಟಗಣಪನಿಗೆ ವಂದಿಸುವರು! ಅವರಿರಲಿ, ಅವನ ಸಾಕ್ಷಾತ್ ಅಪ್ಪ-ಅಮ್ಮಂದಿರೇ ವಂದಿಸಿ ಕಾರ್ಯಾರಂಭ ಮಾಡಿದ್ದುಂಟು! ಯಾವಾಗ? 

ಬಲಿಯನ್ನು ತಗ್ಗಿಸಹೊರಟಾಗ ವಿಷ್ಣು; ಜಗತ್‍ಸೃಷ್ಟಿಮಾಡಲಿದ್ದ ಬ್ರಹ್ಮ; ಧರೆ ಹೊರಲೆಂದು ಹೊರಟಿದ್ದ ಶೇಷ; ತ್ರಿಪುರಸಂಹಾರ-ಸಂರಂಭದಲ್ಲಿದ್ದ ರುದ್ರ; ಮಹಿಷಾಸುರನನ್ನು ಮರ್ದಿಸಲಿದ್ದ ದುರ್ಗೆ; ಸಿದ್ಧಿಗಾಗಿ ಉಪಕ್ರಮಿಸುತ್ತಿದ್ದ ಸಿದ್ಧರು; ಹಾಗೂ ಜಗಜ್ಜಯದ ಕಾಮನೆಯ ಮನ್ಮಥ!

ನಾನಾ ನಾಮಗಳು

ಅಪ್ಪ-ಅಮ್ಮಂದಿರೇ ವಂದಿಸುವರೆಂದರೆ ಸಾಮಾನ್ಯನೇ ಗಣಪ? ಈತನ ಹಲವು ಹೆಸರುಗಳನ್ನು ನೋಡಿದೆವು. ಇನ್ನೂ ಉಂಟು: ಅಮರಕೋಶವು ಪಟ್ಟಿಮಾಡುವುದು ಎಂಟು: ವಿನಾಯಕ, ವಿಘ್ನರಾಜ, ದ್ವೈಮಾತುರ, ಗಣಾಧಿಪ, ಏಕದಂತ, ಹೇರಂಬ, ಲಂಬೋದರ, ಗಜಾನನ ಒಂದೊಂದು ಹೆಸರೂ ಸಾರ್ಥಕವೇ: ಡೊಳ್ಳುಹೊಟ್ಟೆಯವನಾದ್ದರಿಂದ "ಲಂಬೋದರ". ಆನೆಯ ಮುಖದವ "ಗಜಾನನ". ಒಂದೇ ದಂತದವನೇ "ಏಕದಂತ". ಈ ಮೂರೂ ಆತನ ರೂಪವನ್ನು ಹೇಳುವುವು. (ಗೌರಿ-ಗಂಗೆಯರೆಂಬ) ಇಬ್ಬರು ಅಮ್ಮಂದಿರಿಂದ ಬೆಳೆದವನು "ದ್ವೈಮಾತುರ". ಗಣದೇವತೆಗಳಿಗೆ ಒಡೆಯನಾದ್ದರಿಂದ "ಗಣಾಧಿಪ". ವಿಶಿಷ್ಟನಾಯಕನಾದ್ದರಿಂದ "ವಿನಾಯಕ". ಈ ಮೂರು ಅವನ ಸ್ಥಾನವನ್ನು ತಿಳಿಸುತ್ತವೆ. ವಿಘ್ನಗಳನ್ನು ಒಡ್ಡಲೂ ಕೆಡವಲೂ ಸಮರ್ಥನಾದವನು "ವಿಘ್ನರಾಜ". ಯುದ್ಧದಲ್ಲಿ ಮಹಾಪರಾಕ್ರಮಿಯಾದ್ದರಿಂದ "ಹೇರಂಬ". ಇವೆರಡು ಅವರ ಸಾಮರ್ಥ್ಯವನ್ನು ತಿಳಿಸುತ್ತದೆ. ಇವಲ್ಲದೆ, ಗಣೇಶ-ಸಹಸ್ರನಾಮವೇ ಉಂಟು. ನಾನಾನಾಮಗಳಿಂದ ಆತನ ಬಗ್ಗೆ ನಾನಾನೋಟಗಳು ಲಭ್ಯ..

ಪಲವಿಧ-ಫಲದ

ನಾನಾದೇವತೆಗಳ ಶಕ್ತಿಗಳೂ ಗಣೇಶನಲ್ಲಿ ಸೇರಿವೆ: ಶಿವನು ಆತನಿಗೆ ಅರ್ಧೇಂದುವನ್ನು ಕೊಟ್ಟ; ಬ್ರಹ್ಮನು ಮೇಖಲೆಯನ್ನು(=ಡಾಬು); ಸೂರ್ಯನು ಚಿಂತಾಮಣಿಯನ್ನು; ವರುಣನು ಪಾಶವನ್ನು; ವಿಷ್ಣುವು ಶಂಖವನ್ನು; ಇಂದ್ರನು ವಜ್ರವನ್ನು; ಹಾಗೂ ಯಮನು ದಂಡವನ್ನು ಕೊಟ್ಟುದನ್ನು ದೇವೀಪುರಾಣವು ಹೇಳಿದೆ.

ಇಷ್ಟೊಂದು ದೇವತಾಶಕ್ತಿಗಳಿಂದ ರಾರಾಜಿಸುವವನ ಬಗ್ಗೆ ಇಷ್ಟೊಂದು ಆದರಾರಾಧನಗಳು ಮೂಡಿಬರುವುದರಲ್ಲಿ ಆಶ್ಚರ್ಯವೇನು?

ಆರೋಗ್ಯಕ್ಕಾಗಿ ಸೂರ್ಯನನ್ನು ವಂದಿಸು; ಸಿರಿಗಾಗಿ ಅಗ್ನಿಯನ್ನೂ, ಜ್ಞಾನಕ್ಕಾಗಿ ಈಶ್ವರನನ್ನೂ, ಮೋಕ್ಷಕ್ಕಾಗಿ ಜನಾರ್ದನನನ್ನೂ, ರಕ್ಷೆಗಾಗಿ ದುರ್ಗೆಯನ್ನೂ, ಎಟುಕಲಾರದ್ದಕ್ಕಾಗಿ ಭೈರವನನ್ನೂ, ವಿದ್ಯೆಗಾಗಿ ಸರಸ್ವತಿಯನ್ನೂ, ಐಶ್ವರ್ಯವೃದ್ಧಿಗಾಗಿ ಲಕ್ಷ್ಮಿಯನ್ನೂ, ಸೌಭಾಗ್ಯಕ್ಕಾಗಿ ಪಾರ್ವತಿಯನ್ನೂ, ಮಂಗಲಕ್ಕಾಗಿ ಇಂದ್ರಾಣಿಯನ್ನೂ, ಸಂತಾನಕ್ಕಾಗಿ ಸ್ಕಂದನನ್ನೂ ವಂದಿಸು; ಇವೆಲ್ಲಕ್ಕಾಗಿ ಗಣಪತಿಯನ್ನು! - ಎನ್ನುತ್ತದೆ, ಲೌಗಾಕ್ಷಿಸ್ಮೃತಿ. 

ಹೀಗೆ ಗಣೇಶೋಪಾಸನೆಯಿಂದ ದೊರೆಯದ ಫಲವಿಲ್ಲ! ಎಲ್ಲವನ್ನೂ ಕೊಡುವವನನ್ನು ಆದರಿಸದವರಾರು? 

ಎಲ್ಲ ಮಾರ್ಗದವರಿಗೂ ಪ್ರಥಮವಂದ್ಯ

ತ್ರಿಪುರಸಂಹಾರಸಮಯದಲ್ಲಿ ಶಿವನೇ ಹೇಳುವಂತೆ, ಕೆಲಸವು ಲೌಕಿಕವಾಗಿರಲಿ, ವೈದಿಕವಾಗಿರಲಿ, ಎಲ್ಲರಿಗೂ ಪ್ರಥಮಪೂಜನೀಯನೆಂದರೆ ಗಣೇಶನೇ.

ಶೈವ-ವೈಷ್ಣವ-ಶಾಕ್ತ-ಸೌರ-ವೈನಾಯಕ-ಸ್ಕಾಂದ ಎಂಬಿವು ಭಕ್ತಿಮಾರ್ಗದ ಷಡ್‍ದರ್ಶನಗಳು.  ಆದಿತ್ಯ-ಅಂಬಿಕೆ-ವಿಷ್ಣು-ಗಣನಾಥ-ಮಹೇಶ್ವರ - ಎಂಬ ಐದು ದೇವತೆಗಳಲ್ಲಿ ಒಂದನ್ನು ಪ್ರಧಾನದೇವತೆಯಾಗಿಯೂ ಉಳಿದವನ್ನು ತದಂಗಭೂತವಾಗಿಯೂ ಪಂಚಾಯತನ ಪೂಜಾಕಲ್ಪದಲ್ಲಿ ಉಪಾಸಿಸುವರು. ಅದರಲ್ಲಿ ಗಣಪತಿಯನ್ನೇ ಪ್ರಧಾನದೇವತೆಯಾಗಿ ಪೂಜಿಸುವ ಕಲ್ಪವೂ ಪ್ರಚುರವೇ.

ದೇಶವ್ಯಾಪಿ

ಪುರಂದರದಾಸರ ಪ್ರಸಿದ್ಧಪದದಿಂದ ದಕ್ಷಿಣಭಾರತದಲ್ಲಿ ಆತನಿಗಿರುವ ಆದರವು ತಿಳಿಯುವುದು. ಉತ್ತರದಲ್ಲಿ ಉತ್ತಮವಾದ ಪ್ರಸಿದ್ಧಿಹೊಂದಿರುವುದೆಂದರೆ "ಗಾಯಿಏ ಗನಪತಿ ಜಗವಂದನ" ಎಂಬ ತುಲಸೀದಾಸರ ಹಾಡು. ಇಲ್ಲಿಯ ದಾಸರಂತೆಯೇ ಅಲ್ಲಿಯ ದಾಸರ ಬಣ್ಣನೆಯೂ : "ಮೋದಕಪ್ರಿಯ ಮುದ-ಮಂಗಲ-ದಾತಾ ವಿದ್ಯಾವಾರಿಧಿ ಬುದ್ಧಿವಿಧಾತಾ".

ಮಹಾರಾಷ್ಟ್ರವೊಂದೆಡೆಯಲ್ಲೇ ಸಂತ ಜ್ಞಾನೇಶ್ವರ, ಸಂತ ತುಕಾರಾಮ, ನಾಮದೇವ, ರಾಮದಾಸ, ಮುಂತಾದವರು ಗಣೇಶನನ್ನು ಸ್ತುತಿಸಿದ್ದಾರೆ. ಕಾಶ್ಮೀರದ ರಾಜಧಾನಿಯಾದ ಶ್ರೀನಗರದಲ್ಲೂ ಗಣೇಶನಿಗೆ ಪೂಜೆ ಸಲ್ಲುತ್ತದೆ - ಅಲ್ಲಿಯ ಹರಪರ್ವತವೆಂಬ ಬೆಟ್ಟದ ಬಳಿ. ಬಳಿಯ ತಮಿಳುನಾಡಿನ ಪಿಳ್ಳೈ ಅಥವಾ ಪಿಳ್ಳೈಯಾರ್ ಈತನನ್ನೇ ನಿರ್ದೇಶಿಸುವುದೆನ್ನುವರು. ಅತ್ತ ವಾಯವ್ಯದ ಆಫಘಾನಿಸ್ಥಾನದಲ್ಲಿ ಸಹ ಗಣೇಶನ ವಿಗ್ರಹಗಳು ದೊರೆತಿವೆ. ಉತ್ತರ/ಪೂರ್ವಗಳ ನೇಪಾಳ, ಟಿಬೆಟ್ಟು, ಬಾಂಗ್ಲಾದೇಶ, ಬರ್ಮಾಗಳಲ್ಲದೆ, ದಕ್ಷಿಣ/ಪೂರ್ವಗಳ ಶ್ರೀಲಂಕಾ, ಥಾಯ್‍ಲ್ಯಾಂಡ್, ಇಂಡೋನೇಶಿಯಾ, ಮಲೇಶಿಯಾ, ಮಾರಿಷಸ್‍ಗಳಲ್ಲೂ ಗಣೇಶ ಪೂಜಿತ. ಥಾಯ್‍ಲ್ಯಾಂಡಿನ ಸಿಲ್ವಕಾರ್ನ್ ವಿಶ್ವವಿದ್ಯಾಲಯದ ಕಲಾವಿಭಾಗದ (ಸೀಲ್) ಮುದ್ರಿಕೆಯಲ್ಲಿಇಂದೂ ಗಣೇಶನಿದ್ದಾನೆ. ಬೌದ್ಧರಿಗೂ ವಂದ್ಯ ಗಣಪ: ಎಂದೇ ಟಿಬೆಟ್-ಚೀನಾ-ಜಪಾನ್‍ಗಳಲ್ಲೂ ನಾಮಾಂತರ-ರೂಪಾಂತರಗಳಿಂದ ಆತ ಮೆರೆದಿದ್ದಾನೆ. ಗಣೇಶಪ್ರತಿಷ್ಠಾಪನವೂ ಪೂಜೆಯೂ ಜೈನಗ್ರಂಥಗಳಲ್ಲೂ ದೊರೆಯುವುದಾಗಿ, ಅವರಿಗೂ ಪೂಜ್ಯನೇ. 

ಕಲೆಗಳಲ್ಲಿ ಶಿಲ್ಪಗಳಲ್ಲಿ ಕ್ರಿಸ್ತಶಕದಾದಿಯಿಂದಲೂ ದೊರೆಯುತ್ತಾನೆ ಗಣೇಶ. ಶ್ರೀಲಂಕಾದಲ್ಲಿ ಕ್ರಿಸ್ತಪೂರ್ವಕಾಲದಿಂದಲೂ ಲಭ್ಯ. ಗಣಪನ ಮೊಟ್ಟಮೊದಲ ಶಿಲ್ಪವು ದೊರೆತಿರುವುದು ಕಾಬೂಲ್‍ನಲ್ಲಿ! "ಗಣಪನಿಲ್ಲದ ಗ್ರಾಮವಿಲ್ಲ" ಎಂಬ ಮಾತೇ ಇದೆ. ಇಡೀ ಭಾರತದಲ್ಲಿ ಗಣಪತಿಗಿರುವಷ್ಟು ಆಲಯಗಳು ಮತ್ತಾವ ದೇವತೆಗುಂಟು? 

ಕಾಲವ್ಯಾಪಿ

ಋಗ್ವೇದದಲ್ಲೇ "ಗಣಪತಿ"ಯೆಂಬ ಉಲ್ಲೇಖವಿದೆ. "ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮ್… ". ಆದರಿದು ಗಣೇಶನನ್ನೇ ಕುರಿತಾಗಿ ಇದೆಯೇ ಇಲ್ಲವೇ - ಎಂದು ಹೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ಅಲ್ಲಿಯ ಎಷ್ಟೋ ನಾಮಪದಗಳು ವಿಶೇಷಣಗಳ ಪರಿಯಲ್ಲೇ ಇರತಕ್ಕವು. ಇಂದ್ರನನ್ನೋ ಬೃಹಸ್ಪತಿಯನ್ನೋ ಸ್ತುತಿಸುವ ಅಂತಹ ಮಂತ್ರಗಳು ಶತಮಾನಗಳಿಂದಲೇ ಗಣೇಶಪೂಜೆಯಲ್ಲಿ ಪಾತ್ರಕಂಡಿವೆ.

ವೇದಗಳ ಸಂಹಿತಾಭಾಗ-ಬ್ರಾಹ್ಮಣಭಾಗಗಳಲ್ಲಿ ಗಣಪತಿ-ವಕ್ರತುಂಡ-ದಂತಿ - ಎಂಬ ಪದಗಳೇ ಬಂದಿವೆ. ಶುಕ್ಲಯಜುರ್ವೇದ ವಾಜಸನೇಯಿಸಂಹಿತೆಯಲ್ಲಿ "ಗಣಾನಾಂ ತ್ವಾ ಗಣಪತಿಂ" ಎನ್ನುವಂತೆಯೇ "ಪ್ರಿಯಾಣಾಂ ತ್ವಾ ಪ್ರಿಯಪತಿಂ", "ನಿಧೀನಾಂ ತ್ವಾ ನಿಧಿಪತಿಂ" - ಎಂಬ ಉಕ್ತಿಗಳಿವೆ. ಅತಿಪ್ರಾಚೀನವಾದ ಸಾಹಿತ್ಯವಾದ್ದರಿಂದ ವ್ಯಾಖ್ಯಾಕಾರರ ನಿರೂಪಣೆಗಳಲ್ಲಿ ಭೇದಗಳಿವೆ. 

ಮಾನವಗೃಹ್ಯಸೂತ್ರ (ಕ್ರಿ.ಪೂ. ೭ನೇ ಶತಮಾನ) ಹಾಗೂ ಯಾಜ್ಞವಲ್ಕ್ಯಸ್ಮೃತಿ (೧ನೇ ಶತಮಾನ)ಗಳಲ್ಲಿಯೂ ನಾಲ್ಕು ವಿನಾಯಕರ ಉಲ್ಲೇಖವಿದೆ: ಈ ವಿನಾಯಕರು ವಿಘ್ನಕಾರಿಗಳು. ವಿಜ್ಞಾನೇಶ್ವರನ ಮಿತಾಕ್ಷರಾ ಗ್ರಂಥವು (೧೨ನೇ ಶತಮಾನ) ಆರು ಮಂದಿಯನ್ನು ಹೇಳುತ್ತದೆ. ವಿಷ್ಣುಧರ್ಮೋತ್ತರಪುರಾಣವೂ ನಾಲ್ಕುಮಂದಿ ವಿನಾಯಕರನ್ನು ಉಲ್ಲೇಖಿಸುತ್ತದೆ.

ಮಹಾಭಾರತದಲ್ಲಿ ವ್ಯಾಸರಿಗೆ ಗಣೇಶನೇ ಲೇಖಕನಾದುದನ್ನು ನಿರೂಪಿಸಿದೆ: ಲೇಖಕೋ ಭಾರತಸ್ಯಾಸ್ಯ ಭವ ತ್ವಂ ಗಣನಾಯಕ! ಗಣೇಶನನ್ನು ಕುರಿತಾದ ಹತ್ತುಹಲವು ವಿಷಯಗಳು ಪುರಾಣ-ತಂತ್ರ-ಆಗಮಗಳಲ್ಲೂ ದೊರೆಯುವುವು.

ತಾತ್ತ್ವಿಕದೃಷ್ಟಿ

ಯೋಗಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ ಅನೇಕ ಗಹನಸತ್ಯಗಳು ಗೋಚರವಾಗುತ್ತವೆ - ಪಳಗಿದ ಯೋಗಿಗಳ ವಿವರಣೆಗಳು ದೊರೆತಲ್ಲಿ. ಅಂತಹ ಎರಡುಮೂರು ವಿವರಣೆಗಳನ್ನು ಮುಂದಿಡಲು ಇಲ್ಲಿ ಯತ್ನಿಸಿದೆ.

ಮಣ್ಣಿನ ಗಣಪ

ಮೊದಲನೆಯದಾಗಿ ಪಾರ್ವತಿಯ ದೇಹದ ಮಲದಿಂದ ಗಣೇಶನ ಸೃಷ್ಟಿಯಾಯಿತೆನ್ನುವ ಮಾತು. ಪಾರ್ವತಿಯು ಪ್ರಕೃತಿಮಾತೆ. ಪ್ರಕೃತಿಯೆಂದರೆ ಕೇವಲ ಹೊರಗೆ ಕಾಣುವ ಸೃಷ್ಟಿಯೆಂದುಕೊಳ್ಳಬಾರದು. ಸಾಂಖ್ಯ-ವೇದಾಂತಗಳಲ್ಲಿ ಪ್ರಕೃತಿಯೆಂಬುದು ೨೪ ತತ್ತ್ವಗಳಿಂದಾದುದೆಂಬ ಪಾರಿಭಾಷಿಕವಿವರಣೆಯಿದೆ. ಅವುಗಳಲ್ಲೊಂದು ಕ್ರಮವಿದೆ: ಸೂಕ್ಷ್ಮದಿಂದ ಆರಂಭ; ಸ್ಥೂಲದತ್ತ ಸಾಗುವ ಬೆಳವಣಿಗೆ. ಸ್ಥೂಲತಮವೆನಿಸುವುದು ಪೃಥ್ವೀತತ್ತ್ವ. ಪಂಚಭೂತಗಳೆನ್ನುವಾಗ ಹಿಂದಿನವು ಕ್ರಮಶಃ ಜಲ-ತೇಜಸ್-ವಾಯು-ಆಕಾಶಗಳು. 

ಯೋಗಶಾಸ್ತ್ರವು ಹೇಳುವಂತೆ ಷಟ್ಚಕ್ರಗಳಲ್ಲಿ ಮೊದಲನೆಯದಾದ ಮೂಲಾಧಾರವು ಪೃಥ್ವೀತತ್ತ್ವದ ಸ್ಥಾನ. "ಮಹೀಂ ಮೂಲಾಧಾರೇ" ಎನ್ನುವುದಲ್ಲವೇ, ಸೌಂದರ್ಯಲಹರಿ? ಗಣೇಶನನ್ನು ಕುರಿತಾದ ಗೇಯಸಾಹಿತ್ಯವೂ "ವಾತಾಪಿಗಣಪತಿಂ ಭಜೇ... ಮೂಲಾಧಾರಕ್ಷೇತ್ರಸ್ಥಿತಮ್" ಎಂದೇ ಹೇಳುತ್ತದೆ. ಎಂದೇ ಗಣಪತಿಯನ್ನು ಮೂಲಾಧಾರದ ಪ್ರತೀಕವಾದ ಮಣ್ಣಿನಿಂದಲೇ ಮಾಡುವುದು. ಅಲ್ಲಿ ಮನಸ್ಸು ಲಯಿಸಿದಾಗ ಗಜಮುಖವೇ ಗೋಚರವಾಗುತ್ತದೆ. ಮನೋಲಯದ ಪ್ರಕಾರವನ್ನು ಶಂಕರಭಗವತ್ಪಾದರ ಯೋಗತಾರಾವಳಿಯು ತಿಳಿಸಿಕೊಡುತ್ತದೆ.

ಹೊರನೋಟ-ಒಳನೋಟ

ಹೊರಗಡೆ ಗೋಚರವಾಗುವುದನ್ನು ಹೋಲುವ ವಸ್ತುವಿನ ದರ್ಶನವು ಯೋಗಾನುಭವದಲ್ಲೂ ಅಂತರಂಗದಲ್ಲಿ ಆಗಬಹುದು. ಅವೆರಡಕ್ಕೂ ಕಿಂಚಿತ್ತಾಗಿ ಸಾಮ್ಯವೂ ಇರಬಹುದು. ಹಾಗೆಂದು ಪೂರ್ಣಸಾಮ್ಯವೆಂದು ಭ್ರಮಿಸಬಾರದು. ಉದಾಹರಣೆಗೆ ಹೇಳುವುದಾದರೆ, ಯೋಗಶಾಸ್ತ್ರ-ತಂತ್ರಶಾಸ್ತ್ರಗಳಲ್ಲಿ ಕುಂಡಲಿನೀ ಸರ್ಪವನ್ನು ಕುರಿತು ಹೇಳಿದೆ; ಹಾಗೆಂದು,  ನಾವು ಹೊರಗೆ ಕಾಣುವ ಸರ್ಪಗಳ ಸ್ವಭಾವಗಳೆಲ್ಲವೂ ಅಲ್ಲೂ ಇರುವುವೆಂದುಕೊಂಡುಬಿಡಲಾಗದು. ಅನ್ವಯವು ಆಂಶಿಕವಷ್ಟೆ?

ಆನೆಯ ಸೊಂಡಿಲು ಸೌಕರ್ಯಾನುಸಾರಿಯಾಗಿ ತಿರುಗುವುದು ನಮಗೆ ಗೊತ್ತೇ ಇದೆ - ಉದಾಹರಣೆಗೆ ಆಹಾರ ಮುಂತಾದುವಕ್ಕಾಗಿ. ಆದರೆ ಗಣಪತಿಯ ಉಪಾಸನೆಯಲ್ಲಿಯ  ಸೊಂಡಿಲಿನ ಇರವಿಗೆ ವಾಮಾವರ್ತ-ದಕ್ಷಿಣಾವರ್ತಗಳೆಂಬ ಲೆಕ್ಕವುಂಟು. ಎಡಮುರಿ-ಬಲಮುರಿಗಳೆಂದರೆ ಅವೇ. ಹಾಗಿರುವ ಗಣಪತಿಗಳ ಉಪಾಸನೆಯು ಕ್ರಮವಾಗಿ ಭೋಗಪ್ರದವೂ ಯೋಗಪ್ರದವೂ ಆಗುವುದು.

ಕದಿಯದ ಇಲಿ

ಗುಜ್ಜಾನೆ ಗಣಪನ ಡೊಳ್ಳು ಹೊಟ್ಟೆಯನ್ನು ಕಾಣುತ್ತಲೇ  ಸ್ವಲ್ಪ ನಗು ಬರುವಂತಾಗಬಹುದು. (ಗಣಪನು ಹಾಸ್ಯಕ್ಕೆ ಅಧಿದೇವತೆಯೇ). ಇನ್ನು ಆ ಠೊಣಪನ  ವಾಹನ ಈ ಪುಟ್ಟ ಇಲಿಯೆಂದರೆ ಇನ್ನೂ ಹಾಸ್ಯವಾಗಿಯೇ ತೋರಬಹುದು. ಏನಿದರ ಮರ್ಮ?

ಶಬ್ದಾರ್ಥಗಳ ಸರಿಯಾದ ಜ್ಞಾನ, ಪುರಾಣಪರಿಚಯ, ಹಾಗೂ ಯೋಗಶಾಸ್ತ್ರದ ದೃಷ್ಟಿ - ಇವೆಲ್ಲ ಮೇಳೈಸಿದಾಗ ತತ್ತ್ವವು ಗೋಚರವಾಗಲು ಅನುಕೂಲಿಸುವುದು. ಇಲಿಗೆ ಮೂಷಕ/ಮೂಷಿಕ ಎನ್ನುವರಲ್ಲವೇ? (ಎರಡು ಪದಗಳೂ ಸರಿಯಾದವೇ). ಈ ಪದಗಳು ಬಂದಿರುವುದು "ಮುಷ್" ಎಂಬ ಧಾತುವಿನಿಂದ. ಅದರರ್ಥ "ಕದಿಯುವುದು". "ಮುಷ ಸ್ತೇಯೇ" ಎಂಬುದಾಗಿ ಧಾತುಪಾಠ.

ನಾವು ಕಷ್ಟಪಟ್ಟು ಸಂಪಾದಿಸುವ ಯೋಗಶಕ್ತಿಗಳನ್ನು "ಕದಿಯುವ" ದುಷ್ಟಶಕ್ತಿಯೇ ಇಲ್ಲಿಯ ಈ ಮೂಷಕ. ಇದೊಂದು ಆಸುರೀ ಶಕ್ತಿ. ಅದು ಕದಿಯುವುದು ಏನನ್ನು, ಏಕೆ ಮತ್ತು ಹೇಗೆ ? – ಎಂಬ ಪ್ರಶ್ನೆಗಳು ಬರುತ್ತವೆ. ಅವಕ್ಕೆ ಉತ್ತರ ಸಾಮಾನ್ಯರ ಅರಿವಿಗೆ ಗೋಚರವಾಗದು. ಅಯಸ್ಕಾಂತಕ್ಕೆ ಬೆಂಕಿಯ ತೀವ್ರ ಶಾಖ ತಗುಲಿದರೆ ಅದರ ಅಯಸ್ಕಾಂತತ್ವ ನಾಶವಾಗುವುದು - ಎಂಬುದರ ಏಕೆ-ಹೇಗೆಗಳು ಭೌತವಿಜ್ಞಾನಿಗಷ್ಟೆ ಗೋಚರವಲ್ಲವೇ?  ಅಂತೆಯೇ ಇಲ್ಲಿಯೂ: ಯಾವ ಶಕ್ತಿಯು ಯಾವುದಕ್ಕೆ ಪೋಷಕ, ಯಾವುದಕ್ಕೆ ಮಾರಕ? - ಎಂಬುದರ ತಿಳಿವಳಿಕೆ ಯೋಗಿಮಾತ್ರಗೋಚರವಾದುದು.

ಇದರ ಹಿಂದಿರುವ ಕಥೆಯೂ ಮಾರ್ಮಿಕವಾಗಿದೆ. ಕ್ರೌಂಚನೆಂಬ ಗಂಧರ್ವನು ದೇವಸಭೆಯಲ್ಲಿ ವಾಮದೇವನೆಂಬ ಋಷಿಗೆ ಮಾಡಿದ ಅಪಚಾರದಿಂದಾಗಿ ಶಾಪವೊದಗಿ, ಅದರ ಪರಿಣಾಮವಾಗಿ ಮೂಷಕಾಸುರನಾಗಿ ಹುಟ್ಟಿದ. ಪ್ರಸಂಗತಃ ಗಣೇಶನೊಡನೆಯೇ ಸೆಣಸಹೊರಟ.  ಕೊನೆಗೆ ಸೋತು ಶರಣಾದ.  ವಾಹನಸೇವೆಯನ್ನು ಗಣೇಶನಿಗೆ ಮಾಡಿ ತಾನು ಧನ್ಯನಾಗುವ ವರವನ್ನು ಗಣೇಶನಿಂದಲೇ ಪಡೆದುಕೊಂಡ. ಗಣಪನ ಅನುಗ್ರಹವಿದ್ದವರಿಗೆ ಆತನಿಂದ ತೊಂದರೆಯಾಗದು: ಅರ್ಥಾತ್, ಯೋಗದ ಪ್ರಗತಿ ಕುಂಠಿತವಾಗದು.

ಜಲಾಶಯದಲ್ಲಿ ವಿಸರ್ಜನ

ಇನ್ನು ಗಣಪತಿಯನ್ನು ಜಲಾಶಯದಲ್ಲಿ ವಿಸರ್ಜಿಸುವ ಕ್ರಮವಿದೆಯಲ್ಲವೇ?. ಇದು ಬಂದುದೇಕೆಂದರಿಯಬೇಕಲ್ಲವೇ? ಯೋಗಶಾಸ್ತ್ರದಲ್ಲಿ ತತ್ತ್ವಲಯವೆಂಬ ಕ್ರಮವೊಂದಿದೆ. ಅದರಂತೆ ಭೂ-ತತ್ತ್ವವನ್ನು ಅದಕ್ಕೆ ಹಿಂದಿನದಾದ ಜಲ-ತತ್ತ್ವದಲ್ಲೂ, ಅದನ್ನು ಅದರ ಹಿಂದಿನ ತೇಜಸ್ಸಿನಲ್ಲೂ – ಹೀಗೇ ಹಿಂದುಹಿಂದಿನ ತತ್ತ್ವಗಳಲ್ಲಿ ಲಯಗೊಳಿಸುತ್ತಾ ಹೋಗಬೇಕು. ಅದರ ಒಂದು ಪ್ರತೀಕವಾಗಿಯೇ 'ಮಣ್ಣಿನ' ಗಣೇಶನನ್ನು ಜಲದಲ್ಲಿ ವಿಸರ್ಜಿಸುವುದು.

ಇದರ ಮರ್ಮವಿದು: ಒಳಗೆ ಘಟಿಸುವ ಕ್ರಿಯೆಗೆ ಹೊರಗಣ ಕ್ರಿಯೆಯೊಂದನ್ನು ಪ್ರತಿಫಲಕವಾಗಿಯೂ ಪೋಷಕವಾಗಿಯೂ ಇಟ್ಟುಕೊಳ್ಳುವುದೂ ಒಂದು ತಂತ್ರ. ಹೀಗೆ ಮಾಡುವುದು ಅಂತರಂಗದ ಪ್ರಗತಿಗೆ ಪುಷ್ಟಿಕೊಡುತ್ತದೆ. ಈ ತತ್ತ್ವವನ್ನು ಶ್ರೀರಂಗಮಹಾಗುರುಗಳು ಅನುಭವದೊಡನೆ ತಿಳಿಸಿಕೊಟ್ಟಿರುವರು.  

ಉಪಸಂಹಾರ

ಹೀಗೆಯೇ ಇಲ್ಲಿಯ ಹಲವು ವಿಷಯಗಳು ಸೂಕ್ಷ್ಮವಾದವು. ಕೆಲವನ್ನಷ್ಟೇ ಇಲ್ಲಿ ಸೂಚಿಸಿದೆ. ಅವನ್ನು ಯೋಗಿಗಳ ಮಾರ್ಗದರ್ಶನದಲ್ಲಿ ಅರಿಯಬೇಕೇ ವಿನಾ, ಕೇವಲ ಚತುರತೆಯಿಂದಷ್ಟರಿಂದಲೇ ಉತ್ತರ ಹುಡುಕುವುದು ಫಲಕಾರಿಯಾಗದು.

ಹೀಗೆ ಗಣೇಶನ ರೂಪ- ಸ್ವರೂಪಗಳು ತಾತ್ತ್ವಿಕವಾದುವೆಂಬುದನ್ನು ಮನಗಾಣಬೇಕಾಗಿದೆ. ತತ್ತ್ವವರಿತು ಮಾಡುವ ಧಾರ್ಮಿಕಕ್ರಿಯೆಗಳಿಗೇ ಪೂರ್ಣಫಲ. ಯಾಂತ್ರಿಕವಾಗಿ ಮಾಡಿದರೆ ಅದು ದೊರಕೀತೇ?. ನಾವು ಮಾಡುವ ಕಾರ್ಯಗಳು ಹೀಗೆ ಹೆಚ್ಚುಹೆಚ್ಚು ಸಫಲವಾಗುವಂತೆ ಯತ್ನಿಸುವಂತೆ ಗಣಪ ಪ್ರಚೋದಿಸಲಿ!

ತನ್ನೋ ದಂತಿಃ ಪ್ರಚೋದಯಾತ್ !

ಸೂಚನೆ : 10/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಪರ್ವ ಅಂಕಣದಲ್ಲಿ ಪ್ರಕಟವಾಗಿದೆ.