Saturday, June 26, 2021

ಯೋಗತಾರಾವಳಿ - 11 ಸೂರ್ಯ-ಚಂದ್ರನಾಡಿಗಳನ್ನು ಬಿಟ್ಟು (Yogataravali - 11 Surya-chandranadigalannu Bittu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಯೋಗತಾರಾವಳಿ (ಶ್ಲೋಕ ೧೧) 

ತ್ರಿಕೂಟ-ನಾಮ್ನಿ…

ಕನ್ನಡದಲ್ಲಿ 'ತಿಕ' ಎಂಬ ಪದವು ಯಾರಿಗೆ ಗೊತ್ತಿಲ್ಲ? ಗೊತ್ತಿಲ್ಲದಾಗಿರಬಹುದಾದ ವಿಷಯವೆಂದರೆ ಅದು ಸಂಸ್ಕೃತದಿಂದ ಬಂದದ್ದು ಎಂಬುದು. 'ತ್ರಿಕ' ಎಂಬುದು 'ತಿಕ' ಆಗಿದೆ. ಮೂರರ ಗುಂಪಿಗೆ 'ತ್ರಿಕ'ಎಂದು ಹೆಸರು. ಮೂರು ಮೂಳೆಗಳು ಸೇರುವೆಡೆಯು 'ತ್ರಿಕ'.

ಎರಡು ತ್ರಿಕೂಟಗಳು

ಯೋಗಶಾಸ್ತ್ರದ ಸಂದರ್ಭದಲ್ಲಿ ಈ ವಿಷಯವೇಕೆ? ಬೆನ್ನು ಹುರಿಯ ಕೆಳಭಾಗದಲ್ಲಿ ಮೂರು ಮೂಳೆಗಳು ಸೇರುತ್ತವೆ. 'ಗುದ' ಅಥವಾ 'ಪಾಯು' ಎಂದು ಹೆಸರುಳ್ಳ ಈ ಮಲ-ವಿಸರ್ಜನ-ಸ್ಥಾನವು ಮೂರು ಮೂಳೆಗಳ ಸಂಗಮ-ಸ್ಥಾನವಾದ್ದರಿಂದ ಅದು 'ತ್ರಿಕ, ಕನ್ನಡದಲ್ಲಿ 'ತಿಕ'. ಕೂಟವೆಂದರೂ ಸಂಗಮವೇ. ಆದ್ದರಿಂದ ಈ ಸಂಧಿ-ಸ್ಥಾನಕ್ಕೆ 'ತ್ರಿಕೂಟ'ವೆಂದೂ ಹೆಸರಿದೆ. ಇದು ಮೂಲಾಧಾರ-ಚಕ್ರದೆಡೆಯ ಸ್ಥಾನ.

ಬೆನ್ನುಹುರಿಯ ಈ ತುದಿಯಲ್ಲಿ ತ್ರಿಕೂಟವೊಂದಾದರೆ, ಮತ್ತೊಂದು ತುದಿಯಲ್ಲಿಯೂ ಒಂದು ತ್ರಿಕೂಟವಿದೆ. ಎರಡು ಹುಬ್ಬುಗಳ ಸಂಧಿಸ್ಥಾನವೂ ಒಂದು ತ್ರಿಕೂಟವೇ. ನಾಡಿಗಳಲ್ಲಿ ಅತ್ಯಂತ ಮುಖ್ಯವೆನಿಸುವ ಮೂರು ಸೇರುವೆಡೆಯೂ ಒಂದು ತ್ರಿಕೂಟವೇ. ಇದು ಆಜ್ಞಾ-ಚಕ್ರದೆಡೆಯ ಸ್ಥಾನ. ಈ ಮೇಲಿನ ತ್ರಿಕೂಟ-ಸ್ಥಾನವು ಯೋಗ-ಮಾರ್ಗದಲ್ಲಿ ಒಂದು ಉನ್ನತವಾದ ಸ್ಥಾನ.

ರಾಮಾಯಣದ ಲಂಕೆಯು ಕೆಳಗಿನ ತ್ರಿಕೂಟದಲ್ಲಿದೆಯೆಂದೂ, ಮೇಲಿನ ತ್ರಿಕೂಟದಲ್ಲಿ ಗಜೇಂದ್ರಮೋಕ್ಷ-ಪ್ರಸಂಗವೆಂದೂ ಶ್ರೀರಂಗಮಹಾಗುರುಗಳು ರಹಸ್ಯವನ್ನು ವಿವರಿಸಿದ್ದರು. ಎರಡು ಕಡೆಯೂ ಮೂರು ಮುಖ್ಯ-ನಾಡಿಗಳು ಸೇರುತ್ತವೆ.

ಪ್ರಕೃತ, ಯೋಗತಾರಾವಳಿಯು ಈ ಮೇಲಿನ ತ್ರಿಕೂಟವನ್ನೂ, ಅಲ್ಲಿರುವ 'ಖ' ಎಂದರೆ ಆಕಾಶವನ್ನು ಕುರಿತೂ ಹೇಳಿದೆ. ಆಕಾಶವೆಂದರೆ ಏನೂ ಇಲ್ಲದ ಎಡೆ. ಸ್ತಿಮಿತವಾದ ಅಂತರಂಗವು ಆ ಜಾಗದಲ್ಲಿ ಕೇವಲ-ಕುಂಭಕದಿಂದ ಸ್ತಂಭಿತವಾಗುತ್ತದೆ, ಎನ್ನುತ್ತದೆ ಈ ಶ್ಲೋಕ. ಸ್ತಿಮಿತವೆಂದರೆ ಕ್ಷೋಭೆಯಿಲ್ಲದಿರುವುದು. ಯಾವುದೇ ತಳಮಳವಿಲ್ಲದ ಅಂತರಂಗವು (ಅರ್ಥಾತ್ ಮನಸ್ಸು) ಅಲ್ಲಿ ಸ್ತಬ್ಧವಾಗುವುದು. ಚಿತ್ತದಲ್ಲಿ ತರಂಗಗಳಿದ್ದಾಗ ಅದನ್ನು ಸ್ತಂಭನಮಾಡುವುದು ಸುಲಭವಾಗಿ ಆಗದು. ಸ್ತಿಮಿತವಾದ ಚಿತ್ತವು ಒಂದು ಹದ್ದುಬಸ್ತಿನಲ್ಲಿರುತ್ತದೆ. ಹೀಗೆ ಆರ್ಭಟವಿಲ್ಲದ ಚಿತ್ತವನ್ನು ನಿಶ್ಚೇಷ್ಟವನ್ನಾಗಿಸಬೇಕಾದುದಿದೆ.

ಅದನ್ನಾಗಿಸಲು ಬೇಕಾದುದು ಕೇವಲ-ಕುಂಭಕ. ಮನಸ್ಸಿನ ಮೇಲೆ ಸ್ತಂಭನ-ಕ್ರಿಯೆಯನ್ನು ಈ ಕುಂಭಕವು ಸಾಧಿಸಿಯಾದ ಬಳಿಕ ಪ್ರಾಣವಾಯುವಿನ ನಡೆಯು ಹೇಗಾಗುವುದು? -ಎಂಬುದನ್ನು ಈ ಶ್ಲೋಕದ ಉತ್ತರಾರ್ಧದಲ್ಲಿ ತಿಳಿಸಿದೆ. ಇಡಾನಾಡಿ-ಪಿಂಗಳಾನಾಡಿಗಳಿಗೆ ಕ್ರಮವಾಗಿ ಚಂದ್ರನಾಡಿ-ಸೂರ್ಯನಾಡಿಗಳೆಂದು ಹೆಸರು. "ಅವೆರಡನ್ನೂ ತೊರೆದು, ಪ್ರಾಣವು ವಿಲಯವನ್ನು ಹೊಂದುವುದು" - ಎಂದು ಈ ಶ್ಲೋಕವು ಹೇಳುತ್ತದೆ.

ಭಾನುನಾಡಿ-ಶಶಾಂಕನಾಡಿ

ಪ್ರಾಣವು ಇಡಾನಾಡಿಯಲ್ಲಿಯೋ ಪಿಂಗಳಾನಾಡಿಯಲ್ಲಿಯೋ ಸಾಧಾರಣವಾಗಿ ಸಂಚರಿಸುತ್ತಿರುವಂತಹುದು. ಈ ಎಡಹೊಳ್ಳೆ-ಬಲಹೊಳ್ಳೆಗಳಲ್ಲಿಯ ಉಸಿರಾಟವೇ "ಚಂದ್ರನಾಡಿ-ಸೂರ್ಯನಾಡಿಗಳಲ್ಲಿಯ ಪ್ರಾಣಸಂಚಾರ"ವೆಂದು ಕರೆಸಿಕೊಳ್ಳುವುದು. ಶಶಾಂಕನಾಡಿಯೆಂದರೆ ಇಡೆ, ಭಾನುನಾಡಿಯೆಂದರೆ ಪಿಂಗಳೆ.

ಸದಾ ಇವುಗಳಲ್ಲೇ ಸಂಚರಿಸುವ ಪ್ರಾಣವು, ಇದೋ ಈ ಕೇವಲಕುಂಭಕ-ಪ್ರಾಣಾಯಾಮವು ಸಿದ್ಧವಾಗುತ್ತಲೇ ಅವೆರಡೂ ನಾಡಿಗಳನ್ನು ತೊರೆದುಬಿಡುವುದು. ಕೇವಲಕುಂಭಕ-ಸ್ಥಿತಿಯುಂಟಾಗುವುದಕ್ಕೂ, ಈ ಎರಡೂ ನಾಡಿಗಳಲ್ಲಿ ಪ್ರಾಣವು ಸಂಚಾರವನ್ನು ಬಿಡುವುದಕ್ಕೂ ಮಧ್ಯೆ ಕಾಲವಿಲಂಬವೇನಿರದು. ಈ ಕುಂಭಕ-ಸ್ಥಿತಿಯು ಬರುವುದೂ, ಈ ಎಡಬಲನಾಡಿಗಳನ್ನು ತೊರೆಯುವುದೂ ಸಮಕಾಲದಲ್ಲೇ ಸಂಭವಿಸುವುವೋ ಎನ್ನುವಂತಿರುವುದು.

ಈ ಭಾನುನಾಡಿ-ಶಶಾಂಕನಾಡಿಗಳನ್ನು ಬಿಟ್ಟ ಪ್ರಾಣ-ವಾಯುವಿನ ಮುಂದಿನ ಗತಿಯೇನೆಂದರೆ ಲಯ ಹೊಂದುವುದು. ಏನಿದರರ್ಥ? ಎಲ್ಲರಿಗೂ ಪ್ರಿಯವಾದದ್ದೇ ಪ್ರಾಣವಲ್ಲವೇ? ಪ್ರಾಣಕ್ಕಿಂತಲೂ ಪ್ರಿಯವಾದದ್ದುಂಟೇ? ಪ್ರಾಣವೇ ವಿಲಯಗೊಳ್ಳುವುದೆಂದರೇನೋ? - ಎಂದು ಶಂಕಿಸಬೇಕಿಲ್ಲ. ಎಡಗಡೆಯ ನಾಡಿ, ಬಲಗಡೆಯ ನಾಡಿಗಳನ್ನು ಬಿಟ್ಟದ್ದು ನಡುವಿನ ನಾಡಿಯನ್ನು ಸೇರಿಕೊಳ್ಳುವುದನ್ನು ಇಲ್ಲಿ ಹೇಳಿದೆ. ಅದುವೇ ಅದರ ಪಾಲಿನ "ಲಯ".

ಗೀತೆಯಲ್ಲಿ ಸಹ "ಹುಬ್ಬುಗಳ ಮಧ್ಯದಲ್ಲಿ ಪ್ರಾಣವನ್ನು ಚೆನ್ನಾಗಿ ಹೊಕ್ಕಿಸು"ವ ಕ್ರಮವನ್ನು ಹೇಳಿದೆಯಲ್ಲವೇ? (ಗೀತೆ ೮.೧೦: ಭ್ರುವೋರ್ ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್).

ತ್ರಿಕೂಟ-ನಾಮ್ನಿ ಸ್ತಿಮಿತೇಂಽತರಂಗೇ

      ಖೇ ಸ್ತಂಭಿತೇ ಕೇವಲ-ಕುಂಭಕೇನ |

ಪ್ರಾಣಾನಿಲೋ ಭಾನು-ಶಶಾಂಕ-ನಾಡ್ಯೌ

      ವಿಹಾಯ ಸದ್ಯೋ ವಿಲಯಂ ಪ್ರಯಾತಿ ||೧೧||


ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.