"ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ |
ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯ ಮನೋ ಯಥಾ"-
ಸತ್ಪುರುಷರ ಮನಸ್ಸಿನಂತೆ ಬಗ್ಗಡವಿಲ್ಲದೆ ತಿಳಿಯಾಗಿ ರಮಣೀಯವಾಗಿ ಹರಿಯುತ್ತಿದೆ ಎಂದು ತಮಸಾ ನದಿ ತೀರ್ಥದ ಬಗ್ಗೆ ಶಿಷ್ಯನಿಗೆ ವಾಲ್ಮೀಕಿ ಮಹರ್ಷಿಗಳು ಹೇಳುತ್ತಾರೆ. ಕಲ್ಮಶವಿಲ್ಲದ ತಿಳಿ ನೀರನ್ನು ಸತ್ಪುರುಷರ ಮನಸ್ಸಿಗೆ ಹೋಲಿಸಿದ್ದಾರೆ. ನೀರಿನ ಆಸರೆಯಲ್ಲಿ ಸ್ವಲ್ಪವೂ ಕೊಳೆ ಇಲ್ಲದಿದ್ದಾಗ, ಅಲೆಗಳೂ ಇಲ್ಲದಿದ್ದಾಗ ಅದು ತಿಳಿಯಾಗಿದ್ದು ಅದರ ಕೆಳಗೆ ಇರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಅಲೆಗಳು ಏರ್ಪಟ್ಟಾಗ ಅದರಲ್ಲಿ ಪ್ರತಿಬಿಂಬಿತವಾದ ಸೂರ್ಯಚಂದ್ರರ ಬಿಂಬಗಳು ಅವು ಇದ್ದಂತೆ ಕಾಣದೇ ಹೇಗೆ ಹೇಗೋ ಕಾಣುವಂತಾಗುತ್ತದೆ. ಅಂತಹ ನೀರಿನಲ್ಲಿ ನಮ್ಮ ಪ್ರತಿಬಿಂಬವೂ ನಾವಿದ್ದಂತೆ ಕಾಣದು. ಅದೇ ನಿಶ್ಚಲವಾದ ನೀರಿನ ಕೊಳದಲ್ಲಿ ನಮ್ಮ ಪ್ರತಿಬಿಂಬ ನಾವಿದ್ದಂತೆಯೇ ಕಾಣುತ್ತದೆ. ಹಾಗೆ ಕಾಣುವಂತಾಗುವುದೇ "ತಿಳಿವಳಿಕೆ".
ಹಾಗೆಯೇ ಒಳಬೆಳಗುವ ಸತ್ಯವನ್ನು ಕಂಡ ಸತ್ಪುರುಷರ ಮನಸ್ಸು ಬಗ್ಗಡ, ಅಲೆಗಳಿಲ್ಲದೆ ಒಳಗಿನ ಅವರ ಸ್ವರೂಪವಾದ ಪರಮಾತ್ಮ ಪ್ರಕಾಶ ಸ್ಪಷ್ಟವಾಗಿ ಕಾಣುವಂತಿರುತ್ತದೆ. ನಮ್ಮಲ್ಲೂ ಆ ಸದ್ವಸ್ತು ಬೆಳಗುತ್ತಿದ್ದರೂ ನಮ್ಮ ಚಿತ್ತ ವೃತ್ತಿಗಳು-ಮನಸ್ಸಿನ ಅಲೆಗಳು ಅದನ್ನು ಕಾಣದಂತೆ ಮಾಡಿದೆ. ನಾವೆನ್ನಬಹುದು-ಮನಸ್ಸಿನ ಸ್ವಭಾವವೇ ಚಂಚಲ, ಅದನ್ನು ಹೇಗೆ ನಿಶ್ಚಲಗೊಳಿಸಲಾದೀತು ಎಂದು. ಊಟ ತಿಂಡಿಗಳನ್ನೇ ಮರೆತು ನಮಗೆ ಪ್ರಿಯವಾದ ಕ್ರಿಕೆಟ್ ಆಟವನ್ನು ಏಕಾಗ್ರಮನಸ್ಸಿನಿಂದ ಟಿವಿಯಲ್ಲಿ ನೋಡುತ್ತೇವೆ. ಹಾಗೆ ಏಕಾಗ್ರವಾಗಿರುವ ಸ್ವಭಾವವೂ ಮನಸ್ಸಿಗೆ ಇದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ವಾಯುವಿನಂತೆ ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವುದಾದರೂ ಹೇಗೆಂದು ಅರ್ಜುನನೆಂದಾಗ ಶ್ರೀ ಕೃಷ್ಣನು - ನಿಜಕ್ಕೂ ಮನಸ್ಸನ್ನು ನಿಗ್ರಹಿಸುವುದು ಕಷ್ಟಸಾಧ್ಯವೇ. ಆದರೆ ಅಭ್ಯಾಸ-ವೈರಾಗ್ಯಗಳಿಂದ ಸಾಧ್ಯವಾಗುತ್ತದೆ ಎನ್ನುತ್ತಾನೆ. ಉದಾಹರಣೆಗೆ ನಮಗೆ ನಿತ್ಯ ವ್ಯಾಯಾಮ ಮಾಡುವುದು ಕಷ್ಟವೆನಿಸುವುದು. ಆದರೆ ಕ್ರಮೇಣ ಬಲವಂತವಾಗಿ ಅದು ನಮ್ಮ ಸ್ವಭಾವವಾಗುವವರೆಗೆ ಅಭ್ಯಾಸ ಮಾಡುತ್ತಿದ್ದರೆ ನಮಗೆ ವ್ಯಾಯಾಮ ರೂಢಿಯಾಗಿ ಬಿಡುತ್ತದೆ.
ವೈರಾಗ್ಯವೆಂದೊಡನೆ ಸಂನ್ಯಾಸಿಗಳಾಗಬೇಕೆಂದು ಭಾವಿಸಬೇಕಿಲ್ಲ. ನಮ್ಮ ಧ್ಯೇಯ ವಸ್ತುವಿನಲ್ಲಿ ರಾಗ. ಅದಕ್ಕೆ ಸಲ್ಲದ ಇತರ ವಿಷಯಗಳಲ್ಲಿ ವಿ-ರಾಗ, ಅನುರಕ್ತಿ ಇಲ್ಲದಿರುವುದೇ ವೈರಾಗ್ಯ. ಜ್ಞಾನಿಗಳ ಮಾತಿನಂತೆ ನಮ್ಮೆಲ್ಲರಿಗೂ ಸಹಜವಾದ ಸ್ಥಿತಿ ಅದು. ನಿದ್ರೆ ಬಂದಾಗ ನಮ್ಮ ಜಾಗ್ರತ್ ಜೀವನದ ವಸ್ತು, ವಿಷಯಗಳೆಲ್ಲವನ್ನೂ ಮರೆಯುತ್ತೇವೆ. ಅವೆಷ್ಟು ಪ್ರೀತಿಪಾತ್ರವಾಗಿದ್ದರೂ ಅದರೊಂದಿಗೆ ಆಗ ವೈರಾಗ್ಯವೇ. ನಿದ್ರೆಯೇ ಹಾಗೆ ಮಾಡಿಸುತ್ತೆ. ಹಾಗೆಯೇ ಭಗವಂತನೊಡನೆ ರಮಿಸುವ "ತುರೀಯ" ಎಂಬ ಸ್ಥಿತಿ ನಮಗೆಲ್ಲರಿಗೂ ಇದೆ. ಅದನ್ನು ಸಹಜಾವಸ್ಥೆ ಎಂದೇ ಕರೆದಿದ್ದಾರೆ. ನಾವು ಜನ್ಮಾಂತರಗಳಿಂದ ಅದರಿಂದ ವಿಮುಖರಾಗಿ ಇಂದ್ರಿಯ ಜೀವನದಲ್ಲೇ ಕಳೆದಿರುವುದರಿಂದ ಅದನ್ನು ಪುನಃ ಪಡೆಯಲು ವಿಶೇಷ ಅಭ್ಯಾಸ ಮಾಡಬೇಕಾಗಿದೆ. ಒಂದು ಹಸನಾದ ದಾರಿಯೇ ಆದರೂ ಓಡಾಡದೇ ಬಿಟ್ಟರೆ ಕಂಟಿಗಳು ಬೆಳೆದುಕೊಂಡು ನಡೆಯಲು ದುಸ್ತರವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಸತ್ಪುರುಷರು ಅಂತಹ ಸಹಜಾವಸ್ಥೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರ ಮನಸ್ಸಿನ ನೈರ್ಮಲ್ಯ ಅದನ್ನು ಎಂದೆಂದಿಗೂ ಅನುಭವಿಸುವಂತೆ ಇರುತ್ತದೆ. ಅಂತಹ ಸತ್ಪುರುಷರ ಹಾದಿ ನಮ್ಮದಾಗಲಿ. ಅಂತಹ ಒಳ್ಳೆಯ ಅಭ್ಯಾಸ-ವೈರಾಗ್ಯಗಳು ನಮಗೂ ಬರಲಿ ಎಂದು ಪ್ರಾರ್ಥಿಸೋಣ.