Tuesday, March 16, 2021

ಮಂಗಲ (Mangala)

   ಲೇಖಕರು  - ವಿದ್ವಾನ್ ನರಸಿಂಹ ಭಟ್ ಬಡಗು
(ಪ್ರತಿಕ್ರಿಯಿಸಿರಿ lekhana@ayvm.in)

ಯಾವುದು ಪ್ರಶಸ್ತ, ಶ್ರೇಷ್ಠ, ಶುಭ ಎಂದು ತಿಳಿದವರು ಹೇಳಿದ್ದಾರೋ ಅದನ್ನು ಆಚರಿಸುವುದು 'ಮಂಗಲ',   ಅಶುಭವಾದುದನ್ನು ಮಾಡುವುದು ಅಮಂಗಲ ಎಂದು ಕರೆಯುತ್ತಾರೆ. ಮಂಗಲವಾದುದನ್ನು ಆಚರಣೆ ಮಾಡಿದಾಗ ಆಗುವ ಪರಿಣಾಮ ಸುಖ, ಸಂತೋಷ. ಅಶುಭವಾದುದನ್ನು ಮಾಡಿದಾಗ ಆಗುವ ಪರಿಣಾಮ ದುಃಖ, ದುಮ್ಮಾನ. ಯಾವುದು ಆತ್ಮಲಾಭವನ್ನುಂಟುಮಾಡಿಕೊಡುವುದೋ ಅದನ್ನು ಆತ್ಮಗುಣ ಎನ್ನಲಾಗುವುದು. ಆದುದರಿಂದ ಮಂಗಲವೆಂಬ ಆಚರಣೆಯಿಂದ ಆತ್ಮಲಾಭವಾಗುವುದರಿಂದ ಇದನ್ನು ಆತ್ಮಗುಣ ಎಂದು ಕರೆದಿದ್ದಾರೆ.

ಪ್ರಶಸ್ತವಾದುದನ್ನು ಮಾಡುತ್ತಾ, ಅಪ್ರಶಸ್ತವಾದುದನ್ನು ಮಾಡದೇ ಇರುವುದು ಮಂಗಲ ಎಂದು ಋಷಿಗಳು ಗುರುತಿಸಿದ್ದಾರೆ. ಯೋಗಿಗಳಾದ ಶ್ರೀರಂಗಮಹಾಗುರುಗಳು ಮಂಗಲ-ಅಮಂಗಲ ಎಂಬುವುದಕ್ಕೆ ಮಾನದಂಡ ಯಾವುದು? ಎಂಬುವುದನ್ನು ಸುಂದರವಾಗಿ ವಿವರಿಸಿದ್ದಾರೆ. "ಆತ್ಮಕ್ಷೇತ್ರಕ್ಕೆ ಅಂದರೆ ಆತ್ಮಸಾಕ್ಷಾತ್ಕಾರಕ್ಕೆ ಯಾವ ದ್ರವ್ಯಗಳು ಅಥವಾ ಯಾವ ವಾತಾವರಣವು ಅನುಕೂಲವನ್ನುಂಟುಮಾಡಿ ಪೋಷಕವಾಗಿರುತ್ತವೋ ಅಂತಹ ದ್ರವ್ಯಗಳು ಅಥವಾ ಅಂತಹ ವಾತಾವರಣ ಶುದ್ಧ ಅಥವಾ ಪವಿತ್ರ ಎನಿಸಿಕೊಳ್ಳುತ್ತವೆ. ಅಂತಹ ದ್ರವ್ಯಗಳ ಸಾನ್ನಿಧ್ಯ ಅಥವಾ ಸ್ಪರ್ಶದಿಂದ ನಮ್ಮ ನಾಡಿಗಳಲ್ಲಿ ಕಂಡುಬರುವ ವ್ಯತ್ಯಾಸವೇನೆಂಬುದನ್ನು ಗಮನಿಸಿ ಯಾವುದು ಮಂಗಲ ಮತ್ತು ಯಾವುದು ಅಮಂಗಲ ಎಂಬ ವಿಷಯದ ಬಗ್ಗೆ ನಾವು ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ" ಎಂದು.  


ಸೃಷ್ಟಿಯಲ್ಲಿ ಎಲ್ಲೆಲ್ಲೂ ಭಗವಂತನ ಅಸ್ತಿತ್ವ

"ಈಶಾವಾಸ್ಯಂ ಇದಂ ಸರ್ವಮ್" ಎಂಬಂತೆ ಅಣುರೇಣುತೃಣಕಾಷ್ಠವೂ ಭಗವಂತನ ಸಾನ್ನಿಧ್ಯದಿಂದ ಕೂಡಿರುವುದೇ ಆಗಿರುವಾಗ ಅಮಂಗಲ ಎಂಬುವುದುಂಟೇ? ಎಲ್ಲವೂ ಮಂಗಲವೇ ಆಗಿರುವಾಗ ಶುಭ ಅಶುಭದ ಮಾತೆಲ್ಲಿ? ಹೌದು. ಎಲ್ಲೆಲ್ಲೂ ಭಗವಂತನೇ ವಾಸಮಾಡಿದರೂ ಭಗವಂತನ ಅಭಿವ್ಯಕ್ತಿ ಅತಿಶಯವಾಗಿ ಎಲ್ಲಿ ಆಗುವುದೋ ಅದನ್ನು ಸುವಸ್ತು ಎಂದು ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತನ್ನ ಧರ್ಮವು ಅತಿಶಯವಾಗಿ ಅಭಿವ್ಯಕ್ತವಾಗುವ ವಿಷಯ ತನ್ನ 'ವಿಭೂತಿ'ಯೆಂದು ವಿವರಿಸಿದ್ದಾನೆ. ಭಗವಂತನು ಎಲ್ಲಿ ಅತಿಶಯವಾಗಿ ವ್ಯಕ್ತವಾಗುತ್ತಾನೋ ಅಥವಾ ಯಾವುದರಿಂದ ಭಗವಂತನನ್ನು ಕಾಣಬಹುದೋ ಅದು ಮಂಗಲ. ಅರಿಶಿನ, ಕುಂಕುಮ, ಸುವರ್ಣ, ಹಸು, ಹಸುವಿನ ಉತ್ಪನ್ನಗಳು ಸಾಲಿಗ್ರಾಮ ಇವೆಲ್ಲವೂ ಮಂಗಲದ್ರವ್ಯಗಳು.

ಅಮಂಗಲ ಯಾವುದು?

ವಾಸ್ತವಿಕವಾಗಿ ಈ ಪ್ರಪಂಚದಲ್ಲಿ ಅಮಂಗಲವೆಂಬುದಿಲ್ಲ ಎಂಬ ವಿಚಾರವನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಧರಿಸಿದಾಗ ಎಲ್ಲವೂ ಅರ್ಥವಾಗುವುದು. ಸಮಯ ಸನ್ನಿವೇಶಕ್ಕೆ ತಕ್ಕಂತೆ ವಸ್ತುವನ್ನು ತ್ಯಾಜ್ಯ;  ಪೂಜ್ಯ ಎನ್ನುತ್ತೇವೆ. "ಅಮಂತ್ರಂಅಕ್ಷರಂ ನಾಸ್ತಿ ನಾಸ್ತಿ ಮೂಲಂ ಅನೌಷಧಮ್ | ಅಯೋಗ್ಯಃ ಪುರುಷೋ ನಾಸ್ತಿ ಯೋಜಕಃ ತತ್ರ ದುರ್ಲಭಃ" ಎಂಬ ಮಾತಿದೆ.  ಮಂತ್ರಕ್ಕೆ ಬಾರದ ಅಕ್ಷರವಿಲ್ಲ; ಔಷಧಕ್ಕೆ ಬಾರದ ಗಿಡಮೂಲಿಕೆಗಳಿಲ್ಲ. ಅಯೋಗ್ಯನಾದ ಪುರುಷನೆಂಬುವನಿಲ್ಲ. ಅಕ್ಷರವನ್ನು (ಮನನ ಮಾಡಿದವನನ್ನು ತಾರಣ ಮಾಡುವ) ಮಂತ್ರರೂಪವಾಗಿ ಬಳಸಬಲ್ಲ, ಗಿಡದ ಮೂಲಿಕೆಯನ್ನು ಔಷಧವಾಗಿ ಉಪಯೋಗಿಸಬಲ್ಲ ಹಾಗೂ ಒಬ್ಬ ಪುರುಷನನ್ನು ಯೋಗ್ಯನನ್ನಾಗಿ ಮಾಡಬಲ್ಲ ಯೋಜಕನು ದುರ್ಲಭನಷ್ಟೆ.  ಹಾಗೆಯೇ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಪದಾರ್ಥದ ಗುಣಧರ್ಮವನ್ನು ಅರಿತ ಸೃಷ್ಟಿವಿಜ್ಞಾನಿಗಳು ಒಂದು ವ್ಯವಸ್ಥೆಯನ್ನು ತಂದಿದ್ದಾರೆ. ಯಾವ ಪದಾರ್ಥವನ್ನು ಹೇಗೆ ಬಳಸಬೇಕು,  ಯಾವ ಕಾಲದಲ್ಲಿ ಬಳಸಬೇಕು,  ಯಾರು ಬಳಸಬೇಕು ಎಂಬುವುದನ್ನು, ಅವರು ಕೊಟ್ಟ ವಿಜ್ಞಾನವನ್ನು ತಿಳಿದುಕೊಂಡು ಆಚರಿಸುವುದು ಮಂಗಳ. ಹಾಗೆಯೇ ಆ ಕಾಲಕ್ಕೆ ಅದು ವ್ಯತಿರಿಕ್ತವಾದ ಪರಿಣಾಮವನ್ನು ಕೊಡುತ್ತದೆ ಎಂದಾದರೆ ಅದನ್ನು ಸರ್ವಥಾ ಅನುಷ್ಠಾನಗೊಳಿಸಬಾರದು. ಇದನ್ನೇ ಋಷಿಗಳು 'ಮಂಗಳ' ಎಂದರು. ಇದು ಆತ್ಮಗುಣವಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಅನುಕೂಲಿಸುವುದು.

ಸೂಚನೆ: 25/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.