Showing posts with label youtube_link_https://youtu.be/5QO6yFaqVfE. Show all posts
Showing posts with label youtube_link_https://youtu.be/5QO6yFaqVfE. Show all posts

Sunday, February 14, 2021

ಆರ್ಯಸಂಸ್ಕೃತಿ ದರ್ಶನ - 30 (Arya Samskruti Darshana - 30)

ಶ್ರೀಃ
ಭಕ್ತಿ ಬಲವೋ-ದೌರ್ಬಲ್ಯವೋ  ?
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ
 
 
"ಇಡಬೇಕೀಶ್ವರನಲ್ಲಿ ಭಕ್ತಿರಸಮಂ", " ಭಕ್ತಿಃ ಶೂಲಿನಿ" ಎಂಬಿವೇ ಮೊದಲಾದ ನೀತಿಯ ಮಾತುಗಳು ಮಾನವನಲ್ಲಿ ಇರಬೇಕಾದ ಅವಶ್ಯಕ ಗುಣಗಳಲ್ಲಿ ಭಕ್ತಿಯೂ ಒಂದು ಎಂದು ಗಣಿಸುತ್ತದೆ. ಭಕ್ತರನ್ನು ದೇಶದಾದ್ಯಂತ ಗೌರವಿಸುವ ಮನೋಧರ್ಮ ಬೆಳೆದಿದೆ.

ಇಂತಹ ಭಕ್ತಿಯ ಬಗೆಗೆ ಇತ್ತೀಚೆಗೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಭಕ್ತಿ ಕೇವಲ ಭಾವನೆ. ಇದರಲ್ಲಿ ನಂಬಿಕೆಯ ಪಾಲೇ ಜಾಸ್ತಿ. ವಿಚಾರದ ಪಾಲು ಕಡಿಮೆ. ಭಕ್ತಿ ಮನುಷ್ಯನಿಗೆ ಸ್ವಾವಲಂಬನೆಯನ್ನು ತಪ್ಪಿಸಿ ಪರಾವಲಂಬನೆಯನ್ನು ಬೆಳೆಸಿಬಿಡುತ್ತದೆ. ತನ್ನಲ್ಲಿ ಯಾವ ಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ದೈನ್ಯವೃತ್ತಿ ಆತ್ಮವಿಶ್ವಾಸವನ್ನು ಕಳೆದು ಬಿಡುತ್ತದೆ. ಜೀತದಾಳಿನ ಮನೋಧರ್ಮವನ್ನು, ಗುಲಾಮಗಿರಿಯ ಮನೋಭಾವವನ್ನು ಹರಡುತ್ತದೆ ಈ ಭಕ್ತಿ. ಹೀಗೆ ಬುದ್ಧಿ ಬಲವನ್ನು ಕುಂಠಿತಗೊಳಿಸಿ,  ವಿಚಾರಶಕ್ತಿಯನ್ನು ಕಳೆದು, ಮೌಢ್ಯದತ್ತ ತಳ್ಳಿ, ಮಾನವನ ಏಳಿಗೆಗೆ ಹಾನಿಯುಂಟು ಮಾಡುತ್ತದೆ. ಈ ಮುಗ್ಧಭಕ್ತಿಯ ದುರ್ಲಾಭವವನ್ನು ಪಡೆದ ಶೋಷಕರ ಶೋಷಣೆಗೀಡಾಗುತ್ತಿದ್ದಾನೆ ಮಾನವ. ಆದ್ದರಿಂದ ಭಕ್ತಿ ಮಾನವನನ್ನು ಏಳಿಗೆಯಿಂದ ಕಟ್ಟಿ ಹಾಕುವ ಶೃಂಖಲೆ. ಆದ್ದರಿಂದ ಭಕ್ತಿಯಿಲ್ಲದಿದ್ದರೂ ತೊಂದರೆಯಿಲ್ಲ. ಅಪಾಯವೇನೂ ಇಲ್ಲ. ಆದರೆ ಕೋಟಲೆಗೊಳಗಾಗುವುದು  ಮಾತ್ರ ಬೇಡ.

ಇಂತಹ ವಿಚಾರಗಳು ಭಕ್ತಿಪರರ ಮನಸ್ಸನ್ನೂ ಕಲಕ ಹತ್ತಿವೆ. ತಮ್ಮ ಭಕ್ತಿಯನ್ನು ವಿಮರ್ಶೆಗೊಳಪಡಿಸಿಕೊಳ್ಳುವಂತೆ ಮಾಡಿದೆ. ಅನೇಕರ ಭಕ್ತಿಯನ್ನು ಕಡಿಮೆಗೊಳಿಸಿರುವುದೂ ಉಂಟು.. ಅಂತೆಯೇ ವಿಚಾರದತ್ತ ಒಲಿಯುವ ಸ್ವಭಾವವುಳ್ಳ ಯುವ ಪೀಳಿಗೆಯ ಮನಸ್ಸು ಭಕ್ತಿಭಾವದಿಂದ ಜಾರುತ್ತಿದೆ.

ಈ ಯಾವ ವಿಚಾರವನ್ನೂ ಗಣಿಸದ ವೀರಭಕ್ತರ ಸಂಖ್ಯೆಗೇನೂ ಕೊರತೆಯಿಲ್ಲವಾದರೂ ಇದರ ನಿಜವೇನು ಎಂಬುದನ್ನು ಅರ್ಥಮಾಡಿಕೊಳ್ಳಬಯಸುವ ನ್ಯಾಯವಾದ ಮನಸ್ಸಿಗೆ ಸಮರ್ಪಕವಾದ ಉತ್ತರ ಅಗತ್ಯವಾಗಿದೆ. ಈ ದಿಶೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಬರಹ.

ಜೇನಿನ ಸವಿ ಯಾರಿಗೆ ತಿಳಿಯದು?  ಆ ಸವಿ ನಮ್ಮ ಮನಸ್ಸನ್ನು ತನ್ನತ್ತ ಸೆಳೆಯುತ್ತದೆ. ಒಮ್ಮೆ ಸವಿದರೆ ಮತ್ತೆ ತನ್ನತ್ತ ಸೆಳೆಯುವ ಗುಣ ಅದರಲ್ಲಿದೆ. ಮನಸ್ಸು ಅತ್ತ ಒಲಿಯುತ್ತದೆ. ಅದೇ ಮನಸ್ಸಿನ ಒಲವು. ಆ ಒಲವು ಮತ್ತೆ ಜೇನನ್ನು ಸವಿಯುವುದಕ್ಕೆ ಪೋಷಕವಾದುದರಿಂದ ಜೇನಿನ ಸವಿಯಲ್ಲಿ ಒಲವು ಅಗತ್ಯ. ಆ ಒಲವು ನಮಗೆ ಜೇನಿನ ಸವಿಯ ಸುಖವನ್ನು ನೀಡುತ್ತದೆ. ಅದು ಭಾವನೆ ನಿಜ. ಆದರೂ ಅದು ನಮ್ಮ ಬಾಳನ್ನು ಉಳಿಸಲು, ಬೆಳೆಸಲು ಸಹಾಯ ಮಾಡುತ್ತದೆ. ಈ ಜೇನಿನಂತಯೇ ಮಲ್ಲಿಗೆಯ ಕಂಪು, ಬೆಳದಿಂಗಳ ತಂಪು, ಕೋಗಿಲೆಯ ಗಾನದ ಇಂಪು ಇವುಗಳೂ ನಮ್ಮ ಮನದಲ್ಲಿ ಒಲವನ್ನು ಮೂಡಿಸುತ್ತವೆ. ಆ ಒಲವು-ಪ್ರೀತಿ ನಮಗೆ ಸುಖ ನೀಡುತ್ತದೆ.

ಜೀವನದ ಸುಖದ ಸಾರವೇನು ? ಅದರ ನೆಲೆ ಎಲ್ಲಿದೆ? ಎಂದು ಹುಡುಕ ಹೊರಟ ಜೀವಿಗಳಿಗೆ, ಅವರ ಹೃದಯ ಬಿಲವು ತೆರೆದು ಒಳಗೆ ತುಂಬಿ ಬೆಳಗುವ ಸುಖದ ನಿಧಿಯೊಂದು ಗೋಚರವಾಯಿತು. ಸವಿಜೇನು ನಮ್ಮ ಮನವನ್ನು ತನ್ನತ್ತ ಒಲಿಸಿದಂತೆ, ಮನವು ಆ ಸುಖದ ನಿಧಿಯತ್ತ ಒಲಿಯಿತು. ಅಲ್ಲೇ ಪುಳಕಗೊಂಡಿತು. ಸುಖದ ನಿಧಿ ಇಲ್ಲಿಯೇ ಇದೆ ಎಂದರಿತ ಬಳಿಕ ಮನಸ್ಸಿನ ಒಲವಿನ ಪ್ರವಾಹವೇ ಅತ್ತ ಹರಿಯಿತು. ಆ ಹರಿವೇ ಭಕ್ತಿ. "ಸಾಪರಾನುರಕ್ತಿರೀಶ್ವರೇ"–"ಸಾತ್ವಸ್ಮಿನ್ ಪರಮಪ್ರೇಮರೂಪಾ"—ಭಕ್ತಿಯು ಈಶ್ವರನಲ್ಲಿ ಪರಮಪ್ರೇಮರೂಪವಾದುದು ಎಂಬ ಮಾತು ಇದನ್ನು ಹೇಳುತ್ತದೆ.  

ಆದ್ದರಿಂದ ಪ್ರೀತಿಯ ಉತ್ಕೃಷ್ಟತಮವಾದ ರೂಪವೇ ಭಕ್ತಿ. ಅಂತೆಯೇ ಪರಮಪ್ರೇಮದಿಂದ ಸುಖದ ನೆಲೆಯೇ ದೊರೆತುದರಿಂದ ಅದಕ್ಕೆ ಸಾಧನವಾದ ಭಕ್ತಿ ಸುಖರೂಪವಾದುದು. ಭಕ್ತಿ --ಎಂದರೆ ಸೇರುವಿಕೆ-ಎಂಬರ್ಥವೂ  ಬರುತ್ತದೆ. ತನ್ನ ಹೃದ್ಗೋಚರವಾದ ಸುಖನಿಧಿಯಲ್ಲಿ, ಅದರ ತಂಪು-ಇಂಪುಗಳಲ್ಲಿ ಒಂದಾಗುವುದೇ ಭಕ್ತಿ. ಅದರಲ್ಲಿ ಸುಖಿಸುವುದೇ ಭಕ್ತಿ.

ಪ್ರತಿಜೀವಿಯ ಹೃದಯದಲ್ಲಿಯೂ ಆ ಸುಖದ ನಿಧಿಯುಂಟು. ಅದನ್ನು ಅನುಭವಿಸುವ ಯೋಗ್ಯತೆಯುಂಟು. ಆ ಅನುಭವಕ್ಕೆ ಕೀಲಿಕೈ ಭಕ್ತಿ. ಅನುಭವಿಗಳ ಹೃದಯದಿಂದ ಮೂಡಿಬಂದ ಭಕ್ತಿ ಸಂದೇಶಗಳು ಆ ಅನುಭವದತ್ತ ಕರೆದೊಯ್ಯುವ ಮಾರ್ಗದರ್ಶಿಗಳು. ಆದ್ದರಿಂದಲೇ "ಮೋಕ್ಷ ಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ"
"ತನ್ನ ಜೀವನದಲ್ಲಿ ನೆಲೆಮುಟ್ಟಿಸುವ ಸಾಮಗ್ರಿಗಳಲ್ಲಿ ಭಕ್ತಿಯೇ ಹಿರಿದಾದ ಸಾಮಗ್ರಿ"  ಎಂಬ ಮಾತನ್ನು ನಾವು ನೋಡುತ್ತೇವೆ.

ಜೀವಿಯ ಸಹಜ ಸುಖದ ನೆಲೆಯನ್ನು ಕಂಡು ಅನುಭವಿಸಿದಾಗ ಒಲಿದ ಮನಸ್ಸಿನ ಧಾರೆಯೇ ಭಕ್ತಿ. ಅದು ಸಹಜ. ಅದು ಮನಸ್ಸಿನ ಬಲವೇ ಹೊರತು ದೌರ್ಬಲ್ಯವಲ್ಲ. ಜೀವಿಗಳೆಲ್ಲರೂ ಯಾವ ಪರಮಾವಧಿಯ ಸೌಖ್ಯಕ್ಕಾಗಿ ಹಂಬಲಿಸುವರೋ ಅಂತಹ ಪರಮಾವಧಿಯ ಸೌಖ್ಯದ ಹಾದಿ ತೋರುವ ಭಕ್ತಿ ಬಲವಲ್ಲದೇ ಮತ್ತೇನು ?
ತನ್ನ ಜೀವನದ ಒಳಮೈಯಲ್ಲಿ ಮಿಂಚಿದ ಸತ್ಯದ ಪ್ರಕಾಶದಿಂದ ರೂಪಗೊಂಡ ಭಾವನೆ ಭಕ್ತಿ. ಆದ್ದರಿಂದ ಅರಿವಿನ ಆಧಾರದಿಂದ ರೂಪಗೊಂಡ ಭಾವನೆಯೇ ಹೊರತು, ವಿಚಾರ ಬಲಹೀನವಾದ ಶಕ್ತಿಯಲ್ಲ ಭಕ್ತಿ.

ಹಣಕ್ಕಾಗಿ, ಉದರ ನಿಮಿತ್ತವಾಗಿ ಗುಲಾಮಗಿರಿಯನ್ನು ಸಂತೋಷವಾಗಿ ಒಪ್ಪಿಕೊಳ್ಳುವ ಮಾನವ, ತನ್ನ ಜೀವಿತ ಪರಮ ಸೌಖ್ಯದ ಲಾಭಕ್ಕಾಗಿ ಭಕ್ತಿಯತ್ತ ಒಲೆಯುವುದು ಹೇಗೆ ತಪ್ಪಾದೀತು?
ಭಕ್ತಿ ತನ್ನ ಜೀವನವು ಯಾವ ಅವಲಂಬನೆಯ ಮೇಲಿದೆಯೋ, ಆ ನಿಜವಾದ ಅವಲಂಬನೆಯನ್ನು ನೀಡಿ ಬಾಳನ್ನು ಹಸನುಗೊಳಿಸುವುದರಿಂದ ಇಲ್ಲಿ ಪರಾವಲಂಬನೆಯ ಪ್ರಶ್ನೆಯೇ ಇಲ್ಲ. ಜೀವನದ ಮೂಲಶಕ್ತಿಯ ಪರಿಚಯಕ್ಕೆ ಬಂದಾಗ ಅದರಿಂದ ತನ್ನ ಜೀವನ ತುಂಬಿ ಬೆಳೆಯುವುದನ್ನು ಗುರುತಿಸಿದಾಗ, ತನ್ನಲ್ಲಿ ಯಾವಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ಭಾವ ವಸ್ತುಸ್ಥಿತಿಯ ಗುರುತಿಸುವಿಕೆಯೇ ಹೊರತು, ಅದರಲ್ಲಿ ದೈನ್ಯವಾಗಲೀ, ಆತ್ಮವಿಶ್ವಾಸದ ಕಳೆಯುವಿಕೆಯಾಗಲೀ ಇಲ್ಲ. ಆತ್ಮವನ್ನು ಕಂಡಾಗ ಮೂಡುವ ವಿಶ್ವಾಸದ ಹೇಳಿಕೆಯು ಆತ್ಮವಿಶ್ವಾಸವನ್ನು ಹೇಗೆ ಕಳೆದೀತು ?

ಮಾನವ ಜೀವನದಲ್ಲಿ ಹುದುಗಿರುವ ಅಂತಶ್ಚೈತನ್ಯದ ನೆಲೆಯನ್ನು ಗುರುತಿಸಲು ಸಾಧನವಾಗಿರುವುದರಿಂದಲೇ, ಭಕ್ತಿ, ಮಾನವನ ಏಳಿಗೆಗೆ ಪೂರಕವೇ ಹೊರತು ಮಾರಕವಲ್ಲ. ಭಕ್ತಿ ಪ್ರತಿಜೀವಿಗೂ ಅತ್ಯಗತ್ಯ. ಸುಖದ ನೆಲೆಯಲ್ಲಿ ನಿಲ್ಲಿಸುವ  ಸಾಧನ. ಪರಮಾವಧಿಯ ಸುಖದತ್ತ ಸೆಳೆವ ಸೂಜಿಗಲ್ಲು. ಜೀವನದ ಪ್ರೇಮನಿಧಿಯತ್ತ ಹರಿಸುವ ಪ್ರೇಮರೂಪವಾದ ಮನೋಧಾರೆ. ಜೀವಿಯು ಊಹಿಸಲಾಗದ ಕಲ್ಪನೆಗೂ ನಿಲುಕದ ಸುಖದ ಭಂಡಾರದ ಕೀಲಿಕೈ.

ಈ ಭಕ್ತಿಯ ಸವಿ ಕೊಂಚ ಊರಿದರೆ ಆಗ ತಿಳಿದೀತು ಅದರಿಂದಾಗುವ ಲಾಭ. ಜೀವನದ ಸುಖದ ನಿಧಿಯನ್ನು, ಪರಾತ್ಪರ ವಸ್ತುವನ್ನು ತಲುಪುವ ಸುಖರೂಪವಾದ ಶ್ರೇಷ್ಠಮಾರ್ಗ ಭಕ್ತಿ ಮಾರ್ಗ. ಇಂತಹ ಭಕ್ತಿಯ ರಹಸ್ಯವನ್ನು ನನ್ನ ಅರಿವಿಗೆ ತಂದುಕೊಟ್ಟ ಶ್ರೀರಂಗಮಹಾಗುರುವಿಗೆ  ಭಕ್ತಿಯಿಂದ ನಮಿಸಿ ಈ ಬರಹವನ್ನು ಭಕ್ತಿಗಮ್ಯವಾದ ಪರಂಜ್ಯೋತಿಯ ಅಡಿದಾವರೆಗಳಲ್ಲಿ ಸಮರ್ಪಿಸುತ್ತೇನೆ.    

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೭ ಸಂಪುಟ: ೦೫ ಸಂಚಿಕೆ:  ಮೇ ೧೯೮೩ ತಿಂಗಳಲ್ಲಿ ಪ್ರಕಟವಾಗಿದೆ. 

Saturday, December 22, 2018

ಭಕ್ತಿ: ಬಲವೋ ದೌರ್ಬಲ್ಯವೊ ? (Bhakti: Balavo daurbalyavo?)

ಲೇಖಕರು: ಡಾl ಮೋಹನ್ 

ಭಕ್ತಿ ಮತ್ತು ಭಕ್ತರ ಕಥೆಗಳು ಭಾರತೀಯರಿಗೆ ಚಿರಪರಿಚಿತ. ಕಬೀರ್, ಸೂರ್ದಾಸ್,ಮೀರಾ, ನಾಯನ್ಮಾರರು , ಆಳ್ವಾರರು, ಶಿವಶರಣರು, ಕನಕದಾಸರು, ಪುರಂದರದಾಸರೇ ಮೊದಲಾದ ಭಕ್ತ-ಭಕ್ತಿಸಾಹಿತ್ಯದ ಗುನುಗು ಮನೆಮನೆಯಲ್ಲಿ ಇಂದಿಗೂ ಕೇಳಿಸುತ್ತಿದೆ. ಆದರೆ ವಿಚಾರಪರತೆ ಹೆಚ್ಚುತ್ತಿದ್ದಂತೆ ಭಕ್ತಿ-ಭಾವದ ಬಗ್ಗೆ ಪ್ರಶ್ನೆಗಳು ಏಳುವುದೂ ಉಂಟು.  ಭಾವುಕರಾಗಿ ಸುಮ್ಮನೆ ಅತ್ತು ಕರೆದು ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂದರೆ ಅವನು ಬರುವನೇ? ಸುಮ್ಮನೆ ಗೋಳಾಡುವುದರ ಬದಲಾಗಿ ಕಾಯಕವೇ ಕೈಲಾಸವೆಂದು ಕಾರ್ಯೋನ್ಮುಖರಾಗಬರದೇ? ಯೋಗ-ಪ್ರಾಣಾಯಾಮ-ಧ್ಯಾನಗಳಲ್ಲಿ ಇರುವ ಘನತೆ ಇಲ್ಲಿಲ್ಲ. ಭಾವುಕತೆ ದೌರ್ಬಲ್ಯದ ಸಂಕೇತ ಎಂಬುದು ಒಟ್ಟಾಭಿಪ್ರಾಯ.

ಭಕ್ತಿ ಎಂದರೇನು ?
  
ವಿಭಕ್ತಿ ಎಂದರೆ ಬೇರ್ಪಡಿಸುವುದು, ಬಿಡಿಸುವುದು.  ತದ್ವಿರುದ್ಧವಾಗಿ ಭಕ್ತಿ ಎಂದರೆ ಸೇರಿಸುವದು, ಒಂದುಗೂಡಿಸುವುದು. ಪ್ರಸ್ತುತ ಜೀವ ಮತ್ತು ಪರಮಾತ್ಮನನ್ನು ಒಂದುಗೂಡಿಸುವಿಕೆಯನ್ನು ತಿಳಿಸುತ್ತದೆ. ಮೂಲತಃ ಭಕ್ತಿ ಎಂಬುದೂ ಯೋಗಕ್ಕೆ ಪರ್ಯಾಯವಷ್ಟೇ. ಪಾರಿಭಾಷಿಕವಾಗಿ ಅದು ಯೋಗದ ಅನೇಕ ಮಾರ್ಗಗಳಲ್ಲಿ ಒಂದು.

ಮನಸ್ಸು ಮತ್ತು ಪ್ರಾಣ ಜಂಟಿ ವಾಹನಗಳಂತೆ. ಒಂದನ್ನೆಳೆದರೆ  ಮತ್ತೊಂದೂ ಬರುವುದು. ಪ್ರಾಣಗಳನ್ನು ನಿಯಂತ್ರಿಸಿ ತನ್ಮೂಲಕ ಯೋಗವನ್ನು ಸಾಧಿಸುವ ಕ್ರಮ ಒಂದು. ಮನಸ್ಸನ್ನು ಸೆಳೆದು ಯೋಗವನ್ನು ಸಾಧಿಸುವುದು ಮತ್ತೊಂದು. ಈ ಎರಡನೆಯದೇ ಭಕ್ತಿ.

ಮನಸ್ಸಿನ ಸಹಜ ಸ್ವಭಾವವೇ ಅಂಟಿಕೊಳ್ಳುವುದು

ನನ್ನ ಸ್ವತ್ತು. ನನ್ನ ಮನೆ. ನನ್ನ ತಾಯಿ. ಹೆಂಡತಿ, ಮಕ್ಕಳು, ಸ್ನೇಹಿತರು ಎಂಬ ನಾನಾ ಅಂಟುಗಳು. ಇದು ಮುಗಿಯದ ಪಟ್ಟಿ.ಈ ಅಂಟು ಚಟವಾಗಿಯೂ ಪರಿವರ್ತಿಸುವುದುಂಟು. ಇಷ್ಟರ ಗುಣ ನಮ್ಮಲ್ಲಿ ಸಂಕ್ರಮಿಸುತ್ತದೆ. ಕೋಪಿಷ್ಠರು, ನೀಚರ ಸಂಗದಿಂದ  ಕೋಪವು ಪೌರುಷವೆಂದು ತೋರುವುದು, ಸಡಿಲವಾದ ಮಾತು ಹಾಸ್ಯದ ಮುಖವಾಡ ಧರಿಸುವುದು. ಎಲೆ ಮನವೇ, ಈ ಅಂಟುಗಳನ್ನೆಲ್ಲಾ ಬಿಡು, ಎಂದರೆ ಬಿಡದು. ಧ್ಯಾನದಲ್ಲಿ ಮುಳುಗು ಎಂದರೆ ಅಸಾಧ್ಯ. ಎಷ್ಟು ಸಲ ಬಲಾತ್ ಬಿಡಿಸಿದರೂ ಮತ್ತಿನ್ನಾವುದಕ್ಕೋ ಅಂಟಿಕೊಳ್ಳುತ್ತದೆ. ಇದು ಜನಸಾಮಾನ್ಯರ ಸ್ಥಿತಿ.

ಮದಿಸಿದ ಆನೆಗೆ ಪಳಗಿದ ಆನೆಯೇ ಉತ್ತರ  
 

ಚಪಲತೆಯ ಮೂರ್ತಿಯಾಗಿರುವ ಮನಸ್ಸಿಗೆ ಚಾಪಲ್ಯವೇ ಸರಿಯೆಂದರು  ಋಷಿಗಳು. ಅಂಟನ್ನು ಬಿಡು ಎನ್ನುವಬದಲಾಗಿ ಅಂಟಿಕೊಳ್ಳುವುದಕ್ಕೆ ಪಳಗಿದ ಆನೆಯಂತಿರುವ ಉತ್ಕೃಷ್ಟ  ವ್ಯಕ್ತಿ/ವಿಷಯಗಳನ್ನು ಕೊಟ್ಟರು. ಮಕ್ಕಳಲ್ಲಿ ಅಂಟಿದ್ದವರಿಗೆ ಬಾಲಕೃಷ್ಣನ ಕಥಾಮೃತವನ್ನು ಉಣಿಸಿದರು. ತರುಣಿಯರಿಗೆ ಗೋಪೀಲೋಲಕೃಷ್ಣನ ರಾಸಲೀಲೆಗಳು. ಹೀಗೆ ಮನಸ್ಸಿನ ಅಪೇಕ್ಷಿತಭಾವಕ್ಕೆ ಸರಿಯಾಗಿ ಒಂದು ವ್ಯಕ್ತಿತ್ವವನ್ನು ನೀಡಿದರು. ಸಖನಾಗಿ, ಸ್ವಾಮಿಯಾಗಿ, ಪ್ರಿಯೆಯತಮನಾಗಿ, ಪತಿಯಾಗಿ  ಕೃಷ್ಣನನ್ನೂ, ರಾಮನನ್ನೂ ಶಿವನನ್ನೂ ಪ್ರೀತಿಸುವ ದಾರಿಯನ್ನು ಕಲ್ಪಿಸಿದರು. ಮಾತಿನ ಪ್ರವೃತ್ತಿಯಿದ್ದರೆ ಸ್ತೋತ್ರ, ಕಥೆಕೇಳುವ ಹಂಬಲವಿದ್ದಲ್ಲಿ ಕಥಾಶ್ರವಣ. ಹೀಗೆ ನವವಿಧ ಭಕ್ತಿಭಾವಗಳು. ಲೌಕಿಕ ಸಂಬಂಧಗಳಂತೆ ಇಲ್ಲೂ ಮಾತನಾಡುವುದು, ಕೋಪಿಸಿಕೊಳ್ಳುವುದು, ಅಳುವುದುಂಟು. ಮನುಷ್ಯಸಹಜವಾದ ಎಲ್ಲಾ ಭಾವಗಳೂ ವ್ಯಕ್ತವಾಗುವುದುಂಟು. ಮತ್ತಿಲ್ಲೇನು ಸಾಧಿಸಿದಂತಾಯಿತು ?            

ಭಕ್ತಿ ರಹಸ್ಯ

ಶ್ರೀರಂಗ ಮಹಾಗುರುಗಳು ವಿವರಿಸುವಂತೆ ಭಕ್ತಿಯೋಗದಲ್ಲಿ ಋಷಿಗಳು ಅಂಟಿಗಾಗಿ ಕೊಡುವ ವಸ್ತುಗಳು ಶುಧ್ಧ ಸತ್ತ್ವ ಮೂರ್ತಿಗಳು. ರಾಗವನ್ನು ತೊರೆದ ವ್ಯಕ್ತಿತ್ತ್ವಗಳನ್ನು ಅನುರಾಗಕ್ಕೆ ವಿಷಯವಾಗಿ ನೀಡಿದರು. ವೀತರಾಗರ ಸಂಗದಿಂದ ನಮ್ಮಲ್ಲೂ ವೈರಾಗ್ಯ ಸಂಕ್ರಮಿಸುತ್ತದೆ. ಸಾತ್ವಿಕರನ್ನು ಯಾವುದಾದರೊಂದು  ಭಾವದಿಂದ ಅನವರತ ಭಾವಿಸಿದರೆ ನಮ್ಮ ಮನಸ್ಸಲ್ಲೂ ಸತ್ತ್ವಗುಣದ ವೃದ್ಧಿಯಾಗುವುದು. ಮನಸ್ಸಿನ ಜೊತೆ ಪ್ರಾಣವೂ ತಿಳಿಯದೇನೆಯೇ ಯೋಗ ಮಾರ್ಗವನ್ನು ಪ್ರವೇಶಿಸುವುದು. ಭಕ್ತಿಮಾರ್ಗದಲ್ಲಿ ಮುಂದುವರಿಯುತ್ತಾ ಧ್ಯಾನವಾಗಿ ಪರಿಣಮಿಸುತ್ತದೆ. ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನ ಮುಂತಾದ ಅಷ್ಟಾಂಗ ಯೋಗದಿಂದ ಸಿಗುವ ಸಮಾಧಿಫಲವೇ ಭಕ್ತಿಯ ಫಲವೂ ಹೌದು. ಶ್ರೀಮದ್ಭಾಗವತದಲ್ಲಿ ವರ್ಣಿಸಿರುವ ಗೋಪಿಕೆಗಳ ವೃತ್ತಾಂತ ಭಕ್ತಿಮಾರ್ಗಕ್ಕೆ ಉತ್ತಮವಾದ ಕೈಪಿಡಿ. ಅವರ ಅನುಭವ-ದರ್ಶನಗಳು ಯೋಗಿಗಳಿಗೂ ದುರ್ಲಭವಾದ ಸಮಾಧಿಸಾಮ್ರಾಜ್ಯದ ಫಲವಾಗಿದೆ. ದೌರ್ಬಲ್ಯವನ್ನೇ  ಬಲವಾಗಿಸಿಕೊಂಡು ಯೋಗಮಾರ್ಗದ ಬಾಗಿಲನು ತೆರೆದು, ಮಾಯೆಯ ತೆರೆಯನು ತೊರೆದು ಒಳಗೊಳಗೇ ಹರಿ-ಹರನ ದರ್ಶನ ಭಕ್ತಿಯಿಂದ ಖಂಡಿತವೂ ಸಾಧ್ಯ ಎಂಬುದು
 

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದ.