Showing posts with label author_chandrashekarabhat. Show all posts
Showing posts with label author_chandrashekarabhat. Show all posts

Monday, March 30, 2020

ಜ್ಞಾನಮಾರ್ಗದಲ್ಲಿ ನಡೆದ ಶಂಕರರೇ ಮಾರ್ಗದರ್ಶಿ (Jnanamargadalli Nadeda Shankararee Margadharsi)

ಲೇಖಕರು: ವಿದ್ವಾನ್ ಎನ್. ಎನ್. ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಮ್| 
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್|| 

ಸನಾತನಭಾರತದ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಆಕಾಶದಲ್ಲಿ ಬೆಳಗುತ್ತಿರುವ ಧ್ರುವತಾರೆ ಶ್ರೀಶಂಕರಾಚಾರ್ಯರು. ನಾಸ್ತಿಕರ- ಬುದ್ಧಿವಾದಿಗಳ ಸೋಗಲಾಡಿ ಮಾತುಗಳಿಗೆ ಮಾರು ಹೋಗಿ ಜನರು ಧರ್ಮಭ್ರಷ್ಟರೂ, ಕರ್ತವ್ಯಭ್ರಷ್ಟ್ರರೂ ಆಗುತ್ತಿದ್ದ ಸಂಧಿಕಾಲದಲ್ಲಿ 'ಶಂಕರ' ಸೂರ್ಯನ ಉದಯವಾಯಿತು. ಈ ಸೂರ್ಯನು ತನ್ನ ಪ್ರಖರಕಿರಣಗಳನ್ನು ಎಲ್ಲೆಡೆ ಪಸರಿಸಿ, ಜನರಲ್ಲಿ ಹುದುಗಿದ್ದ ಅಜ್ಞಾನಾಂಧಕಾರವನ್ನು ಕಳೆದನು. ಇಂತಹ ಆಚಾರ್ಯೇಂದ್ರರನ್ನು ಕುರಿತು ಯಥಾಮತಿ ನಾಲ್ಕು ಮಾತುಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಆಚಾರ್ಯಶಂಕರರು ಅಲೌಕಿಕ ಮೇಧಾಸಂಪನ್ನ ವ್ಯಕ್ತಿಯಾಗಿದ್ದರು. ಇವರ ಲೋಕಾತೀತವಾದ ವಿದ್ವತ್ತು, ಮೇರುಪ್ರತಿಭೆ, ಶಾಸ್ತ್ರಪಾಂಡಿತ್ಯಗಳು ಎಲ್ಲರನ್ನೂ ಮುಗ್ಧರನ್ನಾಗಿಸುತ್ತಿತ್ತು. ಪಾರ್ವತಿಯನ್ನು ಕುರಿತು ಕಾಳಿದಾಸನು ಹೇಳುವ ಮಾತು— 'ಶರತ್ಕಾಲದಲ್ಲಿ ಹಂಸಪಕ್ಷಿಗಳು ಗಂಗಾನದಿಯಲ್ಲಿ ಸಹಜವಾಗಿ ಬಂದು ವಿಹರಿಸುವಂತೆ, ಸಂಜೆಯಾದೊಡನೆ ಮಹೌಷಧಿಗಳಲ್ಲಿ ಅವುಗಳ ಆತ್ಮಪ್ರಭೆಯು ಪ್ರಕಟಗೊಳ್ಳುವಂತೆ, ಪಾರ್ವತಿಯಲ್ಲಿ ಪೂರ್ವಜನ್ಮದಲ್ಲಿ ಗಳಿಸಿದ ಎಲ್ಲಾ ವಿದ್ಯೆಗಳೂ ಉಪದೇಶಕಾಲದಲ್ಲಿ ಪ್ರಕಟಗೊಂಡವು'. ಇದೇ ರೀತಿಯಲ್ಲಿ ಶಂಕರರು 

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್| 
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್|| 

ತನ್ನ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ವಿದ್ಯಾಧ್ಯಯನ, ಭಾಷ್ಯರಚನೆ, ಗ್ರಂಥರಚನೆ, ಸ್ತೋತ್ರರಚನೆ, ಲೋಕದರ್ಶನ, ಭಾರತಾದ್ಯಂತ ಸಂಚಾರ, ಧರ್ಮಸಂಸ್ಥಾಪನೆಗಾಗಿ ಆಮ್ನಾಯಪೀಠ ಸ್ಥಾಪನೆ- ಅಲ್ಲಿ ಶಿಷ್ಯರ ನಿಯುಕ್ತಿ, ಆ ಪರಂಪರೆ ಮುಂದುವರಿಯಲು ಬೇಕಾದ ದೃಢಸ್ಫೂರ್ತಿಪೂರಣ ಇತ್ಯಾದಿ ಅಲೌಕಿಕ ಕಾರ್ಯಗಳನ್ನು ಮಾಡಿ, ದೇಶಕ್ಕೆ ಹೊಸ ಚೈತನ್ಯವನ್ನು ತುಂಬಿದ ಮಹಾಸಂತ, ದೈವೀಪುರುಷ, ಪರಿವ್ರಾಜಕಾಚಾರ್ಯ ಶ್ರೀಶಂಕರಭಗವತ್ಪಾದರು. ಶ್ರೀಶಂಕರರು ತಮ್ಮ ಭಾಷ್ಯಗ್ರಂಥಗಳಲ್ಲಿ ಅದ್ವೈತವನ್ನು ಬೋಧಿಸಿದ್ದರೂ, ಸ್ವತಃ ಭಗವತ್ಸ್ವರೂಪರಾಗಿ, ಅದ್ವೈತಿಗಳಾಗಿ ಬೆಳಗುತ್ತಿದ್ದರೂ ಲೋಕಸಂಗ್ರಹಕ್ಕಾಗಿ ಭಕ್ತಿಮಾರ್ಗವನ್ನೂ, ಕರ್ಮಮಾರ್ಗವನ್ನೂ ಉಪಷ್ಟಂಭಕವಾಗಿ ಬೋಧಿಸಿದ್ದಾರೆ. ಬ್ರಹ್ಮನಿಂದ ಮೊದಲ್ಗೊಂಡು ಇರುವೆವರೆಗಿನ ಎಲ್ಲಾ ದೇಹಗಳಲ್ಲಿಯೂ ಹುದುಗಿರುವ ಆತ್ಮವಸ್ತುವನ್ನು ಯಥಾರ್ಥವಾಗಿ ಯಾವನು ಸರ್ವದಾ ಕಾಣುತ್ತಾನೋ, ಚಾಂಡಾಲನಿರಲಿ-ಬ್ರಾಹ್ಮಣನಿರಲಿ, ಅವನೇ ನನಗೆ ಗುರುಸಮಾನ ಎಂಬ ಸಹಜಭಾವ ಶಂಕರರದು. ಹೀಗೆ ಎಲ್ಲೆಲ್ಲಿಯೂ ಬ್ರಹ್ಮವನ್ನೇ ಕಾಣುವ ಸಮದರ್ಶಿ ಶಂಕರರು. ತಮ್ಮ ಆತ್ಮೋದ್ಧಾರವನ್ನು ಮಾತ್ರ ನೋಡದ ಶಂಕರರು ಲೋಕೋದ್ಧಾರಕ್ಕಾಗಿ ಶಾರದಾಪೀಠಗಳನ್ನು ಸ್ಥಾಪಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ಅಲ್ಲಲ್ಲಿ ದೇವಾಲಯಗಳನ್ನು ಶ್ರೀಚಕ್ರಗಳನ್ನು ಪ್ರತಿಷ್ಠಾಪಿಸಿ, ಲಲಿತಾದೇವಿಯ ಉಪಾಸನೆ ನಿರಂತರ ನಡೆಯುವಂತೆ ವ್ಯವಸ್ಥೆ ಮಾಡಿದರು. ತಾಯಿಗೆ ಸಮ್ಮತವಲ್ಲದ ಸಂನ್ಯಾಸಾಶ್ರಮವನ್ನು ವ್ಯಾಜಾಂತರದಿಂದ ಸ್ವೀಕರಿಸಿ, ಅವಳ ಅಂತ್ಯಕಾಲದಲ್ಲಿ ಸ್ಮರಿಸಿದಾಕ್ಷಣ ಒದಗಿ ಬಂದು, ಸಂನ್ಯಾಸಿಯಾದರೂ ತಾಯಿಯ ಅಂತ್ಯಕ್ರಿಯೆಯನ್ನು ಮಾಡಿ ಮಾತೃಭಕ್ತಿಯನ್ನು ಮೆರೆದವರು ಶಂಕರರು! ಲೋಕಪೂಜ್ಯ ಶ್ರೀ ಶಂಕರ ಭಾಗವದ್ಪದರು.

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

Monday, December 16, 2019

ಜಯ-ಪುಣ್ಯಗಳನ್ನು ಅನುಗ್ರಹಿಸುವ ಜಯನ್ತೀ (Jaya punyagalannu anugrahisuva jayanthi)

ಲೇಖಕರು: ವಿದ್ವಾನ್ ಎನ್.ಎನ್.ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಪ್ರತಿವರ್ಷವೂ ತಪ್ಪದೇ ಆಚರಿಸುವ ರೂಢಿ ಇದೆ. ಹುಟ್ಟು ಹಬ್ಬವನ್ನು “ವರ್ಧನ್ತೀ” ಎಂದು ಕರೆದರೆ ರಾಮಕೃಷ್ಣಾದಿಗಳ ಜನ್ಮ ದಿನಾಚರಣೆಯನ್ನು “ಜಯನ್ತೀ” ಎಂದು ಕರೆದಿದ್ದಾರೆ. ಶ್ರೀರಾಮನವಮಿ, ಶ್ರೀ ಕೃಷ್ಣಾಷ್ಟಮಿ ಆಚರಣೆಯನ್ನು ಭಾರತೀಯರು ಆಸೇತುಶೀತಾಚಲ ತಪ್ಪದೇ ಶ್ರದ್ಧೆಯಿಂದ ನಡೆಸುತ್ತಾರೆ. ದಿನ ಪೂರ್ತಿ ಉಪವಾಸ (ಭಗವಂತನ ಸನ್ನಿಧಿಯಲ್ಲಿ ವಾಸ) ವಿದ್ದು ಶ್ರೀ ರಾಮಭಜನೆ, ಶ್ರೀ ಕೃಷ್ಣನಿಗೆ ಚಂದ್ರೊದಯ ಕಾಲದಲ್ಲಿ ಅರ್ಘ್ಯಪ್ರದನಾದಿಗಳನ್ನು ಮಾಡುತ್ತಾರೆ. ದಿನವೆಲ್ಲಾ ತಮ್ಮ ಮನೋಬುದ್ಧೀನ್ದ್ರಿಯಗಳನ್ನು ಶ್ರೀ ರಾಮಮಯವಾಗಿ, ಶ್ರೀ ಕೃಷ್ಣಮಯವಾಗಿ ಮಾಡಿಕೊಂಡು ರಾತ್ರಿ ಸತ್ಕಥಾಶ್ರವಣದೊಂದಿಗೆ ಜಾಗರಣೆಯನ್ನು ಮಾಡಿ ಮಾರನೆಬೆಳಗ್ಗೆ ಪಾರಣೆ ಮಾಡುತ್ತಾರೆ. ಜೀವನದ ಪರಮಗುರಿಯನ್ನು ಅರಿತ ಭಾರತೀಯ ಋಷಿಮುನಿಗಳು ಸಕಲಭಾರತೀಯರ ಯೋಗಕ್ಷೇಮಕ್ಕಾಗಿ ಇಂತಹ ಮೇಲ್ಪಂಕ್ತಿಗಳನ್ನು ಹಾಕಿಕೊಟ್ಟು ಸಕಲರ ಉದ್ಧಾರದ ಕನಸನ್ನು ಕಂಡಿದ್ದಾರೆ. ಈ ಕುರಿತು ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ಸ್ಮರಿಸಬೇಕು - “ಆತ್ಮಾರಾಮರ ಹೃದಯದಲ್ಲಿ ಪ್ರಭುವಾಗಿ, ಪ್ರಕೃತಿಯಲ್ಲಿ ಇಳಿದುಬಂದು, ತನ್ನ ಅಪ್ರಾಕೃತಭಾವಕ್ಕೆ ಕೊಂಡೊಯ್ಯುವ ನವರಸ ನಾಯಕನಾದ ಶ್ರೀರಾಮನ ಸ್ತುತಿಯನ್ನು ಆತನ ಜನ್ಮದಿನದಲ್ಲಿ ಮಾಡೋಣ. ಹೃದಯದ ಅಷ್ಟದಳಪದ್ಮದಲ್ಲಿ ಜ್ಞಾನಮುದ್ರೆಯಿಂದ ಕುಳಿತು ಭೋಗ ಮೋಕ್ಷಗಳನ್ನು ದಯಪಾಲಿಸುವ ಪ್ರಭುವನ್ನು ಸ್ತುತಿಸೋಣ.”

“ಶ್ರೀಕೃಷ್ಣನು ಮಕ್ಕಳೊಡನೆ ಮಗುವಾಗಿ, ಜ್ಞಾನಿಗಳೊಡನೆ ಜ್ಞಾನಿಯಾಗಿ, ಗೋವಳರೊಡನೆ ಗೋಪಾಲನಾಗಿ, ಯುದ್ಧರಂಗದಲ್ಲಿ ರಾಜನೀತಿಜ್ಞನಾಗಿ, ಸ್ತ್ರೀಯರೊಡನೆ ಜೀವೋದ್ಧಾರಕನಾಗಿ ಸರ್ವವಿಧದಿಂದಲೂ ಸುಂದರ ಜೀವನವನ್ನು ನಡೆಸಿದ. ಎಂತಹ ಅವತಾರ!! ಅವನ ಅವತಾರದ ದಿನ ಸಂಪೂರ್ಣ ಕಲೆಗಳು ತುಂಬಿ ತುಳುಕಾಡುತ್ತವೆ.”

ಜಯನ್ತೀ ಶಬ್ದದ ನಿರ್ವಚನೆ ಏನು?


“ಜಯಂ ಪುಣ್ಯಂ ಚ ತನುತೇ ಜಯನ್ತೀಂ ತೇನ ತಾಂ ವಿದುಃ”|

ಜಯವನ್ನೂ, ಪುಣ್ಯವನ್ನೂ ಯಾವುದು ವಿಸ್ತರಿಸುವುದೋ ಅದು ‘ಜಯನ್ತೀ’. ಜಯ=ಆತ್ಮಜಯ, ಇಂದ್ರಿಯಮನೋಜಯ. ಇಂದ್ರಿಯ- ಮನಸ್ಸುಗಳನ್ನು ಸಂಯಮ ಮಾಡಿ ಅಂದರೆ ಅವುಗಳನ್ನು ಅವುಗಳ ಹಾರಾಟಕ್ಕೆ ಬಿಡದೇ ಗೆದ್ದು ಆತ್ಮನೆಡೆಗೆ-ಪರಮಾತ್ಮನೆಡೆಗೆ ಹರಿಯುವಂತೆ ಮಾಡಿ ಅವುಗಳನ್ನು ಗೆಲ್ಲುವುದು ‘ಜಯ’.

ಇನ್ನು ಪುಣ್ಯದ ಬಗ್ಗೆ ಮಹಾಕವಿ ಕಾಳಿದಾಸನ ಉಕ್ತಿ-
“ಲೋಕಾಂತರಸುಖಂ ಪುಣ್ಯಂ ತಪೋದಾನಸಮುದ್ಭವಮ್”|
ತಾನು ತ್ರಿಕರಣಪೂರ್ವಕವಾಗಿ ಮಾಡುವ ತಪಸ್ಸು ದಾನ ಇತ್ಯಾದಿಗಳಿಂದ ಒದಗಿಬರುವ ಯಾವ ಲೋಕಾಂತರಸುಖವಿದೆಯೋ ಅದು. ಈ ಜಯ ಮತ್ತು ಪುಣ್ಯಗಳನ್ನು ಬೆಳೆಸಿಕೊಂಡರೆ ಆಗ ಜಯನ್ತೀ ಆಚರಣೆ ಸಫಲ-ಸಾರ್ಥಕ.

ಶ್ರೀರಂಗಮಹಾಗುರುಗಳ ವಾಣಿಯನ್ನು ‘ಜಯನ್ತೀ’ ಶಬ್ದದ ನಿರ್ವಚನೆಯನ್ನೂ ಜೊತೆಜೊತೆಯಾಗಿ ನಮ್ಮ ಬುದ್ಧಿಭೂಮಿಗೆ ತಂದುಕೊಂಡಾಗ ‘ಜಯನ್ತೀ’ ಆಚರಣೆಯ ಮಹತ್ತ್ವ, ಹಿರಿಮೆ ಮನದಟ್ಟಾಗುತ್ತದೆ.
  " ಈ ದೃಷ್ಟಿಯಿಂದ ಈ ಶ್ರೇಷ್ಠ ಪದ ಮತ್ತು ಆಚರಣೆಯನ್ನು ತಥಾಕಥಿತ ಬುದ್ಧಿಜೀವಿಗಳು ಸತ್ಯದೂರವಾಗಿ ವಿಮರ್ಶೆ ಮಾಡುತ್ತಿರುವುದು ಶೋಚನೀಯ"
ಸಾಮಾನ್ಯ ಜನರಲ್ಲಿ ಮತ್ತು ಇವತ್ತಿನ ನಾಯಕ ವರ್ಗದಲ್ಲಿ  ತಮ್ಮ ತಾತ್ಕಾಲಿಕ ಲಾಭಕ್ಕಾಗಿ ತಲೆದೋರುವ ಇಂತಹ ಪ್ರವೃತ್ತಿಗಳು ಕೊನೆಗೊಂಡು ಇರುವ ನಿಜವನ್ನು ಅರಿಯುವ ಮನೋಭಾವವು ಬೆಳೆಯಲಿ ಎಂದು ಹಾರೈಸೋಣ.  


ಸೂಚನೆ:  16/12/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Sunday, October 27, 2019

ಲೋಕಹಿತ (Lokahitha)

ಲೇಖಕರು:  ವಿದ್ವಾನ್  ಎನ್. ಎನ್.ಚಂದ್ರಶೇಖರಭಟ್ಟ



ದೇವನೊಂದಿಗೆ ಸೇರಿ ಬಾಳುವುದರಿಂದ ಸೃಷ್ಟಿವ್ಯಾಪಾರ ಸುಗಮವಾಗುತ್ತದೆ. ಇದನ್ನೇ ದಿವಿ-ಭುವಿಗಳ ಸಂಗಮವೆನ್ನುತ್ತಾರೆ. ಈ ಸಂಗಮ ತಪ್ಪಿದಾಗ ಲೋಕದಲ್ಲಿ  ಅನಾಹುತಗಳು ತಪ್ಪಿದ್ದಲ್ಲ. ಮನುಷ್ಯ ಯಾವಾಗ ನಾನು ಸರ್ವಸಮರ್ಥ, ನನ್ನ ಮುಂದೆ ಯಾರೂ ನಿಲ್ಲಲಾರರು ಎಂದು ಭಾವಿಸುತ್ತಾ ರಾಕ್ಷಸೀಪ್ರವೃತ್ತಿಯಿಂದ ಮೆರೆಯುತ್ತಾನೋ ಆಗ ದೈವವು "ಹೋಗು, ನಿನ್ನಂತೆ ಇರು" ಎಂದು ಸುಮ್ಮನಾಗುತ್ತದೆ. ಅದಿಲ್ಲದೆ "ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಅದನ್ನು ಆಗಿಸುವ ಜವಾಬ್ದಾರಿ ನಿನ್ನದು" ಎಂದು "ಪಂಚಮಂ ದೈವಚಿಂತನಮ್" ಎಂದು ದೈವಕ್ಕೆ ತನ್ನನ್ನು ಕೊಟ್ಟುಕೊಂಡುಬಿಡುತ್ತಾನೋ ಆಗ ದೈವವು ತನ್ನ ಕೈನೀಡಿ ಸಹಕರಿಸುತ್ತದೆ.

 ಮಹಾಕವಿ ಕಾಳಿದಾಸನು ದೈವ-ಮಾನುಷ ಸಂಬಂಧವನ್ನು ಬಹಳ ಸುಂದರವಾಗಿ, ತನ್ನ ರಘುವಂಶ ಮಹಾಕಾವ್ಯದಲ್ಲಿ ವರ್ಣಿಸಿದ್ದಾನೆ. ದಿಲೀಪಮಹಾರಾಜನು ತನ್ನ ಪ್ರಜೆಗಳ ಮೂಲಕ ಭೂಮಿಯನ್ನು ಉತ್ತಿ,ಬಿತ್ತಿ, ಬೆಳೆಸಿ ಬಂದ ಫಲವನ್ನು ದೈವಕ್ಕೆ ನಿವೇದಿಸಿ ಅನಂತರ ತನ್ನ ಪ್ರಜೆಗಳಲ್ಲಿ ವಿತರಿಸಿದನಂತೆ. ಹಾಗೆ ಇವನ ನಿವೇದನವನ್ನು ಸ್ವೀಕರಿಸಿದ ಇಂದ್ರನು ತಾನು ಮಳೆಗರೆದು, ಭೂಮಿಯು ಸಸ್ಯಸಮೃದ್ಧವಾಗುವಂತೆ, ಧನಧಾನ್ಯಸಮೃದ್ಧವಾಗುವಂತೆ ಮಾಡಿದನಂತೆ. ಹೀಗೆ ರಾಜಾ-ಇಂದ್ರರು ಇಬ್ಬರೂ ಹೊಂದಾಣಿಕೆಯಿಂದ ಎರಡೂ ಲೋಕಗಳನ್ನು ಭರಣಮಾಡಿದರಂತೆ!
 ಇಂದು ಪ್ರಪಂಚದಲ್ಲಿ  ಅತಿವೃಷ್ಟಿ, ಅನಾವೃಷ್ಟಿ, ಅತ್ಯಾಚಾರ, ಅನಾಚಾರ ಇತ್ಯಾದಿಗಳನ್ನು ಕಾಣುತ್ತೇವೆಯೋ, ಇವೆಲ್ಲವೂ ಮಾನವನ ಅಜ್ಞಾನದ, ಅವಿವೇಕದ, ಅಹಂಕಾರದ, ಉದ್ಧಟತನದ, ದ್ವೇಷಾಸೂಯೆಗಳ ಫಲ. ಇವನ್ನು ಬಿಟ್ಟು ಕಬೀರವಾಣಿಯಂತೆ-

"ಹೇ ಸ್ವಾಮೀ, ನನಗೆ ನನ್ನ ಪರಿವಾರವನ್ನು ಸಾಕಿ ಸಲಹಲು ಬೇಕಾಗುವಷ್ಟು-ಸಾಕಾಗುವಷ್ಟು ಸಂಪತ್ತನ್ನು ಮಾತ್ರ ಕೊಡು, ಅದಕ್ಕಿಂತ ಹೆಚ್ಚಿಗೆ ಬೇಡ. ಕಾರಣ ನನ್ನ ಕುಟುಂಬ ಹಸಿದಿರಬಾರದು. ಜೊತೆಗೆ ಅದಕ್ಕಿಂತ ಹೆಚ್ಚಿಗೆ ನನ್ನಲ್ಲಿ ಸಂಪತ್ತು ಸಂಗ್ರಹವಾದರೆ ಅದು ನನ್ನದಲ್ಲ, ಇನ್ನೊಬ್ಬರದು. ಅವರ ಸಂಪತ್ತನ್ನು ನಾನು ಅಪಹರಿಸಿ, ಅವರು ಹಸಿವಿನಿಂದ ನರಳುವಂತಹ ತಪ್ಪು ನಡೆಯಬಾರದು”. ಆತ್ಮಗುಣಗಳಲ್ಲಿ "ಅಪರಿಗ್ರಹ" ಎಂಬುದೂ ಒಂದು. ಎಂದರೆ ಇನ್ನೊಬ್ಬರ ಸಂಪತ್ತಿಗೆ ಆಸೆಪಡದಿರುವುದು- ಅಪಹರಿಸದಿರುವುದು. ಇಂತಹ ಆತ್ಮಗುಣ ನಮ್ಮಲ್ಲಿ ಬೆಳೆಯುವಂತೆ ಆಗಬೇಕು.
 ಭಗವಂತನು ಕೊಟ್ಟದ್ದನ್ನು ಅವನಿಗೆ ಸಮರ್ಪಣೆ ಮಾಡಿ ಅದನ್ನು ಅವನ ಪ್ರಸಾದವಾಗಿ ಉಪಭೋಗಿಸುವುದು ನಮ್ಮ ಸಂಸ್ಕೃತಿಯ ಹಿರಿಮೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು

"ಇಷ್ಟಾನ್ಭೋಗಾನ್ಹಿವೋದೇವಾದಾಸ್ಯಂತೇಯಜ್ಞಭಾವಿತಾಃ|
ತೈರ್ದತ್ತಾನಪ್ರದಾಯೈಭ್ಯೋಯೋಭುಂಕ್ತೇಸ್ತೇನಏವಸಃ||"

 ಭಗವಂತನ ಪೂಜೆಯನ್ನು ಮಾಡಿ, ಅವನ ಭಾವವನ್ನು ತುಂಬಿಕೊಂಡಾಗ ಅವನು ನಮ್ಮ ಇಷ್ಟವಾದ ಭೋಗಗಳನ್ನು ಕೊಡುತ್ತಾನೆ. ಹಾಗೆ ಅವನು ಅನುಗ್ರಹಿಸಿ ಕೊಟ್ಟಿದ್ದನ್ನು  ಅವನ ಪ್ರಸಾದವೆಂದು ಭಾವಿಸಿ, ಅವನಿಗೆ ಸಮರ್ಪಿಸದೇ ಒಂದು ವೇಳೆ ಉಪಭೋಗಿಸಿದರೆ ಅದು ಕಳ್ಳತನವಾಗುತ್ತದೆ.

“ನಮ್ಮ ಮನೋರಥಗಳೆಷ್ಟೇ ಇರಲಿ. ಅವುಗಳೆಲ್ಲದರ ಮೇಲೆ ಭಗವಂತನನ್ನು ಕೂಡಿಸಿ ನಮ್ಮ ಜೀವನರಥವನ್ನು ಎಳೆಯುವುದಾದರೆ, ಆತ್ಮ-ಕಲ್ಯಾಣ,ಲೋಕ-ಕಲ್ಯಾಣ ಎರಡೂ ಸಿದ್ಧಿಸುತ್ತವೆ” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿ ಇಲ್ಲಿ ಸ್ಮರಣೀಯ.

 ಆದ್ದರಿಂದ ಸೃಷ್ಟಿಯಲ್ಲಿ ನಡೆಯುವ ಅನಾಹುತಗಳನ್ನು- ಏರುಪೇರುಗಳನ್ನು ತಪ್ಪಿಸಲು ದಿವಿ-ಭುವಿಗಳ ಸಹಜ ಸಂಗಮವಾಗಬೇಕು.


ಸೂಚನೆ:  27/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.