Showing posts with label author_ashasomayaji. Show all posts
Showing posts with label author_ashasomayaji. Show all posts

Wednesday, December 8, 2021

ಭಕ್ತಪರಾಧೀನ ಭಗವಂತ (Bhaktaparaadheena Bhagavanta)

ಲೇಖಕಿ: ಆಶಾ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ತ್ರಿಕೂಟವೆಂಬ ಪರ್ವತ. ಅದರಲ್ಲಿ ಅತಿಸುಂದರವಾದ ಪದ್ಮಸರೋವರ. ಅದರ ನೀರು ಅಮೃತಪ್ರಾಯ. ಅದರಮೇಲೆ ಬೀಸುವತಂಪಾದ ಗಾಳಿಯು ಸುಗಂಧಯುತವಾಗಿದ್ದು ಬಹುದೂರದಲ್ಲಿರುವ ಪ್ರಾಣಿಗಳನ್ನೂ ಆಕರ್ಷಿಸುತ್ತಿತ್ತು. ಹೀಗೇ ಆಕರ್ಷಿಸಲ್ಪಟ್ಟಒಂದು ಮದಗಜ ತನ್ನ ಪರಿವಾರ ಸಮೇತ ಆ ಸರೋವರದಲ್ಲಿ ಜಲಕ್ರೀಡೆಯಾಡಲು ಬಂತು. ಅತ್ಯಂತ ಸಂಭ್ರಮ ಸಂತೋಷಗಳಿಂದಮೈಮರೆತು ತನ್ನ ಪರಿವಾರದವರೊಂದಿಗೆ ಜಲಕ್ರೀಡೆಯಾಡುತ್ತಿತ್ತು. ಸರೋವರದ ನೀರು ಅಲ್ಲೋಲ ಕಲ್ಲೋಲವಾಗಿತ್ತು. ಆದರೆಆನೆಯ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಎಲ್ಲಿಂದಲೋ ಬಂದ ಮೊಸಳೆಯೊಂದು ಆನೆಯ ಕಾಲನ್ನು ಬಲವಾಗಿ ಹಿಡಿದುಸರೋವರದ ಆಳಕ್ಕೆ ಎಳೆಯತೊಡಗಿತು. ಆನೆಯು ತನ್ನ ಬಂಧುಗಳನ್ನೆಲ್ಲಾ ಆರ್ತವಾಗಿ ಕರೆದು ಕಾಪಾಡುವಂತೆ ಬೇಡಿಕೊಂಡಿತು.ಎಲ್ಲಾ ಬಂಧುಗಳೂ ಎಷ್ಟು ಪ್ರಯತ್ನಿಸಿದರೂ ಮೊಸಳೆಯ ಹಿಡಿತದಿಂದ ಆನೆಯನ್ನು ಪಾರುಮಾಡಲಾಗಲಿಲ್ಲ. ಈ ಎಳೆದಾಟಬಹಳ ಕಾಲದವರೆಗೆ ನಡೆಯಿತು. ದೇಹಬಂಧುಗಳು ಎಷ್ಟೇ ಪ್ರಿಯರಾಗಿದ್ದರೂ ಈ ಬಂಧನದಿಂದ ತಮ್ಮ ಪ್ರಿಯತಮನನ್ನು ಬಿಡಿಸಲುಆಶಕ್ತರಾದರು. ಕಡೆಯಲ್ಲಿ ಆನೆಯು-'ಅನ್ಯಥಾ ಶರಣಂ ನಾಸ್ತಿ", ಎಂಬ ನಿಶ್ಚಯಕ್ಕೆ ಬಂದು ಸರ್ವನಿಯಾಮಕನಾದ ಶ್ರೀಹರಿಯನ್ನೇಆದಿಮೂಲಾ ಎಂದು ಸಂಬೋಧಿಸಿ 'ತ್ವಮೇವ ಶರಣಂ ಮಮ" ಎಂದು ಪ್ರಾರ್ಥಿಸಿತು. ಆ ಸರೋವರದಲ್ಲೇ ಅರಳಿದಕಮಲವೊಂದನ್ನು ಅತ್ಯಂತ ಭಕ್ತಿಯಿಂದ ಸರ್ವ ಶರಣಾಗತ ಭಾವದಿಂದ ದೇವದೇವನಿಗೆ ಸಮರ್ಪಿಸಿತು. ಒಡನೆಯೇ ಶ್ರೀ ಹರಿಯುವೇಗವಾಗಿ ಬಂದು ತನ್ನ ಚಕ್ರದಿಂದ ಮೊಸಳೆಯನ್ನು ಸೀಳಿ ಆನೆಯನ್ನು ಕಾಪಾಡಿದನು. ಮೊಸಳೆಯೂ ಶಾಪಗ್ರಸ್ತ ಗಂಧರ್ವನಾಗಿದ್ದು,ಶ್ರೀಹರಿಯಿಂದ ಶಾಪವಿಮೋಚನೆಗೊಂಡನು.ಈ ಆನೆಯು ಪೂರ್ವ ಜನ್ಮದಲ್ಲಿ ಇಂದ್ರದ್ಯುಮ್ನನೆಂಬ ರಾಜ. ಶ್ರೀಹರಿಯ ಪರಮ ಭಕ್ತ. ಒಮ್ಮೆ ಶ್ರೀಹರಿಯ ಭಜನೆಯಲ್ಲಿರುವಾಗಮಹರ್ಷಿ ಅಗಸ್ತ್ಯರನ್ನು ಆದರಿಸದೇ ಶಾಪಕ್ಕೊಳಗಾಗಿ ಆನೆಯಾಗಿದ್ದವನು. ಆ ಪೂರ್ವಜನ್ಮದ ಅನನ್ಯ ಭಕ್ತಿಯೇ ಆನೆಯರೂಪದಲ್ಲಿದ್ದರೂ ಭಗವಂತನ ಸ್ಮರಣೆಯನ್ನು ಮರೆಯದೇ ಇಷ್ಟು ತೀವ್ರವಾಗಿ ಪ್ರಾರ್ಥಿಸುವಂತೆ ಮಾಡಿತು.

ಈ ಕಥೆ ನಮಗೆಲ್ಲ ಪಾಠವಾಗಿದೆ. ದೇಹಬಂಧುಗಳು ಎಷ್ಟೇ ಹತ್ತಿರದವರಾದರೂ ಆತ್ಮಬಂಧುವಾದ ಭಗವಂತನೇ ಈ ಸಂಸಾರದಅತಿ ಭಯಂಕರವಾದ ಕಟ್ಟಿನಿಂದ ಬಿಡಿಸಬಲ್ಲನು. ಆನೆಯ ವಿಷಯದಲ್ಲೂ ಹಾಗೇ ಆಯಿತು.ಆ ಆನೆಗೇನು ಸಂಸ್ಕೃತ ಅಥವಾ ಇನ್ಯಾವುದಾದರೂ ಭಾಷೆ ಬರುತ್ತಿತ್ತೇ? ಹೇಗೆ ಪ್ರಾರ್ಥಿಸಿತು? ಅದರೊಳಗಿನ ಭಕ್ತಿಯೇ, ಭಾವರೂಪವಾಗಿಪ್ರಾರ್ಥಿಸಿತು. ಶರಣಾಗತನಾಗಿ ಪ್ರಾಮಾಣಿಕತೆಯಿಂದ ಕರೆದಾಗ ಅವನು ನಮ್ಮನ್ನು ಕಾಪಾಡುತ್ತಾನೆ. ರಾಜಾ ಇಂದ್ರದ್ಯುಮ್ನಭಗವಂತನ ವಿಭೂತಿಗಳಾದ ಮಹರ್ಷಿಗಳನ್ನು ಎಂತಹ ಸಂದರ್ಭದಲ್ಲಾದರೂ ಆದರಿಸಬೇಕಿತ್ತು. ರಾಜನು ಉಳಿದವರೆರಿಗೆಮಾದರಿಯಾಗಿರಬೇಕಾಗುತ್ತದೆ. ಭಗವಂತನ ಮೇಲಿಟ್ಟಿರುವ ಭಕ್ತಿ, ಜನ್ಮ ಜನ್ಮಾಂತರಗಳವರೆಗೂ ಫಲನೀಡದೇ ಬಿಡುವುದಿಲ್ಲಎಂಬುದು ಗಜೇಂದ್ರನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ- "ಮಾನವ ತನ್ನಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿಯು ತನ್ನ ಮಡಿಲಲ್ಲಿ ಅವನಿಗೆ ಜಾಗ ಕೊಡುತ್ತಾನೆ. ಆಗ "ಸದಾಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಎಂದು ಪಲ್ಲವಿ ಹಾಡಬಹುದು".ಗಜೇಂದ್ರನ ಭಕ್ತಿ, ಶರಣಾಗತಿ ನಮಗೆಲ್ಲರಿಗೂ ಪಾಠವಾಗಲಿ.

ಸೂಚನೆ: 8/12/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Wednesday, March 10, 2021

ಸ್ತ್ರೀಯರ ಆಧ್ಯಾತ್ಮ ಜೀವನ (Striyara Adhyatma Jivana)

ಆಶಾ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


  
ಆಧ್ಯಾತ್ಮಜೀವನವನ್ನು  ನಡೆಸುವುದೆಂದರೆ ಒಳಬೆಳಗುವ ಆತ್ಮನಿಗೆ ಅನುಗುಣವಾಗಿ ಬಾಳುವುದು ಎಂಬುದು ಜ್ಞಾನಿಗಳ ಮಾತು. ಅದಕ್ಕಾಗಿ ತಪಸ್ಸು,ಸಾಧನೆ, ಅನುಷ್ಠಾನ ಎಲ್ಲವೂ ಬೇಕು. ಅನುಷ್ಠಾನಪರರು, ವಿದ್ವಾಂಸರು ವೇದಾದಿ ವಿದ್ಯೆಗಳನ್ನು ಅಭ್ಯಾಸ ಮಾಡಿ ಆಧ್ಯಾತ್ಮಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಮನೆಯ ಗೃಹಸ್ಥರು ನಿತ್ಯ ಪೂಜಾ ಪಾಠಗಳಿಂದ ವೇದ ಪಾರಾಯಣದಿಂದ ಅದನ್ನುತಿಳಿದು ಹೊಂದಲು ಪ್ರಯತ್ನಿಸುತ್ತಾರೆ.ಎಲ್ಲರೂ ಆಧ್ಯಾತ್ಮ ಜೀವನವನ್ನು ತಮ್ಮ ನೆಮ್ಮದಿಗಾಗಿ ಅಪೇಕ್ಷಿಸಲೇ ಬೇಕು. ಹಾಗಾದರೆ ಸ್ತ್ರೀಯರಿಗೆ ಆಧ್ಯಾತ್ಮ ಜೀವನಬೇಡವೇ? ಅವರ ಗೃಹಕೃತ್ಯಗಳಲ್ಲಿ ಮೇಲೆ ಹೇಳಿದಂತೆ ಮಾಡಲು ಅವರಿಗೆ ಸಮಯವೇ ಸಿಕ್ಕದಲ್ಲಾ? ಇನ್ನು ದುಡಿಯುವಮಹಿಳೆ ಆದರಂತೂ ಕೇಳುವುದೇ ಬೇಡ. ಸ್ತ್ರೀಯರು ಆಧ್ಯಾತ್ಮ ಜೀವನವನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಪ್ರಸ್ತುತವಾಗಿದೆ.

ಭಾರತೀಯರ ಜೀವನ ವಿಧಾನವನ್ನು ನಮ್ಮ ಮಹರ್ಷಿಗಳು ಸ್ತ್ರೀ-ಪುರುಷರೆಲ್ಲರಿಗೂ ಒಳ-ಹೊರ ಜೀವನಕ್ಕೆಅನುಕೂಲವಾಗುವಂತೆಯೇ ರೂಪಿಸಿದ್ದಾರೆ ಎಂಬುದನ್ನು ನಾವು ಮರೆಯಲಾಗದು. ಸ್ತ್ರೀಯರ ದಿನಚರಿಯಲ್ಲಿಯೇ ಭಗವಂತನನ್ನುಹೆಜ್ಜೆ ಹೆಜ್ಜೆಯಲ್ಲಿಯೂ ಸ್ಮರಿಸುವ ಜೀವನ ವಿಧಾನ ನಮ್ಮದು. ನಮ್ಮ ದಿನ ಭಗವಂತನ ಸ್ಮರಣೆಯಿಂದಲೇ ಆರಂಭ. ಬೆಳಿಗ್ಗೆಕರಾಗ್ರೇ ವಸತೇ ಲಕ್ಷ್ಮೀಃ ಎಂದು ದಿನ ಆರಂಭವಾಗುತ್ತದೆ. ಒಳಗೆ ಬೆಳಗುವ ಪರಮಾತ್ಮನಿಗೆ ಅಭಿಷೇಕವೆಂಬಭಾವದಿಂದ ಸ್ನಾನ, ಅವನ ಸ್ಮರಣೆಯಿಂದ ಒಳ-ಹೊರ ಜೀವನದ ಮಧ್ಯ ಭಾಗವಾದ ಬಾಗಿಲಿನ ಹೊಸಲನ್ನು ತೊಳೆದು,ರಂಗವಲ್ಲಿಯಿಂದ ಸಿಂಗರಿಸಿ ಆತ್ಮಸೂರ್ಯನ ಪ್ರತಿನಿಧಿಯಾದ ಸೂರ್ಯದೇವನನ್ನು ಸ್ವಾಗತಿಸುತ್ತಾಳೆ. ನಂತರ ದೇವರಕೋಣೆಯನ್ನು ಶುಚಿಗೊಳಿಸಿ ತನ್ನಲ್ಲಿ ಬೆಳಗುವ ದೇವನ ಪ್ರತಿನಿಧಿಯಾದ ದೀಪವನ್ನು ಬೆಳಗುವವಳೂ ಅವಳೇ.ಪತಿಯು ಮಾಡುವ ಪೂಜೆಗೆ ಪುಷ್ಪ, ಪತ್ರ, ಹಣ್ಣುಗಳನ್ನು ಒದಗಿಸಿ ಸಹಾಯ ಮಾಡುತ್ತಾಳೆ . ತನ್ನ ಕುಟುಂಬದ ಶ್ರೇಯಸ್ಸಿಗಾಗಿತುಳಸಿ ಮಾತೆಯನ್ನು ಪೂಜಿಸಿ ನಂತರ ಅಡಿಗಡಿಗೂ ಗೋವಿಂದನ ಸ್ಮರಣೆ ಮಾಡುತ್ತ ಅಡುಗೆ ಪದಾರ್ಥಗಳನ್ನು ತಯಾರಿಸಿ-ಎಲ್ಲವೂ ನಿನ್ನದೇ ಎಂದು ಭಗವಂತನಿಗೆ ನಿವೇದಿಸಿ ಅದನ್ನು ಪ್ರಸಾದವನ್ನಾಗಿಸಿಕೊಂಡು ಮನೆಮಂದಿಗೆಲ್ಲಾ ಬಡಿಸಿ ತಾನೂಸ್ವೀಕರಿಸಿ ಸಂತೋಷ ಪಡುತ್ತಾಳೆ. ಶ್ರೀರಂಗ ಮಹಾಗುರುಗಳು - "ಗೃಹಿಣಿಯಾದವಳು ಏಕನಿಷ್ಠೆ ,ಪ್ರಾಮಾಣಿಕತೆ, ನಿರ್ಮಲವಾದಮನಸ್ಸಿನಿಂದ ತನ್ನ ಎಲ್ಲಾ ಗೃಹಕೃತ್ಯಗಳನ್ನು ಭಗವಂತನಿಗೆ ಅರ್ಪಿಸಿದ್ದಲ್ಲಿ ಅದು ಖಂಡಿತ ಅವನಿಗೆ ತಲುಪುತ್ತದೆ" ಎಂದಿರುವುದುಇಲ್ಲಿ ಸ್ಮರಣೀಯ.

ಸೂಚನೆ: 10/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Thursday, May 14, 2020

ಸಂತೋಷಕ್ಕೆ ಸಿಹಿಯನ್ನೇಕೆ ಹಂಚುವುದು? (Santhosakke Sihiyanneke Hancuvudu ?)

ಲೇಖಕಿ : ಶ್ರೀಮತಿ ಆಶಾ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಪರೀಕ್ಷೆಯಲ್ಲಿ ಪಾಸ್ ಆದಾಗ, ಒಳ್ಳೆಯ ಕೆಲಸ ಸಿಕ್ಕಿದ್ದರೆ, ಮಗು ಹುಟ್ಟಿದರೆ, ಶುಭ ಸನ್ನಿವೇಶಗಳು ಒದಗಿದಾಗ ಸಂತೋಷದೊಡನೆ, ಸಿಹಿ ಹಂಚುವ ಪದ್ಧತಿ ಸಾಮಾನ್ಯ. ಸಿಹಿ ಎಂದ ಕೂಡಲೇ ನಾಲಿಗೆಯಲ್ಲಿ ಮಧುರ-ರಸ ಜಿನಗುತ್ತದೆ. ಮಕ್ಕಳಿಗೆ ಅತಿಪ್ರಿಯ, ಹಬ್ಬ ಹರಿ ದಿನಗಳಲ್ಲಂತೂ ಸಿಹಿ ಇಲ್ಲದೇ ಮುಂದಿನ ಮಾತೇ ಇಲ್ಲ. ಸಂತೋಷಕ್ಕೂ ಸಿಹಿಗೂ ಈ ಬಲವಾದ ನಂಟು ಏಕೆ ?

ಸೂಕ್ತ ಪ್ರಮಾಣದಲ್ಲಿದ್ದರೆ ಸಿಹಿ ಮನಸ್ಸಿನ ಪ್ರಸನ್ನತೆಯನ್ನು ಹೆಚ್ಚಿಸುತ್ತದೆ. ಸಾತ್ವಿಕರು ಸಹಜವಾಗಿಯೇ ಮಧುರ ಪ್ರಿಯರು ಎನ್ನುವ ಮಾತಿದೆ. ಈ ಸತ್ತ್ವಗುಣವು ತೃಪ್ತಿ, ಲಾಘವ, ನೆಮ್ಮದಿಗಳನ್ನೂ ತರುತ್ತದೆ. ಆದ್ದರಿಂದಲೇ ಸಿಹಿ, ಸಂತೋಷಗಳು ಒಂದೇ ಗೂಡಿನ ಹಕ್ಕಿಗಳು. ನಮ್ಮೊಳಗೆ ದೇವರ ದರ್ಶನ ಎಣೆಯಿಲ್ಲದ ಸಂತೋಷವನ್ನುಂಟುಮಾಡುತ್ತದೆ ಎಂಬುದು ಋಷಿಗಳ ಮಾತು. ಸಿಹಿಯು ನಮ್ಮಲ್ಲಿ ದೇವತಾ ಕೇಂದ್ರಗಳನ್ನು ತೆರೆಯಲೂ ಸಹಾಯ ಮಾಡುತ್ತದೆಂಬುದೂ ಅವರ ಅನುಭವ. ಭಗವಂತನ ದರುಶನದಿಂದ ಉಂಟಾದ ಆನಂದದ ರಸಕ್ಕೆ, ಸಿಹಿಯ ಆಸ್ವಾದನೆಯು ಸಮೀಪವಾಗಿದೆಯೆಂದು ಅರಿತು ಸಕ್ಕರೆ, ಬೆಲ್ಲ, ಜೇನು ಮುಂತಾದ ಪದಾರ್ಥಗಳನ್ನು ನಿತ್ಯ ಜೀವನದ ಆಹಾರದಲ್ಲಿ ಅಳವಡಿಸಿ ಕೊಟ್ಟಿದ್ದಾರೆ.

ಸಿಹಿ ಚಪ್ಪರಿಸುವುದರಿಂದ ಎಷ್ಟು ಆನಂದ ಅನುಭವಿಸುತ್ತೇವೋ ಅದರ ಕೋಟಿ ಪಟ್ಟು ಆನಂದ ಭಗವಂತನ ಸ್ಮರಣೆ ಮತ್ತು ದರ್ಶನದಿಂದ ಉಂಟಾಗುತ್ತದೆ ಎಂದು ನಮ್ಮ ಮಹರ್ಷಿಗಳ ಅನುಭವದ ಮಾತು. ಇದನ್ನು ನೆನಪಿಸಲು ವಿಶೇಷವಾಗಿ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಜೊತೆಗೆ ಸಕ್ಕರೆಯ ಅಚ್ಚಿನ ಬೇರೆ, ಬೇರೆ ಆಕಾರದ ಗೊಂಬೆಗಳನ್ನು ಕೊಡುವ ಪದ್ಧತಿ ಇದೆ. ಮಕ್ಕಳು ತಮಗೆ ಕುದುರೆ ಬೇಕು, ಆನೆ ಬೇಕು, ಹುಲಿ ಬೇಕು ಎಂದು ಹೇಳುವುದುಂಟು. ಆದರೆ ಕಣ್ಣನ್ನು ಮುಚ್ಚಿ ಯಾವುದೇ ಗೊಂಬೆಯನ್ನು ಬಾಯಿಗೆ ಹಾಕಿದರೂ ಸಿಹಿಯೇ ಅನುಭವವಾಗುವುದು. ನಾಮ ರೂಪಗಳು ಬೇರೆಯಾದರೂ ಎಲ್ಲರ ಸ್ವರೂಪವೂ ಸಿಹಿಯಾದ ಪರಮಾತ್ಮನೇ ಎಂಬ ತತ್ತ್ವವನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ನಾವು ಸಿಹಿಯನ್ನು ಸೇವಿಸುವಾಗ ನಿಜವಾದ ಸಿಹಿಯಾದ ಸರ್ವೇಶ್ವರನ ನೆನಪಿನೊಡನೆ ಸವಿಯುವಂತಾಗಲಿ ಎಂದು ಆಶಿಸೋಣ.

ಸೂಚನೆ: 14/05/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.