ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ತಕ್ಷಕ-ಪುತ್ರನಾದ ಅಶ್ವಸೇನನನ್ನು ಖಾಂಡವದ ಆ ಮಹಾಗ್ನಿಯಿಂದ ಬಿಡಿಸಬೇಕೆಂಬ ಉದ್ದೇಶದಿಂದ, ಗಾಳಿ-ಮಳೆಗಳನ್ನು ಇಂದ್ರನು ಉತ್ಕಟವಾಗಿ ಪ್ರಯೋಗಿಸಿದನು. ಹಾಗೆ ಮಾಡಿ, ಅರ್ಜುನನಿಗೆ ಮೋಹವುಂಟುಮಾಡಿದನು. ಕೊನೆಗಂತೂ ಬಿಡಿಸಿದನು.
ಮಾಯೆಯಿಂದಾದ ಈ ನಾಗರಕ್ಷಣೆಯನ್ನು ಕಂಡ ಅರ್ಜುನನು, ಮೋಸದಿಂದ ಹೀಗೆ ಆಗಿದ್ದಕ್ಕಾಗಿ ಕೆರಳಿಹೋದನು. ಆಕಾಶದಲ್ಲಿ ಸುಳಿದ ಎಲ್ಲ ಪ್ರಾಣಿಗಳನ್ನೂ ಈಗ ಎರಡೆರಡು ಮೂರುಮೂರು ತುಂಡುಗಳನ್ನಾಗಿ ಖಂಡಿಸಿದನು. ತಪ್ಪಿಸಿಕೊಂಡು ಹೋದ ಸರ್ಪದಿಂದಾಗಿ ಕಡುಕೋಪಗೊಂಡ ಅರ್ಜುನನು, ಆಕಾಶವನ್ನೆಲ್ಲಾ ತನ್ನ ಬಾಣಗಳಿಂದ ವ್ಯಾಪಿಸಿ ಇಂದ್ರನೊಡನೆಯೇ ಯುದ್ಧಮಾಡಿದನು.
ಯುದ್ಧದಲ್ಲಿ ಕೆರಳಿರುವ ಅರ್ಜುನನನ್ನು ಇಂದ್ರನೂ ಕಂಡನು. ಆಕಾಶವನ್ನೆಲ್ಲಾ ಆಚ್ಛಾದನೆ ಮಾಡುತ್ತಾ ತನ್ನ ತೀವ್ರವಾದ ಅಸ್ತ್ರವನ್ನು, ಎಂದರೆ ಐಂದ್ರಾಸ್ತ್ರವನ್ನು, ತಾನೂ ಪ್ರಯೋಗಿಸಿದನು.
ಆಗ ಮಹಾ-ಶಬ್ದವನ್ನುಂಟುಮಾಡುತ್ತಾ ಹೊರಟ ವಾಯುವು ಸರ್ವ-ಸಾಗರಗಳನ್ನೂ ಕ್ಷೋಭೆಗೊಳಿಸಿತು. ಆಕಾಶದಲ್ಲಿ ಜಲ-ಧಾರೆಯನ್ನುಂಟುಮಾಡುವ ಮೋಡಗಳನ್ನು ಉಂಟುಮಾಡಿತು.
ಅಸ್ತ್ರಕ್ಕೆ ಪ್ರತ್ಯಸ್ತ್ರಪ್ರಯೋಗ ಮಾಡುವುದರಲ್ಲಿ ನಿಪುಣನಾಗಿದ್ದ ಅರ್ಜುನನು ವಾಯವ್ಯಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗಮಾಡಿದನು. ಅದರಿಂದಾಗಿ ಇಂದ್ರನಿಂದ ಪ್ರೇರಿತವಾದ ವಜ್ರದ ಹಾಗೂ ಮೇಘಗಳ ಬಲ-ಓಜಸ್ಸುಗಳು ನಷ್ಟವಾದವು. ಜಲಧಾರೆಗಳೆಲ್ಲ ಶುಷ್ಕವಾದುವು. ಮಿಂಚುಗಳು ನಷ್ಟವಾದವು. ಒಂದೇ ಕ್ಷಣದಲ್ಲಿ ಆಕಾಶದಲ್ಲಿಯ ರಜಸ್ಸು-ತಮಸ್ಸುಗಳು, ಎಂದರೆ ಧೂಳು-ಕತ್ತಲೆಗಳು, ನಷ್ಟವಾಗಿಹೋದವು. ವಾಯುವು ಸುಖಶೀತವಾಯಿತು - ಎಂದರೆ ತಂಪಾಗಿಯೂ ಹಿತವಾಗಿಯೂ ಬೀಸತೊಡಗಿತು. ರವಿಮಂಡಲವು ಎಂದಿನಂತಾಯಿತು - ಎಂದರೆ ಸ್ವಸ್ವಭಾವಕ್ಕೆ ಮರಳಿತು.
ಪ್ರತೀಕಾರವಿನ್ನೇನೂ ಬೇಕಿಲ್ಲವಾಗಿ, ಅಗ್ನಿಯು ಸುಪ್ರಸನ್ನವಾಗಿ, ನಾನಾ ಆಕಾರಗಳನ್ನು ಅದು ತಳೆಯಿತು. ನಾನಾ ಪ್ರಾಣಿಗಳ ಶರೀರದಿಂದ ಹೊಮ್ಮಿದ ಮೇದಸ್ಸಿನ ಸ್ತೋಮದ ಸೇಕದಿಂದಾಗಿ, ಎಂದರೆ ಹುಯ್ಯುವಿಕೆಯಿಂದಾಗಿ, ಆ ಅಗ್ನಿಯು ಪ್ರಜ್ವಲಿಸಿದನು. ಆತನ ಆ ನಾದಗಳಿಂದ ಜಗತ್ತೇ ತುಂಬಿಹೋಯಿತು.
ಅಹಂಕಾರದಿಂದ ಭರಿತವಾಗಿದ್ದ ಸುಪರ್ಣ ಮೊದಲಾದ ಪಕ್ಷಿಗಳು ಈ ಕೃಷ್ಣರಿಬ್ಬರಿಂದ ಆ ಕಾಡು ರಕ್ಷಿಸಲ್ಪಡುತ್ತಿರುವುದನ್ನು ಕಂಡವು, ಆಕಾಶಕ್ಕೆ ಜಿಗಿದವು. ವಜ್ರಕ್ಕೆ ಸದೃಶವಾಗಿರುವ ರೆಕ್ಕೆ, ಕೊಕ್ಕು, ಹಾಗೂ ಉಗುರುಗಳಿಂದ ಪ್ರಹಾರ ಮಾಡಲೆಂದು ಗರುಡಪಕ್ಷಿಯೊಂದು ಕೃಷ್ಣಪಾಂಡವರ ಮೇಲೆ ಆಕಾಶದಿಂದ ಅಪ್ಪಳಿಸಿತು. ಹಾಗೆಯೇ ಸರ್ಪ-ಸ್ತೋಮಗಳೂ. ಘೋರವಾದ ವಿಷವನ್ನು ಕಾರುತ್ತಾ ಜ್ವಲಿಸುವ ಮೂತಿಯುಳ್ಳವುಗಳಾಗಿ ಅರ್ಜುನನ ಬಳಿ ಎರಗಿದವು.
ರೋಷಾಗ್ನಿಯಿಂದ ಸಿಂಪಡಿಸಲ್ಪಟ್ಟಿದ್ದ ತನ್ನ ಶರಗಳಿಂದ ಪಾರ್ಥನು ಅವನ್ನು ಕತ್ತರಿಸಿಹಾಕಿದನು. ಅವೂ ದೇಹ ತೊರೆಯಲು ಆ ಜ್ವಲಿಸುವ ಅಗ್ನಿಗೆ ಪ್ರವೇಶಮಾಡಿದವು. ಆಮೇಲೆ ರಣಾರ್ಥಿಗಳಾಗಿ, ಎಂದರೆ ಯುದ್ಧಾಕಾಂಕ್ಷಿಗಳಾಗಿ, ಅಸುರರೂ ಗಂಧರ್ವರೂ ಯಕ್ಷರೂ ರಾಕ್ಷಸರೂ ಪನ್ನಗರೂ ಅಸಾಮಾನ್ಯವಾದ ಧ್ವನಿಯನ್ನು ಮಾಡುತ್ತಾ ಅಲ್ಲಿಗೆ ಧಾವಿಸಿ ಬಂದರು.
ತನ್ನ ರೋಷಾಗ್ನಿಯಿಂದ ಪ್ರೇರಿತವಾದ ಬಾಣಗಳಿಂದ ಅವುಗಳೆಲ್ಲವನ್ನೂ ಅವನು ಕತ್ತರಿಸಿಹಾಕಿದನು. ಜ್ವಲಿಸುವ ಆ ಅಗ್ನಿಯೊಳಗೆ ತಮ್ಮದೇಹವನ್ನೂ ಕಳೆದುಕೊಂಡವು, ಅವೂ.
ಆಗ ಅಸುರರು, ಗಂಧರ್ವರು, ಯಕ್ಷರು, ರಾಕ್ಷಸರು ಹಾಗೂ ನಾಗರು, ಯುದ್ಧಾಪೇಕ್ಷಿಗಳಾಗಿ ಸಾಟಿಯಿಲ್ಲದ ನಾದವನ್ನು ಉಂಟುಮಾಡುತ್ತಾ ಅಲ್ಲಿಗೆ ಧಾವಿಸಿ ಬಂದರು. ಕ್ರೋಧಾಗ್ನಿಯಿಂದ ವಿವೃದ್ಧವಾದ ಪರಾಕ್ರಮವುಳ್ಳ ಅವರುಗಳು, ಕೃಷ್ಣನನ್ನೂ ಪಾರ್ಥನನ್ನೂ ಸಾಯಿಸುವ ಸಲುವಾಗಿ ತಮ್ಮ ಮೇಲೆತ್ತಿದ ಕೈಗಳಲ್ಲಿ ನಾನಾ ಆಯುಧಗಳನ್ನು ಹಿಡಿದು ಬಂದರು: ಕಬ್ಬಿಣದ ಗೋಲಿಗಳನ್ನು ಎಸೆಯುವ ಸಾಧನಗಳು, ಚಕ್ರಾಯುಧ, ಕಲ್ಲು, ಭುಶುಂಡಿಗಳನ್ನೂ ತಳೆದಿದ್ದರು.