Monday, November 27, 2023

ವ್ಯಾಸ ವೀಕ್ಷಿತ - 64 ಸುಂದರಿಯ ಹಿಂದೆ ಹೋದ ಇಂದ್ರನಿಗೆ ಆದ ಶಾಸ್ತಿ (Vyaasa Vikshita - 64 Sundariya Hinde Hoda Indranige Ada Shasti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 

ನೀರಿನಲ್ಲಿ ತೇಲಿಬರುತ್ತಿದ್ದ ಕಮಲಪುಷ್ಪದ ಮೂಲವನ್ನು ಪತ್ತೆ ಹಚ್ಚಲು ಇಂದ್ರನು ಹೋದನಲ್ಲವೆ? ಗಂಗೆಯು ನಿರಂತರವಾಗಿ ಉಕ್ಕುವ ಆ ಎಡೆಯಲ್ಲಿ ಆತನು ಕಂಡದ್ದು ಒಬ್ಬ ಸ್ತ್ರೀಯನ್ನು. ಅಗ್ನಿಯ ಪ್ರಭೆ ಅವಳಲ್ಲಿ ತೋರುತ್ತಿತ್ತು. ನೀರಿಗೋಸ್ಕರವಾಗಿ ಬಂದಿದ್ದ ಆ ತರುಣಿಯು ಗಂಗಾಧಾರೆಯತ್ತ ಸಾಗಿ ಅಳುತ್ತಾ ನಿಂತಿದ್ದಳು. ಅವಳ ಕಣ್ಣೀರಾದರೋ, ನೀರಿನಲ್ಲಿ ಬೀಳುತ್ತಲೇ ಒಂದು ಕಾಂಚನಪದ್ಮ(ಚಿನ್ನದ ಕಮಲ)ವಾಗುತ್ತಿತ್ತು! ಆ ಅದ್ಭುತವನ್ನು ಇಂದ್ರನು ಕಂಡನು. ಆ ಯುವತಿಯ ಬಳಿಗೆ ನಡೆದು ಅವಳನ್ನು ಕೇಳಿದನು: ಭದ್ರೇ (ಎಂದರೆ, ಶುಭನಾರಿಯೇ), ನೀನಾರು, ಅಳುತ್ತಿರುವೆಯೇಕೆ? ಸತ್ಯವನ್ನು ಹೇಳು - ಎಂದನು.

ಆ ನಾರಿಯು ಹೇಳಿದಳು: ಇಂದ್ರನೇ, ನಾನು ಯಾರು, ಮತ್ತು ಮಂದಭಾಗ್ಯಳಾದ (ಎಂದರೆ ಅದೃಷ್ಟಹೀನಳಾದ) ನಾನು ಏತಕ್ಕಾಗಿ ಅಳುತ್ತಿದ್ದೇನೆ? - ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಅರಿಯುವೆಯಂತೆ. ಇಂದ್ರನೇ, ನಾ ಮುಂದೆ ಹೋಗುತ್ತೇನೆ, ನೀನು ನನ್ನ ಹಿಂದೆ ಬಾ: ನನ್ನ ರೋದನಕಾರಣವನ್ನು ನೀನೇ ಕಾಣುವೆ.

ಹಾಗೆ ಹೇಳಿ ಹೊರಟ ಅವಳನ್ನು ಅನುಸರಿಸಿ ಇಂದ್ರನೂ ನಡೆದನು. ಅಲ್ಲಿ ಹಿಮಾಲಯದ ಶಿಖರವೊಂದರ ಮೇಲೆ ಒಬ್ಬ ದರ್ಶನೀಯನಾದ (ಎಂದರೆ ಬಹುಸುಂದರನಾದ) ಪುರುಷನನ್ನು ಕಂಡನು. ಆತನೊಂದಿಗೆ ಯುವತಿಯೊಬ್ಬಳಿದ್ದಳು; ಆತನಾದರೂ ಸಿದ್ಧಾಸನದಲ್ಲಿ ಕುಳಿತಿದ್ದನು, ಆ ತರುಣಿಯೊಡನೆ ಆತ ಕ್ರೀಡಿಸುತ್ತಿದ್ದನು. ಕ್ರೀಡಾಮಗ್ನನಾಗಿ ಮತ್ತನಾಗಿದ್ದ ಆತನನ್ನು ಸಂಬೋಧಿಸಿ ಇಂದ್ರನು ಕೋಪದಿಂದಲೇ ಹೇಳಿದನು "ಅಯ್ಯಾ ವಿದ್ವಾಂಸನೇ! ಈ ವಿಶ್ವವು ನನ್ನ ಅಧೀನದಲ್ಲಿದೆಯೆಂಬುದನ್ನು ಅರಿತುಕೋ. ನಾನಿದರ ಒಡೆಯ" ಎಂದು ಹೇಳಿದನು.

ಕ್ರೋಧಗೊಂಡಿದ್ದ ಇಂದ್ರನನ್ನು ದಿಟ್ಟಿಸಿನೋಡಿ ಆ ದೇವಪುರುಷನು ನಕ್ಕನು, ಮೆಲ್ಲನೆ ಆತನತ್ತ ದೃಷ್ಟಿ ಬೀರಿದನು. ಅಷ್ಟುಮಾತ್ರದಿಂದಲೇ ಆದ ಪರಿಣಾಮವೆಂದರೆ, ಇಂದ್ರನು ಸ್ತಂಭಿತನಾಗಿಹೋದ! ಅರ್ಥಾತ್, ಕಟ್ಟಿಗೆಯಂತೆ, ಅಲ್ಲಾಡಲಾಗದೆ, ನಿಂತುಬಿಟ್ಟ!

ತನ್ನ ಕ್ರೀಡೆಯು ಮುಗಿದ ಮೇಲೆ ಆ ದೇವಪುರುಷನು ಅಳುತ್ತಿದ್ದ ತರುಣಿಯತ್ತ ತಿರುಗಿ, "ತಾ ನನ್ನ ಬಳಿಗೆ ಈತನನ್ನು; ಈತನಲ್ಲಿ ಮತ್ತೆ ದರ್ಪವು ಹುಟ್ಟದಂತೆ ಮಾಡುವೆ" - ಎಂದ. ಆಮೇಲೆ ಆ ನಾರಿಯು ಬಂದು ಇಂದ್ರನನ್ನು ಕೇವಲ ಸ್ಪರ್ಶಿಸಿದಳು: ಅಷ್ಟಕ್ಕೇ ಅವನ ಅಂಗಗಳೆಲ್ಲ ಶಿಥಿಲವಾದವು (ಸಡಿಲಗೊಂಡವು)! ಎಷ್ಟೆಂದರೆ ಆತ ಧೊಪ್ಪನೆ ನೆಲಕ್ಕುರುಳಿದ! ಆಗ ಆ ಉಗ್ರತೇಜಸ್ಕನಾದ ಭಗವಂತನು - ವಾಸ್ತವವಾಗಿ ರುದ್ರನು - ಇಂದ್ರನಿಗೆ ಹೇಳಿದ: "ಇಂದ್ರನೇ, ಮತ್ತೆಂತೂ ಹೀಗೆ ಮಾಡಬೇಡ. ನಿನ್ನ ಬಲ-ವೀರ್ಯಗಳು ಅಪ್ರಮೇಯವಾದವು ಅಲ್ಲವೇ? (ಅಪ್ರಮೇಯವೆಂದರೆ ಅಳೆಯಲಾಗದ್ದು): ಈ ದೊಡ್ಡ ಬಂಡೆಯನ್ನು ಪಕ್ಕಕ್ಕೆ ತಳ್ಳು. ಮಧ್ಯದಲ್ಲಿಯ ರಂಧ್ರದೊಳಗೆ ಪ್ರವೇಶ ಮಾಡು. ನಿನ್ನಂತೆಯೇ ಇರುವ ಸೂರ್ಯತೇಜಸ್ಕರು ಹಲವರು ಅಲ್ಲಿರುವರು, " ಎಂದು.

ಆ ಮಹಾಪರ್ವತದ ರಂಧ್ರವನ್ನು ತೆರೆದು ನೋಡಿದ, ಇಂದ್ರ. ತನಗೆ ಸಮಾನವಾದ ಕಾಂತಿಯುಳ್ಳ ಬೇರೆ ನಾಲ್ವರನ್ನಲ್ಲಿ ಕಂಡ! ಅವರನ್ನು ಕಂಡು ದುಃಖಿತನೂ ಆದ. ಅಯ್ಯೋ ಇವರ ಗತಿಯೇ ನನಗೂ ಒದಗುವುದಿಲ್ಲವಷ್ಟೆ? - ಎಂದುಕೊಂಡ. ಕೋಪಗೊಂಡಿದ್ದ ಮಹಾದೇವನು ಕಣ್ತೆರೆದು ವಜ್ರಪಾಣಿಯಾದ ಇಂದ್ರನಿಗೆ ಹೇಳಿದ:

"ಅಜ್ಞಾನದಿಂದ ನೀನು ನನ್ನನ್ನು ಎದುರಿಗೇ ಅವಮಾನಪಡಿಸಿರುವೆಯಲ್ಲವೇ ಇಂದ್ರ?: ಹೋಗೀ ದರಿಯೊಳಗೆ!" (ದರಿಯೆಂದರೆ ಗುಹೆ).

ಸೂಚನೆ : 26/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.