Sunday, February 20, 2022

ಅಷ್ಟಾಕ್ಷರ ದರ್ಶನ -6 ಪಂಡಿತಾಃ ಸಮದರ್ಶಿನಃ (Astakshara Darshana -6 Panditah Samadarshinah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಒಂದೇ ಮನೆಯಲ್ಲಿ ಹುಟ್ಟಿದವರಲ್ಲಿ ಎಷ್ಟೋ ವೇಳೆ ಬಹಳವೇ ಸಾಮ್ಯವಿರುವುದುಂಟು. ಅಣ್ಣತಮ್ಮಂದಿರಲ್ಲಿ ಅಥವಾ ಅಕ್ಕತಂಗಿಯರಲ್ಲಿ (ಕೆಲವೊಮ್ಮೆ ಹತ್ತಿರದ ಬಂಧುಗಳಲ್ಲೂ) ಅತಿಶಯಿತವಾದ ಸಾಮ್ಯವೂ ತೋರುವುದು ಆಶ್ಚರ್ಯವಲ್ಲ: ಅಣ್ಣನನ್ನು ತಮ್ಮನೆಂದೋ, ತಮ್ಮನನ್ನು ಅಣ್ಣನೆಂದೋ ಭ್ರಮಿಸುವಂತೆ ಸಹ ಆಗುವುದು. ಇನ್ನು ಅವಳಿ-ಜವಳಿಗಳಾಗಿಬಿಟ್ಟರಂತೂ ಹೇಳಲೇಬೇಕಿಲ್ಲ. ಇಷ್ಟು ಸಾಲದೆಂಬಂತೆ ಕೆಲವು ಮನೆಗಳಲ್ಲಿ ಹೆಸರುಗಳಲ್ಲೂ ಸಾಮ್ಯ ತಂದಿಡುವ ತಂದೆತಾಯಿಗಳುಂಟು. ಉಮಾ-ರಮಾ, ನರೇಶ-ನಗೇಶ, ವಿಮಲಾ-ಕಮಲಾ - ಇತ್ಯಾದಿಯಾಗಿ. ನಾಮರೂಪಗಳಲ್ಲಿ ಹೋಲಿಕೆಯುಳ್ಳ ಇಂತಹವರು ಅನೇಕರನ್ನು ಬೇಸ್ತುಬೀಳಿಸುವ ಪ್ರಸಂಗಗಳೂ ಇಲ್ಲದಿಲ್ಲ!

ಆದರೆ ಇದೆಲ್ಲವೂ ಅಂತಹವರೊಂದಿಗಿನ ಪರಿಚಯದ ಆರಂಭದಲ್ಲಿ; ಅವರೊಡನೆಯ ಒಡನಾಟವು ಹೆಚ್ಚುಹೆಚ್ಚಾದಂತೆಲ್ಲ, ಅವರುಗಳಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಅದೆಷ್ಟು ಭಿನ್ನವೆಂಬುದು ಹೆಚ್ಚುಹೆಚ್ಚಾಗಿ ಗೋಚರವಾಗುತ್ತ ಹೋಗುವುದು.

ಇಷ್ಟನ್ನು ಹೇಳಿದುದರ ಉದ್ದೇಶವೆಂದರೆ - ಸೃಷ್ಟಿಯಲ್ಲಿ ಅದೆಷ್ಟು ವೈವಿಧ್ಯವಿದೆ! - ಎಂಬತ್ತ ಬೊಟ್ಟುಮಾಡಿ ತೋರಿಸುವುದು. ಒಂದು ಕಾಡಿಗೆ ಹೋಗಿ ನೋಡಿ: ಒಂದು ಮರದಂತೆ ಇನ್ನೊಂದು ಮರವಿಲ್ಲ, ಒಂದು ಹಣ್ಣಿನಂತೆ ಇನ್ನೊಂದಿಲ್ಲ. ಒಂದೇ ಮರದಲ್ಲಿ ಸಹ ಒಂದು ಹೂವಿನಂತೆ ಮತ್ತೊಂದು ಹೂವಿಲ್ಲ. ಯಾವೊಂದೆಲೆಯೂ  ಮತ್ತೊಂದರ ಅಚ್ಚಲ್ಲ! ವಸ್ತುಗಳಷ್ಟೇ ಅಲ್ಲ, ಪ್ರಾಕೃತಿಕವಾದ ಘಟನೆಗಳೂ ಸಹ ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನಿನ್ನೆಯ ಸೂರ್ಯೋದಯದಂತೆ ನಾಳೆಯ ಸೂರ್ಯೋದಯವಿರದು! ಒಂದೇ ನದಿಯೇ ಆದರೂ, ನಿನ್ನೆಯ ನೀರು ಇಂದಿಲ್ಲ: ಪ್ರಕೃತಿಯಂತೂ ಎಂದೂ ನಿಂತ ನೀರಲ್ಲ. "ಮಾಡಿದ್ದನ್ನೇ ಮತ್ತೆ ಮಾಡಬೇಕೇಕೆ?"- ಎಂದು ಪ್ರಶ್ನಿಸಲೆಂಬಂತೆ, "ಬೇಜಾರೇ ಇಲ್ಲದೆ" ನವನವರೂಪಗಳನ್ನೂ, ನವನವಕ್ರಿಯೆಗಳನ್ನೂ ಸೃಷ್ಟಿಸುತ್ತಲೇ ಹೋಗುತ್ತಿರುತ್ತದೆ, ಪ್ರಕೃತಿ!

"ಏನಯ್ಯಾ ನಿನ್ನ 'ಪುರಾಣ'?" ಎಂದು ಕೆಲವೊಮ್ಮೆ ಕೇಳುವಂತಾಗುತ್ತದೆ - ಹಳೆಯ ಕಥೆಯೇ ಪುನರುಕ್ತವಾದಾಗ. 'ಪುರಾಣ' ಎಂಬುದಕ್ಕೆ 'ಹಳೆಯದು' ಎಂಬರ್ಥವಾದರೂ, "ಹಿಂದೆಯೂ ಹೊಸದಾಗಿತ್ತು" ("ಪುರಾ ಅಪಿ ನವಮ್") - ಎಂದೇ ಅದರ ವ್ಯುತ್ಪತ್ತಿ! ಹಾಗೆಯೇ  ಭಾರತೀಯ ಸಂಸ್ಕೃತಿಯ - ಅರ್ಥಾತ್ ಋಷಿದರ್ಶನದ – ಬಗ್ಗೆ, "ಅದು ಚಿರ-ಪುರಾತನವಾದರೂ ನಿತ್ಯ-ನೂತನ" - ಎಂಬುದಾಗಿ ಶ್ರೀರಂಗಮಹಾಗುರುಗಳೊಮ್ಮೆ ಉದ್ಗರಿಸಿದ್ದರು!

"ಎಲ್ಲರೂ ಬೇರೆ ಬೇರೆ" ಎಂದು ಹೇಳುವಂತೆಯೇ, "ಎಲ್ಲರೂ ಸಮ"ವೆಂಬ 'ಸಮತಾವಾದ' ವನ್ನು ಹೇಳುವವರೂ ಇಲ್ಲದಿಲ್ಲ. ಅಷ್ಟೇ ಅಲ್ಲ, ಅದಕ್ಕಾಗಿ ಭಗವದ್ಗೀತೆಯ ಶ್ಲೋಕವೊಂದನ್ನು ಸಹ ಎಳೆತರುತ್ತಾರೆ! ಅಲ್ಲಿಯ ಪ್ರಸಿದ್ಧ ಶ್ಲೋಕವೊಂದರಂತೆ ಈ ಆರರ ಬಗ್ಗೆ ಸಮದರ್ಶಿತ್ವವುಳ್ಳವರು ಪಂಡಿತರು: ವಿದ್ಯಾ-ವಿನಯಗಳಿಂದ ಕೂಡಿದ ಬ್ರಾಹ್ಮಣ, ಹಸು, ಆನೆ, ನಾಯಿ, ಹಾಗೂ ನಾಯಿಯ ಮಾಂಸ ತಿನ್ನುವವ - "ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |  ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||" ಎನ್ನುತ್ತದೆ, ಗೀತೆ.

ಇದು ಸ್ವಲ್ಪ ಆಶ್ಚರ್ಯಕರವೇ: ಶ್ವಾನವೂ ಶ್ವಪಚನೂ ಸಮವೇ? ಅವರಿಬ್ಬರಿಗೂ ಹಸುವೂ ಹಸ್ತಿಯೂ ಸಮವೆಂದು ಭಾವಿಸುವುದೇ? ಹಾಗೆ ಭಾವಿಸುವವರು ಪಂಡಿತರೇ? ಅದು ಹೇಗೆಂದೇ ಅರ್ಥವಾಗುವುದಿಲ್ಲ! "ಇವೆಲ್ಲರನ್ನೂ ಭೂಮಿಯ ಮೇಲೆ ಕಾಣಬಹುದು, ಎಲ್ಲರೂ ಗಾಳಿಯನ್ನು ಸೇವಿಸುತ್ತಾರೆ, ಎಲ್ಲರಿಗೂ ಆಹಾರ ಬೇಕು" – ಎಂಬ ಹಲಕೆಲವು ಜುಜುಬಿ ಅಂಶಗಳಲ್ಲಿ ಏನೋ ಸಾಮ್ಯ ಹೇಳಬಹುದಾದರೂ, ಒಬ್ಬರಿಗೊಬ್ಬರು ಸಮವೆಂದುಬಿಡುವುದೇ? ಸಮದರ್ಶನ ಶಕ್ಯವೇ? ಸಾಧುವೇ?

ಈ ಸಮಸ್ಯೆಗೆ ಪರಿಹಾರವನ್ನು ಶ್ರೀರಂಗಮಹಾಗುರುಗಳು ಬಹಳ ಸುಲಭವಾಗಿ ಕೊಟ್ಟಿದ್ದರು: "ಇವೆಲ್ಲದರಲ್ಲೂ ಪಂಡಿತರು ಸಮದರ್ಶಿಗಳಾಗಿರುತ್ತಾರೆ – ಎಂಬ ಗೀತೋಕ್ತಿಯಲ್ಲಿ  'ಸಮ'ವೆಂಬುದು ಭೌತಿಕಸ್ತರದ್ದಲ್ಲ; "ಸಮಂ ಬ್ರಹ್ಮ" ಎಂದು (ಅಲ್ಲೇ ಮುಂದಿನ ಶ್ಲೋಕದಲ್ಲೇ) ಹೇಳಿರುವಂತೆ, ಎಲ್ಲದರಲ್ಲಿಯೂ ಸಮವಾಗಿರತಕ್ಕ ಬ್ರಹ್ಮವನ್ನೇ ಕಾಣುವರು ಎಂಬ ಭಾವವನ್ನು ಅರಿಯಬೇಕು."

ಅದು ಹೇಗೆ? ಶ್ಲೋಕವನ್ನೇ ಮತ್ತೊಮ್ಮೆ ಕಣ್ಣಿಟ್ಟು ಓದಿನೋಡಿದರೆ ಗೋಚರವಾಗುತ್ತದೆ. ವ್ಯಾಕರಣದ ಮೊದಲ ಪಾಠವೆಂದರೆ "ವಿಭಕ್ತಿ"ಗಳು; ಈ ಶ್ಲೋಕದಲ್ಲಿ ಆ ಆರೂ 'ಪ್ರಾಣಿ'ವಾಚಕಗಳೂ ಸಪ್ತಮೀವಿಭಕ್ತಿಯಲ್ಲಿಯೇ ಇವೆಯಲ್ಲವೇ?: 'ಬ್ರಾಹ್ಮಣನಲ್ಲಿ', 'ಗೋವಿನಲ್ಲಿ', 'ಗಜದಲ್ಲಿ', 'ಶ್ವಾನದಲ್ಲಿ', 'ಶ್ವಪಾಕನಲ್ಲಿ' - ಎಂಬಲ್ಲಿ ಆರೂ ಕಡೆಯೂ '-ಅಲ್ಲಿ' ಎಂಬ (ಸಪ್ತಮೀವಿಭಕ್ತಿಯ ಪ್ರತ್ಯಯವೇ) ಇದೆಯಲ್ಲವೆ? "ಪಂಡಿತರು ಈ ಆರನ್ನೂ ಸಮನಾಗಿ ನೋಡುವರು" ಎಂದೆಲ್ಲಿ ಹೇಳಿದೆ? ಬದಲಾಗಿ, "ಈ ಆರರಲ್ಲೂ ಸಮವಾದುದಾವುದೋ ಅದನ್ನು ಕಾಣುವರು" – ಎಂದೇ ಹೇಳಿದೆ.

ಅಲ್ಲಿಗೆ, ಪ್ರಕೃತಿಯಲ್ಲಿ ಯಾವೆರಡೂ 'ಸಮ'ವಲ್ಲ. ಸಮವಲ್ಲದವು ವಿಷಮಗಳು; ಅವಲ್ಲಿರುವುದು ವೈಷಮ್ಯವೇ. ವಿಷಮವಾದವುಗಳಲ್ಲೂ ಸಮನಾದುದೆಂದರೆ ಬ್ರಹ್ಮವೊಂದೇ. ಅನೇಕದೊಳಗಿನ ಏಕವನ್ನು, ಎಲ್ಲದರೊಳಗಿರುವ ಬ್ರಹ್ಮವನ್ನು, ಕಾಣಬಲ್ಲವರು ಸಮದರ್ಶಿಗಳಾದ ಪಂಡಿತರು - ಎಂಬೀ ವಿವರಣೆಯು ಅತ್ಯಂತಸಹಜವಾಗಿದೆಯಲ್ಲವೇ?

ಸೂಚನೆ: 20/2/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.