ಅಹಿಂಸೆಯೇ ಅತ್ಯಂತ ಶ್ರೇಷ್ಠ ಧರ್ಮವೆಂಬುದು ಪ್ರಸಿದ್ಧವಾಗಿದೆ. ಆದರೆ, ಇದನ್ನು ಪಾಲಿಸುವುದು ಜೀವನದಲ್ಲಿ ಎಷ್ಟರಮಟ್ಟಿಗೆಸಾಧ್ಯ? ಆಹಾರಾರ್ಥವಾಗಿ ಗಿಡಗಳಿಂದ ಹಣ್ಣು, ತರಕಾರಿಗಳನ್ನು ಬಿಡಿಸಿಕೊಳ್ಳುವುದು ಗಿಡಕ್ಕೆ ಹಿಂಸೆ. ಕುದಿಸಿ ಬೇಯಿಸುವಾಗ ಕಣ್ಣಿಗೆಕಾಣಿಸದ ಅನೇಕ ಕ್ರಿಮಿಗಳ ಹತ್ಯೆ. ಈ ಹಿಂಸೆಗಳನ್ನು ತಡೆಗಟ್ಟಿದರೆ ಅಹಾರವಿಲ್ಲದೆ ನಮಗೇ ಹಿಂಸೆ! ಕೊನೆಗೆ ಆತ್ಮಹತ್ಯೆ! ಗೋಡೆಯ ಮೇಲೆ ಕುಳಿತಿರುವ ಸೊಳ್ಳೆಯನ್ನು ಹಿಡಿಯಲು ಹಲ್ಲಿಯೊಂದು ಧಾವಿಸುತ್ತದೆ. ಆಗ 'ಅಯ್ಯೋ ಪಾಪ' ಎಂಬಮರುಕದಿಂದ ಅದನ್ನು ಕಾಪಾಡಿದರೆ ಹಲ್ಲಿಗೆ ಹಿಂಸೆ. ಹಲ್ಲಿಯ ರಕ್ಷಣೆ ಸೊಳ್ಳೆಗೆ ಹಿಂಸೆ! ರೋಗಿಗೆ ಔಷಧಿ ಕೊಟ್ಟು ಗುಣಪಡಿಸಿದರೆ ರೋಗಾಣುಗಳ ಹತ್ಯೆ! ಅವನ್ನು ಉಳಿಸಿದರೆ ರೋಗಿಗೆ ಹಿಂಸೆ! ಉಳಿಯಬೇಕಾದದ್ದುರೋಗಿಯೋ, ರೋಗಾಣುವೋ? ಹೀಗೆ ಅನೇಕ ಸಮಸ್ಯೆಗಳು ಏಳಬಹುದು. ಪರಿಹಾರ ಹುಡುಕುವುದು ಹೇಗೆ? ಜೀವನದಲ್ಲಿ ಅಹಿಂಸೆಯನ್ನು ಅಳವಡಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಹಿಂಸೆ-ಅಹಿಂಸೆಗಳಿಗೆ ಅರ್ಥಪೂರ್ಣವಾದ ವಿವರಣೆಯು ಆವಶ್ಯಕವೆನಿಸುತ್ತದೆ.
ಇಲ್ಲಿ ಜ್ಞಾನಿವರೇಣ್ಯರಾದ ಶ್ರೀರಂಗಮಹಾಗುರುಗಳ ವಿವರಣೆಯು ಸ್ಮರಣೀಯವಾಗಿದೆ. ಆಹಾರಾರ್ಥವಾಗಿ ಜೀವಿಗಳು ಇತರ ಜೀವಿಗಳನ್ನೇ ಅವಲಂಬಿಸಬೇಕೆಂಬುದು ಸೃಷ್ಟಿನಿಯಮ. ಇದರಿಂದಲೇ ಸೃಷ್ಟಿಯಲ್ಲಿ ಸಮತೋಲನವು ಕಾಪಾಡಲ್ಪಡುತ್ತಿದೆ.ಹಾಗಿಲ್ಲದಿದ್ದರೆ ಯಾವುದೇ ಒಂದು ವರ್ಗವು ಮಾತ್ರ ವೃದ್ಧಿಯಾಗಿ ಮತ್ತೊಂದು ನಶಿಸಿಹೋಗುವುದು ಸಿದ್ಧ. ಆದ್ದರಿಂದ ಸೃಷ್ಟಿನಿಯಮವನ್ನು ಕಾಪಾಡುವುದೇ ಧರ್ಮ, ಅದಕ್ಕಾದ ಕ್ರಿಯೆಗಳು ಅಹಿಂಸೆ, ತದ್ವಿರುದ್ಧವಾದದ್ದೆಲ್ಲವೂ ಹಿಂಸೆ.ಆರೋಗ್ಯವಾಗಿರುವುದೇ ಸೃಷ್ಟಿನಿಯಮವಾದ್ದರಿಂದ ರೋಗಿಯ ಉಳಿವು, ಅದಕ್ಕಾಗಿ ರೋಗಾಣುವಿನ ಅಳಿವು ಅಹಿಂಸೆಯೇ.ಆಹಾರ ತಯಾರಿಕೆಯಲ್ಲಿ ಅನೇಕರೀತಿಯ ಹಿಂಸೆಗಳು ಅನಿವಾರ್ಯವೇ ಸರಿ. ಆದರೆ ತಯಾರಿಸಿದ ಆಹಾರವು ಭಗವಂತನಿಗೆನಿವೇದನವಾದಾಗ ಆ ಪದಾರ್ಥಗಳಿಗೂ, ಅದನ್ನು ಒದಗಿಸಿಕೊಟ್ಟ ಗಿಡ-ಮರ ಇತ್ಯಾದಿಗಳಿಗೂ ಸಾರ್ಥಕ್ಯವು ಕೂಡಿಬರುವುದರಿಂದಅಲ್ಲಿ ಹಿಂಸೆಗೆ ವಿಷಯವಿಲ್ಲವಾಗುತ್ತದೆ. ಆಹಾರ ಪದಾರ್ಥಗಳಿಗೆ ಸಾರ್ಥಕ್ಯವನ್ನು ಕೊಟ್ಟು ನಮ್ಮ ಜೀವನವನ್ನೂ ಸಾರ್ಥಕಗೊಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಮಾನವ ಶರೀರವೇ ಭಗವತ್ಸಾಕ್ಷಾತ್ಕಾರಕ್ಕೆ ಉತ್ತಮ ಸಾಧನ. ಈ ಸಾಮರ್ಥ್ಯವೇ ಅವನನ್ನು ಬೇರೆ ಪ್ರಾಣಿಗಳಿಗಿಂತ ವಿಶಿಷ್ಟವಾಗಿಸುತ್ತದೆ. ಆದ್ದರಿಂದ ಸೃಷ್ಟಿಯ ಕೊಡುಗೆಯಾದ ಈ ಮಹಾಫಲ ಸಾಧನೆಗೆ ಪೋಷಕವಾದ ಕ್ರಿಯೆಗಳೆಲ್ಲವೂ ಅಹಿಂಸೆ.ತದ್ವಿರುದ್ಧವಾದುದೆಲ್ಲವೂ ಹಿಂಸೆಯೇ. ಅನಿವಾರ್ಯವಾದ ಕನಿಷ್ಠಪಕ್ಷದ ಹಿಂಸೆಯೂ ಅಹಿಂಸೆಯ ವ್ಯಾಪ್ತಿಯಲ್ಲೇ ಕೆಲವೊಮ್ಮೆ ಬರುತ್ತದೆ.
ಸೂಚನೆ: 7/04/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.