(BSc, MA (Sanskrit), MPhil, PhD, ವಿದ್ವತ್)
ವಂದೇ ಗುರೂಣಾಂ...
ಗುರುಗಳ ಚರಣಕಮಲಗಳಿಗೆ ವಂದನೆ! - ಹೀಗೆ ಆರಂಭಿಸುವುದನ್ನು ಅನೇಕ ಪಾರಂಪರಿಕ ಗ್ರಂಥಗಳಲ್ಲಿ ನೋಡುತ್ತೇವೆ.
ಗುರುವಂದನೆ – ಏಕೆ?
ನಮ್ಮ ದೇಶದ ಪರಂಪರೆಯಲ್ಲಿ ಗುರುವೆಂದರೆ ದೊಡ್ಡ ಸ್ಥಾನವೇ. "ಗುರು-ಹಿರಿಯರ ಆಶೀರ್ವಾದ" ಪಡೆದೇ ಯಾವುದೇ ಕೆಲಸಕ್ಕೂ ಕೈಹಾಕುವುದು. ಗುರುವನ್ನೇ ಬ್ರಹ್ಮ-ವಿಷ್ಣು-ಮಹೇಶ್ವರರೆಂದು ಭಾವಿಸುತ್ತೇವೆ. ಈ ತ್ರಿಮೂರ್ತಿಗಳಿಗೂ ಮೂಲವಾದುದು ಪರಂಬ್ರಹ್ಮ. ಗುರುವು ಅದೂ ಹೌದೆನ್ನುತ್ತೇವೆ. ಇದಕ್ಕಿಂತ ಇನ್ನೆಷ್ಟು ಹೆಚ್ಚು ಗೌರವವನ್ನು ತೋರಿಸಲಾದೀತು?!
ಗುರುವಿಗೇಕೆ ಇಷ್ಟು ಗೌರವ? - ಎಂಬ ಪ್ರಶ್ನೆಯುಂಟು. ಮೊದಲ ದೇವತೆ ಅಮ್ಮ. ಎರಡನೆಯದು ಅಪ್ಪ. ತದನಂತರದ ದೇವತೆಯೆಂದರೆ ಗುರುವೇ.
ನಿಜವಾದ ಆಚಾರ್ಯನಾದರೆ ಮತ್ತೊಂದು ಜನ್ಮವನ್ನೇ ಕೊಡುತ್ತಾನೆ. ಅಪ್ಪ-ಅಮ್ಮಂದಿರು ಕೊಡುವ ಶರೀರ ಅನಿತ್ಯ. ಆಚಾರ್ಯನೀಯುವ ಜನ್ಮ ಅಜರ-ಅಮರ: ಮುಪ್ಪಿಲ್ಲದ್ದು, ಸಾವಿಲ್ಲದ್ದು. ಅನ್ನುತ್ತದೆ ಮನುಸ್ಮೃತಿ.
ಶ್ರೇಷ್ಠ ಗುರುವು ಆಧ್ಯಾತ್ಮಿಕ ಶಕ್ತಿಯ ಆಗರವೇ. ಆ ಶಕ್ತಿಯು ಆತನು ಸಂಕಲ್ಪಿಸಿದಾಗ ಆತನ ಹಸ್ತದ ಮೂಲಕ ಹರಿಯಬಲ್ಲುದು. ಪಾದದ ಮೂಲಕವಂತೂ ಸಹಜವಾಗಿಯೇ ಹರಿಯಬಲ್ಲುದು. ಕಣ್ಣೋಟವಷ್ಟರಿಂದಲೇ ಹರಿಯುವುದೂ ಅಸಾಧ್ಯವಲ್ಲ. ಶ್ರೀರಂಗಮಹಾಗುರುಗಳಿಗೆ ಇದು ಸಿದ್ಧವಾಗಿತ್ತು.
ವಿಷ್ಣುವಿನ ಪಾದದಿಂದ ಗಂಗೆಯು ಹರಿದುಬರುವುದಲ್ಲವೆ? ಗಂಗೆಯೆಂದರೆ ವಿಷ್ಣುವಿನ ಶಕ್ತಿಯೇ ಸರಿ, ಅನುಗ್ರಹದ ಧಾರೆಯೇ ಸರಿ. ಗುರುಚರಣವೆಂದರೂ ಹಾಗೆಯೇ. ಪ್ರೀತಿ-ಕರುಣೆಗಳಿಂದ ತುಂಬಿದವರ ಕಣ್ಣು-ಕಣ್ಣೋಟಗಳಲ್ಲಿ ಏನೋ ಒಂದು ಮಾರ್ದವ-ಮಾಧುರ್ಯಗಳಿರುತ್ತವೆ. ಅವರ ಹಸ್ತ-ಪಾದಗಳಲ್ಲೂ ಸೌಂದರ್ಯ-ಸೌಕುಮಾರ್ಯಗಳು - ಎಂದೇ ಕಮಲದ ಹೋಲಿಕೆ ಅವಕ್ಕೆಲ್ಲಾ.
ಗುರುಚರಣಾಂಬುಜದಲ್ಲಿ ನಿರ್ಭರಭಕ್ತನಾಗಿದ್ದರೆ ಸಂಸಾರವನ್ನು ಬೇಗ ದಾಟಬಹುದು - ಎಂಬುದನ್ನೇ ಶಂಕರಾಚಾರ್ಯರ ಪ್ರಸಿದ್ಧವಾದ ಭಜಗೋವಿಂದಸ್ತೋತ್ರವು ತನ್ನ ಕೊನೆಯ ಮಾತಾಗಿ ಹೇಳುತ್ತದೆ. ಅದನ್ನೇ ಅವರದೇ ಯೋಗತಾರಾವಳಿಯಲ್ಲಿ ಮೊದಲ ಮಾತಾಗಿ ಹೇಳಲಾಗಿದೆ.
ಆತ್ಮನು ಸುಖಸ್ವರೂಪ, ಜ್ಞಾನಸ್ವರೂಪ. ಈ ಸುಖ-ಅವಬೋಧಗಳನ್ನು ನಮ್ಮ ಅನುಭವಕ್ಕೆ ಗುರುಚರಣಗಳು ತರಬಲ್ಲವು. ಕಣ್ಣಾರೆ ಕಂಡಾಗ ಯಾವ ಗಟ್ಟಿಯೋ ಅಂತಹ ಗಟ್ಟಿಯಾದ ಅನುಭವ. ಚೆನ್ನಾಗಿ ಆದ ದರ್ಶನವನ್ನೂ ಸಂ-ದರ್ಶನ ಎನ್ನಬಹುದು. ಸ್ವಾತ್ಮದಲ್ಲಿಯೇ - ಎಂದರೆ ನಮ್ಮೊಳಗೇ - ಇರುವ ಜ್ಞಾನ-ಸುಖಗಳನ್ನು ಅವು ತೋರಿಸಿಕೊಡುವುವು. ನಮ್ಮದಾದ ಚೇಷ್ಟೆಯನ್ನು ಬಿಟ್ಟು ಅವುಗಳ ಶಕ್ತಿಯೇ ಆಡುವಂತೆ ಮಾಡಲು ಬಿಟ್ಟಾಗ ಸುಖವಾಗಿಯೇ ತೋರಿಸಿಕೊಡತಕ್ಕವು. ನಾವಾಗಿ ಶ್ರಮಿಸಿದರೆ ಬಹುಜನ್ಮಗಳಲ್ಲೂ ಆಗದ ಅಂತಸ್ಸುಖದ ಸಂದರ್ಶನವನ್ನು ಸುಖವಾಗಿ ಮಾಡಿಸಿಕೊಡತಕ್ಕವು, ಅವು.
ವಿಷವೈದ್ಯ
ಹಾಲಾಹಲವೆಂಬುದೊಂದು ಮಹಾಭಯಂಕರವಾದ ವಿಷವೇ ಸರಿ. ವಿಷಪೂರಿತವಾದ ಹಾವು ಕಡಿದರೆ ಕಡಿಸಿಕೊಂಡವನು ಸಾವಿನತ್ತ ಸಾಗುವನು. ಸಾಗುವಾಗ ಮಂಪರು ಕವಿಯುತ್ತದೆ. ಆ ಮಂಪರು-ಮೋಹವು ಆವರಿಸಿಬಿಟ್ಟಿತೆಂದರೆ ಸಾವು ಸಮೀಪಿಸಿದಂತೆಯೇ ಸರಿ. ಸಂಸಾರವೂ ಒಂದು ಹಲಾಹಲವೇ. 'ಸಂಸಾರವನ್ನು ಕಟ್ಟಿಕೊಂಡನು' ಎನ್ನುತ್ತೇವೆ. ಆಗಾಗುವುದೇನು? ತಾನು-ತನ್ನದು ಎಂಬುವುದು ಹೆಚ್ಚುತ್ತದೆ. ಅಹಂಕಾರ-ಮಮಕಾರಗಳು ಬೇಕು, ಮಿತಿಯಲ್ಲಿರಬೇಕು. ಅದಾಗಲಿಲ್ಲವೆಂದರೆ ಮೋಹವು ಪ್ರಬಲವಾಗಿ ಆವರಿಸಿತೆಂದೇ. ಇಹದ ಮೋಹವೇ ಎಲ್ಲೆ ಮೀರಿದಾಗ 'ಸಂಸಾರಮೋಹ'ವೇ.
ಈ ಮೋಹದ ಮಂಪರು ಶಾಂತವಾಗಬೇಕು. ಜಾಂಗಲಿಕ ಅಥವಾ ವಿಷವೈದ್ಯನು ಮಾತ್ರವೇ ವಿಷದ ಮಂಪರನ್ನು ಹೋಗಲಾಡಿಸಬಲ್ಲ. ಸಂಸಾರ-ಹಾಲಾಹಲ ಅಥವಾ ಸಂಸಾರವಿಷದಿಂದಾಗುವ ಮೋಹಕ್ಕೆ ಗುರುಪಾದಗಳೇ ವಿಷವೈದ್ಯನಂತೆ. ಜೀವವುಳಿಸುವವನು ಬಂದರೆ, 'ದೇವರಂತೆ ಬಂದಿರಿ' ಎನ್ನುತ್ತೇವೆ. ಅವನನ್ನು ವಂದಿಸುತ್ತೇವೆ. ಹೀಗೆಯೇ ಗುರುಚರಣಗಳಿಗೆ ವಂದನೆಯೆಂಬುದೂ. ಈಗ ಈ ಶ್ಲೋಕ ಕೇಳಿ:
ವಂದೇ ಗುರೂಣಾಂ ಚರಣಾರವಿಂದೇ
ಸಂದರ್ಶಿತ-ಸ್ವಾತ್ಮ-ಸುಖಾವಬೋಧೇ |
ಜನಸ್ಯ ಯೇ ಜಾಂಗಲಿಕಾಯಮಾನೇ
ಸಂಸಾರ-ಹಾಲಾಹಲ-ಮೋಹ-ಶಾಂತ್ಯೈ ||೧||
ಸೂಚನೆ : 3/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.