Monday, April 12, 2021

ಆರ್ಯಸಂಸ್ಕೃತಿ ದರ್ಶನ - 38 (Arya Samskruti Darshana - 38)

  ಮುನಿ

ಲೇಖಕರು: ಡಾ|| ಶ್ರೀ ಎಸ್. ವಿ. ಚಾಮು.

ಬಹಳ ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿಬೇರೆ ಬೇರೆ ಪಂಥಗಳಿಗೆ ಸೇರಿದ ಸನ್ಯಾಸಿಗಳು ಇದ್ದಿರುವರು. ಸಾಮಾನ್ಯವಾಗಿ ಹೇಳುವುದಾದರೆ, ಅವರು ಎಲ್ಲೆಲ್ಲಿಯೂ ಜನರ ಭಕ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಿರುತ್ತಾರೆ. ಲೋಕವೆಲ್ಲವೂ ಕಾಮ ಕ್ರೋಧಾದಿಗಳಿಗೆ ವಶವಾಗಿ ಹೋಗುತ್ತಿರುವಾಗ, ಅವುಗಳಿಂದ ಬಿಡಿಸಿಕೊಂಡು, ನಿರ್ಮಮನಾಗಿಯೂ, ನಿರ್ಲಿಪ್ತನಾಗಿಯೂ ಇರುವವನು, ಉತ್ತಮಪುರುಷನೆಂದು ಪರಿಗಣಿತವಾಗುವುದು ಸಹಜವಾಗಿಯೇ ಇರುತ್ತದೆ. ಅದೇ ಜನತೆಯು ಅವರಿಗೆ ಗೌರವ ತೋರಲು ಕಾರಣ.

ಮುನಿ, ಮೌನಿ, ಜ್ಞಾನಿ, ತ್ಯಾಗಿ, ಯೋಗಿ ಮುಂತಾದ ಪದಗಳೆಲ್ಲವೂ ಸನ್ಯಾಸಿ ಎಂಬ ಪದದ ಪರ್ಯಾಯ ಪದಗಳಾಗಿರುತ್ತವೆ. ಅವೆಲ್ಲವೂ ಒಬ್ಬ ಮನುಷ್ಯನು ಸಾಧಿಸಬಹುದಾದ ಒಳಪೂರ್ಣತೆಯು ಬೇರೆ ಬೇರೆ ಪಾರ್ಶ್ವಗಳನ್ನು ಸೂಚಿಸುತ್ತವೆ. ತಮ್ಮಲ್ಲಿ ಆಳವಾದ ಒಳ ಅರ್ಥವನ್ನು ಇರಿಸಿಕೊಂಡಿರುತ್ತವೆ. ಸಾಮಾನ್ಯವಾಗಿ ಮೌನ, ಕಾಷಾಯವಸ್ತ್ರ, ದಂಡ, ಕಮಂಡಲು, ಅರಣ್ಯವಾಸ ಇತ್ಯಾದಿಗಳು ಸನ್ಯಾಸಿಯ ಹೊರಲಕ್ಷಣಗಳು. ಆದರೆ ಹೊರಲಕ್ಷಣಗಳಿಂದ ಒಬ್ಬನು ಸನ್ಯಾಸಿಯಾಗುವುದಿಲ್ಲ. ಒಳಲಕ್ಷಣಗಳಿಂದ ಆಗುತ್ತಾನೆ. ಅವನ ಒಳ ಲಕ್ಷಣಗಳೇನು ?,
ಏನಾಗಿರಬೇಕು ಎಂಬುದನ್ನು ಭಾರತವು ಈ ರೀತಿ ವರ್ಣಿಸುತ್ತದೆ.
                              
ಸ್ವಲಕ್ಷಣಾಂತುಯೋ ವೇದ ಸಮುನಿಃ ಶ್ರೇಷ್ಠ ಉಚ್ಯತೇ||
ಸರ್ವಾರ್ಥಾನಾಂ ವ್ಯಾಕರಣಾತ್ ವೈಯಾಕರಣ ಉಚ್ಯತೇ|
ತನ್ಮೂಲತೋವ್ಯಾಕರಣಂ ವ್ಯಾಕರೋತೀತಿ ತತ್ ತಥಾ||
ಪ್ರತ್ಯಕ್ಷದರ್ಶೀ ಲೋಕಾನಾಂ ಸರ್ವದರ್ಶೀ ಭವೇನ್ನರಃ|
ಸತ್ಯೇ ವೈ  ಬ್ರಾಹ್ಮಣಸ್ತಿಷ್ಠನ್ ತದ್ವಿದ್ವಾನ್ ಸರ್ವವಿದ್ಭವೇತ್||

(ಮೌನವಾಗಿರುವುದರಿಂದಾಗಲಿ ಅಥವಾ ಅರಣ್ಯವಾಸದಿಂದಾಗಲಿ ಒಬ್ಬನು ಮುನಿಯಾಗುವುದಿಲ್ಲ. ತನ್ನ ಸ್ವರೂಪವನ್ನು ತಿಳಿದವನೇ ಶ್ರೇಷ್ಠನಾದ ಮುನಿ ಎಂದು ಹೇಳಿಸಿಕೊಳ್ಳುತ್ತಾನೆ. ಎಲ್ಲ ಅರ್ಥಗಳನ್ನೂ ವ್ಯಕ್ತಪಡಿಸುವುದರಿಂದ ಅವನನ್ನು ವೈಯ್ಯಾಕರಣ ಎಂದು ಕರೆಯುತ್ತಾರೆ. ಆ ಆತ್ಮಮೂಲದಿಂದಲೇ ಎಲ್ಲ ಅರ್ಥಗಳೂ ಪ್ರಕಾಶಕ್ಕೆ ಬರುತ್ತವೆ. ಅದೇ ಎಲ್ಲವನ್ನೂ ವ್ಯಕ್ತಪಡಿಸುತ್ತದೆ. ಅದನ್ನು ತಿಳಿದವನು ಲೋಕವೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದವನಾಗುತ್ತಾನೆ. ಅವನು ಸರ್ವದರ್ಶಿ
ಯಾಗುತ್ತಾನೆ. ಸತ್ಯದಲ್ಲಿರುವ ಬಾಹ್ಮಣನು ಆತ್ಮನನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿದವನಾಗುತ್ತಾನೆ)

ಬೇರೆ ಮಾತುಗಳಲ್ಲಿ ಹೇಳುವುದಾದರೆ, ತನ್ನ ಕಾಯ, ವಾಕ್ಕು ಮತ್ತು ಶರೀರಗಳಲ್ಲಿರುವ ಕಿಲ್ಬಿಷಗಳೆಲ್ಲವನ್ನೂ ಸಂಪೂರ್ಣವಾಗಿ ತೊಳೆದುಕೊಂಡು, ಪರಮಾತ್ಮ ಭಾವದಲ್ಲಿ ಒಂದಾಗಿರುವವನೇ ಮುನಿ. ಅವನ ಮೌನವು "ನಿಶ್ಶಬ್ದಂ ಪರಮಂಪದಂ" ಎಂಬ ನುಡಿಯು ಹೇಳುವಂತೆ ಪರಮಾತ್ಮ ಭಾವವನ್ನು ಮುಟ್ಟಿದಾಗ ಹೃದಯದಲ್ಲಿ ಉಂಟಾಗುವ ನಿಶ್ಶಬ್ದತೆಯ ಸಂಕೇತ, ಅದರ ಪರಿಣಾಮ. ಈ ಅರ್ಥದಲ್ಲಿ "ಮುನಿ" ಎನಿಸಿಕೊಳ್ಳಲು ಎಷ್ಟು ಜನ ಅರ್ಹರಾಗುತ್ತಾರೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:11 ಸಂಚಿಕೆ: 08ಜೂನ್ 1989 ತಿಂಗಳಲ್ಲಿ  ಪ್ರಕಟವಾಗಿದೆ.