Showing posts with label 470_ayvmarticle. Show all posts
Showing posts with label 470_ayvmarticle. Show all posts

Saturday, December 5, 2020

ಸ್ತ್ರೀ - ಸಹಭಾಗಿತ್ವ (Stri - Sahabhagitva)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)



ಕಾರ್ಯೇಷು ಮಂತ್ರೀ ಕರಣೇಷು ದಾಸೀ ರೂಪೇಷು ಲಕ್ಷ್ಮೀಃ ಕ್ಷಮಯಾ ಧರಿತ್ರೀ |
ಸ್ನೇಹೇಷು ಮಾತಾ ಶಯನೇಷು ವೇಶ್ಯಾ ಷಟ್ಕರ್ಮನಾರೀ ಕುಲಧರ್ಮಪತ್ನೀ || -ನೀತಿಸಾರ ೧


ಅರ್ಥ- ಸ್ತ್ರೀಯಾದವಳು ಕೆಲಸದಲ್ಲಿ ಮಂತ್ರಿಯಾಗಿ ಕಾರ್ಯಕ್ಕೆ ಬೇಕಾದ ಸಲಕರಣೆಯನ್ನು ಒದಗಿಸುವಲ್ಲಿ ದಾಸಿಯಾಗಿ ರೂಪದಲ್ಲಿ ಮಹಾವಿಷ್ಣುವಿನ ಪತ್ನೀ ಲಕ್ಷ್ಮಿದೇವಿಯಂತೆ ಸ್ನೇಹದ ವಿಷಯದಲ್ಲಿ ತಾಯಿಯಾಗಿ ಸಂಭೋಗದಲ್ಲಿ ವೇಶ್ಯಾಸ್ತ್ರೀಯಾಗಿ ಪತಿಯ ಕಾರ್ಯದಲ್ಲಿ ಪತ್ನಿಯು ಆರು ಕರ್ಮವನ್ನು ಮಾಡುವ ಉಭಯಕುಲದ ಕುಲಪಾವನಿಯಾಗುವಳು.

ವಿವರಣೆ - ಈ ಸೃಷ್ಟಿಯಲ್ಲಿ ಯಾವುದೇ ಪುರುಷ ತನ್ನ ಕಾರ್ಯದಲ್ಲಿ ಪ್ರವೃತ್ತನಾಗಬೇಕೆಂದಾದರೆ ಅಲ್ಲಿ ಸ್ತ್ರೀಯ ಪಾತ್ರವೂ ಅಷ್ಟೇ ಮಹತ್ತ್ವದ್ದಾಗಿರುತ್ತದೆ. ಭಗವಂತನೇ ಸೃಷ್ಟಿಯನ್ನು ಮಾಡಬೇಕಾದರೂ ಸ್ತ್ರೀಯನ್ನೇ ಬಳಸಿಕೊಂಡ. "ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ" ಭಗವಂತನು ತನ್ನನ್ನೇ ಎರಡಾಗಿ ವಿಭಾಗಿಸಿಕೊಂಡ. ಅಲ್ಲಿ ಎಡ ಭಾಗ ಸ್ತ್ರೀ ಬಲಭಾಗ ಪುರುಷ. ಇದೇ ನೇರದಲ್ಲಿ ಪ್ರತಿಯೊಬ್ಬ ಪುರುಷನ ಆಗುಹೋಗುಗಳಲ್ಲಿ ಸ್ತ್ರೀಯಾದವಳ ಸಹಭಾಗಿತ್ವ ಇದ್ದೇ ಇರುತ್ತದೆ. ಸಂಸಾರದಲ್ಲಿ ಒಂದು ಒಳ್ಳೆಯ ಸಾರ ಬರಬೇಕಾದರೆ ಸರಾಗವಾಗಿ ಸಾಗಬೇಕಾದರೆ ಸದ್ಗೃಹಿಣಿಯಾದವಳು ತನ್ನ ಗೃಹಸ್ಥನ ಕಾರ್ಯದಲ್ಲಿ ಹೇಗೆಲ್ಲಾ ಸಹಕರಿಸಬಹುದು ಎಂಬುದನ್ನು ಈ ಸುಭಾಷಿತ ತಿಳಿಸುತ್ತದೆ. ಮಂತ್ರಿಯಾದವನು ಗುಪ್ತವಾದ ಮಂತ್ರಾಲೋಚನೆಯ ಮೂಲಕ ರಾಜನ ಎಲ್ಲಾ ಆಪತ್ತುಗಳಲ್ಲೂ ಹೇಗೆ ಸಹಕರಿಸುತ್ತಾನೋ ಪತ್ನಿಯು ಪತಿಯ ಕಾರ್ಯದಲ್ಲಿ ಮಂತ್ರಿಯಾಗಿ ಸಹಕಾರಿಯಾಗುವಳು. ಯಾವುದೇ ಕಾರ್ಯ ವ್ಯವಸ್ಥಿತವಾಗಿ ಜರುಗಲು ಕಾರ್ಯಸಾಮಗ್ರಿಗಳನ್ನು ಸಕಾಲಕ್ಕೆ ಒದಗಿಸಿಕೊಡುವ ಚತುರನಾದ ಸೇವಕನಿದ್ದರೆ ಮಾತ್ರ ಸಾಧ್ಯ. ಹೀಗೆ ಪತ್ನಿಯೂ ಪತಿಯ ಧಾರ್ಮಿಕ ಮತ್ತು ಸಾಮಾಜಿಕ ಜೀವನಕ್ಕೆ ಬೇಕಾದ ಸರಕುಗಳನ್ನು ಒದಗಿಸುವ ದಾಸಿಯೂ ಆಗುವಳು. ಮಹಾವಿಷ್ಣುವಿಗೆ ಮಹಾಲಕ್ಷ್ಮಿಯು ಹೇಗೆ ಸರ್ವಾತ್ಮನಾ ಅನುರೂಪಳೋ ಹಾಗೆ ಪತಿಗೆ ಪತ್ನಿಯು ಅನುರೂಪಳಾಗಿರುವಳು. ವಿಶೇಷವಾಗಿ ವಾತ್ಸಲ್ಯದ ಮೂರ್ತಿಯಾದ ತಾಯಿಗೆ ಸಮನಾಗಿ ಕುಂದುಕೊರತೆಯಿಲ್ಲದಂತೆ ಪತಿಯನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವ ಜವಾಬ್ದಾರಿ ಪತ್ನಿಗೆ ಇರುತ್ತದೆ. ಹೀಗೆ ಸಕಲವಿಧವಾಗಿ ಪತಿಪತ್ನಿಯರು ಅನ್ಯೋನ್ಯವಾಗಿ ಇದ್ದಾಗ ಸಂಸಾರದಲ್ಲಿ ಸಾರವನ್ನು ಕಾಣಲು ಸಾಧ್ಯ.

ಸೂಚನೆ: 05/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.