Showing posts with label 1345_ayvmarticle. Show all posts
Showing posts with label 1345_ayvmarticle. Show all posts

Sunday, August 4, 2024

ಯಕ್ಷ ಪ್ರಶ್ನೆ 101 (Yaksha prashne 101)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  100 ಮೂರ್ಖನೆಂದರೆ ಯಾರು  ?

ಉತ್ತರ - ನಾಸ್ತಿಕ 

ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಮೂರ್ಖನು ಯಾರು? ಎಂಬುದಾಗಿ. ಅದಕ್ಕೆ ಧರ್ಮಜನ ಉತ್ತರ 'ನಾಸ್ತಿಕ' ಎಂದು. ಅಂದರೆ ಯಾರು ನಾಸ್ತಿಕನಾಗುವನೋ ಅವನು ಮೂರ್ಖ ಎಂಬುದು ಇದರ ತಾತ್ಪರ್ಯ. ಹಾಗಾಗಿ ನಾವಿಲ್ಲಿ ವಿಚಾರಿಸಬೇಕಾದ ಅಂಶ ಇಷ್ಟು - ನಾಸ್ತಿಕತೆ ಹೇಗೆ ಮೂರ್ಖತನವಾಗುತ್ತದೆ? ಎಂಬುದಾಗಿ. ಸಾಮಾನ್ಯವಾಗಿ ಮೂರ್ಖ ಎಂಬ ಶಬ್ದವನ್ನು ಹೇಗೆ ತಿಳಿದುಕೊಳ್ಳಬೇಕು? ಯಾವುದನ್ನು  ಹೇಗೆ ತಿಳಿದುಕೊಳ್ಳಬೇಕೋ ಅದನ್ನು ಹಾಗೆ ತಿಳಿದುಕೊಳ್ಳಲು  ಸಾಧ್ಯವಾಗದಿರುವವ ಎಂಬುದಾಗಿ. ಆದರೆ ಇಲ್ಲಿ ಯಕ್ಷನು, ನಾಸ್ತಿಕನಾದವನು ಮೂರ್ಖನಾಗುತ್ತಾನೆ ಎಂಬ ವಿವರಣೆಯನ್ನು ಕೊಟ್ಟಂತಿದೆ. ನಾಸ್ತಿಕತೆಯು ಹೇಗೆ ಮೂರ್ಖತನವಾಗುತ್ತದೆ? ಎಂಬುದು ಪ್ರಸ್ತುತ ವಿವರಣೆ.

ಭಾರತೀಯ ಸಂಸ್ಕೃತಿ ಎಂಬುದು ಅನೇಕ ಸಹಸ್ರ ಸಹಸ್ರಮಾನಗಳಿಂದ ಜೀವಿತವಾಗಿ ಇರುವುದು ವಿಶ್ವಾಸದ ಆಧಾರದ ಮೇಲೆ ಅಥವಾ ನಂಬಿಕೆಯ ಮೇಲೆ. ಅದಾವುದೆಂದರೆ ಕಣ್ಣಿಗೆ ಕಾಣದ, ಕಿವಿಗೆ ಕೇಳದ, ಮನಸ್ಸಿಗೂ ಗೋಚರವಾಗದ ಒಂದು ವಿಷಯ. ಅದನ್ನು ಇದೆ ಎಂದು ನಂಬಿಕೊಂಡು ಬಂದಿರುವ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ನಂಬಿಕೆಯ ಮೇಲೇ ನಿಂತಿರುವಂತದ್ದು ಭಾರತೀಯ ಸಂಸ್ಕೃತಿ. ನಂಬಿಕೆಗೆ ವಿಷಯವಿಲ್ಲ ಎಂದರೆ ಭಾರತೀಯ ಸಂಸ್ಕೃತಿಗೂ ವಿಷಯವಿಲ್ಲ. ಅನೇಕ ವೇಳೆ ನಾವು ನಮಗೆ ಕಾಣದಿರುವ, ಕೇಳದಿರುವ ವಸ್ತುವನ್ನು ನಂಬಿಕೆಯ ಆಧಾರದ ಮೇಲೆ ಒಪ್ಪಿಕೊಂಡಿರುತ್ತೇವೆ. ಇದು ಕೇವಲ ಅಂಧತನದ - ಅಜ್ಞಾನದ ವಿಷಯವಲ್ಲ. ಯಾವುದೋ ಒಂದು ವಿಷಯವನ್ನು 'ಹೌದು' ಎನ್ನಬೇಕಾದರೆ ಅದು ಹತ್ತಾರು ಜನರ ಅನುಭವಕ್ಕೆ ಬಂದಿರಬೇಕು. ಉದಾಹರಣೆಗೆ ಅಪ್ಪ ನೆಟ್ಟ ಬೀಜದಿಂದ ಕೆಲವೊಮ್ಮೆ ಮಗನು ಫಲವನ್ನು ಕಾಣುವವುದು ಉಂಟು. ಇಲ್ಲಿ ಫಲ ಬರುತ್ತದೆ ಎಂಬುದನ್ನು ಹೇಗೆ ನಂಬುದು? ಬೀಜದಿಂದ ಮತ್ತೆ ಫಲ ಬರುತ್ತದೆ ಎಂಬ ನಂಬಿಕೆ. ಹಾಗೆ ಪ್ರತಿಯೊಂದು ಕಾರ್ಯದಲ್ಲು ಒಂದು ಫಲ ಬರುತ್ತದೆ ಎಂಬುದಾಗಿ ವಿಶ್ವಶಿಸಿ ಅದನ್ನು ಕರ್ತವ್ಯ ಬುದ್ಧಿಯಿಂದ ಮಾಡುತ್ತೇವೆ. ಇದು ನಿಜವಾದ ನಂಬಿಕೆ ಅಥವಾ ವಿಶ್ವಾಸ. ಇಂತಹ ವಿಶ್ವಾಸದ ಮೇಲೆ ನಿಂತಿರುವ ಈ ಸಂಸ್ಕೃತಿಯನ್ನು ಹಾಗೆಯೇ ಅರ್ಥಮಾಡಿಕೊಳ್ಳಬೇಕಾದ ಹೊಣೆಗಾರಿಕೆ ಇದೆ. ಹಾಗಾದರೆ ಅಂತಹ ವಿಷಯ ಯಾವುದು? 

ಮನಸ್ಸು ಮೊದಲಾದ ಯಾವ ಇಂದ್ರಿಯಗಳಿಗೂ ಗೋಚರವಾಗದ ಯಾವುದೋ ಒಂದು ವಸ್ತುವಿನ 'ಇದೆ' ಎಂಬ ಭಾವಕ್ಕೆ 'ಆಸ್ತಿಕತೆ' ಎಂದು ಕರೆಯುತ್ತಾರೆ. 'ಅಸ್ತಿ' ಎಂಬುದರಿಂದ 'ಆಸ್ತಿಕ' ಎಂಬ ಶಬ್ದ ಹೇಗೆ ಬಂದಿದೆಯೋ ಹಾಗೆಯೇ 'ನಾಸ್ತಿ' ಎಂಬುದರಿಂದ 'ನಾಸ್ತಿಕ' ಎಂಬ ಶಬ್ದವು ಬಂದಿದೆ. ಅಂದರೆ ಯಾವುದು ಭೂತ, ಭವಿಷ್ಯ, ವರ್ತಮಾನವೆಂಬ ಮೂರು ಕಾಲದಲ್ಲೂ ಇರುವಂತಹ ವಿಷಯವೋ, ಅದನ್ನು ಯಾರು ಇಲ್ಲ ಎಂಬುದಾಗಿ ಹೇಳುವರೋ ಅವರನ್ನು 'ನಾಸ್ತಿಕ' ಎಂಬುದಾಗಿ ಕರೆಯಬಹುದು. ಹಾಗಾದರೆ ಮೂರೂ ಕಾಲದಲ್ಲೂ 'ಇದೆ' 'ಇದೆ' ಎಂಬ ವಿಷಯಕ್ಕೆ ಕಾರಣವಾದದು ಯಾವುದು? ಎಂದರೆ 'ಪರಬ್ರಹ್ಮತತ್ವ'. ಇದೊಂದು ನಿಜವಾದ ಅನುಭವ. ಇದೇ ನಿಜವಾದ ಶಾಂತಿ. ನೆಮ್ಮದಿ. ನಮ್ಮ ಋಷಿ-ಮಹರ್ಷಿಗಳು ಕಟಿಬದ್ಧರಾಗಿ ನಿಂತು ಇದನ್ನು ಅನುಭವಿಸಿದರು; ಅನುಭವಿಸಿ ಅದನ್ನು ಜಗತ್ತಿಗೆ ಸಾರಿದರು; ಇದನ್ನು 'ಆನಂದದ ಕಡಲು' ಎಂಬುದಾಗಿ ಕರೆದರು. ಯಾರು  ಬೇಕಾದರೂ ಅನುಭವಿಸಿಕೊಳ್ಳಿ ಎಂಬುದಾಗಿ ಕರೆಕೊಟ್ಟರು. ಆದರೆ ನಾವು ಅವಿಶ್ವಾಸದ ಕಾರಣದಿಂದ ನಾವು ಇದನ್ನು ದೂರ ಮಾಡಿಕೊಂಡೆವು ಎಂದಾದರೆ ಅದು ತಾನೇ ಮೂರ್ಖತನ? ಅಂದರೆ ನಾಸ್ತಿಕತೆಯೇ ವಸ್ತುತಃ ಮೂರ್ಖತನ ಎಂಬುದು ಇಲ್ಲಿನ ವಿಷಯವಾಗಿದೆ.

ಸೂಚನೆ : 4/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.