Showing posts with label 1307_ayvmarticle. Show all posts
Showing posts with label 1307_ayvmarticle. Show all posts

Monday, June 3, 2024

ವ್ಯಾಸ ವೀಕ್ಷಿತ 90 ನಾರದರ ಆಗಮನ – ಸುಂದ-ಉಪಸುಂದರ ಪ್ರಸ್ತಾವ (Vyasa Vikshita 90 Naradara Agamana - Sunda-Upasundara Prastava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಪೌರಕಾರ್ಯಗಳನ್ನು ಎಲ್ಲವನ್ನೂ ಕಾಲಕಾಲಕ್ಕೆ ಮಾಡುತ್ತಾ (ಎಂದರೆ ಸ್ವಕರ್ತವ್ಯಗಳನ್ನು ಸಮುಚಿತವಾಗಿ ನಿರ್ವಹಿಸುತ್ತಾ) ಪುರುಷಶ್ರೇಷ್ಠರಾದ ಪಾಂಡವರು ತಮ್ಮ ರಾಜಾಸನದಲ್ಲಿ ಕುಳಿತುಕೊಳ್ಳುತ್ತಿದ್ದರು.

ಅವರು ಹಾಗೆ ಕುಳಿತಿರಲು, ಆಕಸ್ಮಿಕವಾಗಿ ಒಮ್ಮೆ ಅವರಲ್ಲಿಗೆ ಆಗಮಿಸಿದರು, ನಾರದಮಹರ್ಷಿಗಳು. ಬಂದ ಋಷಿವರ್ಯನಿಗೆ ಯುಧಿಷ್ಠಿರನು ಪ್ರತ್ಯುದ್ಗಮನ (ಎಂದರೆ ಎದುರ್ಗೊಳ್ಳುವುದು), ಅಭಿವಾದನ (ಎಂದರೆ ವಿಹಿತವಾದ ಬಗೆಯಲ್ಲಿ ನಮಸ್ಕಾರಮಾಡುವುದು), ಆಸನ-ಪ್ರದಾನ (ಎಂದರೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು) - ಇವನ್ನು ಮಾಡಿದನು. ದೇವರ್ಷಿ-ನಾರದರು ಕುಳಿತರು. ಆಗ ಅವರ ಕೈಗೆ ಅರ್ಘ್ಯವನ್ನು (ಎಂದರೆ ಹಸ್ತ-ಶುದ್ಧಿಗಾಗಿ ಕೊಡಬೇಕಾದ ಜಲವನ್ನು) ಕೊಟ್ಟನು. ತನ್ನ ಇಡೀ ರಾಜ್ಯವನ್ನೇ ಅವರಿಗೆ ಸಮರ್ಪಿಸಿದನು.

ಯುಧಿಷ್ಠಿರನಿತ್ತ ಈ ಪೂಜೆಯಿಂದ ನಾರದರಿಗೆ ಸಂತೋಷವಾಯಿತು. ಆತನಿಗೆ ಆಶೀರ್ವಾದವಿತ್ತು, ಕುಳಿತುಕೊಳ್ಳಲು ಹೇಳಿದರು. ಅವರ ಆಣತಿಯಂತೆ

ಪೂಜ್ಯರು ಆಗಮಿಸಿರುವುದನ್ನು ಕೃಷ್ಣೆಗೆ ತಿಳಿಸಿದನು. ಅವಳು ಅಲ್ಲಿ ಶುಚಿರ್ಭೂತಳಾಗಿ ಆಗಮಿಸಿದಳು. ಅವರ ಚರಣಗಳಿಗೆ ವಂದಿಸಿದಳು. ಅಂಜಲಿ-ಬಂಧದೊಂದಿಗೆ (ಎಂದರೆ ಕೈಜೋಡಿಸಿದವಳಾಗಿ) ನಿಂತುಕೊಂಡಳು. ರಾಜಕುಮಾರಿಯಾದ ದ್ರೌಪದಿಗೆ ನಾರದರು ವಿವಿಧವಾಗಿ ಆಶೀರ್ವಾದ ಮಾಡಿದರು. ಆಮೇಲೆ, "ನೀನಿನ್ನು ಹೋಗಬಹುದು" ಎಂದು ಅವಳಿಗೆ ಸೂಚಿಸಿದರು. ಅವಳು ಒಳಗೆ ಹೋದ ಬಳಿಕ, ಏಕಾಂತದಲ್ಲಿ ಪಾಂಡವರೆಲ್ಲರನ್ನು ಕುರಿತು ನಾರದರು ಈ ಮಾತುಗಳನ್ನಾಡಿದರು:

ನಿಮ್ಮೆಲ್ಲರಿಗೂ ಪಾಂಚಾಲಿಯೊಬ್ಬಳೇ ಧರ್ಮಪತ್ನಿಯಾಗಿ ಇದ್ದಾಳಷ್ಟೆ. ತನ್ನಿಮಿತ್ತ (ಎಂದರೆ ಆ ಕಾರಣಕ್ಕಾಗಿ) ನಿಮ್ಮ ನಿಮ್ಮಲ್ಲೇ ಒಡಕು ಉಂಟಾಗಬಾರದು – ಅದಕ್ಕೆ ಸಲ್ಲುವ ರೀತಿಯಲ್ಲಿ ನೀತಿಯೊಂದನ್ನು ನೀವು ನಿಮಗಾಗಿಯೇ ನಿರ್ಮಿಸಿಕೊಳ್ಳಬೇಕು.

ಹಿಂದೆ ಸುಂದ-ಉಪಸುಂದ - ಎಂಬ ಭ್ರಾತೃಗಳಿಬ್ಬರಿದ್ದರು. ಅವರು ಸದಾ ಒಟ್ಟಿಗೇ ಇರುತ್ತಿದ್ದರು. ಮತ್ತು ಅವರು ಬೇರೆಯವರಿಗೆ ಅವಧ್ಯರಾಗಿದ್ದರು. (ಎಂದರೆ ಅವರನ್ನು ಯಾರೂ ಸಂಹರಿಸಲಾಗುತ್ತಿರಲಿಲ್ಲ). ಹಾಗೆಂಬುದಾಗಿ ಮೂರೂ ಲೋಕಗಳಲ್ಲೂ ಕೀರ್ತಿಯನ್ನೂ ಅವರು ಸಂಪಾದಿಸಿದ್ದರು. ಇಬ್ಬರಿಗೂ ಸೇರಿ ಒಂದೇ ರಾಜ್ಯ; ಇಬ್ಬರ ವಾಸವೆಂಬುದೂ ಒಂದೇ ಮನೆಯಲ್ಲಿ; ಇಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗುವರು. ಒಂದೇ ಆಸನದಲ್ಲೇ ಕುಳಿತುಕೊಳ್ಳುವರು ಕೂಡ. ಆದರೆ ಒಬ್ಬರನ್ನೊಬ್ಬರು ಸಾಯಿಸಿವುದಾಯಿತು - ತಿಲೋತ್ತಮೆಯ ಸಲುವಾಗಿ.

ಆದುದರಿಂದಲೇ ಅನ್ಯೋನ್ಯ-ಪ್ರೀತಿ-ವರ್ಧಕವಾದ ರೀತಿಯಲ್ಲಿ ನಿಮ್ಮ ಸೌಹೃದವನ್ನು (ಎಂದರೆ ಸುಹೃದ್-ಭಾವನೆಯನ್ನು, ಒಳ್ಳೆಯ ಮನಸ್ಸನ್ನು, ಸ್ನೇಹಿತರಂತೆ ಇರುವುದನ್ನು) ಇಟ್ಟುಕೊಳ್ಳಿರಿ - ಎಂದರು.

ಅವರು ಹಾಗೆ ಹೇಳಲು, ಯುಧಿಷ್ಠಿರನು ಕೇಳಿದನು: ಮಹಾಮುನಿಯೇ, ಯಾರ ಮಕ್ಕಳು ಈ ಸುಂದ-ಉಪಸುಂದರೆಂಬುವರು? ಅವರಿಬ್ಬರಲ್ಲೂ ಒಡಕು ಏತಕ್ಕಾಗಿ ಉಂಟಾಯಿತು? ಪರಸ್ಪರ ಒಬ್ಬರನ್ನೊಬ್ಬರು ಸಾಯಿಸಿದುದು ಹೇಗೆ? ಅಪ್ಸರೆಯೋ ದೇವಕನ್ಯೆಯೋ ತಿಲೋತ್ತಮೆಯೋ - ಯಾವಳಲ್ಲಿಯ ಕಾಮದಿಂದಾಗಿ ಅವರಿಬ್ಬರೂ ಪರಸ್ಪರ ಸಾಯಿಸಿಕೊಂಡರು? ಇದೆಲ್ಲವನ್ನೂ ಯಥಾವತ್ತಾಗಿ ವಿಸ್ತೃತವಾಗಿ ತಿಳಿಸಿ, ತಪೋಧನರೇ. ನಾವಿದನ್ನು ಕೇಳಬಯಸುವೆವು. ನಮಗಿದರ ಬಗ್ಗೆ ಬಹಳವೇ ಕುತೂಹಲವಾಗಿವೆ - ಎಂದನು.

ಆಗ ನಾರದರು ಹೇಳಿದರು: ಹಿಂದೆ ಮಹಾಸುರನಾದ ಹಿರಣ್ಯಕಶಿಪುವಿನ ವಂಶದಲ್ಲಿ ನಿಕುಂಭನೆಂಬ ದೈತ್ಯರಾಜನು ಜನಿಸಿದನು. ಆತನು ತೇಜಸ್ವಿಯೂ ಬಲಶಾಲಿಯೂ ಆಗಿದ್ದನು. ಆತನಿಗಿಬ್ಬರು ಮಕ್ಕಳಾದರು. ಇಬ್ಬರೂ ಮಹಾವೀರ್ಯರು. ಇಬ್ಬರೂ ಭಯಂಕರ-ಪರಾಕ್ರಮವುಳ್ಳವರು. ಜೊತೆಗೆ ಘೋರರು, ಕ್ರೂರ-ಮನಸ್ಕರು. ಅವರೇ ಸುಂದ-ಉಪಸುಂದ - ಎಂಬ ಇಬ್ಬರು ದೈತ್ಯರಾಜರು – ಎಂದು ಹೇಳಿದರು.

ಸೂಚನೆ : 2/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.