Showing posts with label 1133_ayvmarticle. Show all posts
Showing posts with label 1133_ayvmarticle. Show all posts

Monday, August 7, 2023

ಯಕ್ಷ ಪ್ರಶ್ನೆ49 (Yaksha prashne 49)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 48  ಮನುಷ್ಯನ ಆತ್ಮಾ ಯಾವುದು ?

ಉತ್ತರ - ಪುತ್ರ. 

ಶರೀರವೆಂಬ ಸಮಷ್ಟಿಯಲ್ಲಿ ಅನೇಕ ಅವಯವಗಳಿವೆ. ಕಣ್ಣು, ಕಿವಿ, ಕೈ, ಕಾಲು, ಉದರ, ಅಧರ, ಅಂತೆಲ್ಲಾ ಅವಯವಗಳಿವೆ ಈ ಶರೀರದಲ್ಲಿ. ಇವುಗಳಲ್ಲಿ ಅತ್ಯಂತ ಪ್ರಧಾನವಾದ ಅಂಗವೆಂದರೆ ಆತ್ಮಾ. ಶರೀರವು ಪಂಚಭೂತಗಳಿಂದ ಉಂಟಾದದ್ದು. ಇದು ಜಡ. ಆದರೆ ಇದಕ್ಕೆ ಚೈತನ್ಯ ಬರಬೇಕಾದರೆ ಅಲ್ಲಿ ಜೀವ ಬರಬೇಕು. ಜೀವವಿಲ್ಲದಿದ್ದರೆ ಅದೊಂದು ಮುದ್ದೆ ಅಷ್ಟೆ. ಗರ್ಭೋಪನಿಷತ್ತು ಹೇಳುವಂತೆ 'ಪಂಚಮೇ ಮಾಸಿ ಜೀವಸಂಯುಕ್ತೋ ಭವತಿ' ತಾಯಿಯ ಗರ್ಭವನ್ನು ಪ್ರವೇಶಿಸಿದ ಒಂದು ಬಿಂದುವು ಬೆಳೆಯುತ್ತಾ ಇರುತ್ತದೆ. ಐದನೆಯ ಮಾಸದಲ್ಲಿ ಜೀವವು ಆ ಚರ್ಮದ ಮುದ್ದೆಯೊಳಗೆ ಸೇರಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಆ ಪಿಂಡವು ಚಲನೆಯನ್ನು ಪಡೆಯುತ್ತದೆ ಎಂದು. ಅಂದರೆ ಶರೀರದಲ್ಲಿ ಆತ್ಮಕ್ಕೇ ಪ್ರಧಾನವಾದ ಸ್ಥಾನ. ಹೇಗೆ ಶರೀರದಲ್ಲಿ ಆತ್ಮಕ್ಕೆ ಪ್ರಧಾನ ಸ್ಥಾನವಿದೆಯೋ ಅಂತೆಯೇ ಕುಟುಂಬ ಎಂಬ ವ್ಯವಸ್ಥೆಗೆ ಪುತ್ರನು ಪ್ರಧಾನನಾಗುತ್ತಾನೆ. ಇದೇ ಆಶಯ ಯಕ್ಷನ ಮನುಷ್ಯನ ಆತ್ಮಾ ಯಾವುದು? ಎಂಬ ಈ ಪ್ರಶ್ನೆಯಲ್ಲಿ. ಜೀವಕೋಟಿಗಳಲ್ಲಿ ಮನುಷ್ಯನಿಗೆ ಶ್ರೇಷ್ಠತೆಯಿದೆ. ಆ ಹಿನ್ನೆಲೆಯಲ್ಲಿ ಮನುಷ್ಯನ ಆತ್ಮಾ ಯಾವುದು ? ಎಂಬ ಪ್ರಶ್ನೆಯನ್ನು ಯಕ್ಷನು ಕೇಳುತ್ತಾನೆ. 

'ತತ್ಸೃಷ್ಟ್ವಾ ತದೇವಾನುಪ್ರಾವಿಶತ್' ಭಗವಂತನಿಗೆ ತನ್ನನ್ನು ತಾನು ವಿಸ್ತಾರಪಡಿಸಿಕೊಳ್ಳಬೇಕೆಂದು ಅನಿಸಿತು. ಆಗ ತನ್ನನ್ನೇ ಎರಡಾಗಿ ವಿಭಾಗಿಸಿಕೊಂಡ. ಪ್ರಕೃತಿ-ಪುರುಷ ರೂಪದಿಂದ ಮುಂದಕ್ಕೆ ಈ ಸಮಸ್ತ ಪ್ರಪಂಚವನ್ನು ಸೃಷ್ಟಿಸಿಕೊಂಡ. ಹೀಗೆ ಈ ವಿಶ್ವದಲ್ಲಿ ಎಲ್ಲೆಲ್ಲೂ ಆ ಪರಮಪುರುಷನೇ ಸೇರಿಕೊಂಡಿದ್ದಾನೆ. ಅಲ್ಲಿಂದ ಆರಂಭವಾದ ಸೃಷ್ಟಿವ್ಯಾಪಾರವು ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಪುರುಷರೂಪನಾದ ಪತಿಯು ತನ್ನ ಪತ್ನಿಯಲ್ಲಿ ಸೇರಿಕೊಂಡು ಮುಂದಕೆ ತಾನೇ ಪುತ್ರರೂಪದಿಂದ ಈ ಸೃಷ್ಟಿಗೆ ಬರುತ್ತಾನೆ 'ಆತ್ಮಾ ವೈ ಪುತ್ರನಾಮಾಸಿ' ಎಂದು ವೇದವು ಹೇಳುವಂತೆ. ಸಂಸಾರದಲ್ಲಿ ಪುತ್ರನ ಸ್ಥಾನ ಇಷ್ಟು ಮುಖ್ಯವಾಗಿದೆ. ಇಲ್ಲಿ ಪುತ್ರ ಎಂದು ಹೇಳಿದರೆ ಹಾಗಾದರೆ ಪುತ್ರಿಯ ಸ್ಥಾನ ಅಷ್ಟೊಂದು ಮಹತ್ತ್ವದ್ದಲ್ಲವೇ? ಎಂಬ ಪ್ರಶ್ನೆ ಬರಬಹುದು. ಅವಳಿಗೆ ಪ್ರಾಮುಖ್ಯವಿಲ್ಲ ಎಂಬ ಅರ್ಥದಲ್ಲಿ ಈ ಮಾತು ಬಂದಿದ್ದಲ್ಲ. ಒಂದು ಮನೆಯ ಸಂತತಿ ಮುಂದುವರಿಯಬೇಕಾದರೆ ಅದೇ ಮನೆಯ ಮಗನಿಗೆ ಬೇರೆಯವರ ಮನೆಯಲ್ಲಿ ಹುಟ್ಟಿದ ಕನ್ಯೆಯನ್ನು ವಿವಾಹ ಮಾಡಿಕೊಡುತ್ತಾರೆ. ಅಲ್ಲಿ ಬರುವ ಸಂತತಿಗೆ ಆ ಮನೆಯ ರೀತಿನೀತಿಗಳೇ ಬರುತ್ತವೆ. ಅವನನ್ನು ಗುರುತಿಸುವಾಗ ತಂದೆಯ ಮನೆಯ ಸಂಬಂಧದಿಂದಲೇ. ಕನ್ಯೆಗಾದರೋ ತಾಯಿಯ ಮನೆಯಿಂದ ಗಂಡನ ಮನೆಗೆ ಬರುವುದರಿಂದ ಎರಡರ ಸಂಬಂಧವನ್ನೂ ಗುರುತಿಸಲಾಗುತ್ತದೆ. ಹಾಗಾಗಿ ಕುಟುಂಬ ಮುಂದುವರಿಯಲು ಪುರುಷನದ್ದೇ ಪಾತ್ರ ಹೆಚ್ಚಿನದ್ದು. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ಒಬ್ಬ ಪುತ್ರನು ಬೇಕು ಎಂಬುದನ್ನು ಬಯಸುತ್ತಾರೆ. ಅವರವರ ಮನೆಯಲ್ಲಿ ಭಗವಂತನ ಅಂಶವು ಬೆಳೆಯಲು ಪುರುಷನು ಕಾರಣವಾದರೆ, ಬೆಳೆಸಲು ಸ್ರ್ತೀಯು ಕಾರಣವಾಗುತ್ತಾಳೆ. ಬೆಳೆಯುವುದು ಪುರುಷಧರ್ಮ. ಬೆಳೆಸುವುದು ಸ್ತ್ರೀಧರ್ಮ. ಅದಕ್ಕಾಗಿ ಪುತ್ರನನ್ನು ಶರೀರದ ಆತ್ಮಾ ಎಂಬುದಾಗಿ ಭಾವಿಸುತ್ತಾರೆ. 

ಸೂಚನೆ : 6/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.