Monday, June 15, 2026

ಪ್ರಶ್ನೋತ್ತರ ರತ್ನಮಾಲಿಕೆ 70 (Prasnottara Ratnamalike 70)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಮನುಷ್ಯ ಬಹಳ ಹಗುರವಾಗುವುದು ಯಾವಾಗ?

ಅಧರ್ಮರಲ್ಲಿ ಯಾಚನೆ ಮಾಡಿದಾಗ.


ಮನುಷ್ಯ ಹಗುರವಾಗುವುದು ಎಂದರೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಅಥವಾ ತನಗೆ ಇರುವ ಮೌಲ್ಯವನ್ನು ಕಳೆದುಕೊಳ್ಳುವುದು ಎಂದರ್ಥ. ಅಂದರೆ ತನಗೆ ಬೇಕಿರುವ ಯಾವುದೋ ಒಂದು ವಸ್ತುವನ್ನು ಒಬ್ಬ ಅಧರ್ಮಿಯಲ್ಲಿ ಅಥವಾ ದುಷ್ಟನಲ್ಲಿ ಬೇಡಿ ಪಡೆದುಕೊಂಡರೆ ಆಗ ಪಡೆದುಕೊಂಡವನ ವ್ಯಕ್ತಿತ್ವವು ನಾಶವಾಗುತ್ತದೆ. ಆ ಮನುಷ್ಯ ಹಗುರವಾಗುತ್ತಾನೆ ಎಂಬ ಅರ್ಥವನ್ನು ಈ ಉತ್ತರ ನೀಡುತ್ತಿದೆ.


ಇಲ್ಲಿ ನಾವು ಗಮನಿಸಬೇಕಾದ ವಿಷಯ ಇಷ್ಟು - ಮಾಡಿದ ಯಾಚನೆಯಿಂದ ಹೇಗೆ ವ್ಯಕ್ತಿ ಹಗುರವಾಗುತ್ತಾನೆ ಎಂಬುದನ್ನು. ನಾವು ನಮಗೆ ಬೇಕಾದ ವಸ್ತುವನ್ನು ಇನ್ನೊಬ್ಬರಿಂದ ಪಡೆಯಬೇಕು; ಅದಕ್ಕೆ ಯಾಚನೆ ಅಥವಾ ಭಿಕ್ಷೆ ಎಂಬುದಾಗಿ ಕರೆಯಲಾಗಿದೆ. ಹಿಂದಿನ ಕಾಲದಲ್ಲಿ ಭಿಕ್ಷೆಯನ್ನು ಬೇಡುವ ಪದ್ಧತಿ ಇತ್ತು. ಭಿಕ್ಷೆಯನ್ನು ಬೇಡುವಾಗ ಒಳ್ಳೆಯ ಗೃಹಸ್ಥರಲ್ಲಿ ಬೇಡಬೇಕು. ಒಂದು ವೇಳೆ ಆ ಗೃಹಸ್ಥನು ಒಳ್ಳೆಯವನಾಗದಿದ್ದರೆ ಅಥವಾ ಅವನಲ್ಲಿ ದೋಷವಿದ್ದರೆ ಆಗ ಭಿಕ್ಷೆಯನ್ನು ಬೇಡಬಾರದು ಎಂಬುದಾಗಿ ನಿಯಮವಿದೆ. ಏಕೆಂದರೆ ಆ ಗೃಹಸ್ಥನಲ್ಲಿರುವ ಅಥವಾ ಆ ವ್ಯಕ್ತಿಯಲ್ಲಿರುವ ದೋಷವು ಅವನಿಂದ ಪಡೆದ ವಸ್ತುವಿನ ಮೂಲಕ ಬೇಡಿದವನಿಗೆ ಸಂಕ್ರಾಂತವಾಗುತ್ತದೆ. ಆಗ ಬೇಡಿದವನು ಕೂಡ ಆ ದೋಷವನ್ನು ಉಣ್ಣಬೇಕಾಗುತ್ತದೆ. ಹಾಗಾಗಿ ಯಾಚನೆಯನ್ನು ಎಂತಹ ವ್ಯಕ್ತಿಯಲ್ಲಿ ಮಾಡಬೇಕು ಎಂಬುದು ಗಂಭೀರವಾದದ್ದು. ಕಾಳಿದಾಸನು ಮೇಘದೂತ ಎಂಬ ಕಾವ್ಯದಲ್ಲಿ ಒಂದು ಮಾತನ್ನು ಹೇಳುತ್ತಾನೆ - “ಯಾಞಚ್ನಾ  ಮೋಘಾ ವರಮ್ ಅಧಿಗುಣೇ ನಾಧಮೇ ಲಬ್ಧಕಾಮಾ” ಎಂದು. ಅಂದರೆ ಕೆಟ್ಟವರಲ್ಲಿ ಕೇಳಿದ್ದು ಸಿಗುವುದಕ್ಕಿಂತ ಒಳ್ಳೆಯವರಲ್ಲಿ ಕೇಳಿದ್ದು ಸಿಗದಿರುವುದೇ ಲೇಸು ಎಂದು. ಕೇಳಬೇಕಾದದ್ದು ಶ್ರೇಷ್ಠರಲ್ಲಿ. ಅಪೇಕ್ಷಿತವಾದ ಪದಾರ್ಥವನ್ನು ಅಂಥವರಿಂದಲೇ ಪಡೆಯಬೇಕು. ಏಕೆಂದರೆ ಪದಾರ್ಥಗಳು ದೋಷವನ್ನು ಅಥವಾ ಗುಣವನ್ನು ದಾಟಿಸುತ್ತವೆ ಎಂಬ ಶ್ರೀರಂಗ ಮಹಾಗುರುಗಳ ಮಾತಿನ ಸಾರವನ್ನು ನಾವಿಲ್ಲಿ ಸ್ಮರಿಸಿಕೊಳ್ಳಬೇಕು.

ಯಾಚನೆ ಅಥವಾ ಭಿಕ್ಷೆ ಎಂಬ ವ್ಯಾಪಾರದಲ್ಲಿ ಪದಾರ್ಥವು ಒಬ್ಬರಿಂದ ಒಬ್ಬರಿಗೆ ಬದಲಿಸಲ್ಪಡುತ್ತದೆ. ಆಗ ಆ ಪದಾರ್ಥದ ಮೂಲಕ ಅವನ ಗುಣದೋಷಗಳೂ ಕೂಡ ಸಂಕ್ರಾಂತವಾಗುತ್ತವೆ. ಇದೇ ನೇರದಲ್ಲಿ ದಾನ ಎಂಬ ಅತ್ಯಂತ ಪುಣ್ಯತಮವಾದ ಕಾರ್ಯವು ಕೂಡ ನಮ್ಮ ಸಂಪ್ರದಾಯದಲ್ಲಿ ಬಂದಿದೆ ಕೂಡ.  ದಾನ ಮಾಡುವುದರಿಂದ ನಮ್ಮ ಪಾಪವು ಪರಿಹಾರವಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಅಂದರೆ ಆ ಪಾಪವು ಆ ವಸ್ತುವಿನ ಮೂಲಕ ದಾಟಿದಾಗ ಮಾತ್ರ ಅವನು ನಿಷ್ಪಾಪಿಯಾಗುತ್ತಾನೆ!. ಆದ್ದರಿಂದ ವಸ್ತುವನ್ನು ಪಡೆಯುವಾಗ ಈ ಹಿನ್ನೆಲೆಯಲ್ಲಿ ಈ ಮಾರ್ಮಿಕವಾದ ವಿಷಯವನ್ನು ಅರ್ಥ ಮಾಡಿಕೊಂಡು ಇರಬೇಕು ಎಂಬ ತತ್ವ ಇಲ್ಲಿ ಅಡಗಿದೆ. ಸಂಪ್ರದಾಯದಲ್ಲಿ ಗೃಹಸ್ಥರಿಗೆ ಮಾತ್ರ ಸಂಪಾದಿಸಲು ಅರ್ಹತೆ ಇದೆ. ಉಳಿದ ಆಶ್ರಮಗಳಾದ ಬ್ರಹ್ಮಚಾರಿ ಮತ್ತು ಸನ್ಯಾಸಿಗಳಿಗೆ ಸಂಪಾದಿಸಿದವರ ಸಂಪತ್ತನ್ನು ಅಥವಾ ಪದಾರ್ಥವನ್ನು ವಿನಿಯೋಗಿಸುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈ ಭಿಕ್ಷೆ ಅಥವಾ ಯಾಚನೆ ಎಂಬ ಉತ್ಕೃಷ್ಟವಾದ ಪದ್ಧತಿ ಬಂದಿದೆ. ಹಾಗಾಗಿ ಈ ಯಾಚನೆಯಲ್ಲಿ ಈ ಒಂದು ಗಂಭೀರವಾದ ವಿಷಯವನ್ನು ಮನನ ಮಾಡಿಕೊಂಡಿರಬೇಕು ಎಂಬ ಸಂದೇಶ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.


ಸೂಚನೆ : 14
/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.