Sunday, May 28, 2023

ವ್ಯಾಸ ವೀಕ್ಷಿತ - 39 ಗಂಧರ್ವನು ಹೇಳಿದ ರಂಜಕ ಕಥೆ (Vyaasa Vikshita - 39 Gandharvanu Helida Ranjaka Kathe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಪಾಂಡವರನ್ನು ತಾನು ಕೆಣಕಿದುದರ ಕಾರಣವನ್ನು ತಿಳಿಸುತ್ತಾ, ಗಂಧರ್ವನು ಹೀಗೆಂದನು.  

ರಾಜನು ಹೇಗಿರಬೇಕು? – ಎಂಬುದನ್ನು ಹೇಳುತ್ತೇನೆ, ಕೇಳು. ತಾನು ಯಾವುದನ್ನಿನ್ನೂ ಪಡೆದಿಲ್ಲವೋ ಅದನ್ನುಆತನು ಪಡೆಯಬೇಕಷ್ಟೆ. ಅದಕ್ಕಾಗಿ, ಗುಣಭರಿತನಾದ ಪುರೋಹಿತನೊಬ್ಬನನ್ನು ರಾಜನಾದವನು ಮಾಡಿಕೊಂಡಿರಬೇಕು. ಪಡೆದುದನ್ನು ಪರಿರಕ್ಷಿಸಲೂ ಅದುವೇ ಬೇಕಾದದ್ದು. ತನಗೆ ಭೂತಿಯು (ಎಂದರೆ ಸಮೃದ್ಧಿಯು) ಬೇಕೆನ್ನುವುದಾದರೆ, ಆ ಪುರೋಹಿತನ ಅಭಿಪ್ರಾಯದಂತೆ ನಡೆಯಬೇಕು.

ಹಾಗೆಯೇ ಸಾಗರಾಂಬರಳಾದ ಇಡೀ ಭೂಮಿಯನ್ನು (ಎಂದರೆ ಸಮುದ್ರ-ವಸ್ತ್ರಳಾದ ಧರೆಯನ್ನು, ಅರ್ಥಾತ್ ಸಾಗರ-ಪರ್ಯಂತವಾದ ಭೂ-ಮಂಡಲವನ್ನು) ಎಲ್ಲ ರೀತಿಯಿಂದಲೂ ಪಡೆಯಬೇಕೆಂಬ ಅಪೇಕ್ಷೆಯಿದ್ದಲ್ಲಿ, ಹೀಗೆ ಮಾಡತಕ್ಕದ್ದು: ಯಾವನೇ ಭೂಪತಿಯಿರಲಿ, ಆತನು ಗುಣ-ಸಾಮರ್ಥ್ಯ-ಸಂಪನ್ನನಾದ ಪುರೋಹಿತನ ಜೊತೆಗಾರಿಕೆಯನ್ನು ಹೊಂದಿರಬೇಕು; ಹಾಗಿಲ್ಲದೆ, ಕೇವಲ ಶೌರ್ಯದಿಂದಲೇ ಭೂಮಿ-ಜಯವನ್ನು ಪಡೆದುಕೊಂಡುಬಿಡಲಾರನೇ ಸರಿ; ಅಷ್ಟೇ ಅಲ್ಲ, ಕೇವಲ ಅಭಿಜನದಿಂದಲೇ (ಎಂದರೆ ಸದ್ವಂಶದಲ್ಲಿ ಜನಿಸುವಿಕೆಯಿಂದಲೇ) ಆಗಲಿ, ಅದನ್ನು ಪಡೆಯಲಾರ, ಓ ತಾಪತ್ಯನೇ, ಓ ಕುರುವಂಶವರ್ಧಕನೇ! ಬದಲಾಗಿ, ಪುರೋಹಿತನನ್ನು ಪ್ರಧಾನನನ್ನಾಗಿ ಯಾವನು ಹೊಂದಿರುವನೋ ಅವನೇ ದೀರ್ಘಕಾಲ ಪರ್ಯಂತ ರಾಜ್ಯವನ್ನು ಪಾಲಿಸಲು ಸಮರ್ಥನಾಗುವುದು. (ಈ ವಿಷಯದಲ್ಲಿ ಪಾಂಡವರು ಎಚ್ಚರವಾಗಿರಲಿಲ್ಲವೆಂಬುದನ್ನು ಈ ಮೂಲಕ ಸೂಚಿಸಿದನೆಂದರ್ಥ).  ಹೀಗೆಂದು ಹೇಳಿ ಗಂಧರ್ವನು ತನ್ನ ಮಾತನ್ನು ಮುಗಿಸಿದನು.

ಆಗ ಅರ್ಜುನನು ಆತನನ್ನು ಹೀಗೆ ಕೇಳಿದನು: "ಅಯ್ಯಾ ಗಂಧರ್ವನೇ, ನನ್ನ ಪ್ರಶ್ನೆಗೆ ಉತ್ತರಿಸುವಾಗ ನನ್ನನ್ನು ಮೂರು ಬಾರಿ ನೀನು "ತಾಪತ್ಯ" ಎಂದು ಸಂಬೋಧಿಸಿದ್ದೀಯೆ. ತಾಪತ್ಯ ಎಂಬುದಕ್ಕೆ ಏನು ಅರ್ಥ?  ನಾವು ಕುಂತಿಯ ಮಕ್ಕಳು. ನಮ್ಮನ್ನು ಆ ಕಾರಣಕ್ಕಾಗಿ "ಕೌಂತೇಯ" ಎಂದು ಎಲ್ಲರೂ ಕರೆಯುವರು. ತಾಪತ್ಯ ಎಂಬ ಪದಕ್ಕೆ 'ತಪತೀ' ಎನ್ನುವವಳ ಪುತ್ರ - ಎಂದರ್ಥ. ಯಾರು ಆ ತಪತಿ ಎಂಬುವಳು?" ಎಂದನು.

ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಆ ಗಂಧರ್ವನು ಹೇಳಿದನು: "ಇದೊಂದು ಮನೋರಮವಾದ (ಎಂದರೆ ರಂಜಕವಾದ) ಕಥೆ. ಇದನ್ನು ಯಥಾವತ್ತಾಗಿ (ಎಂದರೆ ಇರುವುದನ್ನು ಇರುವಂತೆಯೇ) ತಿಳಿಸುತ್ತೇನೆ. ಬುದ್ಧಿಶಾಲಿಗಳಲ್ಲಿ ಶ್ರೇಷ್ಠನಾದ ಪಾರ್ಥನೇ, ಏಕಮನಸ್ಕನಾಗಿ ಕೇಳು.

ಆಕಾಶದಲ್ಲಿ ಉದಯಿಸಿ ತನ್ನ ತೇಜಸ್ಸಿನಿಂದ ಸ್ವರ್ಗಪರ್ಯಂತವೂ ಯಾವನು ವ್ಯಾಪಿಸಿರುವನೋ, ಅಂತಹ ಆ ಸೂರ್ಯನಿಗೆ ತಪತೀ ಎಂಬ, ತಕ್ಕವಳಾದ ಪುತ್ರಿಯಿದ್ದಳು. ದೇವವಿವಸ್ವಂತನ ಮಗಳಾದ್ದರಿಂದ ಸಾವಿತ್ರಿಯ ತಂಗಿಯೂ ಹೌದು. ತಪಸ್ಸಿನಿಂದ ಕೂಡಿದ್ದವಳಾದ್ದರಿಂದಲೇ 'ತಪತೀ' ಎನಿಸಿಕೊಂಡಳು. ದೇವತೆಯಾಗಲಿ ಆಸುರಿಯಾಗಲಿ, ಯಕ್ಷಿಯಾಗಲಿ ರಾಕ್ಷಸಿಯಾಗಲಿ ಅವಳಂತಹ ರೂಪವನ್ನು ಹೊಂದಿದ್ದವಳು ಯಾವಳೊಬ್ಬಳೂ ಇರಲಿಲ್ಲ. ಅವಳ ಅಂಗಗಳು ಅನವದ್ಯವಾಗಿದ್ದವು (ಎಂದರೆ ದೋಷರಹಿತವಾಗಿದ್ದವು. ಅವದ್ಯವೆಂದರೆ ದೋಷ), ಸುವಿಭಕ್ತವಾಗಿದ್ದವು. (ಯಾವ ಭಾಗವು ಎಷ್ಟಿರಬೇಕೋ ಅಷ್ಟೇ ಇರುತ್ತಿತ್ತು). ಅವಳ ಕಣ್ಣುಗಳು ಕಪ್ಪಾಗಿದ್ದು ವಿಶಾಲವಾಗಿದ್ದವು. ಅವಳ ಆಚಾರವು ಚೆನ್ನಾಗಿದ್ದಿತು. ಸ್ವತಃ ಸಾಧುಸ್ವಭಾವ; ಅವಳ ವೇಷವೂ ಹೃದ್ಯವಾಗಿರುತ್ತಿತ್ತು. ರೂಪದಲ್ಲಾಗಲಿ, ಶೀಲದಲ್ಲಾಗಲಿ, ಗುಣದಲ್ಲಾಗಲಿ, ವಿದ್ಯೆಯಲ್ಲಾಗಲಿ, ಅವಳಿಗೆ ಸರಿಸಮನಾದ ವರನು ಮೂರುಲೋಕದಲ್ಲೂ ಇರಲಾರನೆಂದೇ ಸೂರ್ಯನು ಭಾವಿಸಿದನು.

ಆದರೆ ಮಗಳು ಯೌವನಕ್ಕೆ ಬಂದಿದ್ದಾಳೆ; ಅವಳನ್ನು ಯೋಗ್ಯವರನಿಗೆ ಮದುವೆಮಾಡಿಕೊಡಬೇಕು - ಎಂದು ಸೂರ್ಯನು ಚಿಂತಾಕುಲನಾದ. ಹೀಗೆ ಚಿಂತೆಯಲ್ಲಿರುವ  ಸೂರ್ಯನಿಗೆ ನೆಮ್ಮದಿಯೆಲ್ಲಿ ದೊರೆತೀತು?

ಸೂಚನೆ : 28/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.