Sunday, May 7, 2023

ಅಷ್ಟಾಕ್ಷರೀ​ - 34 ದಾಮ್ಯತ ದತ್ತ ದಯಧ್ವಮ್ (Astakshara Darshana 34 Damyata Datta Dayadhvam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಕಳೆದ ಶತಮಾನದ ಒಬ್ಬ ಪ್ರಧಾನ ಆಂಗ್ಲಕವಿ ಟಿ. ಎಸ್. ಎಲಿಯಟ್, ನೊಬೆಲ್ ಪ್ರಶಸ್ತಿಗೆ ಪಾತ್ರನಾದವನು. ಆತನು ಬರೆದ "ದಿ ವೇಸ್ಟ್-ಲ್ಯಾಂಡ್" ಕವಿತೆ ಸುಪ್ರಸಿದ್ಧ. ಇಪ್ಪತ್ತನೆಯ ಶತಮಾನದ ಅತಿಮುಖ್ಯವಾದ ಕವನಗಳಲ್ಲಿ ಅದೊಂದೆಂದು ಪರಿಗಣಿತವಾಗಿದೆ.  ಪಂಚಭಾಗಗಳಿಂದ ಕೂಡಿದ ಆ ಪದ್ಯದ ಪಂಚಮಭಾಗ: "ಗುಡುಗು ನುಡಿದುದೇನು?"

ಅದರ ಕೊನೆಯೆರಡು ಸಾಲುಗಳೆಂದರೆ,  ದತ್ತ-ದಯಧ್ವಂ- ದಾಮ್ಯತ; ಮತ್ತು  ಶಾಂತಿ-ಶಾಂತಿ-ಶಾಂತಿ.  ಇಲ್ಲಿಯ ಆರು ಸಂಸ್ಕೃತಪದಗಳಲ್ಲಿ ಕೊನೆಯ ಮೂರು ಪದಗಳನ್ನು ಯಾವ ಭಾರತೀಯ ಕೇಳಿರುವುದಿಲ್ಲ? "ಶಾಂತಿ"ಯು ಎಲ್ಲ ಭಾರತೀಯ ಭಾಷೆಗಳಲ್ಲೂ ಇರುವಂತಹುದೇ. ಅದರ ಹಿಂದಿನ ಮೂರೂ ಸಂಸ್ಕೃತಪದಗಳೂ ಕ್ರಿಯಾಪದಗಳೇ.

ಎಲ್ಲಿಯ ಪದಗಳಿವು? ಅವಕ್ಕೇನರ್ಥ? - ಎಂಬ ಪ್ರಶ್ನೆಗಳು ಸಹಜವೇ. ಉಪನಿಷತ್ತುಗಳಲ್ಲೆಲ್ಲಾ ಅತ್ಯಂತ ಬೃಹತ್ತಾದ ಬೃಹದಾರಣ್ಯಕೋಪನಿಷತ್ತಿನಲ್ಲಿ ಒಟ್ಟಿಗೇ ಬಂದಿರುವ ಪದಗಳಿವು. (ಅಲ್ಲೂ ಐದನೆಯ ಅಧ್ಯಾಯದಲ್ಲೇ ಬಂದಿರುವುದನ್ನು ಪ್ರತಿಧ್ವನಿಸಲೋ ಎಂಬಂತೆ ಎಲಿಯಟ್ ಸಹ ತನ್ನ ಪದ್ಯದ ಐದನೆಯ ಭಾಗದಲ್ಲಿ ಈ ಸಾಲುಗಳನ್ನು ಬಳಸಿದ್ದಾನೆ).

"ಶಾಂತಿ-ಶಾಂತಿ-ಶಾಂತಿ"ಯ ಪುನರುಕ್ತಿ ಇಲ್ಲಿ ಪ್ರಸ್ತುತವೇ ಸರಿ. ಏಕೆ? ಪ್ರಥಮ-ವಿಶ್ವಮಹಾಯುದ್ಧವು ಮುಗಿದು ಆಗಿನ್ನೂ ಮೂರು ವರ್ಷಗಳಷ್ಟೇ ಆಗಿದ್ದಾಗ ಎಲಿಯಟ್ ಬರೆದ ಪದ್ಯವಿದು. ಆ ಕದನದಲ್ಲಿ ಮರಣಿಸಿದ ಮಂದಿ ೪ ಕೋಟಿಗೆ ಕಡಿಮೆಯಿಲ್ಲ! ಜಗತ್ತಿಗೆ ಶಾಂತಿಸಂದೇಶವನ್ನು ಎಂದಿನಿಂದಲೂ ನೀಡುತ್ತ ಬಂದಿರುವುದು ಭಾರತವೇ - ಎಂಬುದು ಎಲಿಯಟ್ಟಿಗೆ ಗಟ್ಟಿಯಾಗಿದ್ದ ಅಂಶವೇ. ಏಕೆ? ಗೀತೆಯನ್ನು ಮೂಲಸಂಸ್ಕೃತದಲ್ಲೇ ಓದಿದ್ದವ ಆತ; ಪಾತಂಜಲಯೋಗಸೂತ್ರದ ಪಾಠವೂ ಹಾರ್ವರ್ಡಿನ ಉತ್ತಮಪ್ರಾಧ್ಯಾಪಕರಿಂದಲೇ ಆತನಿಗಾಗಿತ್ತು! ಎಂದೇ ಆತನ ಬಾಯಲ್ಲಿಈ ಮಾತು ಸಹಜವೇ ಸರಿ.

ಬೃಹದಾರಣ್ಯಕೋಪನಿಷತ್ತಿನಲ್ಲಿ ಬಂದಿರುವುದೇನು? ಒಂದು ಕಿರುಕಥೆ. ದೇವತೆಗಳು, ಮನುಷ್ಯರು, ಹಾಗೂ ಅಸುರರು - ಇವರು ಮೂವರೂ ಪ್ರಜಾಪತಿಯ ಮಕ್ಕಳು. ವಿದ್ಯಾರ್ಜನೆಗಾಗಿ ಆತನಲ್ಲಿಯೇ ಬ್ರಹ್ಮಚರ್ಯದಲ್ಲಿದ್ದವರು. ತಮಗೆ ಉಪದೇಶ ನೀಡಬೇಕೆಂದು ಆತನನ್ನು ದೇವತೆಗಳು ಕೇಳಿಕೊಂಡರು. ಅವರಿಗಾಗ ಗುಡುಗಾಗಿ ತೋರಿ, 'ದ' ಎಂಬ ಒಂದಕ್ಷರವನ್ನು ಪ್ರಜಾಪತಿ ಅವರಿಗೆ ಬೋಧಿಸಿದ. "ಅರ್ಥವಾಯಿತೇ?" ಎಂದು ಕೇಳಿದ. ನೀನು ಹೇಳಿದುದು "ದಾಮ್ಯತ" ಎಂದಲ್ಲವೆ? - ಎಂದರವರು. ಹೌದೆಂದ ಪ್ರಜಾಪತಿ.

ಆಮೇಲೆ ಮನುಷ್ಯರೂ ಹಾಗೆಯೇ ಕೇಳಲಾಗಿ ಅವರಿಗೂ 'ದ' ಎಂದೇ ಗುಡುಗಿದ. ನೀ ಹೇಳಿದುದು 'ದತ್ತ' ಎಂದಲ್ಲವೇ? ಎಂದವರೆಂದರು. ಹೌದೆಂದ ಪ್ರಜಾಪತಿ.

ಕೊನೆಯದಾಗಿ ಅಸುರರಿಗೂ 'ದ' ಎಂದೇ ಗುಡುಗಿದುದು. 'ದಯಧ್ವಮ್' ಎಂದಲ್ಲವೇ? - ಎಂದರವರು. ಹೌದೆಂದ.

ಪ್ರಜಾಪತಿಯು ಮೂವರಿಗೆ ಹೇಳಿದುದೂ ಒಂದೇ ಅಕ್ಷರವೇ. ಆದರೂ ತಮತಮಗೆ ಯುಕ್ತವಾದ ರೀತಿಯಲ್ಲಿ ಅವರವರು ಅರ್ಥಮಾಡಿಕೊಂಡರು. ದೇವತೆಗಳು 'ದಾಮ್ಯತ' ಎಂದುಕೊಂಡರು (ಹಾಗೆಂದರೆ 'ದಮವನ್ನು ಸಂಪಾದಿಸಿಕೊಳ್ಳಿ' ಎಂದು). ಮನುಷರು 'ದತ್ತ' ಎಂದು ತೆಗೆದುಕೊಂಡರು (ಹಾಗೆಂದರೆ 'ದಾನ ಮಾಡಿ' ಎಂದು). ಅಸುರರು 'ದಯಧ್ವಮ್' - ಎಂದು ಭಾವಿಸಿದರು (ಹಾಗೆಂದರೆ 'ದಯೆ ತೋರಿ' ಎಂದು). (ಎಲಿಯಟ್-ಪದ್ಯದಲ್ಲಿ ಕ್ರಮವ್ಯತ್ಯಯವಾಗಿದೆ).

ದೇವತೆಗಳಿಗೆ ಭೋಗಬುದ್ಧಿಯು ಹೆಚ್ಚು; ಅತಿಭೋಗ-ಲಾಲಸೆಯು ಪತನಕ್ಕೇ ದಾರಿಯಲ್ಲವೇ? ದಮವ್ರತವು (ಎಂದರೆ ಇಂದ್ರಿಯ-ಸಂಯಮವು) ಅವರಿಗವಶ್ಯ. ಮನುಷ್ಯರಲ್ಲಿ ಲೋಭ ಹೆಚ್ಚು; ಲೋಭವು ಪಾಪಗಳಿಗೆ ಹೆದ್ದಾರಿ; ಆದ್ದರಿಂದ ದಾನವ್ರತವು ಅವರಿಗುಪಕಾರಿ. ಅಸುರರಿಗೆ ಬಲ ಹೆಚ್ಚು; ಆದರವರ ಬಲವೆಲ್ಲ ಪರಪೀಡನಕ್ಕಾಗಿ! ಎಂದೇ ದಯಾವ್ರತವು ಅವರಿಗುದ್ಧಾರಕ.

ದೇವತೆಗಳಲ್ಲಿ ಸತ್ತ್ವಗುಣ ಹೆಚ್ಚು; ಮನುಷ್ಯರಲ್ಲಿ ರಜೋಗುಣ; ಅಸುರರಲ್ಲಿ ತಮೋಗುಣ. ಪ್ರಕೃತಿಯೆಲ್ಲಾ ಈ ತ್ರಿಗುಣಗಳ ಆಟವೇ. ಅದನ್ನು ಮೀರದೆ ಮುಕ್ತಿಯಿಲ್ಲ; ಮೀರುವುದಾದರೂ  ತ್ರಿಗುಣಸಾಮ್ಯವನ್ನು ಸಾಧಿಸಿದಾಗಲೇ - ಎಂದು ಶ್ರೀರಂಗಮಹಾಗುರುಗಳು ಯೋಗದೃಷ್ಟಿಯಿಂದ ಪ್ರತಿಪಾದಿಸುತ್ತಿದ್ದರು: ದ-ದ-ದ-ಗಳ ಪಾತ್ರವಿಲ್ಲಿದೆ.

ನಮ್ಮ ನಾಶಕ್ಕೆ ಮೂರು ಕಾರಣಗಳಿದ್ದಾವು: ಅತಿಯಾದ ಕಾಮ, ಎಲ್ಲೆಯಿಲ್ಲದ ಲೋಭ, ಮಿತಿಮೀರಿದ ಕ್ರೋಧ. ನರಕದ ದ್ವಾರಗಳೆಂದರೆ ಈ ಮೂರೇ. ಹಾಗೆಂದು ಗೀತೆಯೇ ಹೇಳುತ್ತದೆ. ಅಲ್ಲಿಗೆ, ಇದೋ ಈ ಉಪನಿಷತ್ತಿನಲ್ಲಿಯ ದೇವ-ಮನುಷ್ಯ-ಅಸುರರ ಕಥೆಯ ತತ್ತ್ವವೇ ಇದಾಯಿತು!  ಇನ್ನಿದರ ವಿಸ್ತಾರವೇ ಪುರಾಣಗಳೆಲ್ಲಾ!

ದಮ-ದಯೆಗಳಿಲ್ಲವಾದಾಗ ಮನುಷ್ಯರೇ ಇಲ್ಲಿಯ ದೇವಾಸುರರಂತೆ – ಅಥವಾ ಅವರೇ - ಆಗಿಬಿಟ್ಟಾರು! ದ-ದ-ದ-ಗಳು (=ದಮ-ದಾನ-ದಯೆಗಳು) ಇಲ್ಲದವರಿಂದಲೇ ವಿಶ್ವಯುದ್ಧಗಳು ನಡೆದುಹೋದವು! ದ-ದ-ದ-ಗಳು ಅತ್ತ ವಿಶ್ವಶಾಂತಿಗೂ ಬೇಕು, ಇತ್ತ ಅಂತರಂಗಸಾಧನೆಗೂ ಬೇಕು.

ಮತ್ತೆ ಕೇಳಿಸಲಿಲ್ಲವೆನ್ನಬೇಡಿ, ಗುಡುಗಿನ ಧ್ವನಿಯನ್ನು!


ಸೂಚನೆ: 07/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.