ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯುಧಿಷ್ಠಿರನು ಕುಂತಿಯನ್ನು ಕೇಳುತ್ತಿದ್ದಾನೆ.
"ಲೋಕಕ್ಕೂ ವಿರುದ್ಧ, ವೇದಕ್ಕೂ ವಿರುದ್ಧ - ಎನಿಸುವ ಕಾರ್ಯವನ್ನು ನೀ ಮಾಡಿಬಿಟ್ಟಿರುವೆಯಲ್ಲಾ? (ಎಂದರೆ, ಮಾಡುವ ಕೆಲಸವು ಲೌಕಿಕ-ದೃಷ್ಟಿಯಿಂದಲಾದರೂ ಸರಿಯಾಗಿರಬೇಕು, ವೈದಿಕ-ದೃಷ್ಟಿಯಿಂದಲಾದರೂ ಸರಿಯಾಗಿರಬೇಕು. ಅರ್ಥಾತ್ ಇಹಕ್ಕೋ ಪರಕ್ಕೋ ಸಲ್ಲಬೇಕು. ವಾಸ್ತವವಾಗಿ ಎರಡಕ್ಕೂ ಸಲ್ಲಬೇಕು, ಆದರೆ ಎರಡಕ್ಕೂ ಸಲ್ಲದ ಕಾರ್ಯವಾಯಿತೆಲ್ಲಾಇದು!) ಭೀಮನ ತೋಳುಗಳನ್ನು ನೆಚ್ಚಿಕೊಂಡೇ ಅಲ್ಲವೆ ನಾವೆಲ್ಲರೂ ಸುಖವಾಗಿ ನಿದ್ರೆಮಾಡುತ್ತಿರುವುದು? ಹಾಗೂ ಕ್ಷುದ್ರರು (ಎಂದರೆ ಧೃತರಾಷ್ಟ್ರನ ಮಕ್ಕಳು) ಅಪಹರಿಸಿರುವ ರಾಜ್ಯವನ್ನು ಮತ್ತೆ ಹಿಂಪಡೆಯಲೆಳಸುತ್ತಿರುವುದು?
ಭೀಮನ ತೇಜಸ್ಸು ಅಮಿತವಾದದ್ದು; ತನ್ನಿಮಿತ್ತದ ದುಃಖದಿಂದಾಗಿಯೇ ದುರ್ಯೋಧನನಿಗೂ ಶಕುನಿಗೂ ನಿದ್ರೆಯೇ ಬರದಿರುವುದು. ಅವನ ಪರಾಕ್ರಮದಿಂದಾಗಿಯೇ ನಾವು ಜತುಗೃಹ(ಅರಗಿನ ಮನೆ)ದಿಂದ ಬಿಡುಗಡೆ ಹೊಂದಲಾಗಿರುವುದು. ಇತರ ಪಾಪಿಗಳ ದೆಸೆಯಿಂದ ಬಿಡುಗಡೆಯಾಗಿರುವುದೂ ಹೀಗೆಯೇ. ಪುರೋಚನನು ಸತ್ತದ್ದು ಸಹ ಭೀಮನ ವೀರ್ಯದಿಂದಲೇ.
ಧೃತರಾಷ್ಟ್ರನ ಮಕ್ಕಳನ್ನು ಕೊಂದದ್ದಾದರೆ, ವಸುಪೂರ್ಣೆಯಾದ ವಸುಂಧರೆಯು (ಸಿರಿದುಂಬಿದ ಭೂಮಿಯು) ಇನ್ನೇನು ದೊರಕಿಯಾಯಿತು - ಎಂದು ನಾವು ಭಾವಿಸಿಕೊಳ್ಳುತ್ತಿರುವುದೂ ಅದರಿಂದಲೇ ಅಲ್ಲವೇ? ಹೀಗಿರಲು, ಅದಾವ ಮತಿಯಿಂದ ಭೀಮನನ್ನು ತ್ಯಜಿಸಹೊರಟಿರುವೆ? ದುಃಖಗಳಪ್ಪಳಿಸಿದಾಗ ಬುದ್ಧಿಗೆ ಮಂಕುಬಡಿಯುವುದುಂಟು; ನಿನಗೆ ಹಾಗಾಗಿಲ್ಲವಷ್ಟೆ?"
ಯುಧಿಷ್ಠಿರನ ನುಡಿಗೆ ಕುಂತಿಯು ಹೀಗೆ ಹೇಳಿದಳು: ಭೀಮನ ವಿಷಯದಲ್ಲಿ ನೀನು ಸಂತಾಪಪಡಬೇಕಿಲ್ಲ. ನಾನೀ ಕೆಲಸ ಮಾಡಹೊರಟಿರುವುದು ಏನೋ ಬುದ್ಧಿದೌರ್ಬಲ್ಯದಿಂದಲ್ಲ. ಈ ಬ್ರಾಹ್ಮಣನ ಮನೆಯಲ್ಲಿದ್ದುಕೊಂಡು ತಾನೆ ನಾವು ಸುಖವಾಗಿದ್ದಿರುವುದು? ಹಾಗೂ ಧೃತರಾಷ್ಟ್ರನ ಪುತ್ರರಿಗೆ ಗೋಚರವಾಗದೆ ಉಳಿದುಕೊಂಡಿರುವುದು? ಅದಕ್ಕೊಂದು ಪ್ರತಿಕ್ರಿಯೆಯನ್ನು ಈತನಿಗೆ ನಾವು ಮಾಡಬೇಕಲ್ಲವೆ? ಅದನ್ನೇ ನಾನು ಎದುರುನೋಡುತ್ತಿರುವುದು. ಪುರುಷನಾರು? ಯಾರಾದರೂ ಉಪಕಾರ ಮಾಡಿದರೆ ಅದು ಕಣ್ಮರೆಯಾಗದಿರುವವನು ಪುರುಷ. (ಏತಾವಾನ್ ಏವ ಪುರುಷಃ ಕೃತಂ ಯಸ್ಮಿನ್ ನ ನಶ್ಯತಿ). (ಅರ್ಥಾತ್, ಮತ್ತೊಬ್ಬರಿಂದಾದ ಉಪಕಾರವನ್ನು ಮರೆಯದೆ ಪ್ರತ್ಯುಪಕಾರವನ್ನು ಮಾಡುವವನು – ಅರ್ಥಾತ್ ಕೃತಜ್ಞ). ಅಷ್ಟೇ ಅಲ್ಲ. ಯಾರಾದರೂ ನಮಗೆ ಒಂದಿಷ್ಟು ಉಪಕಾರ ಮಾಡಿದ್ದಾರೆಂದರೆ ಅವರೆಷ್ಟು ಉಪಕಾರ ಮಾಡಿದ್ದಾರೋ ಅದನ್ನು ಮೀರಿಸುವಂತೆ (ಎರಡರಷ್ಟು, ಮೂರರಷ್ಟು – ಎಂಬಂತೆ) ಅವರಿಗೆ ಪ್ರತ್ಯುಪಕಾರವನ್ನು ಮಾಡತಕ್ಕದ್ದು (ಯಾವಚ್ಚ ಕುರ್ಯಾದ್ ಅನ್ಯೋಽಸ್ಯ ಕುರ್ಯಾದ್ ಬಹುಗುಣಂ ತತಃ).
ತನ್ನ ತೀರ್ಮಾನದ ಹಿನ್ನೆಲೆಯನ್ನೂ ವಿಶದಪಡಿಸುತ್ತಾಳೆ: "ಜತುಗೃಹದಲ್ಲಿ ಭೀಮನ ಪರಾಕ್ರಮ, ಆಮೇಲೆ ಹಿಡಿಂಬನ ವಧ - ಇವನ್ನು ಕಂಡು, ಭೀಮನ ವಿಷಯದಲ್ಲೆನಗೆ ವಿಶ್ವಾಸ ಮೂಡಿದೆ. ಭೀಮನ ಬಾಹುಬಲವೆಂದರೆ ಹತ್ತು ಸಾವಿರ ಆನೆಗಳಿಗೆ ಸಮನಾದುದು. ಆನೆಗಳಂತಿರುವ ನಿಮ್ಮಗಳನ್ನು ವಾರಣಾವತದಿಂದ ಹೊತ್ತುತರಲು ಆತನಿಗೆ ಸಾಧ್ಯವಾದುದೂ ಆ ಪರಾಕ್ರಮದಿಂದಾಗಿಯೇ."
ಇಲ್ಲಿ ಯುಧಿಷ್ಠಿರನ ಕಳವಳವೆಷ್ಟು ಯುಕ್ತವೋ ಅದಕ್ಕಿಂತಲೂ ಯುಕ್ತವಾದುದೆಂದರೆ ಕುಂತಿಯ ಮಾತು. (ಯಾವುದು ಯುಕ್ತಿಯಿಂದ ಕೂಡಿರುವುದೋ ಅದು ಯುಕ್ತ.) ಯುಧಿಷ್ಠಿರನು ಹೇಳಿರುವುದು ತಮ್ಮೆಲ್ಲರ ಭವಿಷ್ಯದ ಆತಂಕದಿಂದ; ಕುಂತಿಯು ಹೇಳಿರುವುದು ಧರ್ಮಬದ್ಧವಾದ ನಡೆಯ ದೃಷ್ಟಿಯಿಂದ. ಧರ್ಮಾನುಗುಣವಾದ ನಡೆಯಿಲ್ಲದವನೂ ಒಬ್ಬ ಮನುಷ್ಯನೇ? – ಎಂಬ ಲೆಕ್ಕಾಚಾರ ಅವಳದು. ಉಪಕಾರಿಗೆ ಪ್ರತ್ಯುಪಕಾರಿಯಲ್ಲದವನನ್ನು ಪುರುಷನೆನ್ನಲಾದೀತೇ? - ಎಂಬುದು ಅವಳ ತರ್ಕ.
ಈ ಮಾತೆಯ ಮಾತು ಮನನೀಯ.
ಸೂಚನೆ : 15/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.