ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – 20 ಭೂಮಿಯಲ್ಲಿ ಬಿತ್ತುವವರಿಗೆ ಶ್ರೇಷ್ಠವಾದುದು ಯಾವುದು? ?
ಉತ್ತರ - ವೃಷ್ಟಿ-ಮಳೆ
ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಬಹಳ ಸುಲಭವಾಗಿದೆ ಎನ್ನಿಸಬಹುದು. ಭೂಮಿಯಲ್ಲಿ ಬೀಜವನ್ನು ಬಿತ್ತನೆ ಮಾಡಬೇಕಾದರೆ ನಮಗೆ ಅತಿ ಮುಖ್ಯವಾದುದು ಯಾವುದು ? ಅದಕ್ಕೆ ಸುಲಭವಾದ ಉತ್ತರ- ವೃಷ್ಟಿ ಅಂದರೆ ಮಳೆ ಎಂದು. ನಮಗೆ ಅನಿಸುವುದು- ಇದೂ ಒಂದು ಪ್ರಶ್ನೆಯೋ? ಇಂತಹ ಸುಲಭವಾದ ಪ್ರಶ್ನೆಯನ್ನು ಯಕ್ಷನು ವೇದವೇದಾಂಗಪಾರಂಗತನಾದ ಧರ್ಮಜ್ಞನಾದ ಧರ್ಮಜನಲ್ಲಿ ಕೇಳುವುದೇ? ಎಂದು. ಆದರೆ ಅಷ್ಟು ಸುಲಭವಾದ ಪ್ರಶ್ನೆಯಲ್ಲ. ಇದರಲ್ಲಿ ತತ್ತ್ವಾರ್ಥ ಅದಗಿದೆ. 'ಕಿಂ ಸ್ವಿದಾವಪನಂ ಶ್ರೇಷ್ಠಂ' ಎಂಬುದಾಗಿದೆ ಯಕ್ಷನ ಪ್ರಶ್ನೆ. ಇಲ್ಲಿ ಬಿತ್ತನೆ ಎಂಬ ಅರ್ಥವನ್ನು ಕೊಡುವಂತಹ ಆವಪನ ಎಂಬ ಪದವನ್ನು ಬಳಸಲಾಗಿದೆ. ಇದಕ್ಕನುಗುಣವಾಗಿ ದೇವತರ್ಪಣವನ್ನು ಮಾಡುವವರಿಗೆ ಯಾವುದು ಶ್ರೇಷ್ಠವಾದುದು? ಎಂಬುದು ಪ್ರಶ್ನೆ. ಇದಕ್ಕೂ ಉತ್ತರ ವೃಷ್ಟಿ ಎಂಬುದಾಗಿಯೇ. ದೇವತರ್ಪಣಕ್ಕೂ ವೃಷ್ಟಿಗೂ ಏನು ಸಂಬಂಧ? 'ಆವಾಪನ' ಎಂಬ ಶಬ್ದಕ್ಕೆ ಸಾಮಾನ್ಯವಾದ ಅರ್ಥ ಬೀಜವನ್ನು ಬಿತ್ತುವುದು ಎಂದು. ಇಲ್ಲಿ ಆವಾಪನ ಎಂದರೆ ದೇವತರ್ಪಣ ಎಂದರ್ಥ. ದೇವತೆಗಳನ್ನು ತೃಪ್ತಿಪಡಿಸಬೇಕಾದರೆ ಅದಕ್ಕೆ ಯಜ್ಞವನ್ನು ಮಾಡಬೇಕು. "ಆಗ್ನೌ ಪ್ರಾಸ್ತಾಹುತಿಃ ಸಮ್ಯಗಾದಿತ್ಯಮುಪತಿಷ್ಠತೇ। ಆದಿತ್ಯಾಜ್ಜಯತೇ ವೃಷ್ಟಿಃ - ಅಗ್ನಿಯಲ್ಲಿ ಮಾಡಿದ ಹೋಮವು ಆದಿತ್ಯನನ್ನು ಸೇರುತ್ತದೆ. ಆದಿತ್ಯನಿಂದ ಮಳೆಯು ಬರುತ್ತದೆ ಎಂದು ವೇದದ ವಾಕ್ಯಾರ್ಥ. ಯಜ್ಞದಿಂದ ಪರ್ಜನ್ಯವು ಉಂಟಾಗುತ್ತದೆ. ವೃಷ್ಟಿಯು ಚೆನ್ನಾಗಿ ಆದರೆ ಮಾತ್ರ ಬೆಳೆಯು ಚೆನ್ನಾಗಿ ಆಗುತ್ತದೆ.
ಹೀಗೆ ವೃಷ್ಟಿಗೂ ದೇವತೆಗಳಿಗೂ ಸಂಬಂಧವಿದೆ. ಎಲ್ಲಿ ಯಜ್ಞವು ನಿರಂತರವಾಗಿ ಆಗುತ್ತದೆಯೋ ಆಗ ದೇವತೆಗಳು ಪ್ರೀತರಾಗುತ್ತಾರೆ. ದೇವತೆಗಳನ್ನು ಪ್ರೀತಿಗೊಳಿಸುವುದರಿಂದ ಮಾತ್ರವೇ ನಮಗೆ ಬೇಕಾದ ಕಾರ್ಯವು ಸಿದ್ಧಿಸುತ್ತದೆ. ಯಾರು ಇಂತಹ ಯಜ್ಞವನ್ನು ಮಾಡಲು ಅಪೇಕ್ಷೆಪಡುತ್ತಾರೋ ಅಂತವರನ್ನು ಕಂಡರೆ ದೇವತೆಗಳಿಗೂ ಎಲ್ಲಿಲ್ಲದ ಪ್ರೀತಿ ಉಂಟಾಗುತ್ತದೆ. ಹಾಗಾಗಿ ದೇವತೆಗಳಿಗೆ ಯಜ್ಞ ಮಾಡುವವರನ್ನು ಕಂಡರೆ ಸಂತೋಷ ಉಂಟಾಗುತ್ತದೆ. 'ಯಾರು ದೇವತೆಗಳನ್ನು ಭಾವಿಸುತ್ತಾರೋ ಅಂತಹವರನ್ನು ದೇವತೆಗಳು ಭಾವಿಸುತ್ತಾರೆ' ಎಂದು ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಅಪ್ಪಣೆಕೊಡಿಸಿದ್ದನ್ನೂ ನೆನಪಿಸಿಕೊಳ್ಳಬಹುದು. ಅದೇ ಗೀತೆಯಲ್ಲೇ ಯಜ್ಞದಿಂದ ಪರ್ಜನ್ಯವು ಪರ್ಜನ್ಯದಿಂದ ಅನ್ನವೂ ಅನ್ನದಿಂದ ಎಲ್ಲ ಭೂತಗಳ ತೃಪ್ತಿ. ಹೀಗೆ ದೇವತೆಗಳ ಸಂಪ್ರೀತಿಯೂ ಸಮಸ್ತ ವಿಶ್ವದ ಚರಾಚರ ಜಗತ್ತಿನ ಒಳಿತಿಗೆ ಕಾರಣವಾಗುತ್ತದೆ. ಈ ಅರ್ಥದಲ್ಲಿ ಯಕ್ಷನು ಪ್ರಶ್ನೆಯನ್ನು ಕೇಳಿರುವುದು. ಈ ದೃಷ್ಟಿಯಿಂದ ದೇವತೆಗಳ ತೃಪ್ತಿಯು ಯಾವುದರಿಂದ? ಎಂಬ ಪ್ರಶ್ನೆಗೆ 'ವೃಷ್ಟಿ' ಎಂಬ ಉತ್ತರ ಎಷ್ಟು ಸೂಕ್ತವಾದುದು ಎಂಬುದನ್ನೂ ಗಮನಿಸಬಹುದು. ಕೇವಲ ಭೂಮಿಯಲ್ಲಿ ಬೀಜವನ್ನು ಬಿತ್ತುವುದಕ್ಕೆ ಮಾತ್ರವೇ ವೃಷ್ಟಿಯು ಬೇಕು ಎಂಬ ಸಾಮಾನ್ಯವಾದ ಉತ್ತರವನ್ನು ಇಲ್ಲಿ ಯಕ್ಷನು ನಿರೀಕ್ಷಿಸಿರಲಿಲ್ಲ. ಭೂಮಿಯ ಫಲವತ್ತತೆಗೆ ವೃಷ್ಟಿಯ ಅವಶ್ಯಕತೆ ಎಷ್ಟು? ಎಂಬುದು ಜನಸಾಮಾನ್ಯರಿಗೂ ತಿಳಿದ ವಿಷಯವೇ. ಆದರೂ ಈ ಪ್ರಶ್ನೆಯನ್ನು ಕೇಳುವುದರಲ್ಲಿ ಈ ವಿಶೇಷತೆ ಇದೆ ಎಂಬುದನ್ನು ವ್ಯಾಖ್ಯಾನಕಾರರು 'ಆವಪನ' ಎಂಬ ಶಬ್ದಕ್ಕೆ ಈ ರೀತಿ ವಿವರಣೆಯನ್ನು ಕೊಟ್ಟಿರುತ್ತಾರೆ.