Sunday, November 8, 2020

ಆರ್ಯಸಂಸ್ಕೃತಿ ದರ್ಶನ - 17 (Arya Samskruti Darshana - 17)

ಸ್ವಾತಂತ್ರ್ಯ –ಭಾರತೀಯ ಜ್ಞಾನಿಗಳ ದೃಷ್ಟಿಯಲ್ಲಿ
  ವಿದ್ವಾನ್|| ಛಾಯಾಪತಿ



"ಸ್ವಾತಂತ್ರ್ಯ"-ಏನು ಪದದ ಅರ್ಥ? ವ್ಯಕ್ತಿ ಅಥವಾ ರಾಷ್ಟ್ರ ತನ್ನ ಇಚ್ಛೆಯಂತೆ ವಿಕಾಸಗೊಳ್ಳಲು ಇರುವ ಮುಕ್ತ ಅವಕಾಶ, ಪರಕೀಯ ದಬ್ಬಾಳಿಕೆಯಿಂದ ವಿಮುಕ್ತಿ, ಸ್ವಾವಲಂಬನೆ, ಎಲ್ಲ ಬಗೆಯ ಕಟ್ಟುಗಳ ಕಳಚುವಿಕೆ- ಹೀಗೆ ಹಲವಾರು ವ್ಯಾಖ್ಯೆಗಳಿವೆ ಈ ಪದಕ್ಕೆ. "ಪಾರತಂತ್ರ್ಯವೇ ನರಕ, ಸ್ವಾತಂತ್ರ್ಯವೇ ಸ್ವರ್ಗ" ಎಂಬ ಘೋಷಣೆಯಂತೂ ಬಹು ಜನಪ್ರಿಯವಾಗಿ ಹರಡಿದೆ.

ಸ್ವತಂತ್ರವಾದ ಅನೇಕ ರಾಷ್ಟ್ರಗಳಿವೆ ವಿಶ್ವದಲ್ಲಿ. ಸ್ವಾತಂತ್ರ್ಯದ ಬಗ್ಗೆ ಅವುಗಳ ದೃಷ್ಟಿಕೋಣವು ವಿಭಿನ್ನವಾಗಿವೆ. ರಾಷ್ಟ್ರ ಒಂದು ಜನ ಸಮುದಾಯ. ಸಮುದಾಯಹಿತಕ್ಕೆ ವ್ಯಕ್ತಿ ತನ್ನನ್ನು ಅರ್ಪಿಸಿಕೊಳ್ಳಬೇಕು. ಅದಕ್ಕಿಂತ ಬೇರೆಯಾದ ವ್ಯಕ್ತಿಸ್ವಾತಂತ್ರ್ಯ ಅರ್ಥವಿಹೀನ. ಇದು ರಾಷ್ಟ್ರಸ್ವಾತಂತ್ರ್ಯವಾದಿಗಳ ನಿಲುವು. ಹಾಗಲ್ಲ, ರಾಷ್ಟ್ರವಿರುವುದೇ ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕಾಗಿ. ಪ್ರತಿವ್ಯಕ್ತಿಗೂ ತನ್ನ ಇಚ್ಛೆಯಂತೆ ಅರಳಲು ಇರುವ ಮುಕ್ತ ಅವಕಾಶವೇ ಸ್ವಾತಂತ್ರ್ಯ. ವ್ಯಕ್ತಿತ್ತ್ವ ವಿಕಾಸವನ್ನು ಕಡೆಗಣಿಸುವ ರಾಷ್ಟ್ರ ಒಂದು ಸೆರೆಮನೆ. ತನ್ನ ಇಚ್ಛೆಯಂತೆ ಬೆಳಯಲು ಅವಕಾಶವಿಲ್ಲದ ವ್ಯಕ್ತಿ ಉಸಿರಾಡುವ ಹೆಣ. ಇವು ವ್ಯಕ್ತಿ ಸ್ವಾತಂತ್ರ್ಯವಾದಿಗಳ ನಿಲುವು. ಸ್ವಾತಂತ್ರ್ಯ ಯಾರಿಗೆ? ವ್ಯಕ್ತಿಗೋ? ರಾಷ್ಟ್ರಕ್ಕೋ?

ವ್ಯಕ್ತಿ ತನ್ನ ಇಚ್ಛೆಯಂತೆ ಬೆಳೆಯಲು ಇರುವ ಮುಕ್ತ ಅವಕಾಶ ಸ್ವಾತಂತ್ರ್ಯ. ಕಳ್ಳ, ಕೊಲೆಪಾತಕ, ಜೂಜುಕೋರ ಇವರಿಗೂ ಸ್ವಾತಂತ್ರ್ಯವುಂಟಲ್ಲವೇ? ಆಗ ರಾಷ್ಟ್ರದ ಗತಿಯೇನು? ಎಲ್ಲ ಬಗೆಯ ಕಟ್ಟುಗಳಿಂದ ಬಿಡುಗಡೆ ಸ್ವಾತಂತ್ರ್ಯ ಎನ್ನೋಣವೇ?  ನಾಡಿನ ಕಾನೂನಿಗೆ ವ್ಯಕ್ತಿ ಒಳಪಡಬೇಕೋ ಬೇಡವೋ? ಅದೂ ಒಂದು ಕಟ್ಟುಪಾಡು ತಾನೇ?  ವ್ಯಕ್ತಿ ಸ್ವಾತಂತ್ರ್ಯ- ಸ್ವೇಚ್ಛಾಚಾರಗಳ ಸೀಮಾ ರೇಖೆ ಯಾವುದು?

ಪರಸ್ಪರ ಅವಲಂಬನೆ ಮತ್ತು ವಿನಿಮಯ, ವ್ಯಕ್ತಿ ಮತ್ತು ರಾಷ್ಟ್ರಗಳ ಬೆಳವಣಿಗೆಗೆ ಅನಿವಾರ್ಯವಾಗಿರುವಾಗ, ಯಾರ ಹಂಗೂ ಇಲ್ಲದ ಮುಕ್ತ ಬೆಳೆವಣಿಗೆ ಹೇಗೆ ವಾಸ್ತವವಾದೀತು? ವಿಶ್ವವೇ ಒಂದು ರಾಷ್ಟ್ರವಾಗಿ ಬೆಳೆಯುವುದು ಅನಿವಾರ್ಯವೆಂದು ಭಾವಿಸುವ ಉದಾರವಾದಿಗಳಿಗಂತೂ ರಾಷ್ಟ್ರಸ್ವಾತಂತ್ರ್ಯವಾದವೇ ಅರ್ಥಹೀನ. ಸ್ವಾತಂತ್ರ್ಯ, ಕೇವಲ ಕಲ್ಪನೆ, ಅದು ನೈಜವಲ್ಲ ಎಂಬುದು ಒಂದು ವಾದವಾದರೆ, ಅದು ಸಹಜ, ಕೃತಕವಲ್ಲ ಎಂಬುದು ಮತ್ತೊಂದು ವಾದ. ಸ್ವಾತಂತ್ರ್ಯ ಕೃತಕವೋ? ಸಹಜವೋ?

ಈ ಎಲ್ಲ ಪ್ರಶ್ನೆಗಳಿಗೂ ಸಮಂಜಸವಾದ ಉತ್ತರವೇನು? ಎಲ್ಲಿ ಹುಡುಕಬೇಕು ಉತ್ತರವನ್ನು? ಹಾಗೆ ಹುಡುಕಿ ಪರಿಹಾರ ಕಂಡವರುಂಟೆ? ಇದ್ದರೆ ಉತ್ತರವೇನು? ಅದು ಇಂದಿಗೂ ಮಾನ್ಯವೇ? ಅಥವಾ ಪರಿಹಾರವೇ ಕಾಣದ ಪ್ರಶ್ನೆಗಳೋ ಇವು?

ಜೀವನ ವಿಕಾಸದ ಹಾದಿಯತ್ತ ತಮ್ಮ ದೃಷ್ಟಿ ಹರಿಸಿ ಅಲ್ಲಿ ಸ್ವಾತಂತ್ರ್ಯ, ಅದರ ರಕ್ಷಣೆಯ ಹಾದಿಯನ್ನು ಗುರುತಿಸಿದ ಭಾರತೀಯ ಜ್ಞಾನಿಗಳು ಈ ಪ್ರಶ್ನೆಗಳಿಗೆ ಪರಿಹಾರ ಕಂಡಿದ್ದಾರೆ. ಅದನ್ನು ಗಮನಿಸಿ ಅದರ ಸೂಕ್ತಾಸೂಕ್ತತೆಯನ್ನು ನಿರ್ಧರಿಸಬಹುದು. ಏತಕ್ಕಾಗಿ ಸ್ವಾತಂತ್ರ್ಯ? ಬಾಳಿಗಾಗಿ. ಅಂತೆಯೇ ಬಾಳಲು ಬೇಕಾದ ಸ್ವಾತಂತ್ರ್ಯ ಎಂತಹುದೆಂಬುದನ್ನು ಬಾಳಿನಲ್ಲಿ ತಾನೇ ಹುಡಕಬೇಕು? ಹಾಗೆ ಹುಡುಕಿ ಅವರು ಕಂಡದ್ದೇನು? ಆ  ಸ್ವಾತಂತ್ರ್ಯ ರಕ್ಷಣೆಗೆ ಅವರು ಅಳವಡಿಸಿದ ಯೋಜನೆ ಏನು?

ಹಲಸಿನ ಬೀಜವೊಂದನ್ನು ನೆಟ್ಟರೆ ಅದು ಕ್ರಮವಾಗಿ ಬೇರು, ಮೊಳಕೆ, ಕಾಂಡ, ಶಾಖೆ, ಹೀಚು, ಕಾಯಿ, ಹಣ್ಣುಗಳ ರೂಪದಲ್ಲಿ ಬೆಳೆದು ಮತ್ತೆ ಹಣ್ಣಿನೊಳಗೆ ಬೀಜರೂಪದಲ್ಲಿ ಹೊರಗೆ ಕಾಣಿಸಿಕೊಳ್ಳುತ್ತದೆ. ಈ ಬೆಳವಣಿಗೆಯ ತಂತ್ರ ಎಲ್ಲಿದೆ? ಹಲಸಿನ ಬೀಜದಲ್ಲಿಯೇ ಇದೆ. ಇಲ್ಲಿ ಹಲಸಿನ ಬೀಜವು ಸ್ವ ಅಂದರೆ ತನ್ನ ತಂತ್ರ, ಅಂದರೆ ಯೋಜನೆಗನುಗುಣವಾಗಿ ಬೆಳೆಯುವುದೇ ಅದರ ಸ್ವಾತಂತ್ರ್ಯ. ಹಲಸನ್ನು ನೆಟ್ಟರೆ ಮಾವಾಗಲೀ, ಮಲ್ಲಿಗೆಯಾಗಲೀ ದೊರಕದು. ಹಲಸಿನ ಬೀಜ ಅದರ ಕ್ರಮದಲ್ಲಿಯೇ ಬೆಳೆದು ಮತ್ತೆ ಬೀಜ ರೂಪದಲ್ಲಿ ನಿಲ್ಲುವುದಕ್ಕನುಗುಣವಾಗಿ ಅದನ್ನು ಬೆಳೆಸುವುದೇ ಅದರ ಸ್ವಾತಂತ್ರ್ಯ ರಕ್ಷಣೆ. ಬೀಜರೂಪದಿಂದ ಆರಂಭಿಸಿ ಮತ್ತೆ  ಬೀಜರೂಪದಲ್ಲಿ ನಿಂತರೆ ಅದರ ವಿಕಾಸ ಪೂರ್ಣವಾದಂತೆ. ಹಾಗೆ ಪೂರ್ಣವಿಕಾಸಕ್ಕೆಡೆ ಮಾಡಿಕೊಡುವುದೇ ಸ್ವಾತಂತ್ರ್ಯಕ್ಕೆಡೆ ಮಾಡಿಕೊಟ್ಟಂತೆ. ಆ ಸ್ವಾತಂತ್ರ್ಯ ಬೀಜಕ್ಕೆ ನಿಸರ್ಗದತ್ತವಾದುದು. ಕಲ್ಪಿತವಲ್ಲ.

ಜೀವನದ ಸ್ವಾತಂತ್ರ್ಯಕ್ಕೂ ಈ ಮಾತು ಅನ್ವಯಿಸುತ್ತದೆ. ಹಲಸಿನ ಮರವನ್ನು ಹಲಸಿನ ಬೀಜ ಶಕ್ತಿ ತುಂಬಿರುವಂತೆ, ಜೀವನ ವೃಕ್ಷವಾಗಿ ಕಾಣುವ ದೇಹವನ್ನು ಜೀವ ಶಕ್ತಿ ತುಂಬಿದೆ. ದೇಹದ ಒಳಮುಖದಲ್ಲಿ ತುಂಬಿದ ಶಕ್ತಿಯ ದಿಕ್ಕನ್ನನುಸರಿಸಿ ಅನ್ವೇಷಿಸಿದಾಗ ಒಳಗೆ ತುಂಬಿ ಬೆಳೆಗುವ ಚೈತನ್ಯಮಯವಾದ ಜ್ಯೋತಿಯೊಂದು ಭಾರತೀಯ ಜ್ಞಾನಿಗಳ ದೃಷ್ಟಿಗೆ ಗೋಚರವಾಯಿತು. ಆ ಶಕ್ತಿಯೇ-ಜ್ಯೋತಿಯೇ ಜೀವನದ ಬೀಜ. ಆ ಜ್ಯೋತಿರ್ಬೀಜದಿಂದ ಅರಳಿದ ಕಿಡಿಗಳು ಜೀವಿಗಳು. ಮತ್ತೆ ಆ ಜ್ಯೋತಿರ್ಬೀಜ ರೂಪದಲ್ಲಿ ನಿಲ್ಲುವುದೇ ವಿಕಾಸದ ಆಶಯ. ಹಾಗೆ ವಿಕಾಸಗೊಂಡರೆ ಆತ್ಮಜ್ಯೋತಿರೂಪವಾದ ಬೀಜದ ತಂತ್ರದಂತೆ ಜೀವನ ವಿಕಾಸಗೊಂಡಂತಾಗುತ್ತದೆ.  ಜ್ಯೋತಿರ್ಬೀಜದಿಂದ ಆರಂಭಗೊಂಡ ಜೀವನ ಮತ್ತೆ ಆ ಜ್ಯೋತಿರ್ಬೀಜರೂಪಕ್ಕೆ ಮರಳಿದಾಗಲೇ ಆ ಬೀಜದ ತಂತ್ರಕ್ಕನುಗುಣವಾಗಿ ವಿಕಾಸವಾದಂತಾಗುತ್ತದೆ. ಅದು ಆ ಜೀವದ-(ಸ್ವ)ತಂತ್ರ-ಯೋಜನೆ. ದೇಹವು ವಿಕಾಸದ ಮಧ್ಯಾವಸ್ಥೆ. ದೇಹವನ್ನು ತುಂಬಿಕೊಂಡ ಜೀವವನ್ನು ಬೆಳೆಸುವಾಗ ಬೀಜರೂಪದಲ್ಲಿ ನಿಲ್ಲಲನುಗುಣವಾಗಿ ಬೆಳೆಸಿದಾಗ ಅದರ ಸ್ವಾತಂತ್ರ್ಯ ರಕ್ಷಣೆ ಮಾಡಿದಂತಾಯಿತು. ಈ ಸ್ವಾತಂತ್ರ್ಯವೂ ಮಾನವನಿಗೆ ನಿಸರ್ಗದತ್ತವಾದುದು. ಕಲ್ಪಿತವಲ್ಲ.


ದೇಹವೆಂಬ ಪುರವನ್ನು ತುಂಬಿಕೊಂಡು ಬೆಳೆಯುವ ಪುರುಷನ ಆಶಯವನ್ನು ಗ್ರಹಿಸಿ ಆ ವಿಕಾಸಕ್ಕನುಗುಣವಾಗಿ ಜೀವನವನ್ನು ವಿಕಾಸಪಡಿಸಲು ಅಳವಡಿಸಿದ ಯೋಜನೆಯೇ ಪುರುಷಾರ್ಥ ಯೋಜನೆ. ಅಂದರೆ ಪುರುಷನಿಗಾಗಿ ಮಾಡಿದ ಯೋಜನೆ. ದೇಹಾರ್ಥ ಯೋಜನೆಯಲ್ಲ. ದೇಹೇಂದ್ರಿಯ ಮನೋಬುದ್ಧಿಗಳೆಲ್ಲಕ್ಕೂ ಈ ಯೋಜನೆಯಲ್ಲಿ ಪಾತ್ರವುಂಟು. ಕೊಂಬೆ, ಹೂವು, ಮಿಡಿ, ಕಾಯಿ ಎಲ್ಲವೂ ಬೀಜರೂಪಕ್ಕೆ ನಿಲ್ಲಲು ಸಹಕರಿಸುವಂತೆ ಈ ಅಂಗಗಳೆಲ್ಲವೂ ಜೀವದ ಅಂದರೆ, ಪುರುಷನ ಉಪಕರಣಗಳಾಗಿ ಅವನ ಸ್ವಾತಂತ್ರ್ಯಗಳಿಕೆಗೆ ಸಹಕರಿಸುವುದೇ ಅವುಗಳ ಪಾತ್ರ.

ಪುರುಷಾರ್ಥಯೋಜನೆಯಾದರೂ ಎಂತಹುದು? ಜೀವವು ಬೆಳೆದು ಬಂದಿರುವ ಹಾದಿಯನ್ನು ಗಮನಿಸಿ, ಎಲ್ಲವನ್ನೂ ಆಯಾ ಅಂಗಗಳ ಸ್ವಭಾವಕ್ಕೆ ತಕ್ಕಂತೆ ಅವುಗಳನ್ನು ಅಂದಗೆಡಿಸದೇ ಬೆಳೆಸುವ, ಉಳಿಸುವ ಧರ್ಮ.ಆ ಧರ್ಮವನ್ನು ಕೆಡಿಸದಂತೆ ಜೀವನೋಪಕರಣಗಳನ್ನು ಬಳಸಿಕೊಳ್ಳುವ ಅರ್ಥ, ಧರ್ಮಕ್ಕೆ ಧಕ್ಕೆ ತಾರದ ಬಯಕೆಗಳ ರೂಪವಾದ ಕಾಮ, ಇವುಗಳ  ಮೂಲಕ ವಿಕಾಸಗೊಂಡಾಗ ಜೀವನವು ಸಹಜವಾಗಿಯೇ ತನ್ನ ಬೀಜರೂಪಕ್ಕೆ ಹಿಂತಿರುಗಿ ಮರಳುತ್ತದೆ. ಅದೇ ಮೋಕ್ಷ. ಅದು ಸಾವಲ್ಲ. ಮರ ಹಣ್ಣು ಬಿಡುವುದು ಎಂದರೆ ಅದರ ಅಳಿವಲ್ಲ. ಸಾಫಲ್ಯ. ಮೋಕ್ಷಪಡೆದ ಬಳಿಕವೂ ದೇಹದೊಡಗೂಡಿ ಬಾಳಲು ಅಡ್ಡಿಯಿಲ್ಲ. ಜೀವನದ ಸಹಜ ವಿಕಾಸವನ್ನು ಸಮಗ್ರಗೊಳಿಸಲು ಮಾಡಿರುವ ಯೋಜನೆಯೇ ಪುರುಷಾರ್ಥಯೋಜನೆ. ಅದೇ ಜೀವನದ ಸ್ವಾತಂತ್ರ್ಯ ರಕ್ಷಣೆಯ ಹಾದಿ. ಬೀಜವು ವಿಕಾಸವಾಗಲು ನೆಲದೊಳಗಿಳಿದು ವಿಕಾಸ ಕ್ರಮದ ಕಟ್ಟುಪಾಡಿಗೊಳಗಾಗುವಂತೆ ಪುರುಷಾರ್ಥಯೋಜನೆಯಾ ಕಟ್ಟುಪಾಡಿಗೊಳಪಡುವುದು ಸ್ವಾತಂತ್ರ್ಯದ ರಕ್ಷಣೆಯೇ ಆಗುತ್ತದೆ. ಆದ್ದರಿಂದ ಸ್ವಾತಂತ್ರ್ಯ ಇಲ್ಲಿ ಸ್ವೇಚ್ಛಾಚಾರಕ್ಕಿಂತ ಬೇರೆಯಾಗುತ್ತದೆ. ಪ್ರತಿಜೀವಿಯ ಸಹಜ ವಿಕಾಸಕ್ಕನುಗುಣವಾಗಿ ಪುರುಷಾರ್ಥ ಯೋಜನೆಯಿರುವುದರಿಂದ ವಿಶ್ವಜೀವಿಗಳೆಲ್ಲರಿಗೂ ಈ ಸ್ವಾತಂತ್ರ್ಯಸೂತ್ರ ಅನ್ವಯಿಸುವುದರಲ್ಲಿ ಯಾವ ಅಡ್ಡಿಯೂ ಇಲ್ಲ. ಇದೇ ವಿಶ್ವವ್ಯಾಪಕವಾದ ವ್ಯಕ್ತಿ ಸ್ವಾತಂತ್ರ್ಯ. ಈ ವ್ಯಕ್ತಿ ಸ್ವಾತಂತ್ರ್ಯವು ಜೀವನದ ಸಹಜವಾದ ವಿಕಾಸವನ್ನು ಪೂರ್ಣಗೊಳಿಸಿ ಜೀವನವನ್ನು ಶಾಂತಿ, ತೃಪ್ತಿ, ಸೌಖ್ಯಗಳಿಂದ ತುಂಬುವಂತಹುದು.

ರಾಷ್ಟ್ರವಿರುವುದು ಏತಕ್ಕಾಗಿ? ಜೀವಿಯ ಬಾಳಿಗಾಗಿ. ಆದ್ದರಿಂದ  ಪುರುಷಾರ್ಥ ಸಂಪಾದನೆಗೆ ಅವಕಾಶಮಾಡಿಕೊಟ್ಟರೆ, ಜೀವಿಯ ಬಾಳಿಗೆ ಪೂರ್ಣ ಅವಕಾಶ ಮಾಡಿಕೊಟ್ಟಂತ್ತಾಗುತ್ತದೆ. ಆದ್ದರಿಂದಲೇ
"ಧರ್ಮಾರ್ಥಕಾಮಮೋಕ್ಷರೂಪಸರ್ವಪುರುಷಾರ್ಥಫಲಮಿದಂ ರಾಜ್ಯಂ" ಎಂದು ರಾಷ್ಟ್ರದಗುರಿಯನ್ನು ಪುರುಷಾರ್ಥವನ್ನಾಗಿಯೇ ಇಟ್ಟರು. ಜೀವನ-ರಾಷ್ಟ್ರ ಎರಡೂ ಏಕಲಕ್ಷ್ಯವಾದಾಗ ವ್ಯಕ್ತಿ ಸ್ವಾತಂತ್ರ್ಯ –ರಾಷ್ಟ್ರ ಸ್ವಾತಂತ್ರ್ಯ ಎರಡು ಒಂದಾಗುತ್ತದೆ. ಇಂತಹ ಸ್ವಾತಂತ್ರ್ಯ ಪ್ರತಿ ಜೀವಿಯ ಹಕ್ಕು ಮತ್ತು ಆಸ್ತಿ. ಅದಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರೂ ಜೀವನಕ್ಕೆ ರಕ್ಷಣೆಯುಂಟು.
ವ್ಯಕ್ತಿ ಸ್ವಾತಂತ್ರ್ಯ ಕಲ್ಪಿತವಲ್ಲ. ನಿಸರ್ಗಸಿದ್ಧ. ಸ್ವರಾಟ್ ಅಗಿ ಬೆಳೆಗುವ ಆತ್ಮಜ್ಯೋತಿಯಲ್ಲಿ ಒಂದಾಗಿ ರಮಿಸುವ ಸ್ವಾರಾಜ್ಯ ಸಂಪಾದನೆಯೇ ಜ್ಞಾನಿಗಳ ಸ್ವಾತಂತ್ರ್ಯದ ತಿರುಳು. ವಿಶ್ವದ ಎಲ್ಲ ಜೀವಿಗಳ ನೆಲೆಯದು. ಆದ್ದರಿಂದ ಈ ಸ್ವಾತಂತ್ರ್ಯ ವಿಶ್ವಮಾನ್ಯವಾಗಬಲ್ಲದು. "ಋತ-ಸತ್ಯಕ್ಕನುಗುಣವಾಗಿ ಬಾಳುವುದೇ ಸ್ವಾತಂತ್ರ್ಯ" ಎಂದು ಸಾರಿ ಸ್ವಾರಾಜ್ಯ ಸಂಪಾದನೆಮಾಡಿ. ಸ್ವಾತಂತ್ರ್ಯದ ಸವಿಯುಂಡ ಶ್ರೀಶ್ರೀರಂಗಮಹಾಗುರುವಿತ್ತ ಸ್ಫೂರ್ತಿಯೇ ಈ ಬರಹದ ಉಸಿರು. ಈ ಬರಹ ಜೀವನದ ಮೂಲಜ್ಯೋತಿಗೆ ಅರ್ಪಿತವಾಗಲಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ: ೧೦, ಆಗಸ್ಟ್  ೧೯೮೧ ತಿಂಗಳಲ್ಲಿ  ಪ್ರಕಟವಾಗಿದೆ.