Showing posts with label 554_ayvmarticle. Show all posts
Showing posts with label 554_ayvmarticle. Show all posts

Monday, April 19, 2021

ಆರ್ಯಸಂಸ್ಕೃತಿ ದರ್ಶನ - 39 (Arya Samskruti Darshana - 39)


ದೇವಕೀ ಪರಮಾನಂದ.

  ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ.  

"ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ"

ಶ್ರೀಕೃಷ್ಣ ವಸುದೇವಸುತ ನಿಜ. ಆದರೂ ಅವನು ಅವತರಿಸಿದೊಡನೆಯೇ ಅವನು ಅಧ್ಯಾತ್ಮ ದೀಪವೆಂಬುದನ್ನು ಗುರುತಿಸಿ ಪರಮಾನಂದವನ್ನು ಅನುಭವಿಸಿದವಳು ದೇವಕಿ. ಅವಳು ಆ ಶಿಶುವನ್ನು ಕೇವಲ ಮಾನವ ದೃಷ್ಟಿಯಿಂದ ನೋಡದೆ, ದಿವ್ಯದೃಷ್ಟಿಯಿಂದ ನೋಡಿ, ಹೀಗೆ ಕೊಂಡಾಡುತ್ತಾಳೆ.

ರೂಪಂ ಯತ್ತತ್ಪ್ರಾಹುರವ್ಯಕ್ತಮಾದ್ಯಂ
ಬ್ರಹ್ಮ ಜ್ಯೋತಿರ್ನಿರ್ಗುಣಂ ನಿರ್ವಿಕಾರಂ|
ಸತ್ತಾಮಾತ್ರಂ ನಿರ್ವಿಶೇಷಂ ನಿರೀಹಂ
ಸ ತ್ವಂ ಸಾಕ್ಷಾದ್ವಿಷ್ಣುರಧ್ಯಾತ್ಮದೀಪಃ||

ಜ್ಞಾನಿಗಳು ಯಾವ ರೂಪವನ್ನು ಅವ್ಯಕ್ತವೆಂದೂ, ಮೊಟ್ಟಮೊದಲನೆಯದೆಂದು ಕೊಂಡಾಡುವರೋ, ವಿಶ್ವವಿಕಾಸಕ್ಕೆ ಕಾರಣನಾದ ಬ್ರಹ್ಮವೆಂದೂ, ಜ್ಯೋತಿಯೆಂದೂ, ಸತ್ವ-ರಜಸ್ಸು-ತಮಸ್ಸೆಂಬ ಗುಣತ್ರಯಗಳನ್ನು ಮೀರಿದುದೆಂದೂ, ಯಾವ ವಿಕಾರಕ್ಕೂ ಒಳಗಾಗದ ಬದುಕೆಂದು ಕೊಂಡಾಡುವರೋ, ಕೇವಲ ಇರುವಿಕೆಯೇ ಯಾವುದರ ಸ್ವಭಾವವೋ, ಯಾವುದು ಯಾವ ವಿಶೇಷವೂ ಇಲ್ಲದ ವಸ್ತುವೋ, ಬಯಕೆ ಸಂಕುಲಗಳಿಗೆ ಸಿಲುಕದೇ ಯಾವುದು ನಿರೀಹವಾಗಿದೆಯೋ, ಅಂತಹ ಅಧ್ಯಾತ್ಮದ ಬೆಳಕಾದ ವಿಷ್ಣುವೇ ನೀನು. ನೀನು ಕೇವಲ ಸಾಮಾನ್ಯ ಶಿಶುವಲ್ಲ.

ಅಂತಹ ದಿವ್ಯದರ್ಶನ ಅವಳನ್ನು ಆನಂದ ಸಮುದ್ರದಲ್ಲಿ ಮುಳುಗಿಸಿತು. ಆದ್ದರಿಂದಲೇ ಅವನು ದೇವಕೀಪರಮಾನಂದ. ಎಲ್ಲ ಜೀವಿಗಳನ್ನೂ ತನ್ನ ತೇಜಸ್ಸಿನಿಂದ ತನ್ನೆಡೆಗೆ ಕರ್ಷಣ ಮಾಡುವುದರಿಂದ, ಎಳೆಯುವುದರಿಂದ ಕೃಷ್ಣ. ಜಗತ್ತನ್ನೇ ನೆಲೆಯೆಡೆಗೊಯ್ಯಬಲ್ಲ ಜಗದ್ಗುರು. ಅವನು ಗೀತಾಚಾರ್ಯನೂ ಹೌದು. ಅಂತೆಯೇ ಸಂಗೀತಾಚಾರ್ಯನೂ ಹೌದು. ಅಂತಹ ಕೃಷ್ಣರೂಪಿಯಾದ ಪರಂಜ್ಯೋತಿಯು ತನ್ನನ್ನು ಪ್ರಕೃತಿಯಲ್ಲಿ ಪ್ರಕಾಶಕ್ಕೆ ತಂದುಕೊಂಡ ದಿನ  ಶ್ರೀಜಯಂತೀ-ಶ್ರೀಕೃಷ್ಣಜನ್ಮಾಷ್ಟಮಿ. ಅಂದು ಭಾರತಾದ್ಯಂತ  ನಲುಮೆಯ ಉತ್ಸವ. ಅಂದು ಮಾತ್ರವೇ ಅಲ್ಲ. ಶ್ರೀಕೃಷ್ಣಪರಂಜ್ಯೋತಿಯ ಹೊಳಹು ಎಲ್ಲಿ ಹೊಳೆಯುವುದೋ  ಅಲ್ಲಿ ನಿತ್ಯೋತ್ಸವ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:11 ಸಂಚಿಕೆ: 05ಜೂನ್ 1982 ತಿಂಗಳಲ್ಲಿ  ಪ್ರಕಟವಾಗಿದೆ.