Showing posts with label 417_ayvmarticle. Show all posts
Showing posts with label 417_ayvmarticle. Show all posts

Wednesday, September 9, 2020

ನಿಜವಾದ ಸಂತೋಷ ಎಲ್ಲಿದೆ ? (Nijavada Santhosha Ellide ?)

ಲೇಖಕಿ : ಶ್ರೀಮತಿ ಚಂಪಕಾ ನರಸಿಂಹ ಭಟ್
 (ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಬದುಕಿನಲ್ಲಿ  ಐಹಿಕ ಸಂಪತ್ತೇ ಸುಖವನ್ನು  ಕೊಡುತ್ತದೆ ಎಂದು ಭಾವಿಸಿದ  ಮನುಜ  ತನ್ನ ಜೀವನವನ್ನೆಲ್ಲ ಈ ಸಂಪತ್ತಿನ ಗಳಿಕೆಗೆ ಮುಡಿಪಾಗಿಸಿದ್ದಾನೆ. ಸಂತೋಷವೆಂದರೆ ಬದುಕಲ್ಲಿ ಪ್ರತಿಜೀವಿಯು ಬಯಸುವ ಒಂದು ಸ್ಥಿತಿವಿಶೇಷ. ಆದರೆ ಏನಾದರೆ ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಗೊಂದಲವಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮಇಂದ್ರಿಯದಳತೆಯ ವಿಷಯಗಳಲ್ಲೇ ಸಂತೋಷವನ್ನು ಕಾಣಲು ಪ್ರಯತ್ನಿಸುವರು.

 ಹಾಗಾದರೆ ನಿಜವಾದ ಸಂತೋಷ ಯಾವುದು, ಎಲ್ಲಿದೆ?  ಯಾವ ಸಂತೋಷ ಶಾಶ್ವತ ಸುಖವನ್ನು ನೀಡುವುದು? ಎಂಬುದು ಚಿಂತನೀಯ ವಿಷಯ. ಸಂತೋಷವೆಂಬುದು ಅಂತಸ್ಥವಾಗಿರುವುದು. ಸಂತೋಷದ ಮೂಲಸ್ರೋತಸ್ಸು ನಮ್ಮೊಳಗೇ ಬೆಳಗುವ ಚೈತನ್ಯ ವಸ್ತು. ಅಂತರಂಗದಲ್ಲಿ ಅದರ ಅನುಭವವಾದರೆ ಅದಕ್ಕೆ ಸಾಟಿಯಾದ ಯಾವ ಸಂತೋಷವೂ ಇಲ್ಲ ಎಂಬುದು ಅದನ್ನು ಒಳಗೆ ಅನುಭವಿಸಿದ ಮುನಿಜನರ ಮಾತು.

ಅತ್ಯಂತ ಪ್ರಸಿದ್ಧವಾದ ತ್ಯಾಗರಾಜರ ಕೀರ್ತನೆಯ ಕಥೆ ಇಲ್ಲಿ ಪ್ರಸ್ತುತ. ತಂಜಾವೂರಿನ ಅರಸು ತಮ್ಮ ಭಟರ ಜೊತೆ ಧನಸಂಪತ್ತಿನ ರಾಶಿಯನ್ನೇ ತ್ಯಾಗರಾಜರಿಗೆ ಕಳುಹಿಸಿ, ರಾಜಸ್ತುತಿಗೈಯುವಂತೆ ಆಮಿಷವನ್ನೊಡ್ಡುತ್ತಾರೆ. ಆದರೆ ಅದರತ್ತ ಕಿರುಗಣ್ಣನ್ನೂ ಹರಿಸದ ತ್ಯಾಗರಾಜರು ತಮ್ಮ "ನಿಧಿ ಚಾಲ ಸುಖಮಾ" ಎಂಬ ಕೀರ್ತನೆಯಲ್ಲಿ "ಮನಸ್ಸೇ, ಯಾವುದು ಶ್ರೇಷ್ಠವಾದ ಸುಖ? (ಪ್ರಾಪಂಚಿಕವಾದ)ನಿಧಿಯೇ? ಅಥವಾ ರಾಮನ ಸನ್ನಿಧಿ ಸೇವೆಯೇ?"' ಎಂದು ಪ್ರಸ್ನಿಸುತ್ತಾರೆ.  ಆ ತ್ಯಾಗರಾಜರಲ್ಲಿ ಬೆಳಗುವ ಆತ್ಮಾರಾಮನ ಭಕ್ತಿಯೇ ಇನ್ನಿಲ್ಲದ ಸಂತೋಷವನ್ನು ನೀಡುವ ಸಂಪತ್ತಾಗಿತ್ತು. 

ಸಂತೋಷವೆಂಬುದು ಆತ್ಮನಿಂದ ದೇಹ, ಇಂದ್ರಿಯ, ಮನಸ್ಸುಗಳಲ್ಲಿ ಉಂಟಾಗುವ ಸಮಾಧಾನ, ನೆಮ್ಮದಿಯೇ ಆಗಿದೆ.

ಮೂಲದಿಂದ ಬಂದ ರಸ, ವೃಕ್ಷವನ್ನು ನಳನಳಿಸುವಂತೆ ಮಾಡುತ್ತದೆ. ಮೂಲದಿಂದ ಬೇರೆಯಾದರೆ ವೃಕ್ಷವು ನೀರಸವಾಗುತ್ತದೆ. ಎಂದೇ ಆತ್ಮಮೂಲದಿಂದ ಬಂದ ಸಂತೋಷ ಶಾಶ್ವತ, ರಸಮಯ. ಅದಿಲ್ಲವಾದದ್ದು ನಶ್ವರ, ದುಃಖಕಾರಣ ಎನ್ನುವುದು ಜ್ಞಾನಿಗಳ ಮಾತು. ಶ್ರೀರಂಗ ಮಹಾಗುರುಗಳು ಹೇಳಿದಂತೆ " ಎಲ್ಲ ನದಿಗಳೂ, ಉಪನದಿಗಳೂ ಹೇಗೆ ಸಮುದ್ರದಲ್ಲಿ ಸೇರಿ ಆ ಘಟ್ಟ ಮುಗಿಯುತ್ತದೆಯೋ, ಹಾಗೆಯೇ,ಇಂದ್ರಿಯಸ್ರೋತಸ್ಸುಗಳೆಲ್ಲಾ ಪರಮಾತ್ಮನ ನೆಲೆಯಲ್ಲಿ ಸೇರಬೇಕು". ಆತ್ಮಸಂತೋಷಕ್ಕೆ ಸಮನಾದ ಸಂತೋಷ ಇನ್ನೊಂದಿಲ್ಲ ಎಂಬ ಋಷಿಗಳ ಮಾತನ್ನು ಅನುಸರಿಸೋಣ.


ಸೂಚನೆ: 09/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.