Showing posts with label 345_ayvmarticle. Show all posts
Showing posts with label 345_ayvmarticle. Show all posts

Wednesday, June 17, 2020

ನಾವು ಕೊಡುವುದೇ ನಮಗೆ ಬರುವುದು (Navu Koḍuvude Namage Baruvudu)

ಲೇಖಕಿ : ಶ್ರೀಮತಿ ಚಂಪಕಾ ನರಸಿಂಹ ಭಟ್
 (ಪ್ರತಿಕ್ರಿಯಿಸಿರಿ lekhana@ayvm.in)



ಆನಂದನಗರದಲ್ಲಿ ದೇವದತ್ತನೆಂಬ ಸಾತ್ವಿಕ ವಾಸವಾಗಿದ್ದ. ಆತ ದಾನಶೀಲನಾಗಿ ಎಲ್ಲರಿಗೂ ಪ್ರಿಯನಾಗಿದ್ದ. ಶ್ರೀಮಂತನಾಗಿ  ಬದುಕಿ ಇಹಲೋಕ ತ್ಯಜಿಸಿದ. ತಂದೆಯ ಕಾಲಾನಂತರ ಮಗ ದಯಾನಂದ ಆಸ್ತಿಯನ್ನು ಅನುಭವಿಸುತ್ತಾ ಜೀವಿಸುತ್ತಿದ್ದ. ತಂದೆಯಲ್ಲಿರುವ ದಯೆ, ತ್ಯಾಗ ಈ ಯಾವ ಗುಣಗಳನ್ನೂ ಬೆಳೆಸಿಕೊಳ್ಳಲಿಲ್ಲ. ತನ್ನ ಬಳಿ ಇರುವ ಸಂಪತ್ತನ್ನು ಯಾರಿಗೂ ಕೊಡುತ್ತಿರಲಿಲ್ಲ. ಸ್ವಾರ್ಥಪರತೆ ಹೆಚ್ಚಾದಂತೆ ಅವನ ಹೆಂಡತಿಮಕ್ಕಳು ಅವನೊಂದಿಗೆ  ಬದುಕಲಾಗದೇ ಅವನನ್ನು ತ್ಯಜಿಸಿದರು. ಒಂಟಿಯಾದರೂ ತನ್ನ ಬುದ್ಧಿಯನ್ನು  ಬಿಡಲಿಲ್ಲ. ಒಮ್ಮೆ ಪಕ್ಕದ ಹಳ್ಳಿ ಪ್ರವಾಹದಿಂದ ಕೊಚ್ಚಿಹೋಯಿತು.. ಆನಂದನಗರಿಯ ಊರವರೆಲ್ಲ ಸೇರಿ ಎಲ್ಲಾ ರೀತಿಯ ಸಹಾಯ ಮಾಡಲು ನಿರ್ಧರಿಸಿದರು. ಸಹಾಯಕ್ಕಾಗಿ ಶ್ರೀಮಂತನಾದ  ದಯಾನಂದನ ಮನೆಗೆ ಬಂದಾಗ, ಆತ ತನ್ನ ಬಳಿ ಹಣವಿಲ್ಲ, ಒಂದಿಷ್ಟು ಹಳೆಯ ಬಟ್ಟೆಗಳಿವೆ, ಅದನ್ನೇ ಉಪಯೋಗಿಸಿ ಎಂದು ಕೊಟ್ಟುಕಳುಹಿದ. ಹಳ್ಳಿಯವರಿಗೆ ನಿರಾಸೆಯಾಯಿತು. ಸರಿ ಅಷ್ಟಾದರೂ ಸಿಕ್ಕಿತಲ್ಲ ಎಂದು ಸಮಾಧಾನ ಪಟ್ಟುಕೊಂಡರು. ಕೆಲವು ದಿನಗಳ ನಂತರ  ಆನಂದನಗರಿಗೂ ಪ್ರವಾಹ ಅಪ್ಪಳಿಸಿತು.ದಯಾನಂದನನ್ನು ಸೇರಿ ಎಲ್ಲರೂ ನಿರಾಶ್ರಿತರಾದರು. ಹಿಂದೆ ಸಂಗ್ರಹಿಸಿದ ಬಟ್ಟೆಗಳಲ್ಲಿ ಮಿಕ್ಕಿದ್ದನ್ನು ಹಂಚಿದರು. ದಯಾನಂದ ಒಮ್ಮೆ ಪೆಚ್ಚಾದ. ಕಾರಣ ಅವನು ಕೊಟ್ಟ ಹರಿದ ಬಟ್ಟೆಗಳೇ ಅವನಿಗೆ ಸಿಕ್ಕಿತ್ತು. ಹೀಗೆ ನಾವು ಕೊಡುವುದೇ ನಮಗೆ ಬರುವುದು.

ತ್ಯಾಗವೆನ್ನುವುದು ಅತ್ಯಂತ ಶ್ರೇಷ್ಠವಾದ ಸದ್ಗುಣ. ಸೃಷ್ಟಿ ತನ್ನ ಪ್ರತಿ ನಡೆಯಲ್ಲೂ ಇದನ್ನೇ ಸಾರಿ ಹೇಳುತ್ತಿದೆ. ಬೀಜದಿಂದ ಮೊಳಕೆ. ಮೊಳಕೆ ತಾನು ಕಾಂಡಕ್ಕೆ ಕೊಟ್ಟುಕೊಳ್ಳುತ್ತೆ. ಕಾಂಡ ಕೊಂಬೆಗಳಿಗೆ, ಹೀಗೆ ಮುಂದಿನ ವಿಕಾಸಕ್ಕೆ ತಮ್ಮನ್ನು ಕೊಟ್ಟುಕೊಳ್ಳುವುದರಿಂದಲೇ ನಾವು ಕಡೆಯಲ್ಲಿ ಆ ವೃಕ್ಷದಿಂದ ಫಲವನ್ನು ಕಾಣಲು ಸಾಧ್ಯ.  ಇಂದು ಒಳಿತು ಬಯಸಿದರೆ ಮುಂದೆ ಒಳಿತೆಂಬ ಫಲವೇ ಲಭ್ಯ. "ಜೀವ-ಜೀವನ, ಜೀವನೋಪಕರಣ ಇವೆಲ್ಲವನ್ನೂ ಒಂದು ಹದವಾಗಿ,ವ್ಯವಸ್ಥಿತವಾಗಿ ಮಾಡಿಕೊಂಡು ಅದಕ್ಕೆ ತಕ್ಕಂತೆ ಒಂದು ದಾನಕ್ರಿಯೆಯನ್ನು ಇಟ್ಟುಕೊಂಡರೆ ಅದು ಋಷಿಪಂಥಕ್ಕೆ ಸೇರಿದ ಒಂದು ದಾನಕ್ರಿಯೆ " ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ದಾನವೆಂಬ ಗುಣವನ್ನು ಬೆಳೆಸಿಕೊಂಡು ನಾವೂ ಋಷಿಪಥದಲ್ಲಿ ಸಾಗೋಣ.

ಸೂಚನೆ: 17/06/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.