ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 73 ಶ್ರಾದ್ಧವು ನಷ್ಟವಾಗುವುದು ಯಾವಾಗ ?
ಉತ್ತರ - ಶ್ರೋತ್ರಿಯನಾದ ಋತ್ವಿಜ ಸಿಗದಿರುವಾಗ.
ಇಂದಿನ ದಿನಮಾನದಲ್ಲಿ ಕೇವಲ ಶಬ್ದವನ್ನು ಮಾತ್ರ ಕೇಳಿ ಅದರ ಅರ್ಥ ಸ್ವಲ್ಪವೂ ತಿಳಿದಿಲ್ಲ ಎಂಬ ಶಬ್ದಗಳಿದ್ದರೆ ಅವು ಶ್ರಾದ್ಧ ಮತ್ತು ಶ್ರೋತ್ರಿಯ ಎಂಬ ಶಬ್ದಗಳು. ಶ್ರದ್ಧೆಯಿಂದ ಮಾಡುವ ಕರ್ಮಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಆದರೆ ಈ ಪದವು ಮೃತರಾದ ಮಾತಾಪಿತೃಗಳಿಗೆ ಮಾಡುವ ಪಿಂಡ ತರ್ಪಣಾದಿ ವಿಧಾನಗಳಿಗೆ ಬಳಕೆಯಾಗುತ್ತಿದೆ. ಯಾವದಿನ ತಂದೆ ಅಥವಾ ತಾಯಿ ಇಹಲೋಕವನ್ನು ತ್ಯಜಿಸಿರುತ್ತಾರೋ ಪ್ರತಿವರ್ಷ ಅದೇದಿನದಂದು ಅವರನ್ನು ಉದ್ದೇಶವಾಗಿಟ್ಟುಕೊಂಡು ಅವರ ಮಕ್ಕಳು ಈ ಕಾರ್ಯವನ್ನು ಮಾಡುತ್ತಾರೆ. ಇದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂಬುದಾಗಿ ಭಾರತೀಯ ಸಂಸ್ಕೃತಿಯಲ್ಲಿ ಭಾವಿಸಲಾಗುತ್ತದೆ. ಪಿತೃ ಋಣವನ್ನು ತೀರಿಸಿಕೊಳ್ಳಲು ಅವರ ಮರಣಾನಂತರ ಮಕ್ಕಳಿಗೆ ಇರುವ ಉತ್ತಮ ಅವಕಾಶವಿದಾಗಿದೆ. ಯಾವನು ತಂದೆತಾಯಿಯರು ಇರುವಾಗ ಚೆನ್ನಾಗಿ ನೋಡಿಕೊಳ್ಳುತ್ತಾನೋ, ಅಂತವನ ಜವಾಬ್ದಾರಿಯಲ್ಲಿ ಇದೂ ಒಂದಾಗಿದೆ. ಇಂತಹ ಶ್ರಾದ್ಧವನ್ನು ಪರಿಪೂರ್ಣವಾಗಿ ಮಾಡಬೇಕಾದರೆ ಅಲ್ಲಿ ಭೋಜನಕ್ಕೆ ಬ್ರಾಹ್ಮಣರನ್ನು ಕರೆಸಲಾಗಿತ್ತದೆ. ಕರೆಯಲಾದ ಬ್ರಾಹ್ಮಣರನ್ನು ಗತಿಸಿದ ಪಿತೃರೂಪದಲ್ಲಿ ಅರ್ಚಿಸಲಾಗುತ್ತಾದೆ. ಪಿತೃ - ಪಿತಾಮಹ - ಪ್ರಪಿತಾಮಹ, ಅಪ್ಪ - ಅಜ್ಜ - ಮುತ್ತಜ್ಜ ಹೀಗೆ ಮೂವರನ್ನು ಬ್ರಾಹ್ಮಣರಲ್ಲಿ ಆವಾಹಿಸಲಾಗುತ್ತದೆ. ಅಲ್ಲಿ ಅವರಿಗೆ ಪೂಜನ ದಾನ ಭೋಜನ ಮೊದಲಾದವುಗಳಿಂದ ತೃಪ್ತಿಮಾಡಿಸಬೇಕಾಗುತ್ತದೆ. ಇವರ ತೃಪ್ತಿಯು ಗತಿಸಿದ ಪಿತೃವರ್ಗಕ್ಕೆ ತೃಪ್ತಿದಾಯಕವಾದುದು ಎಂದು ಭಾವಿಸಲಾಗುತ್ತದೆ.
ಶ್ರಾದ್ಧಕ್ಕಾಗಿ ಬಂದ ಬ್ರಾಹ್ಮಣರು ಯಾವ ರೀತಿ ಉತ್ತಮರಾಗಿರುತ್ತಾರೋ ಅಷ್ಟು ಶ್ರಾದ್ಧ ಫಲಪ್ರದ ಎಂದೂ ಭಾವಿಸಲಾಗುತ್ತದೆ. ಆ ಶ್ರಾದ್ಧಕ್ಕೆ ಒಬ್ಬ ವೇದ ವೇದಾಂಗ ಪಾರಗನಾಗ ಬ್ರಾಹ್ಮಣನು ಪೂರ್ವಪಂಕ್ತಿಭೋಜನಕ್ಕೆ ಬಂದರೆ ಅದು ಅತ್ಯಂತ ಶ್ರೇಷ್ಠವಾದ ಶ್ರಾದ್ಧ ಎಂದು ಕರೆಯಲಾಗುತ್ತದೆ. ಅಂತಹ ಬ್ರಾಹ್ಮಣನನ್ನು ಶ್ರೋತ್ರಿಯ ಎಂದೂ ಕರೆಯುತ್ತಾರೆ. ಈ ಪರಿಯಾದ ವಿಪ್ರೋತ್ತಮನು ಯಾವಾಗ ನಮ್ಮ ಮನೆಗೆ ಬರುತ್ತಾನೋ ಅದೇ ದಿನ ಶ್ರಾದ್ಧವನ್ನು ಮಾಡಬೇಕು. ಆ ದಿನ ಪಿತೃಗಳ ವಾರ್ಷಿಕ ಶ್ರಾದ್ಧದ ದಿನವಲ್ಲದಿದ್ದರೂ ಶ್ರೋತ್ರಿಯರ ಆಗಮನವು ಆ ದಿನವನ್ನು ಶ್ರೇಷ್ಠವೆಂದು ಪರಿಗಣಿಸಿ, ಅಂದೇ ಶ್ರಾದ್ಧವನ್ನು ಆಚರಿಸಬಹುದು ಎನ್ನುವಷ್ಟರ ಮಟ್ಟಿಗೆ ಶ್ರೋತ್ರಿಯನ ಮಹತ್ತ್ವವನ್ನು ಶ್ರಾದ್ಧಕ್ಕೆ ಹೇಳಲಾಗಿದೆ. ಇಲ್ಲಿ ಯಕ್ಷನ ಪ್ರಶ್ನೆಯು ಅರ್ಥವಾಗಬೇಕಾದರೆ ಈ ವಿಷಯವನ್ನು ಅರ್ಥಮಾಡಿಕೊಂಡರೆ ಹೆಚ್ಚು ಸೂಕ್ತ. ಯಾವ ಶ್ರಾದ್ಧವು ಮಾಡಿದರೂ ಮಾಡದಂತೆಯೇ ಆಗುತ್ತದೆ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಒಬ್ಬ ಸರ್ವಗುಣಸಂಪನ್ನನಾದ ಶ್ರೋತ್ರಿಯ ಸಿಗದಿದ್ದಾಗ ಎಂಬ ಉತ್ತರವನ್ನು ಧರ್ಮರಾಜನು ನೀಡುತ್ತಾನೆ. ಈ ಪ್ರಶ್ನೆಯಿಂದ ನಮಗೆ ಅರ್ಥವಾಗುವುದು ಇಷ್ಟೇ ಶ್ರಾದ್ಧಕ್ಕೆ ಶ್ರೋತ್ರಿಯ ಎಷ್ಟು ಮುಖ್ಯ ಎಂದು. ಶ್ರೋತ್ರಿಯ ಎನಿಸಿಕೊಳ್ಳಬೇಕಾದರೆ ಆತ ವೇದ ಶಾಸ್ತ್ರ ಮೊದಲಾದ ವಿದ್ಯಾಸಂಪನ್ನನಾಗಿರಬೇಕು. ಅಷ್ಟೆ ಅಲ್ಲದೆ ವೇದಶಾಸ್ತ್ರಗಳ ತತ್ತ್ವವನ್ನು ತಿಳಿದವನಾಗಿರಬೇಕು. ಅಂತಹ ವಿದ್ಯಾಸಂಪನ್ನನೂ ವಿನಯ, ಶೀಲ, ಸಚ್ಚಾರಿತ್ರ್ಯ, ಸಂಸ್ಕಾರ,, ಮೊದಲಾದವುಗಳಿಂದ ಕೂಡಿದವನಾಗಿರಬೇಕು. ಇವನೇ ನಿಜವಾಗಿಯೂ ಶ್ರಾದ್ಧಭೋಜನ ಮಾಡಲು ಅರ್ಹ. ಅವನಿಲ್ಲದಿದ್ದರೆ ಅಂದರೆ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡದ ಬ್ರಾಹ್ಮಣನನಿಂದ ಮಾಡಿದ ಶ್ರಾದ್ಧ ನಿಷ್ಫಲ ಅಷ್ಟೇ. ಇಂದಿನ ದಿನಗಳಲ್ಲಿ ಶ್ರೋತ್ರಿಯರೇ ಸಿಗುತ್ತಿಲ್ಲ. ಆದ್ದರಿಂದ ಇಂದು ನಡೆಯುತ್ತಿರುವ ಶ್ರಾದ್ಧ ಎಷ್ಟರಮಟ್ಟಿಗೆ ಪರಿಪೂರ್ಣ ?
ಸೂಚನೆ : 28/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.