Wednesday, November 3, 2021

ದೀಪಾವಳಿಯ ಒಳ-ಹೊರ ಸೊಬಗು (Deepavaliya Ola-Hora Sobagu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಸರ್ವವಿಧ ಸೊಗಸು ಸಮೃದ್ಧಿಗಳ ಸಾಲುಸಾಲಿನ ಸಂಭ್ರಮಗಳಿಗೆ ಮತ್ತೊಂದು ಹೆಸರೇ ಭಾರತೀಯ ಸಂಸ್ಕೃತಿ. ಪ್ರಪಂಚದಲ್ಲಿಯೇ ಮೊತ್ತ ಮೊದಲಿಗೆ ಭಗವಂತನನ್ನು ಬೆಳಕೆಂಬುದಾಗಿ ಕಂಡು, - "ತಮಸೋ ಮಾ ಜ್ಯೋತಿರ್ ಗಮಯ" ಎಂದು ಕತ್ತಲೆಯಿಂದ ಬೆಳಕಿನತ್ತ ಸಾಗುವ  ಪರಿಯನ್ನು ಸಹಸ್ರಾರು ಸಂವತ್ಸರಗಳಿಂದಲೂ ಸಾರಿಕೊಂಡು ಬಂದಿರುವ  ಸರ್ವಮೂಲ-ಸಂಸ್ಕೃತಿಯಿದು. ಹೊರಬೆಳಕನ್ನು ಒಳಬೆಳಕಿಗೆ ದಾರಿದೀಪವಾಗಿಸಿದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಎಷ್ಟಾದರೂ 'ಭಾರತ' ಎಂಬಲ್ಲಿಯ 'ಭಾ' ಎಂದರೇ ಬೆಳಕೆಂಬ ಅರ್ಥವಲ್ಲವೆ?

ದೀಪಕ್ಕೆಂದೇ ಇರುವ ಹಬ್ಬದ ಹೆಗ್ಗಳಿಕೆಯನ್ನು ಹಂಚಿಕೊಳ್ಳೋಣ, ಬನ್ನಿ.

ನಾನಾ ಪ್ರಶ್ನೆಗಳು

ಏನಿದೀ "ಹಬ್ಬ"? ಇದೇಕಿಷ್ಟು ಹಬ್ಬಗಳು? ಇಷ್ಟು ದೇವತೆಗಳು? - ಎಂಬ ಪ್ರಶ್ನೆಗಳಲ್ಲದೆ, ಈ ಹಬ್ಬ ಎಷ್ಟು ಪ್ರಾಚೀನ? ಇದರ ಆಚರಣೆಗಳು ಎಲ್ಲಿ ಹೇಗೆ? ಇವಕ್ಕೆ ಹಿನ್ನೆಲೆಯಾದ ಪೌರಾಣಿಕ ಕಥೆಗಳೇನು? ಅವುಗಳ ತತ್ತ್ವ-ಮಹತ್ತ್ವಗಳೇನು? ಇವನ್ನು ಆಚರಿಸದ ಹಿಂದುಗಳೂ ಉಂಟೆ? – ಎಂಬೀ ಕೆಲವು ಪ್ರಶ್ನೆಗಳಿಗೆ ಸಂಕ್ಷೇಪವಾದ ಉತ್ತರಗಳನ್ನು ಕೊಡಲು ಒಂದು ಯತ್ನವಿಲ್ಲಿದೆ.

ಆವಲಿ(ಅಥವಾ ಆವಲೀ)ಯೆಂದರೆ 'ಸಾಲು'. ದೀಪಗಳ ಆವಲಿಯೇ ದೀಪಾವಲಿ. ಭಾರತೀಯರ ಹಬ್ಬಗಳ ಸಾಲಿನಲ್ಲಿ ಈ ದೀಪಗಳ ಸಾಲುಗಳ ಹಬ್ಬ ಹಿರಿದಾದ ಹಬ್ಬವೇ ಸರಿ.

ವ್ಯಾಪ್ತಿ

ಜೈನರು, ಸಿಕ್ಖರು, ಬೌದ್ಧರು ಸಹ ಆಚರಿಸುವ ಹಬ್ಬವಿದು. ಸಿಕ್ಖ-ಜೈನ-ಬೌದ್ಧರೂ ವಾಸ್ತವವಾಗಿ ಹಿಂದುಗಳೇ ಆಗಿರುವುದರಿಂದ, ಹಿಂದುಗಳೆಲ್ಲರ ಹಬ್ಬವೇ ಈ ದೀಪಾವಳಿ. ಕನ್ನಡದಲ್ಲೇ ಇದರ ಬೇರೆ ಬೇರೆ ಅಂಗಗಳಿಗೆ ಹಟ್ಟಿಯ ಹಬ್ಬ, ಲಕ್ಕವ್ವನ ಪೂಜೆ, ಭಾವಬಿದಿಗೆ, ಅಕ್ಕನ ತದಿಗೆ, ಅಳಿಯನ ಹಬ್ಬ ಎಂದು ಮುಂತಾಗಿ ಹೆಸರುಗಳುಂಟು. ಭಾಈದೂಜ-ಭಾಉಬೀಜ-ಭಾಈತಿಲಕ, ವಿಶ್ವಕರ್ಮಪೂಜಾಗಳಲ್ಲದೆ, ಸುಖಸುಪ್ತಿಕಾ-ಸುಖರಾತ್ರಿ-ಯಕ್ಷರಾತ್ರಿಗಳೂ, ಕೌಮುದೀಮಹೋತ್ಸವ, ಧನ್ತೇರಸ್, ಧನತ್ರಯೋದಶೀ,  ನರಕಚತುರ್ದಶೀ, ಬಲಿಪಾಡ್ಯಮೀ-ಬಲಿಪ್ರತಿಪದಾ-ವೀರಪ್ರತಿಪದಾ- ದೀಪಪ್ರತಿಪದಾ, ಹಾಗೂ ಭಗಿನೀದ್ವಿತೀಯಾ-ಸೋದರಬಿದಿಗೆ - ಎಂಬೀ ಅಭಿಧಾನಗಳೂ ಈ ಹಬ್ಬಗಳ ಸಾಲಿನಲ್ಲಿ ಅನ್ವಿತ.

 

೧೦ ದಿನಗಳ ದಸರಾ ಮುಗಿದು ೨೦ ದಿನಗಳಾದ ಮೇಲೆ ಬರುವ ೫ ದಿನಗಳ ಹಬ್ಬವಿದು. ಭಾರತದ ಎಲ್ಲ ಪ್ರಾಂತಗಳಲ್ಲೂ ಇದರ ಆಚರಣೆಯುಂಟು. ತುಳುನಾಡಿನವರು ತುಡರ್ ಪರ್ಬ ಎನ್ನುತ್ತಾರೆ. (ಸಂಸ್ಕೃತದ "ಪರ್ವ"ವೇ ಪರ್ಬವಾಗಿ ಹಬ್ಬವಾಗಿದೆ). ಸಿಂಧಿಯಲ್ಲಿ 'ದಿಯಾರೀ'. ಕಾರ್ತಿಕಮಾಸದ ಈ ದೀಪೋತ್ಸವಕ್ಕೆ ದೀಪಾಲಿಕಾ, ದೀಪ, ದೀಪಾವಲಿ, ದೀಪಾವಳಿಗಳಲ್ಲದೆ ದಿವಾಲಿ, ಬಂದೀಛೋಡ್ ದಿವಸ್, ತೀಹಾರ್, ವಂದನಾ - ಎಂದೂ ಹೆಸರುಗಳುಂಟು.

ವಿದೇಶಗಳಲ್ಲಿ ನೆಲೆಸಿರುವ  ಹಿಂದುಗಳೂ ಇದನ್ನಾಚರಿಸುವವರೇ. ಇಂಗ್ಲೆಂಡ್- ಅಮೆರಿಕಾಗಳಲ್ಲಿ ಸಹ ಇದಕ್ಕಿದೆ ಮಾನ್ಯತೆ. ಅಮೆರಿಕೆಯ ಜಾರ್ಜ್ ಬುಷ್, ಒಬಾಮಾಗಳು ಇದಕ್ಕೆ ಗೌರವವಿತ್ತಿರುವರು; ಬ್ರಿಟನ್ನಿನ ಪ್ರಿನ್ಸ್ ಚಾರ್ಲ್ಸ್ ಸಹ . ಭಾರತ-ನೇಪಾಳ-ಶ್ರೀಲಂಕಾಗಳಲ್ಲದೆ, ಮ್ಯಾನ್ಮಾರ್, ಮಾರಿಷಸ್, ಮಲೇಷಿಯ, ಸಿಂಗಪೂರ್ ಮುಂತಾದ ದೇಶಗಳಲ್ಲಿ ಈ ಹಬ್ಬದ ಆಚರಣೆಗಾಗಿ "ಅಧಿಕೃತರಜೆ"ಯನ್ನೇ ಘೋಷಿಸಲಾಗಿದೆ – ಉಳಿದೆಷ್ಟೋ ಹಬ್ಬಗಳಿಗೆ ಬರೀ "ನಿರ್ಬಂಧಿತ ರಜೆ"ಯಷ್ಟೇ.

ದೇವಸ್ತೋಮಕ್ಕೆ ಸಲ್ಲಿಸುವ ನಮನವೇ ಆಗಿದೆ ಈ ದೀಪಸ್ತೋಮವಾದರೂ. ರಾಮ-ಕೃಷ್ಣ, ಶಿವ-ವಿಷ್ಣು, ಲಕ್ಷ್ಮೀ-ಸರಸ್ವತೀ-ಕಾಳಿ, ಹನುಮಂತ-ಕುಬೇರ-ಧನ್ವಂತರಿ-ವಿಶ್ವಕರ್ಮ, ಯಮ-ಯಮುನೆಯರು ಮುಂತಾಗಿ ಹಲವು ದೇವತೆಗಳಿಗೆ ಪೂಜೆಗಳು ಸಲ್ಲುವ ಹಬ್ಬವಿದು. ಅಸುರನಾದ ಬಲಿಗೂ, ಗೋ-ಗೋವರ್ಧನಗಳಿಗೂ ಪೂಜೆಯುಂಟು. ನಾನಾವರ್ಗದವರಿಗೆ ಇದರ ನಾನಾಂಶಗಳು ಆದರಣೀಯವಾಗಿದ್ದು, ಎಲ್ಲರ ಆಚರಣೆಗಳಲ್ಲಿಯೂ ದೀಪೋತ್ಸವ-ನವವಸ್ತ್ರಧಾರಣ- ಮಧುರಭೋಜನಗಳು ಸೇರಿಕೊಂಡೇ ಇವೆ.

ಇತಿಹಾಸದ ಬೆಳಕು

ಈ ಹಬ್ಬವಾರಂಭವಾದುದೆಂದು? – ಎಂಬುದನ್ನು ಹೇಳಲಸಾಧ್ಯ. ಜೈನರಂತೂ, ಮಹಾವೀರನು ನಿರ್ವಾಣವನ್ನು ಪಡೆದದ್ದೇ (ಕ್ರಿ.ಪೂ ೫೮೭) ದೀಪಾವಳಿಯಂದು; ಹದಿನೆಂಟು ರಾಜರು ಅಂದು ಅಲ್ಲಿ ಉಪಸ್ಥಿತರಿದ್ದರು - ಎನ್ನುತ್ತಾರೆ. ಪದ್ಮಪುರಾಣ, ಸ್ಕಾಂದಪುರಾಣ, ಭವಿಷ್ಯೋತ್ತರಪುರಾಣಗಳಲ್ಲಿ ಈ ಹಬ್ಬದ ಚಿತ್ರಣವಿದೆ. ೭ನೆಯ ಶತಮಾನದ ಶ್ರೀಹರ್ಷನು ಬರೆದ ನಾಗಾನಂದ ನಾಟಕದಲ್ಲಿ ದೀಪಪ್ರತಿಪದುತ್ಸವ ಎಂದಿದನ್ನು ಕರೆದಿದೆ: ವಧೂ-ವರರಿಗೆ ಉಡುಗೊರೆಗಳನ್ನಾಗ ಕೊಡುವುದನ್ನು ಸೂಚಿಸಿದೆ. ಹಾಗೆಯೇ ೯-೧೦ನೇ ಶತಮಾನಗಳಲ್ಲಿದ್ದ ರಾಜಶೇಖರನು ತನ್ನ ಕಾವ್ಯಮೀಮಾಂಸಾ ಗ್ರಂಥದಲ್ಲಿ, ಮನೆಗೆ ಸುಣ್ಣ-ಬಣ್ಣಗಳು, ಎಣ್ಣೆ-ದೀಪಗಳು, ಗೃಹಾಲಂಕಾರ, ರಸ್ತೆ-ಬೀದಿ-ಮಾರುಕಟ್ಟೆಗಳಲ್ಲೆಲ್ಲ ದೀಪಜ್ವಾಲನಗಳು ಈ ಹಬ್ಬದಲ್ಲಾಗುವುದನ್ನು ಹೇಳುತ್ತಾನೆ.

ನಮ್ಮ ದೇಶಕ್ಕೆ ಬಂದ ವಿದೇಶೀಯಾತ್ರಿಕರಲ್ಲಿ ಹಲವರು ಇದನ್ನು ಉಲ್ಲೇಖಿಸಿದ್ದಾರೆ. ಇರಾನಿನ ಅಲ್-ಬಿರೂನಿ (೧೦-೧೧ನೇ ಶತಮಾನಗಳು) ತನ್ನ ತಾರೀಖ್-ಅಲ್-ಹಿಂದ್-ನಲ್ಲಿ ಕಾರ್ತಿಕಮಾಸದ ಅಮಾವಾಸ್ಯೆಯಂದು ನೆರವೇರುವ ಈ ಹಬ್ಬವನ್ನು ಉಲ್ಲೇಖಿಸಿದ್ದಾನೆ. ನಿಕೋಲೋ ಕೊಂಟಿ (೧೪-೧೫ನೇ ಶತಮಾನಗಳು) ಅಂದು ನಡೆಯುತ್ತಿದ್ದ ದೀಪಾವಳಿಯನ್ನು ವಿಸ್ತೃತವಾಗಿಯೇ ಬಣ್ಣಿಸಿದ್ದಾನೆ: "ದೇವಾಲಯಗಳ ಒಳಗೂ ಛಾವಣಿಗಳ ಮೇಲೂ ಲೆಕ್ಕವಿಲ್ಲದಷ್ಟು ದೀಪಗಳನ್ನು ಬೆಳಗಿಸುವರು. ಕುಟುಂಬದವರೆಲ್ಲ ಕಲೆಯುವರು, ನೂತನ ವಸ್ತ್ರಗಳನ್ನು ಧರಿಸುವರು, ಗಾನ-ನರ್ತನಗಳಲ್ಲಿ ತೊಡಗುವರು." ೧೬ನೇ ಶತಮಾನದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದಿದ್ದ ಡೊಮಿಂಗೋ ಪೇಸ್ ಸಹ ಮನೆಮನೆಗಳಲ್ಲೂ ದೇವಾಲಯಗಳಲ್ಲೂ ಬೆಳಗುವ ದೀಪಗಳನ್ನು ಉಲ್ಲೇಖಿಸಿದ್ದಾನೆ.

ಮುಸಲ್ಮಾನರ ದೊರೆ ಅಕ್ಬರನು (೧೬ನೇ ಶತಮಾನದ ಕೊನೆ) ದೀಪಾವಳಿಯಲ್ಲಿ ಪಾಲ್ಗೊಂಡಿದ್ದನೆಂದು ಹೇಳಲಾಗುತ್ತದೆ. ಆದರೆ ಆ ಬಳಿಕ ಬಂದ ಜಹಾಂಗಿರನು (೧೭ನೇ ಶತಮಾನದ ಆದಿ) ಹೋಳಿ-ದೀಪಾವಳಿಗಳ ಆಚರಣೆಯನ್ನು ಪ್ರತಿಬಂಧಿಸಿದನು. ದೀಪಾವಳಿಯನ್ನು ಆಚರಿಸಲು ಪ್ರಯತ್ನ ಮಾಡಿದನೆಂದು ಸಿಕ್ಖರ ಗುರು ಹರಗೋಬಿಂದರನ್ನು ಗ್ವಾಲಿಯರ್ ಕೋಟೆಯ ಜೈಲಿಗೆ ಹಾಕಿದ್ದ ಆ ನೀಚನು ಅವರನ್ನು ಬಿಡುಗಡೆ ಮಾಡಿದ ದಿನವೂ ದೀಪಾವಳಿಯೇ. ಎಂದೇ, "ಬಂದೀಛೋಡ್ ದಿವಸ್" ಎಂದು ಸಿಕ್ಖರು ಅದನ್ನು ಆಚರಿಸುತ್ತಾರೆ. ೧೮ನೇ ಶತಮಾನದಿಂದಾಚೆಗೆ ಹಲವು ಪಾಶ್ಚಾತ್ತ್ಯರು ಹಲವಾರು ಅಂಶಗಳನ್ನು ದಾಖಲಿಸಿರುವುದುಂಟು. ಅವರಲ್ಲಿ ಮೊದಲಿಗನಾದ ಸರ್ ವಿಲಿಯಂ ಜೋನ್ಸ್ ಬಂಗಾಳದಲ್ಲಿ ಹಬ್ಬದ ನಾಲ್ಕು ದಿನಗಳ ಆಚರಣೆಯ ಬಗ್ಗೆ ವಿಸ್ತೃತವಾಗಿಯೇ ಬರೆದಿದ್ದಾನೆ.

ಶಾಸನಗಳಲ್ಲೂ

ಇತ್ತ ಶಾಸನಗಳತ್ತ ದೃಷ್ಟಿ ಹಾಯಿಸಿದರೆ, ೧೦ನೇ ಶತಮಾನದ ರಾಷ್ಟ್ರಕೂಟರ ತಾಮ್ರಪತ್ರವೊಂದರಲ್ಲಿ "ದೀಪೋತ್ಸವ"ವೆಂಬುದಾಗಿ ಇದರ ಉಲ್ಲೇಖವಿದೆ. ಧಾರವಾಡದಲ್ಲಿ ೧೨ನೆಯ ಶತಮಾನದಲ್ಲಿ ಈಶ್ವರನ ದೇವಸ್ಥಾನವೊಂದರಲ್ಲಿ ಈ ಹಬ್ಬದ ಪಾವಿತ್ರ್ಯದ ಬಗ್ಗೆ ಉಲ್ಲೇಖವಿದೆ. ೧೩ನೇ ಶತಮಾನದ ಕೇರಳರಾಜನಾದ ರವಿವರ್ಮಸಂಗ್ರಾಮಧೀರನ ಶಾಸನವೊಂದು ಶ್ರೀರಂಗಂ ದೇವಸ್ಥಾನದಲ್ಲಿ ಲಭ್ಯವಿದ್ದು, ಅದರಲ್ಲಿ "ಕಾರ್ತವೀರ್ಯ-ಸಗರ ಮುಂತಾದವರ ಕಾಲದಿಂದಲೂ ಆಚರಿತವಾಗಿರುವ" ಈ ಹಬ್ಬದ ಉಲ್ಲೇಖವಿದೆಯೆಂದು ಕೀಲ್‍ಹಾರ್ನ್ ಹೇಳುತ್ತಾರೆ. ೧೦ನೇ ಶತಮಾನದ ಸೌಂದತ್ತಿಶಾಸನದಲ್ಲಿ ದೀಪಾವಳೀ ಸಂದರ್ಭದ ಜಿನೇಂದ್ರಪೂಜೆಗೆಂದು ತೈಲದಾನವನ್ನು ಮಾಡಿರುವುದರ ದಾಖಲೆಯೂ ದೊರೆಯುತ್ತದೆ.

ರಾಜಸ್ಥಾನದ ಜಲೋರೆಸ್‍ನ ಮಸೀದಿಯಲ್ಲಿ ಬಳಸಿರುವ ಜೈನದೇವಾಲಯದ ಸ್ತಂಭವೊಂದರಲ್ಲಿ ಸುವರ್ಣಶಿಖರದೊಂದಿಗಿನ ನಾಟಕರಂಗಶಾಲೆಯೊಂದನ್ನು ದೀಪಾವಳಿಯಂದು ಲೋಕಾರ್ಪಣಮಾಡಿರುವುದರ ಉಲ್ಲೇಖವಿದೆ.

ದೀಪಾವಳಿಯ ಆಚರಣೆಯನ್ನು ನಿಲ್ಲಿಸಿರುವ ಪ್ರಸಂಗವೊಂದು ಸಹ ಉಂಟು. ದೀಪಾವಳಿಯ ದಿನದಂದೇ ಮೇಲುಕೋಟೆಯ ೮೦೦ ಮಂದಿ ಮಂಡ್ಯಂ ಐಯ್ಯಂಗಾರ್ಯರ ಹತ್ಯೆಯನ್ನು ನೀಚ ಟಿಪ್ಪುಸುಲ್ತಾನನು ಮಾಡಿದಂದಿನಿಂದ ಮಂಡ್ಯಂ ಐಯ್ಯಂಗಾರ್ಯರು ದೀಪಾವಳಿಯ ಆಚರಣೆಯನ್ನು ತೊರೆದಿದ್ದಾರೆ!

ಆಚರಣೆ

ಕಾರ್ತಿಕಮಾಸದ ಹಬ್ಬವಿದೆಂದಾದರೂ ಕೆಲವೆಡೆ ಆಶ್ವಯುಜಮಾಸವೆಂಬ ನಿರ್ದೇಶವುಂಟು. ಅದಕ್ಕೆ ಕಾರಣವಾದರೂ ಮಾಸಗಳನ್ನು ಅಮಾಂತಮಾಸ-ಪೂರ್ಣಿಮಾಂತಮಾಸಗಳೆಂದು ಎರಡು ಬಗೆಯಲ್ಲಿ ಸೂಚಿಸುವಿಕೆ. ಮಾಸದ ಹೆಸರುಗಳು ಬೇರೆಯಾದರೂ ಆಗಿನ ಕೃಷ್ಣಪಕ್ಷದ ಕೊನೆಯೆರಡು ದಿನಗಳು, ಮುಂದಿನ ಶುಕ್ಲಪಕ್ಷದ ಮೊದಲೆರಡು ದಿನಗಳು, ಮಧ್ಯದ ಅಮಾವಾಸ್ಯೆ - ಹೀಗೆ ಐದು ದಿನಗಳ ಹಬ್ಬವಿದು:ತ್ರಯೋದಶೀ-ಚತುರ್ದಶೀ-ಅಮಾವಾಸ್ಯಾ-ಪ್ರಥಮೆ-ದ್ವಿತೀಯೆಗಳಂದು.

ತ್ರಯೋದಶಿ:  ಅಂದು ರಾತ್ರಿ ಯಮನನ್ನು ಸಂತೋಷಪಡಿಸುವುದಕ್ಕಾಗಿ ಮನೆಯ ಹೊರಗೆ ದೀಪವನ್ನು ಹಚ್ಚಿಡಬೇಕು. ಯಮದೀಪವು ಅಪಮೃತ್ಯುನಿವಾರಕ - ಎನ್ನುತ್ತದೆ ಸ್ಕಾಂದಪುರಾಣ. ದೀಪವಿಡುತ್ತಾ "ಸೂರ್ಯಜಃ ಪ್ರೀಯತಾಂ ಮಮ" ಎನ್ನಬೇಕು: "ಸೂರ್ಯಪುತ್ರನಾದ ಯಮನು ಸಂತೋಷಗೊಳ್ಳಲಿ".

ಆ ರಾತ್ರಿಯೇ ಸ್ನಾನದ ಪಾತ್ರೆಗಳನ್ನು ಫಳಫಳಹೊಳೆಯುವಂತೆ ತೊಳೆಯುವ ಕೆಲಸ; ಹಾಗೂ ಮಾರನೆಯ ದಿನದ ಸ್ನಾನದ ಸಿದ್ಧತೆಗಾಗಿ ನೀರು ತುಂಬಿಸಿಡುವುದು. ಅದೇ "ನೀರು ತುಂಬುವ ಹಬ್ಬ."

ಚತುರ್ದಶಿ: ಪ್ರಾತಃಕಾಲ ಮನೆಯ ಎಲ್ಲರಿಗೂ ಅಭ್ಯಂಗಸ್ನಾನ: ಇದು ನಾರಾಯಣಪ್ರೀತಿಕರ. ಸ್ನಾನಮಾಡುವಾಗ ಅಪಾಮಾರ್ಗ (ಎಂದರೆ ಉತ್ತರಣೆ) ಎಂಬ ಗಿಡದ ಸಣ್ಣ ಕೊಂಬೆಗಳನ್ನು ಮೈಸುತ್ತಲೂ ಮತ್ತೆ ಮತ್ತೆ ಸುತ್ತಿಸುವರು. "ಅಪಾಮಾರ್ಗವೇ ನನ್ನ ಪಾಪವನ್ನು ಹೋಗಲಾಡಿಸು" ಎಂದು ಕೇಳಿಕೊಳ್ಳುತ್ತಾ ಇದನ್ನು ಮಾಡತಕ್ಕದ್ದು. ಪದ್ಮಪುರಾಣವು ಹೇಳುವಂತೆ, ಅಂದು ತೈಲದಲ್ಲಿ ಲಕ್ಷ್ಮಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ; ಅಭ್ಯಂಗ ಮಾಡಿಕೊಂಡವರಿಗೆ ಲಾಭವೆಂದರೆ ಅಲಕ್ಷ್ಮೀಪರಿಹಾರ ಹಾಗೂ ಯಮಲೋಕದ ಅದರ್ಶನ. ಈ ಸ್ನಾನವಾದವರನ್ನು "ಗಂಗಾಸ್ನಾನವಾಯಿತೇ?" ಎಂದೇ ಕೇಳುವುದು.  

ಇದಾದ ಮೇಲೆ ಎಳ್ಳಿನಿಂದ ಯಮತರ್ಪಣ: ಯಮನ ಹದಿನಾಲ್ಕು ಹೆಸರುಗಳನ್ನು ಉಚ್ಚರಿಸುತ್ತಾ ಮಾಡುವುದು: ಯಮ, ಧರ್ಮರಾಜ, ಮೃತ್ಯು, ಅಂತಕ, ವೈವಸ್ವತ, ಕಾಲ, ಸರ್ವಭೂತಕ್ಷಯ, ಔದುಂಬರ, ದಧ್ನ, ನೀಲ, ಪರಮೇಷ್ಠೀ, ವೃಕೋದರ, ಚಿತ್ರ, ಚಿತ್ರಗುಪ್ತ.

ಹಲವಾರು ಸ್ಥಾನಗಳಲ್ಲಿ ದೀಪವನ್ನು ಅಂದು ಹಚ್ಚುವ ಕ್ರಮವಿದೆ. ಮನೆಯ ಅಂಗಳ, ದೇವಾಲಯ, ನದಿ-ಬಾವಿಗಳು, ಉದ್ಯಾನ-ಮುಖ್ಯಬೀದಿ ಇತ್ಯಾದಿ. ಹದಿನಾಲ್ಕು ತರಕಾರಿಗಳನ್ನು ಬಳಸುವುದೂ ಉಂಟು. ಅಂದು ರಾತ್ರಿ 'ಉಲ್ಕಾದಾನ' ಮಾಡುವುದುಂಟು : ಉರಿಯುವ ಕೊಳ್ಳಿಯನ್ನು ಹಿಡಿದುಕೊಂಡು ಗತಿಸಿದವರಿಗೆ ಹಾದಿ ತೋರಲು ಈ ಕ್ರಮ. (ವಿದೇಶದಲ್ಲೆಲ್ಲೋ ಮರಣಹೊಂದಿದವರಿಗಾಗಿಯೂ ಯುದ್ಧದಲ್ಲಿ ಗತಿಸಿದವರಿಗಾಗಿಯೂ ವಿಶೇಷವಾಗಿ ಇದನ್ನು ಮಾಡುವರು - ಎಂಬುದಾಗಿ ವಿಲಿಯಂ ಜೋನ್ಸ್ ಗುರುತುಹಾಕಿಟ್ಟಿದ್ದಾನೆ). ಆ ಉಜ್ಜ್ವಲ-ಜ್ಯೋತಿಸ್ಸನ್ನು ಹಲವೆಡೆ ಪ್ರತಿಷ್ಠಿಸುವುದೂ ಉಂಟು.

ಶಿವ-ವಿಷ್ಣು-ರಾತ್ರಿದೇವತೆಗಳನ್ನು ಅಂದು ಪೂಜಿಸುವರು. ಅಂದು ರಾತ್ರಿಯಷ್ಟೇ ಭೋಜನ. ಸಿಹಿಪದಾರ್ಥಗಳು ಸೇವಿಸುವುದಕ್ಕೆ ಬಾಧವಿಲ್ಲ.

ಅಮಾವಾಸ್ಯೆ: ಐದುದಿನದ ಸಂಭ್ರಮದಲ್ಲಿ ಇದುವೇ ಮಧ್ಯದಿನ. ಈ ದಿನವೂ ಅಭ್ಯಂಗಸ್ನಾನವುಂಟು. ಮಾವು, ಅರಳಿ ಮುಂತಾದ ಮರಗಳ ತೊಗಟೆಯನ್ನು ಅಭ್ಯಂಗದ ನೀರಿನಲ್ಲಿ ಸೇರಿಸುವುದಿದೆ. ಸ್ನಾನವಾದವರಿಗೆ ಮನೆಯ ನಾರಿಯರಿಂದ ಆರತಿ; ಅಮಾವಾಸ್ಯೆಯಾದ್ದರಿಂದ ದೇವತಾಪೂಜೆಯೊಂದಿಗೆ ಪಿತೃಪೂಜೆ (ತರ್ಪಣವಷ್ಟಾದರೂ); ನವವಸ್ತ್ರ-ನವಾಭರಣ-ಧಾರಣ; ಸಂಗೀತದ (ಎಂದರೆ ಗೀತ-ವಾದ್ಯ-ನೃತ್ಯಗಳ) ಆಸ್ವಾದನ. ಲಕ್ಷ್ಮಿಯು ಎಚ್ಚರವಾಗಿರುತ್ತಾಳಾದ್ದರಿಂದ ಇರುಳು ಜಾಗರಣೆ ಪ್ರಶಸ್ತ. ವರ್ತಕರು ತಮ್ಮ ಆಯ-ವ್ಯಯದ ಪುಸ್ತಕಗಳನ್ನು ಪೂಜಿಸಿ, ಗ್ರಾಹಕರಿಗೆ ಸಿಹಿ ಹಂಚಿ, ಹೊಸಲೆಕ್ಕದ ಪುಸ್ತಕವನ್ನರಂಭಿಸುತ್ತಾರೆ. ಕುಬೇರನಿಗೂ ಪೂಜೆ.

ಪ್ರಥಮೆ (ಪಾಡ್ಯ/ಪ್ರತಿಪತ್/ಪ್ರತಿಪದಾ): ಇದುವೆ ಬಲಿಪಾಡ್ಯಮಿಯ ದಿನ. ಐದುದಿನದ ಹಬ್ಬದಲ್ಲಿ ಮುಖ್ಯತಮವಾದ ದಿನ. ಇಂದೂ ಅಭ್ಯಂಗವು ಪ್ರಶಸ್ತವೇ. ಬಲಿರಾಜನ ಚಿತ್ರವನ್ನು ಬಿಡಿಸಿ ಸಕಲೋಪಚಾರದ ಪೂಜೆ; ಜೊತೆಗೀ ಪ್ರಾರ್ಥನೆ:

"ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ | ಭವಿಷ್ಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ ||" ಎಂದರೆ, "ವಿರೋಚನನ ಮಗನಾದ ಬಲಿಪ್ರಭುವೇ, ನಿನಗೆ ನಮಸ್ಕಾರ. ಸುರಶತ್ರುವೇ, ಮುಂದೆ ನೀನೇ ಇಂದ್ರನಾಗತಕ್ಕವನು. ವಿಷ್ಣುಸಾಂನಿಧ್ಯವನ್ನನುಗ್ರಹಿಸು."

ಆ ಬಳಿಕ ಪಗಡೆ-ಜೂಜಾಟಗಳು ಶಾಸ್ತ್ರವಿಹಿತ! ಅಂದು ಗೆದ್ದವರಿಗೆ ವರ್ಷವಿಡೀ ಜಯವಂತೆ! ಅಂದು ಶಿವ-ಪಾರ್ವತಿಯರೇ ಪಗಡೆಯಾಡಿದರಂತೆ, ಪಾರ್ವತಿಗೇ ಜಯವಾಯಿತಂತೆ! ಇದಲ್ಲದೆ ಗೋಪೂಜೆ: ಎತ್ತುಗಳಿಗೆ ಕೆಲಸದಿಂದ ವಿರಾಮ, ಹಾಗೂ ಸ್ನಾನಾಲಂಕಾರ-ಸುಭೋಜನಗಳು; ಗೋ-ಗೋವರ್ಧನ-ಗಿರಿಧರಗೋಪಾಲರಿಗೂ ಪೂಜೆ; ಸರ್ವರಿಗೂ ಅನ್ನಸಂತರ್ಪಣ. ರಾತ್ರಿ ಎಚ್ಚರವಿದ್ದು ವೀರಕ್ಷತ್ರಿಯರ ಕಥೆಗಳನ್ನಾಧರಿಸಿದ ನಾಟಕಗಳನ್ನು ಆಡಬೇಕು/ನೋಡಬೇಕು. ಬಲಿಚಕ್ರವರ್ತಿಯನ್ನು ಉದ್ದೇಶಿಸಿ ಅಂದು ಮಾಡುವ ದಾನ ಕ್ಷಯವಿಲ್ಲದ್ದು.

ದ್ವಿತೀಯೆ(ಬಿದಿಗೆ): ಸೋದರಬಿದಿಗೆ-ಭ್ರಾತೃದ್ವಿತೀಯಾ-ಭಗಿನೀದ್ವಿತೀಯಾ ಎಂದೂ ಇದಕ್ಕೆ ಹೆಸರು. ಯಮ-ಯಮುನೆಯರು ಸೋದರ-ಸೋದರಿಯರು; ಸೂರ್ಯನ ಮಕ್ಕಳಾದ ಇವರ ಪ್ರೀತಿವಿಶ್ವಾಸಗಳು ಆದರ್ಶಪ್ರಾಯವಾದುವು. ಅಂದು ಯಮನು ಯಮುನೆಯ ಮನೆಗೆ ಹೋಗೆ ಅವಳ ಆತಿಥ್ಯವನ್ನು ಪಡೆದ; ಅವಳಿಗೆ ಉಡುಗೊರೆಯಿತ್ತ.  ಇದರ ಅನುಸಾರ, ಸೋದರಿಯಿರುವವರು ಸ್ವಗೃಹದಲ್ಲಿ ಭೋಜನಮಾಡದೆ ಅಂದು ಅಲ್ಲೇ ಹೋಗಿ ಊಟಮಾಡಬೇಕು. (ಇಲ್ಲದವರು ಚಿಕ್ಕಪ್ಪ/ದೊಡ್ಡಪ್ಪ/ ಸ್ನೇಹಿತರ ಹೆಣ್ಣುಮಕ್ಕಳಲ್ಲಿಗೇ ಹೋಗಬಹುದು).

ಆಚರಣೆಯ ಅರ್ಥ

ಮೊದಲು ಬರುವ ಪ್ರಶ್ನೆ- ಹಬ್ಬಗಳು ಬೇಕೇಕೆ? ಇತರ ಪಂಥಗಳಲ್ಲಿ ಎಲ್ಲೋ ಬೆರಳೆಣಿಸುವಷ್ಟು ಹಬ್ಬಗಳಿವೆ; ಇಲ್ಲೇಕೆ ಇಷ್ಟೊಂದು? ಅವುಗಳಿಂದ ವಾಸ್ತವ ಲಾಭವುಂಟೆ? ಎಂಬುದು.

ಹಬ್ಬಗಳೆಂದು ಸಂಪ್ರದಾಯವು ಹೇಳಲಿ ಬಿಡಲಿ, ಜನರು ಪಿಳ್ಳೆನೆವವನ್ನಾದರೂ ಮಾಡಿಕೊಂಡು ಏನೋ ಉತ್ಸವಗಳನ್ನಾಚರಿಸುವವರೇ. (ಉತ್ಸವಪ್ರಿಯಾಃ ಮನುಷ್ಯಾಃ). ನಾಲ್ಕುಮಂದಿ ಸೇರುವುದು; ಭಕ್ಷ್ಯಭೋಜ್ಯಗಳನ್ನು ತಿನ್ನುವುದು - ಇತ್ಯಾದಿಗಳನ್ನು ತಡೆಯುವವರಾರು?

ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಜೀವನವು ಕೇವಲ "ಖಾನಾ-ಪೀನಾ-ಸೋನಾ" ಆದಲ್ಲಿ ಪ್ರಾಣಿಗಳಿಗಿಂತ ಮನುಷ್ಯ ಹೇಗೆ ಭಿನ್ನ? ಇವನ್ನೇ ಅತಿಶಯಿತವಾದ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಜಾಣತನವಿದೆ. 'ಉತ್ಸವ' ಎಂಬ ಪದವೇ ಒಂದು ತತ್ತ್ವವನ್ನು ಹೇಳುತ್ತದೆ. 'ಸವ' ಎಂದರೆ ಯಜ್ಞ. ನಮ್ಮನ್ನು ಮೇಲ್ಮುಖವಾಗಿ, ಎಂದರೆ ಉತ್ತಮಸ್ಥಿತಿಯತ್ತ ಒಯ್ಯುವ ಸವಗಳೇ ಉತ್ಸವಗಳಾಗುತ್ತವೆ.

ಅಲ್ಲದೆ, ಮಾಡುವ ಒಂದೇ ಕೆಲಸವನ್ನು ಅದಕ್ಕೆ ಯುಕ್ತವಾದ ಸಮಯದಲ್ಲಿ ಮಾಡುವುದರಲ್ಲಿ ಜಾಣ್ಮೆಯಿದೆ. ಹೆಚ್ಚು ಫಲವಿದೆ. ಸಂಧ್ಯಾಕಾಲ-ಗ್ರಹಣಕಾಲಗಳು ಕೆಲಕೆಲಕೆಲಸಗಳಿಗೆ ಪ್ರಶಸ್ತವಲ್ಲವೇ?.

ಹಬ್ಬ ಎಂಬ ಪದವೂ ಮಾರ್ಮಿಕ, ಸಂಸ್ಕೃತದ 'ಪರ್ವ' ದಿಂದ ಬಂದದ್ದು. ಪರ್ವವೆಂದರೆ ಗಿಣ್ಣು; ಗಿಣ್ಣು ಸಂಧಿಸ್ಥಾನ; ಅಲ್ಲಿ ರಸವು ಅಧಿಕ. ("ಪರ್ವಣಿ ಪರ್ವಣಿ ರಸವಿಶೇಷಃ"). ಕಾಲವೂ ಜಲ್ಲೆಯಂತೆ; ಅಲ್ಲಿಯ

ದೀಪವೇಕೆ?

ಪ್ರಕೃತ, ದೀಪಗಳನ್ನೇಕೆ ಹಚ್ಚಬೇಕು ದೇವರಿಗೆ? ದೇವರಿಗೇನು ಕಣ್ಣು ಕಾಣದೇ?: ದೀಪವನ್ನು ಹಚ್ಚುವುದು ನಮಗಾಗಿ, ದೇವರಿಗಾಗಲ್ಲ. 'ದೇವ' ಎಂಬ ಶಬ್ದಕ್ಕೆ ಅರ್ಥವೇ 'ಬೆಳಗುವವನು' ಎಂದು. ದೇವತೆಗಳೆಲ್ಲರೂ ಪ್ರಕಾಶಸ್ವರೂಪರೇ. ಮೂಲತತ್ತ್ವವು ಸ್ವಪ್ರಕಾಶವಾದದ್ದು. ನಾವು ಹಚ್ಚುವ ಸೊಡರು ಒಂದು ಸಣ್ಣದಾದ ಅಗ್ನಿ. ತೇಜೋರಾಶಿಯಾದ ಭಗವಂತನ ಮುಂದೆ ಇದೇನು? ಎಲ್ಲಿ ಸೂರ್ಯನೂ ಪ್ರಕಾಶಿಸನೋ, ಚಂದ್ರ-ನಕ್ಷತ್ರಗಳೂ ಬೆಳಗವೋ ಅಂತಹ ಆತನ ಮುಂದೆ ಈ ದೀಪವೇ? "ಬೆಳಕುಗಳಿಗೂ ಬೆಳಕು ಅತ" (ಜ್ಯೋತಿಷಾಮಪಿ ತತ್ ಜ್ಯೋತಿಃ) ಎನ್ನುತ್ತದೆ, ಗೀತೆ. ಪರಂಜ್ಯೋತಿಸ್-ಸ್ವರೂಪನ ಪ್ರತೀಕವಾಗಿಯೇ ದೀಪಗಳನ್ನು ಹಚ್ಚುವುದು.

ಭಗವಂತನ ತಂಪಾದ ತಾಣವು 'ಸತ್'; ನಾವಿರುವ ತಾಪದೆಡೆ ಅಸತ್. ಅವನ ಸ್ಥಾನವು ಜ್ಯೋತಿಸ್; ನಮ್ಮದು ತಮಸ್. ಅವನೆಡೆ ಅಮೃತ; ನಮ್ಮೆಡೆ ಮೃತ್ಯು. ಎಂದೇ ಬೃಹದಾರಣ್ಯಕೋಪನಿಷತ್ತು ಅಸತ್-ತಮಸ್-ಮೃತ್ಯುಸ್ಥಾನಗಳಿಂದ ಸತ್-ಜ್ಯೋತಿಸ್-ಅಮೃತಸ್ಥಾನಗಳಿಗೆ ಒಯ್ಯೆಂದು ಕೇಳಿಕೊಳ್ಳುವುದು.


ಎಂತಹ ದೀಪ?

ಜ್ಯೋತಿಸ್ಸ್ವರೂಪನಾದ ಭಗವಂತನನ್ನು ಪಡೆಯಲು ಹೊರಗಣ ಹಣತೆಯೂ ಒಂದು ಸಾಧನ. ಗೌತಮಧರ್ಮಸೂತ್ರದಂತೆ "ಮೃತ್ಯುವಿನಾಶನೋ ದೀಪಃ". ಆದರೆ ಅದಕ್ಕೂ ಕ್ರಮವುಂಟು. ಜ್ವಾಲೆಯ ಆಕಾರ-ಆಯಾಮ-ವರ್ಣ-ಸ್ಥಾನ-ಸಾಧನಗಳಲ್ಲಿ ಲೆಕ್ಕಾಚಾರವುಂಟು: ಜ್ವಾಲೆಯ ಉದ್ದ ಹೆಬ್ಬೆರಳಿನಷ್ಟು; ಅಲ್ಲೂ ಗಿಣ್ಣಿನಷ್ಟು ಮಾತ್ರ; ಗಾಳಿ ಬೀಸದೆಡೆಯಲ್ಲಿ ತ್ರಿಕೋಣಾಕಾರವಾದ ಗೂಡಿನಲ್ಲಿ ಇಡಬೇಕು; ಹತ್ತಿಯ ಬತ್ತಿ ಉತ್ತಮ; ಗೋಘೃತ (ಹಸುವಿನ ತುಪ್ಪ) ಶ್ರೇಷ್ಠ. ಅದು ಕಣ್ಮನಸ್ಸುಗಳಿಗೆ ಹಿತವಾಗಿರುವಷ್ಟು ಪ್ರಮಾಣದ್ದಾಗಿರಬೇಕೆಂದು ಯೋಗಶಾಸ್ತ್ರಗಳ ಉಕ್ತಿ. ಭಕ್ತಿಯಿಂದ ಆರಂಭ; ನಮಸ್ಕಾರದೊಂದಿಗೆ ಮುಕ್ತಾಯ. ಹೀಗೆ ಕ್ರಮಬದ್ಧವಾಗಿ ಬೆಳಗಿದ ದೀಪವು ಅಪಮೃತ್ಯು-ವಿನಾಶಕವಷ್ಟೇ ಅಲ್ಲದೆ ಭಾಗವತವು ಹೇಳುವ "ವಿಷ್ಣುರಧ್ಯಾತ್ಮದೀಪಃ" ಎಂಬಲ್ಲಿಗೂ ಒಯ್ಯಬಲ್ಲುದು. ಅಧ್ಯಾತ್ಮದೀಪದತ್ತ ಸಾಗುವುದೇ ಜೀವನದ ಗುರಿ.

ಈ ದೃಷ್ಟಿಯಿಂದ ನೋಡುವುದಾದರೆ ಈಗಿನ ಕಾಲದಲ್ಲಿ ವಿದ್ಯುತ್‍ಸೌಲಭ್ಯವೊದಗಿತೆಂದು ಮಾಡಿರುವ ಮಾರ್ಪಾಡುಗಳು ಪ್ರಶಂಸನೀಯವಾಗಿಲ್ಲ. ದೇವಾಲಯದ ಗರ್ಭಗೃಹವು ಭಗವಂತನನ್ನು ದರ್ಶನಮಾಡುವುದಕ್ಕೆಷ್ಟೋ ಅಷ್ಟು ಮಾತ್ರ ಬೆಳಕನ್ನು ಹೊಂದಿರತಕ್ಕದ್ದು. ಆದರೆ ವಿದ್ಯುತ್ತಿನ ಸರಬರಾಜು ಹೇರಳವಾಗಿದೆಯೆಂದೋ ಎಲ್ಲವೂ ಚೆನ್ನಾಗಿ ಕಾಣಲೆಂದೋ ಜಗಮಗಾಯಿಸುವ ದೀಪಗಳನ್ನು ಹಾಕುತ್ತಿರುವುದು ಯೋಗದೃಷ್ಟಿಯಿಂದ ಅಸಾಧುವೇ ಸರಿ. ಮತ್ತೂ ಒಂದು ಅಪಚಾರವಿದೋ: ದೀಪವು ಹತ್ತಿ-ಆರಿ-ಹತ್ತಿ-ಆರಿ ಆಗುತ್ತಿರುವಂತೆ 'ವ್ಯವಸ್ಥೆ' ಮಾಡುವುದು: ಅದು ಮನಸ್ಸಿಗೆ ಚಾಂಚಲ್ಯವರ್ಧಕ! ನಿಷ್ಕಂಪವಾದ ದೀಪವನ್ನೇ ಯೋಗಗ್ರಂಥಗಳು ಸಾರುವುದು. ಇವೆರಡೂ ಅಕ್ರಮಗಳೆಂದು ತಿಳಿಸಿಕೊಟ್ಟವರು ಯೋಗಮರ್ಮವಿದರಾದ ಶ್ರೀರಂಗಮಹಾಗುರುಗಳು.

ದೀಪ-ವೈವಿಧ್ಯ

ದೀವಟಿಗೆಗಳನ್ನು ಹಿಡಿದು ಪಿತೃಗಳಿಗೆ ಸದ್ಗತಿಕಾಣಿಸುವುದೂ ಉಂಟು. ಯಮನಿಗೇ ದೀಪಾರಾಧನೆಯು ಯುಕ್ತವೆನ್ನುವಾಗ ಆತನ ಪ್ರಜೆಗಳೇ ಆದ ಪ್ರಿತೃದೇವತೆಗಳಿಗೂ ದೀಪದರ್ಶನವು ಪ್ರಿಯವಾದುದೇ ಸರಿ. ಪಿತೃಗಳೆಂದರೆ ಭೂತ-ಪ್ರೇತಗಳಲ್ಲ. ಭೂತ-ಪ್ರೇತಗಳಿಗೆ ತಮಸ್ಸೇ ಇಷ್ಟ. ಎಂದೇ ಕಗ್ಗತ್ತಲೆಯಲ್ಲಿ ಆಹಾರಸೇವನೆ-ನಿದ್ರೆ ಮುಂತಾದುವುಗಳನ್ನು ಕೂಡ ಅಪ್ರಶಸ್ತವೆಂದೇ ಹೇಳಲಾಗುತ್ತದೆ.

ದೀಪದಾರತಿಯನ್ನು ದೇವತೆಗಳಿಗೆ ಮಾತ್ರವಲ್ಲ, ಮನುಷ್ಯರಿಗೂ ಗೋವಿಗೂ ಮಾಡುವುದುಂಟು. ದೀಪವು ದೇವಪ್ರತಿನಿಧಿಯೆಂಬ ಭಾವನೆಯಲ್ಲಿದ್ದಲ್ಲಿ, ಅಂತರ್ಯಾಮಿಯ ಪೂಜೆಯು ನೆರವೇರುವುದಲ್ಲದೆ, ಎಷ್ಟೋ ಪೀಡೆಗಳೂ ಕಳೆಯುತ್ತವೆ.

ಇದಲ್ಲದೆ ಆಕಾಶದೀಪವನ್ನೂ ಈ ಸಂದರ್ಭದಲ್ಲಿ ಬೆಳಗುವುದುಂಟು. ಆಳೆತ್ತರದ ಸ್ತಂಭದಲ್ಲಿ ಎಂಟುದಳಗಳ ಗೂಡನ್ನು ಮಾಡಿ, ಅವುಗಳ ಮಧ್ಯಕ್ಕೆ ದೀಪವನ್ನಿಡಬೇಕು. ಇಲ್ಲೂ ತತ್ತ್ವವುಂಟು: ಆಳೆತ್ತರದ ಕಂಭವೆಂದರೆ ಪುರುಷಪ್ರಮಾಣದ ಸ್ತಂಭ; ಹೃದಯದ ನೇರಕ್ಕೆ ಮಾಡಿದ ಗೂಡಿನಲ್ಲಿ ಎಂಟು ದ್ವಾರಗಳಿರಬೇಕೆನ್ನುವುದು ಅಷ್ಟದಳದ ಹೃದಯದ ಪ್ರತೀಕವೇ ಸರಿ; ಮಧ್ಯದಲ್ಲಿ ಬೆಳಕೆಂದರೆ, ಕರ್ಣಿಕಾಸ್ಥಾನದಲ್ಲಿ ಗೋಚರನಾಗುವ ಅಷ್ಟಾಕ್ಷರೀಮಂತ್ರಗೋಚರನಾದ ನಾರಾಯಣನೇ.

ಆಕಾಶದೀಪದ ಮತ್ತೊಂದು ಪರಿಯೆಂದರೆ ಮನೆಗೆ ಹತ್ತಿರದಲ್ಲಿ ಯಜ್ಞಸಂಬಂಧಿಯಾದ ಮರದಿಂದ ಯಜ್ಞಸ್ತಂಭದ ಆಕಾರವನ್ನೇ ಹೊಂದಿರುವ ಕಂಬವನ್ನು ನಿರ್ಮಿಸಿ, ಅಷ್ಟದಿಶೆಗಳಿಗೆ ಬೆಳಕು ಚೆಲ್ಲುವಂತೆ ಅಷ್ಟದ್ವಾರದ ದೀಪಯಂತ್ರವನ್ನು ನಿರ್ಮಿಸಬೇಕು; ಕರ್ಣಿಕಾಸ್ಥಾನದಲ್ಲಿ ಚೆನ್ನಾಗಿ ಬೆಳಗುವ ದೀಪವನ್ನು ಹಚ್ಚಬೇಕು. ಇವಕ್ಕೂ ಪ್ರಯೋಜನಗಳುಂಟು.

ಅಷ್ಟೇ ಅಲ್ಲದೆ, ದೇವರಿಗಾಗಿ ಹಚ್ಚಿದ ದೀಪವನ್ನು ಎಂದಿಗೂ ಆರಿಸಬಾರದು ("ನೈವ ನಿರ್ವಾಪಯೇದ್ ದೀಪಂ"). ಹುಟ್ಟಿದ ಹಬ್ಬವೆಂಬ ಶುಭಸಮಾರಂಭದಂದು ಕ್ಯಾಂಡಲುಗಳನ್ನು ಹಚ್ಚಿ ಉಫ್ ಎಂದು ಊದಿ ಆರಿಸುವುದೂ ಅತ್ಯಂತ ಅನಿಷ್ಟವಾದುದೇ: ಯಾರನ್ನೋ ಕುರುಡಾಗಿ ಅನುಕರಿಸಲು ಹೋಗಿ ಅಮಂಗಳವಾದದ್ದಕ್ಕೆ ತಾವೇ ಎಡೆಮಾಡಿಕೊಟ್ಟಂತಾಗಿದೆ!

ನರಕಾಸುರಸಂಹಾರದ ಗುಟ್ಟು

ಇದೂ ದೀಪತತ್ತ್ವಕ್ಕೆ ಸಂಬಂಧಪಟ್ಟದ್ದೇ. ನರಕಾಸುರನ ನಗರದ ಹೆಸರು ಪ್ರಾಗ್‍ಜ್ಯೋತಿಷಪುರ. ಪ್ರಾಕ್ ಎಂದರೆ ಪೂರ್ವ. ಅಸ್ಸಾಮಿನ ರಾಜ್ಯವಾದ್ದರಿಂದ ಅದು ದೇಶದ ಪೂರ್ವಭಾಗವು ಹೌದೇ. ಆದರೆ ಯೋಗಶಾಸ್ತ್ರದ ದೃಷ್ಟಿಯಿಂದ ಪ್ರಾಕ್ ಎನ್ನುವುದು ಎದುರೇ ಇರುವ, ಮುಂದುಗಡೆಯೇ ಗೋಚರಿಸುವ ಅಂಶ. ಎದುರೇ ಇರುವುದೆಂದರೆ ಇಂದ್ರಿಯಗಳಿಗೆ ವಿಷಯವಾದದ್ದು. ಇಂದ್ರಿಯಗಳು ಬಹಿರ್ಮುಖವಾದಾಗ ತೋರುವ ಬೆಳಕೇ ಪ್ರಾಗ್‍ಜ್ಯೋತಿಸ್. ಅದುವೇ ಅಂತರ್ಮುಖವಾದಾಗ ಗೋಚರವಾಗುವ ಬೆಳಕೆಂದರೆ ಪ್ರತ್ಯಗ್ಜ್ಯೋತಿಸ್ಸಾದ ಸಾಕ್ಷಾದ್ ಭಗವಂತನೇ ಆದ ಶ್ರೀಕೃಷ್ಣ.

ಇಂದ್ರಿಯಗಳ ಬಹಿರ್ಮುಖಪ್ರವೃತ್ತಿಯು ಪ್ರಬಲವಾದಾಗ ಪಾಂಚಭೌತಿಕಜಗತ್ತೇ ಸರ್ವಸ್ವವಾಗಿರುತ್ತದೆ. ಈ ಐದೇ ನರಕನ ಪಂಚದುರ್ಗಗಳು. ನರಕನ ವಶದಲ್ಲಿ ಹದಿನಾರು ಸಾವಿರ ನಾರಿಯರಿದ್ದರೆಂದರೆ, ಹದಿನಾರು ಸಾವಿರ ನಾಡೀಶಕ್ತಿಗಳು ಅವನ ವಶದಲ್ಲಿದ್ದವೆಂದರ್ಥ. ವಾಸ್ತವವಾಗಿ ಈ ಅಸುರನು ನರನಾಗಲಿಲ್ಲ, ನರಕನಾದ: ಅವನ ಕೈಗೆ ಸಿಕ್ಕವರ ಪಾಲಿಗೆ ಅವನೇ ನರಕ; ಅವರ ಪಾಡು ನರಕದ ಪಾಡು. ಆತನ ಹೆಸರೇ ಅದನ್ನು ಮಾರ್ಮಿಕವಾಗಿ ಸೂಚಿಸುವುದು. 'ಕ' ಎಂಬ ಪ್ರತ್ಯಯ ಸೇರಿಸಿದರೆ ನೀಚ ಎಂಬ ಅರ್ಥಬರುವುದುಂಟು: ಶರೀರಕ = ಕುತ್ಸಿತವಾದ ಮೈ. ಕುತ್ಸಿತನಾದ ನರನೇ ನರಕ.

ಆತನನ್ನು ಸಂಹರಿಸಿ, ಅವರಷ್ಟೂ ಮಂದಿಯನ್ನು ಕೃಷ್ಣನು ವಿವಾಹವಾದನೆಂದರೆ, ಭೌತಿಕವಾಗಿ ಅಷ್ಟು ಮಂದಿ ಹೆಣ್ಣುಗಳಿಗೆ ಒಂದು ನೆಲೆಗಾಣಿಸಿದ ಎಂಬರ್ಥ. ತಾತ್ತ್ವಿಕವಾಗಿ ನೋಡಿದಾಗ ಬಹಿರ್ಮುಖಪ್ರವೃತ್ತಿಗೇ ಸೆರೆಸಿಕ್ಕ ನಾಡಿಗಳು ಭೋಗದಾಸಿಯ ಸ್ಥಿತಿಯನ್ನು ತೊರೆದು ಪರಪುರುಷನೆಂದೆನಿಸದ ಪರಮಪುರುಷನ - ಅರ್ಥಾತ್ ಆತ್ಮಸಂಗದ - ಹಾದಿಯನ್ನು ಹಿಡಿಯುವಂತಾಯಿತೆಂದರ್ಥ. ಹೀಗಾಗಿ ಅಂತರ್ಮುಖಪ್ರವೃತ್ತಿಯೇರ್ಪಟ್ಟು ಭವಪಾಶದ ದೆಸೆಯಿಂದಾಗುವ ಬಿಡುಗಡೆಯನ್ನೇ ಇದು ಸೂಚಿಸುವುದು. ಅಂತರ್ಜ್ಯೋತಿಯೆಂದರೆ ಪ್ರತ್ಯಗ್‍ಜ್ಯೋತಿಯೇ. ಹೊರಬೆಳಕಾದ ಪ್ರಾಗ್‍ಜ್ಯೋತಿಷವೆಂಬುದು ಧರ್ಮವಿರೋಧಿಯಾದಲ್ಲಿ, ಅದಕ್ಕೆ ಪ್ರಹಾರವು ಸಿದ್ಧವೆಂಬುದನ್ನು ಇಲ್ಲಿ ಸ್ಪಷ್ಟಪಡಿಸಿದೆ.

ಜೂಜು-ಕಳ್ಳತನಗಳು

ಇವೆರಡೂ ಕೂಡ ಮನುಷ್ಯನನ್ನು ಪಾಪಭಾಗಿಯಾಗಿಸತಕ್ಕವು. ಹಾಗಿರುವಾಗ ಅವನ್ನು ಹಬ್ಬದ ದಿನ ಮಾಡುವುದು ಸರಿಯೇ? ಸಾಲದೆಂಬಂತೆ ಶಿವ-ಪಾರ್ವತಿಯರೇ ಜೂಜಾಡಿದರೆಂಬ ಕಥೆಯನ್ನು ಕಟ್ಟಿ ಅವರನ್ನೂ ನಮ್ಮ ಮಟ್ಟಕ್ಕೆ ಇಳಿಸಬೇಕೇ? - ಎಂದೂ ಪ್ರಶ್ನೆಯುಂಟು.

ನಳ-ಯುಧಿಷ್ಠಿರರ ಕಥೆಗಳಲ್ಲಿ ಜೂಜೆಂಬ ಮೋಜು ಎಷ್ಟು ಕಷ್ಟಕ್ಕೀಡುಮಾಡಿತಲ್ಲವೆ? ಆದರೂ ಕೇವಲ ವಿನೋದಕ್ಕಾಗಿ ಒಮ್ಮೆ ಆಡಿದಲ್ಲಿ ಇವು ಚಟವಾಗವು. ಕ್ರಿಕೆಟ್ಟನ್ನು ಸಹ friendly match ಎಂದು ಆಡುವುದುಂಟು; ಮುಂಗೋಪಿ-ಅವಿವೇಕಿಗಳ ಕೈಗೆ ಸಿಕ್ಕರೆ ಅಲ್ಲೂ ರಂಪಾಟವಾಗುವುದೇ: ಹಾಗೆಂದು ಆ ಆಟವೇ ಬೇಡವೆಂದೇ?

ಇನ್ನು ಪಾರ್ವತೀಪರಮೇಶ್ವರರ ಆಟವೆಂದರೆ ಅದು ನಮ್ಮಾಟದಂತಲ್ಲ. ವಿಷ್ಣು-ಲಕ್ಷ್ಮಿಯರು ಪಗಡೆಯಾಡುವ ಚಿತ್ರವನ್ನು ವೇದಾಂತದೇಶಿಕರು ಕೊಟ್ಟಿದ್ದಾರೆ. ತಾತ್ತ್ವಿಕದೃಷ್ಟಿ ಅಲ್ಲಿ ಸ್ಪಷ್ಟ: ಪಗಡೆಯ ಹಾಸು ತ್ರಿಗುಣಮಯವಾದುದು; ಸೃಷ್ಟಿ-ಲಯಗಳಲ್ಲಿ ಅಧಿಕೃತರಾದವರೇ ದಾಳಗಳು; ವೇದಗಳೂ ನಿತ್ಯಸೂರಿಗಳೂ ಈ ಆಟಕ್ಕೆ ಪ್ರೇಕ್ಷಕರು. ಹೀಗೆ ಜಗದಾಟವೆಲ್ಲ ಭಗವಂತನ ಲೀಲೆಯೆಂಬ ತತ್ತ್ವವನ್ನು ಇದು ಪ್ರತಿಪಾದಿಸುತ್ತದೆ. ಇನ್ನು ಶಿವನು ಸೋತ, ಪಾರ್ವತಿಯು ಗೆದ್ದಳೆಂದು ಹೇಳುವಲ್ಲಿ, ಅಭ್ಯುದಯಕ್ಕೆ ಅಧಿದೇವತೆಯಾದ ಪಾರ್ವತಿಯು ಅನುಗ್ರಹಮುಖಳಾದಳೆಂದೂ, ಲೌಕಿಕವಾದ ಏಳ್ಗೆಯನ್ನು ಬಯಸುವವರಿಗೆ ಕಾರ್ಯಸಿದ್ಧಿಸೂಚಕವಿದೆಂದೂ ತಿಳಿಯತಕ್ಕದ್ದು.

ಕಳ್ಳತನದ ಆಟವನ್ನೂ ಅಂದಾಡುವುದುಂಟು. ಕಳ್ಳತನವೂ ಒಂದು ಕಲೆಯಲ್ಲವೆ? ಅದನ್ನೂ ವಿನೋದಮಾತ್ರಕ್ಕಾಗಿ ಪರಸ್ಪರವಾಗಿ ಆಡಿದಲ್ಲಿ, ಯಾರಲ್ಲಿ ಜಾಣ್ಮೆ-ಕಲಾವಂತಿಕೆಗಳಿವೆಯೆಂಬುದು ಹೊರಪಡುತ್ತದೆ. ಇವೆಲ್ಲವೂ "ಮಾತುಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ" - ಎಂದು ಹೇಳುವ ಪರಿಯೇ. ಅಧಿಕವಾಗಿ ಸಿಹಿಪದಾರ್ಥ ತಿಂದು ಆರೋಗ್ಯ ಹಾಳಾಯಿತೆಂದು ಇನ್ನು ಸಿಹಿಯನ್ನೇ ಯಾರೂ ಮಾಡಬಾರದೆಂದಾಗ್ರಹಿಸುವುದು ತರವೇ? ಅತಿಭುಕ್ತಿ-ಅತೀವೋಕ್ತಿಗಳಾದರೆ ಪ್ರಾಣಕ್ಕೇ ಸಂಚಲ್ಲವೆ? ಮಿತಿಯರಿತಲ್ಲಿ ಯಾವುದೂ ಸರಿಯೇ.

ಸೋದರ-ಸೋದರೀ ಸಂಬಂಧ

ಸೋದರಿಯ ಮನೆಗೆ ಸೋದರನು ಹೋಗಿಬರುವ ಕ್ರಮವನ್ನು ಯಮದ್ವಿತೀಯೆ ಎಂಬ ದಿನದಲ್ಲಿ ತಂದಿದ್ದಾರೆ. ಯಮನೇ ತನ್ನ ಸೋದರಿಯಾದ ಯಮುನೆಯ ಮನೆಗೆ ಹೋಗಿಬರುವ ದಿನವದು. ಅವರ ಸ್ಮರಣೆ ಬರುವಂತೆ ಮಾಡಿರುವುದರ ಉದ್ದೇಶವಿದು. ಇಬ್ಬರೂ ಸೂರ್ಯನ ಮಕ್ಕಳೇ ಆದರೂ, ಯಮನು ಘೋರರೂಪಿ; ಯಮುನೆಯು ಪಾಪಶಮನಿ. ಅವನು ಉಗ್ರ; ಇವಳು ಮೃದುಲೆ! ಆದರೂ ಅಂದು ಪರಸ್ಪರ ಪ್ರೀತಿಯನ್ನು ಹರಿಸುತ್ತಾರೆ. ಯಮುನೆಯು ಮಾತ್ರ ಧರ್ಮರತೆ, ಯಮನು ನಿರ್ಘೃಣ - ಎಂದೇನೂ ಅಲ್ಲ. ಇಬ್ಬರೂ ಮಾಡುತ್ತಿರುವುದೂ ಧರ್ಮಪಾಲನೆಯೇ.

(ಪ್ರ)ವೃತ್ತಿ ವಿವಿಧವಾದರೂ ಲಕ್ಷ್ಯವಿಬ್ಬರದೂ ಏಕವೇ: ಇಬ್ಬರೂ ಒಂದೇ ತಂದೆಯ ಮಕ್ಕಳೇ. ತನ್ನ ನಿಗ್ರಹಬುದ್ಧಿಯಿಂದ ಜನರು ಸನ್ಮಾರ್ಗಕ್ಕೆ ಬರುವಂತೆ ಮಾಡುವವ ಯಮ; ಪಾಪತೊಳೆದು ಜನರು ಸನ್ಮಾರ್ಗಕ್ಕೆ ಬರುವಂತೆ ಅನುಗ್ರಹಬುದ್ಧಿಯಿಂದ ಮಾಡುವವಳು ಯಮುನೆ. "ಪಾಪಕರ್ಮದಲ್ಲಿ ಮನಸ್ಸು ರಮಿಸದಂತೆ ಮಾಡಪ್ಪಾ" - ಎಂದು ಯಮನಲ್ಲಿ ಪ್ರಾರ್ಥನೆ; "ಪುಣ್ಯಕರ್ಮದತ್ತ ಮನಸ್ಸು ಕ್ರಮಿಸುವಂತೆ ಮಾಡಮ್ಮಾ" - ಎಂದು ಯಮುನೆಯಲ್ಲಿ ಪ್ರಾರ್ಥನೆ. ಹೀಗೆ ಆದರ್ಶರಾದ ಸೋದರ-ಸೋದರಿಯರನ್ನು ವಂದಿಸಿ ಅವರ ಆಶೀರ್ವಾದವನ್ನು ಪಡೆದು ಅವರಂತೆ ಇರುವಂತೆ ಅನುಗ್ರಹವನ್ನು ಪಡೆಯುವುದೂ ಜೀವನದ ಒಂದು ಭಾಗ್ಯವೇ.

ಬಲಿಗಾದ "ಮೋಸ"

ಬಲಿಯು ಒಳ್ಳೆಯ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದನಲ್ಲವೆ? ಆತನನ್ನು ಹೀಗೆ "ಬಲಿಹಾಕ"ಬೇಕಿತ್ತೇ? ದಾನವಿತ್ತ ದಾನವನಿಗೆ ದೇವನಿಂದಲೇ ದ್ರೋಹವೇ? ಉಪಕಾರಿಗೆ ಅಪಕಾರವೇ? - ಎಂದೆಲ್ಲ ಪ್ರಶ್ನೆಗಳು. ವಾಸ್ತವವಾಗಿ ಇಂದ್ರನ ರಾಜ್ಯವನ್ನು ಕಿತ್ತುಕೊಂಡ ಬಲಿ ಅಧರ್ಮವನ್ನೇ ಎಸಗಿದ್ದನು. ಆದ್ದರಿಂದ ಅದನ್ನು ಇಂದ್ರನಿಗೆ ಕೊಡಿಸುವ ಸಲುವಾಗಿ ವಿಷ್ಣುವು ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು, ಬಲಿಯನ್ನು ಪಾತಾಳಕ್ಕೆ ಕಳುಹಿಸಿದ್ದು. ಮೇಲ್ನೋಟಕ್ಕೆ ಇದು ಅಧೋಗತಿಯೆಂದು ಕಂಡರೂ, ಸ್ವರ್ಗಾಧಿಕವಾದ ವೈಭವವನ್ನೊಳಗೊಂಡ ಸುತಲಲೋಕದ ಆಧಿಪತ್ಯವು ಆತನಿಗೆ ದೊರಕಿದೆ. ಅದಲ್ಲದೆ ಆತನಿಗೆ ಇಂದ್ರಪದವಿಯೇ ಕಾಲಾನುಕ್ರಮದಲ್ಲಿ ದೊರೆಯಲಿದೆಯೆಂದೇ ಆತನು "ಭವಿಷ್ಯೇಂದ್ರ".

ಭಗವಂತನ ಪಾದಸ್ಪರ್ಶವು ದೊರಕಬೇಕಾದರೆ ಅಹಂಕಾರವು ಮೊದಲು ಪೂರ್ತಿಯಾಗಿ ಅಳಿಯಬೇಕು; ಆದರಿಲ್ಲಿ ಶತ್ರುವಾದ ಅಹಂಕಾರದ ನಿರ್ಗಮನವೂ ಭಗವತ್ಪಾದಸ್ಪರ್ಶವೂ ಸಮಕಾಲದಲ್ಲಿ ನಡೆದಿದೆ! ಬಲಿಯು ಅಸುರನಾದರೂ ಆತನಿಗೆ ಆಸುರಭಾವವು ಮೂಡಿ ತೊಂದರೆ ಕೊಡದಿರಲು ಭಗವಂತನೇ ಆತನಿಗೆ ದ್ವಾರಪಾಲಕನಾಗಿ ತನ್ನ ಸುದರ್ಶನಚಕ್ರದ ರಕ್ಷೆಯನ್ನು ದಯಪಾಲಿಸಿದ್ದಾನೆ! ಸಾಧಾರಣನೋಟಕ್ಕೆ ಬಲಿಗಾದದ್ದು ಮೋಸವೇ. ಮಗುವು ಆಹಾರಸೇವನೆಯ ವಿಷಯದಲ್ಲಿ ತಂಟೆ-ತರಲೆ ಮಾಡಿದಾಗ ತಾಯಿಯು ಸುಳ್ಳು ಹೇಳಿ ಊಟಮಾಡಿಸುವಳಲ್ಲವೆ? ನಾಲಿಗೆಗೆ ಜೇನುತುಪ್ಪ ಸವರಿ ಔಷಧಿಯನ್ನು ರೋಗಿಯ ಬಾಯೊಳಕ್ಕೆ ವೈದ್ಯನು ಇಳಿಸುವನಲ್ಲವೆ?  ಇದೆಲ್ಲವೂ ಹಾಗಾದರೆ ಮೋಸವೆನ್ನೋಣವೇ?

ಮೋಸವೋ ಅಲ್ಲವೋ, ದರ್ಪದ ದಾನವನೆದುರಿಗೆ ದೇವಾಧಿದೇವನಾದವನು ಯಾಚನೆಗಾಗಿ ಕೈಚಾಚುವುದೇ? "ಯಾಚನಾಂತಂ ಹಿ ಗೌರವಂ". ಮಾನ ಕಳೆಯಿತಲ್ಲವೇ? - ಎಂದೂ ಪ್ರಶ್ನೆ. ಮತ್ತೊಬ್ಬರ ಅಥವಾ ಲೋಕದ ಏಳ್ಗೆಗೋಸ್ಕರವಾಗಿ, ಲೋಗರು ಕೀಳಾಗಿ ಕಾಣುವ ಮಾರ್ಗವನ್ನೂ ಮಹಾತ್ಮರು ಕೆಲವೊಮ್ಮೆ ಆಶ್ರಯಿಸುವುದುಂಟು. ಮಾನವೇ ಸರ್ವಸ್ವವೇ?

ಕಥಾತತ್ತ್ವ

ಕಥೆಯ ಮರ್ಮವೂ ಯೋಗದೃಷ್ಟಿಯಿಂದಲೇ ಗೋಚರವಾಗತಕ್ಕುದು. "ಉರೋ ವೇದಿಃ" ಎನ್ನುವಂತೆ ಹೃದಯವೇ ಬಲೀಂದ್ರನ ಯಜ್ಞವೇದಿ. ಆಸುರೀಶಕ್ತಿಯ ಎಡೆ ಮೂಲಾಧಾರ; ಆದರದು ಪ್ರವರ್ಧಮಾನವಾಗಿ ಹೃದಯಪರ್ಯಂತ ಆಕ್ರಮಿಸಿದೆ: ಅಲ್ಲೆಲ್ಲಾ ಆಸುರಭಾವವೇ ತುಂಬಿದೆ. ಆದರೀಗ ಯಜ್ಞವೇದಿಕೆಯೆನಿಸುವ ಹೃದಯಸ್ಥಾನದಲ್ಲಿ ಪರಮಾತ್ಮನಿಗಿಷ್ಟು ಜಾಗವಿತ್ತನಲ್ಲವೇ?: ಪರಮಾತ್ಮಶಕ್ತಿಯು ಬೆಳೆದು ಕ್ಷೇತ್ರವೆನಿಸುವ ಇಡೀ ಶರೀರವನ್ನೇ ಇದೋ ಭಗವನ್ಮಯವಾಗಿಸಿದೆ; ಆಸುರೀಶಕ್ತಿಯನ್ನು ಸ್ವಸ್ಥಾನದಲ್ಲಿ ಕೂರಿಸಿದೆ. ಬಲಿಯ ದೇಹವೋ ಸ್ಥಾನವೋ ಆಸುರವಾಗಿರಬಹುದು, ಆದರೆ ಭಾವವು ದೈವ್ಯವಾಗಿದೆ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದಿಷ್ಟೂ ತತ್ತ್ವರಹಸ್ಯವನ್ನು ಅರುಹಿದವರು. 

"ದಿವಿ ವಾ ಭುವಿ ವಾ ನರಕೇ ವಾ" ಎಂದು ಹೇಳುವಂತೆ, ವಾಸವು ಯಾವ ದೇಶದಲ್ಲಾದರೇನು, ಯಾವ ದೇಹದಲ್ಲಾದರೇನು?: "ನರತ್ವಂ ದೇವತ್ವಂ... ಕೀಟತ್ವಂ" - ಯಾವುದಾದರೂ ಸರಿಯೇ! ಭಗವಚ್ಚರಣ-ಸ್ಮರಣವು ಅನುಸ್ಯೂತವಾಗಿದ್ದರೆ ಅದಕ್ಕಿಂತಲೂ ಹೆಚ್ಚೇನು ಹಿರಿದೇನು?: ಗುರಿಯು ದೊರೆಯದಂತಿದ್ದಾಗ ಎಲ್ಲಿದ್ದರೇನು?; ಗುರಿಯೇ ದೊರೆತಮೇಲೆ ಎಲ್ಲಿದ್ದರೇನು?! 

ಭಗವಂತನನ್ನು ಆರಾಧಿಸುವುದು ಎಷ್ಟು ಪುಣ್ಯಕಾರಿಯೋ ಭಾಗವತರನ್ನು ಅರ್ಚಿಸುವುದೂ ಅಷ್ಟೇ ಪುಣ್ಯಾವಹ. ಬಲೀಂದ್ರನೂ ಪರಮಭಾಗವತನೇ: ಪೂಜೆಗೆ ಅರ್ಹನೇ. ಬಲಿಪಾಡ್ಯಮಿಯಂದು ಭುವಿಗೆ ಅತಿಥಿಯಾಗಿ ಆಗಮಿಸುವ ಆತನಿಗಂದು ಸಲ್ಲಬೇಕಾದುದು ಮಹಾರಾಜಮರ್ಯಾದೆಯೇ ಸರಿ. "ಹೊನ್ನು, ಹೊನ್ನು" ಎನ್ನುತ್ತಾ ಹೊನ್ನಾವರಿಕೆಯನ್ನು ಅಂಗಳದಲ್ಲಿ ಚೆಲ್ಲುತ್ತಾ, ಆತನಿಗೆ ಸ್ವಾಗತಮಾಡುವುದರ ಸೊಗಸೇ ಸೊಗಸಲ್ಲವೇ? ಸುವರ್ಣದ ಸುಮಗಳನ್ನು ಸಲ್ಲಿಸಲಿಕ್ಕೇ ಆತನು ಅರ್ಹನೆನಿಸಿದರೂ, ಹೊನ್ನಿನ ಹೊಳಪನ್ನಷ್ಟೇ  ಹೊಂದಿರುವ ನಾವೀವ ಹೂವು ಸಹ ವರಗುಣಭರಿತವೇ: ಇತ್ತ ಆಯುರ್ವೇದದ ಪ್ರೇಕ್ಷೆಯಿಂದಲೂ ಪಿತ್ತಹರವೇ, ಅತ್ತ ಅತಿಥಿಯ ದೃಷ್ಟಿಗಂತೂ ತುಷ್ಟಿಕರವೇ. ಸಿಂಹಾಸನಕ್ಕೆಂದು ಆಹ್ವಾನಿಸುವಾಗಿನ ಈ ಹರ್ಷದ ಹೆಜ್ಜೆಯು ನೆರೆದ ಸರ್ವರ ಲೋಚನಗಳಿಗೂ ರೋಚಕವೇ.

ಅತ್ತ ಬಹಿರಂಗದ ಜಗವನ್ನೆಲ್ಲ ಜಗಮಗಾಯಮಾನವಾಗಿಸಿ, ಇತ್ತ ಅಂತರಂಗದೊಳಗೆಲ್ಲ ಅನಂತದ ಅರಿವಿನ ಬೆಳಕಿನ ಹೊಳೆಯನ್ನೇ ಹರಿಯಿಸುವ, ಕಣ್ಣಿಗೂ ಮನಸ್ಸಿಗೂ ಆತ್ಮಕ್ಕೂ ಹಬ್ಬವೆನಿಸುವ, ಈ ಉತ್ತಮೋತ್ತಮ ಉತ್ಸವದಲ್ಲಿ ಉತ್ಸಾಹದಿಂದ ನಾವೆಲ್ಲರೂ ಪಾಲ್ಗೊಳ್ಳೋಣವೇ?

ಸೂಚನೆ : 03/11/2021 ರಂದು ಈ ಲೇಖನ ವಿಜಯ ವಾಣಿ ದಿನಪತ್ರಿಕೆಯ ದೀಪಾವಳಿ ವಿಶೇಷಾಂಕ ಅಂಕಣದಲ್ಲಿ ಪ್ರಕಟವಾಗಿದೆ.