Saturday, December 19, 2020

ಯಮ - ಅಪರಿಗ್ರಹ (Yama - Aparigraha)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಪಾತಂಜಲ ಯೋಗಸೂತ್ರದಲ್ಲಿ ಹೇಳಿರುವ ಕೊನೆಯ ಅಂಗವೇ ಅಪರಿಗ್ರಹ. ಪರಿಗ್ರಹ ಎಂದರೆ ದಾನವನ್ನು ಸ್ವೀಕರಿಸುವುದು ಮತ್ತು ಇದರ ನಿಷೇಧವೇ ಅಪರಿಗ್ರಹ. ದಾನವನ್ನು ಸ್ವೀಕರಿಸದೇ ಇರುವುದಷ್ಟೇ ಅಲ್ಲದೇ, ಸ್ವೀಕರಿಸಿದುದರಿಂದ ಉಂಟಾಗುವ ಪದಾರ್ಥ ಸಂಗ್ರಹ ಮತ್ತು ಅದರಿಂದ ಹೆಚ್ಚುವ ಚಿತ್ತವೃತ್ತಿಗಳನ್ನು ತಡೆಯುವುದೇ ಅಪರಿಗ್ರಹದ ಮರ್ಮವಾಗಿದೆ. ಪ್ರತಿ ಪದಾರ್ಥಕ್ಕೂ ಉಪಯೋಗವುಂಟು ಮತ್ತು ಪದಾರ್ಥಗಳು ನಮ್ಮಲ್ಲಿ ಬಂದು ಸೇರಿದರೆ ಅದರ ಸಂರಕ್ಷಣೆ ಮತ್ತು ಉಪಯೋಗದ ಬಗ್ಗೆ ಮನಸ್ಸನ್ನು ಹರಿಸಬೇಕಾಗುತ್ತದೆ ಮತ್ತು ಇದರಿಂದಾಗಿ ಚಿತ್ತವೃತ್ತಿಗಳು ಜಾಸ್ತಿಯಾಗುತ್ತವೆ. ಪದಾರ್ಥ ಸಂಗ್ರಹ ಅವಶ್ಯಕತೆಯನ್ನು ಮೀರಿದಾಗ, ಅದರಿಂದ ಸುಖ ದೊರೆಯುವ ಬದಲು ಮನಸ್ಸಿಗೆ ಹೊರೆಯೇ ಆಗುತ್ತದೆ.

ಧನದಾಹವೇ ತುಳುಕಾಡುತ್ತಿರುವ ಇಂದಿನ ವಿದ್ಯಮಾನದಲ್ಲಿ ಅಪರಿಗ್ರಹವು ಪ್ರಸ್ತುತವೇ ಎನ್ನುವ ಪ್ರಶ್ನೆ ಬರಬಹುದು. ಆದರೆ ಜಪಾನ್ ದೇಶದಲ್ಲಿ ಅಪರಿಗ್ರಹದ ಅನುಷ್ಠಾನದಿಂದ ಉಂಟಾಗಿರುವ ಅಪರಿಮಿತ ಲಾಭವನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ. ಜಪಾನ್ ದೇಶದ ಶಿಂಟೋಯಿಸಮ್ ನಲ್ಲಿ ಕನಿಷ್ಠ ಪದಾರ್ಥ ಸಂಗ್ರಹವು ಒಂದು ಮುಖ್ಯವಾದ ಅಂಗ. ಈ ಅಭ್ಯಾಸವು ಅಲ್ಲಿನ ಸಂಸ್ಕೃತಿಯಲ್ಲಿ ಯಾವ ಮಟ್ಟಿಗೆ ರೂಢಿಯಲ್ಲಿದೆ ಎಂದರೆ, ಜನರು ಮನೆಗೆ ಒಂದು ಹೊಸ ಪದಾರ್ಥ ತರಬೇಕಾದರೆ, ಯಾವ ಹಳೆಯ ಪದಾರ್ಥ ಹೊರಗೆ ಹೋಗಬೇಕೆಂದು ನಿಶ್ಚಯಿಸಿ ನಂತರ ಹೊಸ ಪದಾರ್ಥವನ್ನು ಕೊಳ್ಳುತ್ತಾರೆ. ಅಲ್ಲಿನ ವಾಹನತಯಾರಿಕಾ ಸಂಸ್ಥೆಯಾದ ಟೊಯೋಟ, ಶಿಂಟೋಯಿಸಮ್ ನಿಂದ ಕೈಗಾರಿಕೆಗೆ ಅಳವಡಿಸಿಕೊಂಡಿರುವ ಹಲವು ಅಂಶಗಳಲ್ಲಿ ಕನಿಷ್ಠ ಪದಾರ್ಥ ಸಂಗ್ರಹವೂ ಒಂದು. ಇದು ಲೀನ್ ಮ್ಯಾನುಫ್ಯಾಕ್ಚರಿಂಗ್(Lean manufacturing) ಮತ್ತು ಅದರಲ್ಲಿ ಶೂನ್ಯ ದಾಸ್ತಾನು (Zero inventory) ಎನ್ನುವ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಈ ವಿಧಾನದಿಂದ ಟೊಯೋಟ, ಉತ್ಪಾದನಾ ವೆಚ್ಚವನ್ನು ಇಳಿಸಿ, ಕಡಿಮೆ ದರದಲ್ಲಿ ಉಚ್ಚ ಗುಣಮಟ್ಟದ ವಾಹನಗಳು ಗ್ರಾಹಕರಿಗೆ ದೊರೆಯುವಂತೆ ಮಾಡಿ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಸಾಧಿಸಿತು. ಇಂದು ಜಾಗತಿಕ ಮಟ್ಟದಲ್ಲಿ ಅನೇಕ ಉತ್ಪಾದನಾ ಕ್ಷೇತ್ರಗಳು ಲೀನ್ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಹೀಗೆ ಅಪರಿಗ್ರಹದ ಒಂದು ತತ್ತ್ವವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ ಎಂತಹ ಫಲಿತಾಂಶವನ್ನು ಸಾಧಿಸಬಹುದೆಂದು ಟೊಯೋಟ ತೋರಿಸಿಕೊಟ್ಟಿದೆ.

ಅಪರಿಗ್ರಹ ಯಾರಲ್ಲಿ ಪ್ರತಿಷ್ಠಿತವಾಗಿದೆಯೋ ಅವರಿಗೆ ಪೂರ್ವಜನ್ಮ ಸ್ಮರಣೆಯುಂಟಾಗುತ್ತದೆ ಮತ್ತು ಜನ್ಮಾಂತರದ ಕಾರಣಗಳೂ ತಿಳಿಯುತ್ತವೆ ಎಂದು ಯೋಗಸೂತ್ರವು ಹೇಳುತ್ತದೆ. ಯೋಗಸೂತ್ರವು ಯಮದ ಐದೂ ಅಂಗಗಳನ್ನು ಜಾತಿ, ಕಾಲ, ದೇಶ, ಸಮಯಗಳಿಂದ ಪರಿಮಿತವಾಗದ ಸಾರ್ವಭೌಮ ವ್ರತಗಳೆಂದು ಪರಿಗಣಿಸಿದೆ.

ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .