Thursday, February 9, 2023

ಸಜ್ಜನರನ್ನು ನೋಯಿಸದಿರೋಣ (Sajjanarannu Noyisadirona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಶಕ್ತಿಶಾಲಿಯಾದ ಹುಡುಗನೊಬ್ಬನಿದ್ದ. ಆತ ತನ್ನ ಸಹಪಾಠಿಗಳಿಗೆ ನಿಷ್ಕಾರಣವಾಗಿ ಹೊಡೆಯುತ್ತಿದ್ದ.  ಇವನ ದೌರ್ಜನ್ಯವನ್ನು ಗಮನಿಸಿದ ಅಧ್ಯಾಪಕರೊಬ್ಬರು, ಅವನನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡರು;. ಸುಮ್ಮನೆ ನಗತೊಡಗಿದರು. ಹುಡುಗನಿಗೆ, ಇದೇನೋ ಮೋಜೆನಿಸಿ ತಾನೂ ನಗತೊಡಗಿದ. ಇದ್ದಕ್ಕಿದ್ದಂತೆ  ಅವನನ್ನು ಬೈಯ್ಯಲಾರಂಭಿಸಿದರು. ಹುಡುಗ ಬಹಳ ನೊಂದುಕೊಂಡ. ಮುಂದುವರೆದು, ಅಧ್ಯಾಪಕರು ಹುಡುಗನಿಗೆ ಒಂದು ಬಲವಾದ ಏಟು ಕೊಟ್ಟರು.  ನಿಷ್ಕಾರಣವಾಗಿ ತನಗೇಕೆ ಇವರು ಹೊಡೆದರೆಂದು ತಿಳಿಯದೆ ಹುಡುಗ ಕಸಿವಿಸಿಗೊಂಡ. ಕಣ್ಣಂಚಿನಲ್ಲಿ  ನೀರು ಬಳಬಳನೆ ಹರಿಯಿತು. ಧೈರ್ಯ ಮಾಡಿ, 'ಸುಮ್ಮ ಸುಮ್ಮನೆ ನನ್ನನ್ನೇಕೆ ಹೊಡೆದಿರಿ?' ಎಂದು ಅಧ್ಯಾಪಕರನ್ನು ಕೇಳಿಯೇಬಿಟ್ಟ. 'ನಾನು ಬೈದಾಗ ನಿನ್ನ ಮನಸ್ಸಿಗೆ ನೋವಾಯಿತು; ನಾನು ಹೊಡೆದಾಗ ನಿನ್ನ ಶರೀರಕ್ಕೆ ನೋವಾಯಿತು. ನಮ್ಮಂತೆಯೇ ಇತರರೂ ಅಲ್ಲವೇ? ನಿನ್ನ ಸಹಪಾಠಿಗಳಿಗೆ ನೀನು ವಿನಾಕಾರಣ ನೋವುಂಟು ಮಾಡುವುದು ತರವೇ?' ಎಂದು ಅಧ್ಯಾಪಕರು ಪ್ರಶ್ನಿಸಿದರು. ಹುಡುಗನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನನ್ನು ತಿದ್ದಿಕೊಂಡ. 


"ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್" ಎಂಬ ಆರ್ಯೋಕ್ತಿಯನ್ನು ಶ್ರೀರಂಗಮಹಾಗುರುಗಳು ಉದ್ಧರಿಸುತ್ತಿದ್ದರು. ನಮಗೆ ಯಾವುದು ಪ್ರತಿಕೂಲವೋ ಅದನ್ನು ಇತರರಿಗೂ ಮಾಡಬಾರದು ಎಂಬುದೇ ಈ ಮಾತಿನ ಅಭಿಪ್ರಾಯ. 

 

ಪುರಾಣದ ಕಥೆಗಳಲ್ಲಿ ನಮಗೆ ಆಗಾಗ ಕಾಣಸಿಗುವ ಪ್ರಸಂಗಗಳೆಂದರೆ, ಋಷಿಮುನಿಗಳ ವಿಷಯದಲ್ಲಿ ಯಾರೋ ಒಬ್ಬರು ಅಪಚಾರ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಂತಹವರನ್ನು ಋಷಿಗಳು ಕೋಪದಿಂದ ಶಪಿಸುತ್ತಾರೆ. ಇದೊಂದು ಬಗೆ. ಕೆಲವು ಸಜ್ಜನರಿರುತ್ತಾರೆ. ದುರ್ಜನರಿಂದ ತಮಗಾದ ತೊಂದರೆಯನ್ನು ನುಂಗಿಕೊಂಡು ಸುಮ್ಮನೇ ಹೋಗಿಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿ ತೊಂದರೆ ಕೊಟ್ಟವರಿಗೆ ಅಪಾಯವಿಲ್ಲವೇ? ಎಂಬ ಪ್ರಶ್ನೆ ಕೆಲವರಿಗೆ ಉಂಟಾಗಬಹುದು.


ಸುಭಾಷಿತವೊಂದು ಹೀಗೆ ಹೇಳುತ್ತದೆ-"ಸಜ್ಜನರಿಗೆ ತಾಪವನ್ನು ಕೊಟ್ಟ ಬಳಿಕ 'ಶಾಪವನ್ನು ಕೊಡಿ' ಎಂದು ಕೇಳಲೇಬೇಕಿಲ್ಲ; ಸತ್ಪುರುಷರಿಗೆ ಸಂತೋಷವನ್ನು ಉಂಟುಮಾಡಿ 'ಆಶೀರ್ವದಿಸಿ' ಎಂದು ಕೇಳಲೇಬೇಕಿಲ್ಲ"(ಸತಾಂ ತು ಕೃತ್ವಾ ಸಂತಾಪಂ, ಶಾಪಂ ದೇಹೀತಿ ನೋ ವದೇತ್I  ಕೃತ್ವಾ ಸತಾಂ ತು ಸಂತೋಷಂ ಆಶಿಷಂ ನೈವ ಯಾಚಯೇತ್II) ಶಾಪ / ವರಗಳು ತಂತಾನೇ ಜರುಗಿಬಿಡುತ್ತವೆ!


ಸಜ್ಜನರು ಶಪಿಸದಿದ್ದರೂ ಅವರ ಸಂತಾಪ, ತೊಂದರೆ ಕೊಟ್ಟವರ ಮನಸ್ಸಿಗೆ  ಮಂಕು ಕವಿದಂತೆ ಮಾಡಿಬಿಡುತ್ತದೆ. ಅದಕ್ಕಿಂತ ತೊಂದರೆ ಇನ್ನೇನಿರಲು ಸಾಧ್ಯ? 'ವಿನಾಶಕಾಲೇ ವಿಪರೀತ ಬುದ್ಧಿಃ' ಎಂಬ ನಾಣ್ಣುಡಿ ಪ್ರಸಿದ್ಧವೇ. ಇಲ್ಲಿ'ವಿಪರೀತ' ವೆಂದರೆ 'ಹೆಚ್ಚು' ಎಂದರ್ಥವಲ್ಲ. 'ಪ್ರತಿಕೂಲವಾದದ್ದು, ವಿರುದ್ಧವಾದದ್ದು' ಎಂದು. ಬುದ್ಧಿಗೆಟ್ಟವನು ತನ್ನ ವಿನಾಶಕ್ಕೆ ತಾನೇ ದಾರಿ ಮಾಡಿಕೊಳ್ಳುತ್ತಾನೆ. ಸೀತಾಪಹರಣ ಸಮುಚಿತವಲ್ಲವೆಂದು ಮಾರೀಚ ರಾವಣನಿಗೆ ತಿಳಿಹೇಳುತ್ತಾನೆ. ಆದರೆ ರಾವಣನಿಗೆ ವಿನಾಶಕಾಲ ಸನ್ನಿಹಿತವಾದುದರಿಂದಲೇ ವಿಪರೀತಬುದ್ಧಿಯುಂಟಾಗಿ   ಮಾರೀಚನ ಮಾತು ಹಿತವೆನಿಸುವುದಿಲ್ಲ.


ಇತರರನ್ನು ನೋಯಿಸುವುದೇ ತಪ್ಪು ಎಂದಲ್ಲ. ಮಕ್ಕಳಿಗೆ, ಶಿಷ್ಯರಿಗೆ, ಅಪರಾಧಿಗಳಿಗೆ ಯಥಾಯೋಗ್ಯ ನೋಯಿಸುವುದೇ ಸಚ್ಛಿಕ್ಷಣವಾಗುವುದಾದಲ್ಲಿ, ಅಂತಹ ನೋವು ಸ್ವಾಗತಾರ್ಹವೇ. ಆದರೆ ದುಡುಕುವ ಸ್ವಭಾವದಿಂದಲೋ, ಅಧಿಕಾರದ ಮದದಿಂದಲೋ , ಹಿಂಸಾಪ್ರವೃತ್ತಿಯಿಂದಲೋ ಇತರರನ್ನು ನೋಯಿಸದಿರೋಣ. ಸಜ್ಜನರಿಗೆ ಸಂತೋಷವನ್ನು ಉಂಟುಮಾಡಿ ಅವರಿಂದ ಅಯಾಚಿತವಾಗಿ ಬರುವ ಆಶೀರ್ವಾದಕ್ಕೆ ಭಾಜನರಾಗೋಣ.   


ಸೂಚನೆ: 09/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.