ಕಂಚಿಯ ಪರಮಾಚಾರ್ಯರು ನಡೆದಾಡುವ ದೈವವೆಂದೇ ಪ್ರಸಿದ್ಧರಾಗಿದ್ದವರು. ಒಮ್ಮೆ ದೊಡ್ಡ ವಿದ್ವಾಂಸರೊಬ್ಬರು, ತಾವು ಬಹುಕಾಲ ಕಷ್ಟಪಟ್ಟು ಬರೆದಿದ್ದ ದ್ವೈತಮತ ಖಂಡನಗ್ರಂಥವನ್ನು ಪರಮಾಚಾರ್ಯರಿಗೆ ತೋರಿಸುತ್ತಾರೆ. ಆಗ ಆಚಾರ್ಯರು, "ಇದರಿಂದ ಮೋಕ್ಷ ಸಿಗುವುದೇನು? ನಿಮ್ಮ ಈ ಗ್ರಂಥವನ್ನು ಖಂಡಿಸಿ ಬೇರೊಬ್ಬರೂ ಬರೆಯಬಹುದು. ಇದರಿಂದಾಗಿ ದ್ವೇಷಾಸೂಯೆಗಳು ಬೆಳೆಯುತ್ತವೆ. ಪರಮಾತ್ಮ ನಿಮಗೆ ಕೊಟ್ಟ ಪಾಂಡಿತ್ಯವನ್ನು ಹೀಗೆ ವ್ಯರ್ಥಗೊಳಿಸುವುದೇ? ಇದೇ ಕಾಲವನ್ನು ನೀವು ಪೂಜಾಧ್ಯಾನಗಳಲ್ಲಿ ಕಳೆದಿದ್ದರೆ ನಿಮ್ಮ ಜೀವನ ಸಾರ್ಥಕವಾಗುತ್ತಿತ್ತು" ಎನ್ನುತ್ತಾರೆ.
ಪರಮಾಚಾರ್ಯರ ಮೇಲಿನ ಮಾತು ಸರ್ವಕಾಲಕ್ಕೂ ಪ್ರಸ್ತುತವೇ. ಪರಮಾತ್ಮನ ಸ್ವರೂಪವೇನು? ಅವನನ್ನು ಹೊಂದಲು ಸಾಧನವೇನು? -ಇತ್ಯಾದಿ ವಿಷಯಗಳ ಬಗ್ಗೆ ಬಹುಕಾಲದಿಂದ ಚರ್ಚೆಗಳು ಆಗುತ್ತಲೇ ಇವೆ. ಭಗವತ್ಸ್ವರೂಪವನ್ನು ಕುರಿತಂತೆ ಕೆಲವರಿಗೆ ಕೆಲವು ಮಟ್ಟದ ಅನುಭವಗಳಾಗಿರಬಹುದು. ಮತ್ತೆ ಕೆಲವರು ಅವರವರ ಬುದ್ಧಿಯ ಮಟ್ಟಕ್ಕೆ ತಕ್ಕಂತೆ ತಾರ್ಕಿಕವಾಗಿ ಚಿಂತಿಸಿದಾಗ ಕೆಲವು ವಿಚಾರಗಳು ಸರಿಯೆನಿಸಬಹುದು. ಇವುಗಳನ್ನಿಟ್ಟುಕೊಂಡು ತಮ್ಮದೇ ಆದ ಪಂಥಗಳನ್ನು ಎಷ್ಟೋ ಮಂದಿ ಬೆಳೆಸಿದ್ದಾರೆ. ತಮ್ಮದೇ ಸರಿ ಎಂದು ಪ್ರತಿಪಾದಿಸಬೇಕಾದರೆ ಉಳಿದವರ ಅಭಿಪ್ರಾಯಗಳು ತಪ್ಪು ಎಂದು ಸಾಧಿಸುವುದು ಅನಿವಾರ್ಯವೆಂದು ಭಾವಿಸಿ ಪರಮತ ಖಂಡನಗ್ರಂಥಗಳನ್ನೆಷ್ಟೋ ಬರೆದಿದ್ದಾರೆ. ಆದರೆ ಈ ಪ್ರಕ್ರಿಯೆ ಕೇವಲ ಇತರರ ಅಭಿಪ್ರಾಯಗಳ ಖಂಡನೆಯಲ್ಲಿ ನಿಲ್ಲದೆ, ವ್ಯಕ್ತಿಗತವಾಗಿ ತಿರುಗಿ, ಪರಸ್ಪರ ವೈಮನಸ್ಯಕ್ಕೂ ದಾರಿಮಾಡಿಕೊಟ್ಟು, ಕೆಲವೊಮ್ಮೆ ಹೊಡೆದಾಟಗಳವರೆಗೂ ಮುಂದುವರೆದಿದೆ.
ವಾದಗಳು ಒಳ್ಳೆಯವೇ. ಆದರೆ ವಾದಿಸುವವರು ತೆರೆದ ಮನಸ್ಸುಳ್ಳವರಾಗಿರಬೇಕು. ಹಾಗಿದ್ದರಷ್ಟೇ ಹೆಚ್ಚು ತಿಳಿವಳಿಕೆಯುಳ್ಳವರು, ಕಡಿಮೆ ಅರಿವಿರುವವರನ್ನು ಮೇಲೆತ್ತಬಹುದು. ವಾದಗಳು ಸರಿಯಾದ ಹಾದಿಯಲ್ಲಿ ಸಾಗಿದಾಗ " ವಾದೇ ವಾದೇ ಜಾಯತೇ ತತ್ತ್ವಬೋಧಃ" (ವಾದ ಮಾಡುತ್ತಾ ಮಾಡುತ್ತಾ ತತ್ತ್ವದ ಅರಿವುಂಟಾಗುತ್ತದೆ) ಎಂಬ ಶ್ರೀ ಶಂಕರಾಚಾರ್ಯರ ಮಾತು ಅಕ್ಷರಶಃ ನಿಜವಾಗುತ್ತದೆ. ಆದರೆ ಪ್ರಕೃತಿ ದೌರ್ಬಲ್ಯವುಳ್ಳವರ ಮಧ್ಯೆ ನಡೆಯುವ ಅವೈಜ್ಞಾನಿಕ ವಾದಗಳಿಂದಾಗುವ ದುಷ್ಪರಿಣಾಮವನ್ನು ಕುರಿತು ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಿಸಿದ್ದಾರೆ- " ವಾದೇ ವಾದೇ ಜಾಯತೇ ವೈರವಹ್ನಿಃ"(ವಾದ ಮಾಡುತ್ತಾ ಸಾಗಿದಾಗ ದ್ವೇಷಾಗ್ನಿಯೇ ಉಂಟಾಗುತ್ತದೆ). ಆದ್ದರಿಂದ ವಾದ ಮಾಡುವಾಗ, ವಾದವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಬುದ್ಧಿಶಕ್ತಿಯಷ್ಟೇ ಅಲ್ಲದೆ, ಸಮಾಧಾನವಾದ ಮನಸ್ಸು, ನಿಜವನ್ನೇ ಅರಿಯಬೇಕೆಂಬ ಹಂಬಲ, ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಸರಿಯಾದುದನ್ನು ಅಪ್ಪಿಕೊಳ್ಳುವ ಮನೋಭಾವ- ಎಲ್ಲವೂ ಇರಬೇಕು.
ಬೇರೆಯ ಊರಿಗೆ ಹೋಗಬೇಕೆಂದಾದರೆ, ಅತ್ತ ಹೆಜ್ಜೆ ಹಾಕಲಾರಂಭಿಸಿದರೆ, ಎಡವಿ, ಮುಗ್ಗರಿಸಿ, ಒಮ್ಮೊಮ್ಮೆ ದಾರಿ ತಪ್ಪಿದರೂ, ಸರಿಪಡಿಸಿಕೊಂಡು ಒಂದಲ್ಲ ಒಂದು ದಿನ ಊರನ್ನು ತಲುಪಬಹುದಲ್ಲವೇ? ಆ ಊರು ಹೇಗಿದೆ ಎಂದು ಇಲ್ಲಿ ಕುಳಿತೇ ವಾದ ಮಾಡುವುದೇಕೆ? ದೇವರನ್ನು ಕುರಿತು ಮಾಡುವ ಒಣಚರ್ಚೆಯೂ ಕಾಲಯಾಪನೆಯಷ್ಟೆ. ದೇವರನ್ನು ಕಾಣಲು ಎಲ್ಲ ಆಸ್ತಿಕಗುರುಗಳೂ ಪೂಜೆ, ಜಪ, ಧ್ಯಾನ ಮುಂತಾದ ಮಾರ್ಗಗಳನ್ನು ಹೇಳಿರುವರಷ್ಟೆ. ಆ ಮಾರ್ಗಗಳನ್ನು ಯಥಾಶಕ್ತಿ ಅನುಸರಿಸುತ್ತಾ, ಶುಷ್ಕವಾದ ವಾದಗಳಿಂದ ದೂರ ಉಳಿದಲ್ಲಿ, ಮನಸ್ಸು ಕ್ರಮೇಣ ತಿಳಿಯಾಗಿ, ಸತ್ಯಸಾಕ್ಷಾತ್ಕಾರಕ್ಕೆ ನಮ್ಮನ್ನು ಅನುವು ಮಾಡಿಕೊಡುತ್ತದೆ.
ಪರಂಪರೆಯಲ್ಲಿ ಬಂದಿರುವ ಸರ್ವಸಾಮಾನ್ಯವಾದ(general) ಹಾಗೂ ಸರ್ವಮಾನ್ಯವಾದ ಅಂಶಗಳತ್ತ ಗಮನ ಹರಿಸಿ, ಸಾಂಸ್ಕೃತಿಕವಾಗಿ ಚದುರಿರುವ ಭಾರತವನ್ನು ಒಗ್ಗೂಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡೋಣ.
ಸೂಚನೆ: 18/02/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.