ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಆಚಾರ್ಯನಿಂದ ಬರುವ ವಿದ್ಯೆಯು ಕೇವಲ ಕಾಲುಭಾಗವಷ್ಟೇ!
ವಿದ್ಯೆಯನ್ನು ಕಲಿಯಲಿ - ಎಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಅಲ್ಲಿ ಬೋಧಕರು ಪಾಠ ಮಾಡುತ್ತಾರೆ. ಇದರಿಂದಾಗಿ ತಾನೆ ಮಕ್ಕಳು ಕಲಿಯುವಂತಾಗುವುದು? - ಎಂಬುದೇ ನಮ್ಮೆಲ್ಲರ ಲೆಕ್ಕಾಚಾರವಲ್ಲವೇ?
ಇಂದಂತೂ ತಂದೆತಾಯಿಗಳಿಗೆ ಬಹಳವೇ ಆಕುಲತೆ: ಯಾವ ಶಾಲೆಗೆ ಮಕ್ಕಳನ್ನು ಕಳುಹಿಸುವುದಪ್ಪಾ? - ಎಂಬ ಪ್ರಶ್ನೆ. ಎಷ್ಟೋ ವೇಳೆ ಬಗೆಹರಿಯದ ಪ್ರಶ್ನೆ. ಏಕೆ? ಈ ಶಾಲೆಗಿಂತ ಆ ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕರಿದ್ದಾರೆ ಎಂದು ಯಾರೋ ಹೇಳಿಬಿಡುತ್ತಾರೆ. ಸರಿ, ಆ ಶಾಲೆಗೇ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ಆಗ್ರಹ ತಂದೆತಾಯಿಗಳಿಗೆ; ಮತ್ತು ಅದಕ್ಕಾಗಿ ಅದೆಷ್ಟು ಪರದಾಟ!
ಈಗಂತೂ ಶಾಲೆಗಳನ್ನು ನಡೆಸುವವರಿಗೆ ಶಾಲೆಗಳೆಂದರೆ ಧನಾರ್ಜನೆಯ ಕೇಂದ್ರವೆಂಬಂತೆಯೇ ಆಗಿಬಿಟ್ಟಿದೆ! ಶಾಲೆಗೆ ಒಳ್ಳೆಯ ಹೆಸರು ಬಂದುಬಿಟ್ಟಿದ್ದರಂತೂ ದುಡ್ಡು ಕೀಳಲು ಸುಸಂದರ್ಭವೆಂದೇ ಅವರ ಲೆಕ್ಕ. ಒಂದನೆಯ ತರಗತಿಯಿಂದ ಆರಂಭಿಸಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಗಳಿಸಲು ತಮಗೆ ಅದೆಷ್ಟು ಹಣವು ಹಿಂದೆ ವ್ಯಯವಾಗುತ್ತಿತ್ತೋ ಅದಕ್ಕೆ ಹತ್ತರಷ್ಟೋ ನೂರರಷ್ಟೋ, ತಮ್ಮ ಮಕ್ಕಳ ಕೇವಲ ಪ್ರೈಮರಿ ತರಗತಿಯ ವಿದ್ಯಾಭ್ಯಾಸಕ್ಕಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ, ತಂದೆತಾಯಿಗಳಿಗೆ!
ಹಿಂದೆಲ್ಲಾ, ಎಂದರೆ ಈಗೊಂದು ಐವತ್ತು ವರ್ಷದ ಹಿಂದೆ ಕೂಡ, ಪರಿಸ್ಥಿತಿಯೆಂದರೆ ಹೇಗಿತ್ತೆಂಬುದು ಕೆಲವರಿಗಾದರೂ ಗೊತ್ತಿರಬಹುದು. ತಮ್ಮ ಮಕ್ಕಳು ಮಂಕಾಗಿದ್ದರೋ, ಶಾಲೆಯಲ್ಲಿ ಅಧ್ಯಾಪಕರು ಪಾಠವನ್ನು ಚೆನ್ನಾಗಿ ಮಾಡುತ್ತಿಲ್ಲವೆಂದಾದರೋ, ಮಕ್ಕಳನ್ನು "ಮನೆಪಾಠ"ಕ್ಕೂ ಕಳುಹಿಸುತ್ತಿದ್ದರು. ಚೆನ್ನಾಗಿ ಪಾಠಮಾಡುವವರೆಂದು ಹೆಸರು ಮಾಡಿರುವವರನ್ನು ಅರಸಿ, ಅವರಲ್ಲಿಗೆ ತಮ್ಮ ಮಕ್ಕಳನ್ನು ಪಾಠಕ್ಕೆ ಕಳುಹಿಸುವ ತವಕ, ಹೆತ್ತವರಿಗೆ.
ಅದಕ್ಕೆ ಇನ್ನೊಂದು ಮುಖವೂ ಇತ್ತು. ಹಾಗೆ ಶಾಲೆಯಲ್ಲದೆ ಮತ್ತೊಬ್ಬರ ಬಳಿಯೂ ಪಾಠಕ್ಕಾಗಿ ಯಾರಾದರೂ ಹೋಗುವರೆಂದರೆ, ಹಿಂದೆ ಅದು ನಾಚಿಕೆಯ ವಿಷಯವೇ ಆಗಿರುತ್ತಿತ್ತು: ಮಕ್ಕಳಿಗೂ, ಅಪ್ಪ-ಅಮ್ಮಂದಿರಿಗೂ! ಬೆಳಗಿನ ಜಾವವೇ ಬೇರೆ ಯಾರಿಗೂ ತಿಳಿಯದಂತೆ ಪಾಠಕ್ಕೆ ಹೋಗಿಬರುವ ಸನ್ನಿವೇಶವಿತ್ತು. ಈಗ ಬಿಡಿ, ಅದು ರಾಜಾರೋಷವಾಗಿಯೇ ಆಗುತ್ತಿದೆ. ನಾಚಿಕೆಯ ಬದಲು ಜಂಭದ ಮಾತೂ ಆಗಿದೆ! ಅಲ್ಲದೆ, ಎಳಸಿನಿಂದಲೇ ಹೀಗೆ ಪಾಠಕ್ಕೆ ಹಾಕುವುದೂ ಇಂದಿನ ಪರಿಪಾಟಿಯಾಗಿಬಿಟ್ಟಿದೆ; ಅತ್ತ, ಶಾಲೆಗಳಲ್ಲಿ ಪಾಠವೂ ಚೆನ್ನಾಗಿ ನಡೆಯುತ್ತಿಲ್ಲ.
ಹಾಗೆ ಪಾಠಗಳನ್ನು ನಡೆಸುವವರೂ ತಮ್ಮದೇ ಕೂಟಗಳನ್ನೂ ಮಾಡಿಕೊಂಡು, ಹೇಗಾದರೂ ಹೆಚ್ಚು ಹಣ ಮಾಡಿಕೊಳ್ಳಲೇ ಹೊಂಚು ಹಾಕುವುದೂ ನಡೆಯುತ್ತಿದೆ. ಈಗಂತೂ ಎಂತಹ ದುಷ್ಟವಾದ ವರ್ತನೆಯಾಗುತ್ತಿದೆಯೆಂದರೆ ಹೇಗಾದರೂ ಮಾಡಿ ಪ್ರಶ್ನಪತ್ರಿಕೆಯನ್ನೇ ಕಳ್ಳತನದಲ್ಲಿ ಅರಿತುಕೊಂಡು, ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆಗಳ ಸುಳಿವಿತ್ತು, ಅದರಿಂದಲೂ ಹಣಮಾಡುವ ಪರಿಯಾಗಿದೆ!
ಪರಿಸ್ಥಿತಿಯು ಇಂದು ಅದೆಷ್ಟು ವಿಷಮಿಸಿದೆಯೆಂದರೆ, ಇತ್ತ ವಿದ್ಯಾರ್ಥಿಗಳೂ ಸಮಗ್ರವಾಗಿ ಮತ್ತು ಆಳವಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳುವುದರ ಬದಲು, ಮೇಲೆ ಹೇಳಿದ ದುರ್ಮಾರ್ಗದಿಂದಲೇ ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನಗಳ ಊಹೆ, ಅವುಗಳಿಗೆ ಮಾತ್ರವಷ್ಟೆ ಉತ್ತರಕ್ಕೆ ಸಿದ್ಧತೆ - ಇವುಗಳಲ್ಲಿ ತೊಡಗುವುದೇ ಸುಲಭವೆಂದೆಣಿಸುವಂತಾಗಿದೆ. ಹೀಗಿದೆ ಇಂದಿನ ಅಧ್ಯಾಪಕ-ವಿದ್ಯಾರ್ಥಿಗಳ ನಡುವಣದ ಶಿಕ್ಷಣ-ವೈಖರಿ!
ಆದರೆ, ನಮ್ಮ ದೇಶದಲ್ಲಿ ಸಹಸ್ರಾರು ವರ್ಷಗಳಿಂದಲೂ ವಿದ್ಯಾಭ್ಯಾಸವು ನಡೆಯುತ್ತಿತ್ತಲ್ಲವೇ? ಹಾಗಾದರೆ ಅಲ್ಲಿದ್ದ ಕ್ರಮವೇನು? - ಎಂಬ ಕುತೂಹಲವು ಮೂಡುವುದಷ್ಟೆ? ಅದರ ಕೆಲವಂಶಗಳನ್ನು ಸೂಚಿಸುವ ಸುಂದರವಾದ ಪದ್ಯವೊಂದಿದೆ. ಕ್ರಿಸ್ತಪೂರ್ವಕಾಲದ ಆಪಸ್ತಂಬ-ಧರ್ಮಸೂತ್ರ ಎಂಬ ಗ್ರಂಥಕ್ಕೆ, ಸುಮಾರು ಹದಿಮೂರನೆಯ ಶತಮಾನದ ಹರದತ್ತ ಎಂಬುವನು ವ್ಯಾಖ್ಯಾನ ಮಾಡುತ್ತಾ ಈ ಶ್ಲೋಕವನ್ನು ಉಲ್ಲೇಖಿಸಿದ್ದಾನೆ.
ಅದರ ಸಾರವೇನು? ವಿದ್ಯಾರ್ಥಿಯು ತನ್ನ ಆಚಾರ್ಯನಿಂದ ಪಡೆಯುವುದು ವಿದ್ಯೆಯ ಕಾಲುಭಾಗ ಮಾತ್ರ (ಆಚಾರ್ಯಾತ್ ಪಾದಂ ಆದತ್ತೇ). ಇನ್ನು ಕಾಲುಭಾಗವು ಶಿಷ್ಯನು ಸ್ವ-ಮೇಧೆಯಿಂದಲೇ ಸಂಪಾದಿಸತಕ್ಕದ್ದು. ಇನ್ನು ಕಾಲುಭಾಗವು ಬರುವುದು ಸಹಪಾಠಿಗಳೊಂದಿಗೆ ಪಾಠಗಳ ಬಗ್ಗೆ ಚರ್ಚಿಸುತ್ತಿರುವುದರಿಂದ. ಇನ್ನುಳಿದ ಕಾಲುಭಾಗವು ಕಾಲಕ್ರಮದಲ್ಲಿ ಪಾಕಹೊಂದುತ್ತದೆ.
"ಮೂಲಭೂತವಾದ ಜ್ಞಾನವುಳ್ಳ ಗುರುವೇ ಕೊಟ್ಟರೂ ವಿದ್ಯೆಯು ಸ್ಥಿರವಾಗಿ ನಿಲ್ಲಲು ಬೇಕಾದ ಅಂಶಗಳು ಇಲ್ಲಿವೆ" ಎಂದು ಹೇಳಿ, ಹರದತ್ತನು ಸೂಚಿಸಿರುವ ಈ ಪದ್ಯವನ್ನು ಶ್ರೀರಂಗಮಹಾಗುರುಗಳು ತಮ್ಮ ಆಯುರ್ವೇದ-ಪ್ರವಚನದಲ್ಲಿ ಉಲ್ಲೇಖಿಸಿದ್ದಾರೆ. ಸಾಕ್ಷಾದ್ ಆಯುರ್ವೇದಾಚಾರ್ಯನೇ ಬಂದು ಉಪದೇಶಿಸಿದರೂ ವಿದ್ಯೆಯು ಬೆಳೆಯುವುದೇ ಹೀಗೆ - ಎಂದು ತಿಳಿಸಿ, ಕೇವಲ ಪುಸ್ತಕ-ವಿದ್ಯೆಯೇ ವಿದ್ಯೆಯಲ್ಲವೆನ್ನುವುದನ್ನೂ ಅರುಹಿದ್ದಾರೆ.
ಹೀಗೆ ಗುರು-ಶಿಷ್ಯರಿಬ್ಬರ ಮೇಲೂ ಜವಾಬ್ದಾರಿಯಿರುವುದನ್ನೂ, ಶಿಷ್ಯನ ಮನನದ ಮೇಲೇ ಹೆಚ್ಚಿರುವುದನ್ನೂ ಮನಗಾಣಲು ಈ ಶ್ಲೋಕವು ಒಳ್ಳೆಯ ಸೂಚಕವಾಗಿದೆಯಲ್ಲವೇ?
ಸೂಚನೆ: 6/6//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ