Monday, July 7, 2025

ವ್ಯಾಸ ವೀಕ್ಷಿತ 144 ಮಯಸಭೆಗೆ ವಿಜೃಂಭಣೆಯ ಗೃಹಪ್ರವೇಶ (Vyaasa Vikshita 144)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೇಷ್ಠವಾದ ಆ ಸಭೆಯನ್ನು ನಿರ್ಮಿಸಿ, ಮಯನು ಅರ್ಜುನನಿಗೆ ಹೇಳಿದನು:
"ಓ ಸವ್ಯಸಾಚಿ, ಇದುವೇ ತಮ್ಮ ಸಭೆ. ಇದರಲ್ಲೊಂದು ಧ್ವಜವಿದೆ. ಭೂತಗಳಲ್ಲಿ ಮಹಾಶಕ್ತಿಸಂಪನ್ನವಾದ ಕಿಂಕರವೆಂಬ ಹೆಸರಿನ ಗಣವು ಈ ಧ್ವಜದ ಅಗ್ರದಲ್ಲಿ ವಾಸಮಾಡುವುದು. ನಿನ್ನ ಧನುಸ್ಸಿನ ವಿಸ್ಫಾರ-ಘೋಷವು, ಎಂದರೆ ಟಂಕಾರ-ಧ್ವನಿಯು, ಯಾವಾಗ ಆಗುವುದೋ ಆಗ ಅದರೊಂದಿಗೇ ಇದೂ ಸಹ ಮೋಡಗಳಿಗೆ ಸಮಾನವಾಗಿ ಗರ್ಜನೆಯನ್ನು ಮಾಡುವುದು!

ಸೂರ್ಯನಿಗೆ ಸಮನಾದ ಕಾಂತಿಯುಳ್ಳ ರಥವಿದೋ. ಇದು ಅಗ್ನಿದೇವನಿಗೆ ಸೇರಿದ ಉತ್ತಮವಾದ ರಥ. ಇದಕ್ಕೆ ಹಯೋತ್ತಮಗಳನ್ನೇ, ಎಂದರೆ ಶ್ರೇಷ್ಠವಾದ ಕುದುರೆಗಳನ್ನೇ, ಯೋಜಿಸಲಾಗಿದೆ. ಈ ಬಿಳಿಯ ಹಯಗಳು ದೇವಲೋಕದ ಅಶ್ವಗಳು. ಅಲ್ಲದೆ ಇದೋ, ಇದು ವಾನರ-ಲಕ್ಷಿತವಾದ ಧ್ವಜ, ಎಂದರೆ ಕಪಿಯ ಗುರುತುಳ್ಳದ್ದು. ಇದು ಮಾಯಾಮಯವಾದ ಪತಾಕೆಯೂ ಹೌದು. ಇದು ಮರಗಳಲ್ಲಿ ಸಿಲುಕಿಕೊಂಡುಬಿಡುವಂತಹುದಲ್ಲ. ಅಗ್ನಿಯು ಹೇಗೆ ಸರ್ವದಾ ಮೇಲ್ಮುಖವಾಗಿಯೇ ಇರುವುದೋ ಹಾಗೆ ಇದೂ ಸದಾ ಮೇಲ್ಮುಖವಾಗಿಯೇ ಇರುವುದು. ಕಪಿ-ಚಿಹ್ನವುಳ್ಳ ಈ ಧ್ವಜವು ಬಹುವರ್ಣಮಯವಾಗಿಯೇ ತೋರುವಂತಹುದು. ಯುದ್ಧದಲ್ಲಿ ಎಂದೂ ಬಗ್ಗದೆ ಸ್ಥಿರವಾಗಿರುವ ಈ ಉತ್ಕಟ-ಧ್ವಜವನ್ನು ನೀ ಕಾಣುವೆ."


ಹೀಗೆಂಬುದಾಗಿ ಅರ್ಜುನನಿಗೆ ಮಯನು ಹೇಳಿ, ಅವನ ಅನುಮತಿಯನ್ನು ಪಡೆದು ಹೊರಟನು.


ಬಳಿಕ ಯುಧಿಷ್ಠಿರನು ಆ ಮನೆಯ ಪ್ರವೇಶವನ್ನು ಮಾಡಿದನು. ತುಪ್ಪ-ಜೇನುತುಪ್ಪಗಳನ್ನು ಸೇರಿಸಿದ ಪಾಯಸ, ಬಗೆಬಗೆಯ ಭಕ್ಷ್ಯಗಳು, ಹಣ್ಣುಗಳು, ಚೋಷ್ಯಗಳು, ಪೇಯಗಳು - ಇವುಗಳಿಂದ ಕೂಡಿರುವ ಸಂತರ್ಪಣೆಯನ್ನು ಮಾಡಿಸಿದನು. ನವ-ವಸ್ತ್ರಗಳು, ನಾನಾ-ಪ್ರಕಾರವಾದ ಮಾಲೆಗಳು - ನಾನಾ-ದಿಕ್ಕುಗಳಿಂದ ಬಂದ ವಿಪ್ರರಿಗೆ ಇವುಗಳನ್ನಿತ್ತು  ಅವರನ್ನು ಸಂತೋಷಪಡಿಸಿದನು. ಗೋ-ಸಹಸ್ರಗಳನ್ನು ದಾನ ಮಾಡಿದನು. ಆಗ ಎದ್ದ ಪುಣ್ಯಾಹಘೋಷ-ಧ್ವನಿಯು ಸ್ವರ್ಗಲೋಕದವರೆವಿಗೂ ವ್ಯಾಪಿಸುವಂತಿತ್ತು. ನಾನಾದೇವತೆಗಳನ್ನು ಸ್ಥಾಪನೆ ಮಾಡಿ ಯುಧಿಷ್ಠಿರನು ಅವುಗಳಿಗೆ ಪೂಜೆಯನ್ನು ಸಲ್ಲಿಸಿದನು. ಬಗೆಬಗೆಯ ವಾದ್ಯಗಳಿಂದಲೂ, ದಿವ್ಯವಾದ ಗಂಧವುಳ್ಳ ನಾನಾ ಪದಾರ್ಥಗಳಿಂದಲೂ ಪೂಜಿಸಿದನು.


ಯುಧಿಷ್ಠಿರನ ಸೇವೆಗೆಂದು ಆಗ ಅನೇಕ ಮಂದಿ ಮಲ್ಲರೂ (ಎಂದರೆ ಬಾಹುಗಳಿಂದ ಯುದ್ಧಮಾಡತಕ್ಕವರೂ), ಝಲ್ಲರೂ (ಎಂದರೆ ಲಾಠಿಗಳಿಂದ ಯುದ್ಧಮಾಡತಕ್ಕವರೂ), ನಟರೂ, ಸೂತರೂ, ವೈತಾಳಿಕರೂ ಬಂದು ಯುಧಿಷ್ಠಿರನನ್ನು ಸೇವಿಸಿದರು. ಆ ಪರಿಯಲ್ಲಿ ಭ್ರಾತೃಗಳೊಂದಿಗೆ ಪೂಜೆಯನ್ನು ನೆರವೇರಿಸಿದ ಆ ಯುಧಿಷ್ಠಿರನು ಸಂತೋಷಿಸಿದನು - ಸ್ವರ್ಗದಲ್ಲಿ ಇಂದ್ರನು ಯಾವ ರೀತಿಯಲ್ಲಿ ಸಂತೋಷಪಡುವನೋ ಹಾಗೆ.


ಆ ಸಭೆಯಲ್ಲಿ ಅನೇಕ ಋಷಿಗಳು ಪಾಂಡವರೊಂದಿಗೆ ಕುಳಿತುಕೊಂಡಿದ್ದರು. ನಾನಾದೇಶಗಳಿಂದ ಬಂದಿದ್ದ ರಾಜರುಗಳೂ ಅಲ್ಲಿಗೆ ಬಂದಿದ್ದರು. ಯಾವ ಋಷಿಗಳು? ಅಸಿತ, ದೇವಲ, ಮೈತ್ರೇಯ, ಶುನಕ, ಬಕ-ದಾಲ್ಭ್ಯ, ಕೃಷ್ಣ-ದ್ವೈಪಾಯನ, ಶುಕ, ಸುಮಂತು, ಜೈಮಿನಿ, ಪೈಲ (ಇವರು ನಾಲ್ವರು ವ್ಯಾಸಶಿಷ್ಯರು), ತಿತ್ತಿರಿ, ಯಾಜ್ಞವಲ್ಕ್ಯ, ಲೋಮಹರ್ಷಣ, ಧೌಮ್ಯ, ಪಾರಾಶರ್ಯ, ಮಾರ್ಕಂಡೇಯ, ಗಾಲವ, ರೈಭ್ಯ, ಭೃಗು, ಕೌಂಡಿನ್ಯ, ಗೌತಮ, ಶಾಂಡಿಲ್ಯ - ಇವರೇ ಮುಂತಾದ ಅನೇಕ ಮುನಿಗಳು ಬಂದಿದ್ದರು. ಅವರು ಧರ್ಮ-ವಿದ್ವಾಂಸರು, ಧೃತಾತ್ಮರು, ಜಿತೇಂದ್ರಿಯರು.


ಇವರುಗಳೇ ಅಲ್ಲದೆ ಇನ್ನೂ ಅನೇಕರು ಬಂದಿದ್ದರು. ಅವರು ವೇದ-ವೇದಾಂಗಗಳಲ್ಲಿ ಪಾರಂಗತರಾಗಿದ್ದರು. ಅಂತಹ ಶ್ರೇಷ್ಠರಾದ ಋಷಿಗಳು ಯುಧಿಷ್ಠಿರನನ್ನು ಉಪಾಸಿಸಿದರು. ಧರ್ಮಜ್ಞರೂ ಶುಚಿಗಳೂ ಅಮಲರೂ ಆದ ಅವರು, ಅನೇಕ ಪುಣ್ಯಕಥೆಗಳನ್ನು ಹೇಳುತ್ತಿದ್ದರು.


ಸೂಚನೆ : 6/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.