ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಗೃಹಸ್ಥನೂ ಮೋಕ್ಷವನ್ನು ಹೊಂದುವನು
ಗಂಡಸರು ಹೆಂಗಸರು ಎಲ್ಲರೂ ಪುರುಷರೇ - ಎಂದು ಯಾರಾದರೂ ಹೇಳಿದರೆ ನಾರಿಯರಿಗೆ ಒಂದಿಷ್ಟು ಕೋಪವೇ ಬಂದೀತು. ಆದರೆ ಅದು ನಿಜ. ಯಾವರ್ಥದಲ್ಲಿ ಹಾಗೆಂದಿದೆಯೆಂಬುದನ್ನು ಮೊದಲರಿತರೆ ಅದರ ಸರಿ-ತಪ್ಪುಗಳು ಗೊತ್ತಾಗುವುವು.
ನಮಗೆಲ್ಲ ವಾಸಿಸಲು ಮನೆ ಬೇಕಲ್ಲವೆ? ಎಲ್ಲರಿಗೂ ಸೇರಿ ಒಂದೇ ಮನೆಯೆಂದಾಗಿಬಿಟ್ಟರೆ ಅದೂ ಕಷ್ಟವೇ. ನಾವು ಮತ್ತು ನಮ್ಮವರು - ಅಷ್ಟು ಮಂದಿಗೆ ಒಂದು ಮನೆಯೆಂದಾದರೆ ಅದೀಗ ಸ್ವಾಗತಾರ್ಹವೇ. ಹಾಗಿದ್ದಾಗಲೇ ನಾವೂ ಇತರರೂ ತಮ್ಮ ತಮ್ಮ ರುಚಿಗಳಿಗನುಗುಣವಾಗಿ ಬದುಕಬಹುದು. ನಮ್ಮ ನಮ್ಮ ಸುಖದುಃಖಗಳನ್ನು ಅನುಭವಿಸಿಕೊಳ್ಳುತ್ತಿರಬಹುದು. ನಮ್ಮ ಸ್ವಾತಂತ್ರ್ಯದಲ್ಲಿ ಸುಖಿಸಬಹುದು.
ಆದರೂ, ನಮಗೊಬ್ಬೊಬ್ಬರಿಗೂ ಒಂದೊಂದು ಪ್ರತ್ಯೇಕವಾದ ಕೋಣೆಯೂ ಬೇಕು – ಎನ್ನಿಸದುಂಟೇ? ಹಾಗಿದ್ದರಿನ್ನೂ ಅಧಿಕಸ್ವಾತಂತ್ರ್ಯವಲ್ಲವೇ? ಅಂತಹೊಂದು ಮನೆಯೇ, ಪ್ರತಿಯೊಬ್ಬರ ಗೃಹವೇ, ನಮ್ಮ ಶರೀರವೆಂಬುದು. ಹೀಗಾಗಿ ಈ ದೇಹವೊಂದು ಗೇಹವೇ.
ಮೈಯನ್ನು ಮನೆಯೆನ್ನುವಂತೆ "ಪುರ"ವೆನ್ನುವುದೂ ಉಂಟು. ದೊಡ್ಡ ಊರೆಂದರೇನು ಒಂದೇ ಬಾಗಿಲೇ? ಹಾಗೆಯೇ ಈ ಶರೀರವೆಂಬ ಪುರಕ್ಕೆ ಒಂಭತ್ತು ದ್ವಾರಗಳುಂಟು.
ಇನ್ನು ಪಕ್ಷಿಗಳು ವಾಸಿಸಲು ಗೂಡು ಕಟ್ಟಿಕೊಳ್ಳುವುದುಂಟಲ್ಲವೇ? ಏನು ಗೂಡೆಂದರೆ? ಕೂಡುವ ಜಾಗವೇ ಗೂಡು. ಕೂಡುವುದೆಂದರೆ ಕುಳಿತುಕೊಳ್ಳುವುದು ತಾನೇ? ಮನೆಗೆ ಯಾರಾದರೂ ಬಂದರೆ - ಬನ್ನಿ, ಕುಳಿತುಕೊಳ್ಳಿ - ಎನ್ನುತ್ತೇವೆ. ಇನ್ನು ಧ್ಯಾನವನ್ನು ಮಾಡುವುದಾದರೂ ಅದು ಓಡಾಡುತ್ತಲಲ್ಲ, ನಿಂತುಕೊಂಡಲ್ಲ; ಕುಳಿತೇ ಮಾಡುವುದು. ಹೀಗೆ, ಕುಳಿತುಕೊಳ್ಳುವುದೆಂಬುದು ಸ್ಥಿತಿಯ, ನಿಶ್ಚಲತೆಯ ಸೂಚಕ. ಸದನವೆಂದರೂ ಕುಳಿತುಕೊಳ್ಳುವುದೇ, ಕೂರುವ ಎಡೆಯೇ.
ಆಯಾಸವಾಗಿದ್ದಾಗ ವಿಶ್ರಾಂತಿಯನ್ನು ಬಯಸುತ್ತೇವೆ. ವಿಶ್ರಾಂತಿಗೆ ಬೇಕು ನೆಮ್ಮದಿಯ ಸ್ಥಾನ. ನೆಮ್ಮದಿಗೋಸ್ಕರವಾಗಿ ಹೀಗೆ ಸ್ಥಿತಿ-ಸ್ಥಾನಗಳು ಸರಿಯಿರಬೇಕು. "ಹಾಯಾಗಿ ಮಲಗಿಕೊಳ್ಳಿ, ಏನೂ ಚಿಂತೆಮಾಡಬೇಡಿ. ಮಧ್ಯರಾತ್ರಿ ಒಂದು ವಿಷಸರ್ಪ ಇಲ್ಲಿ ಬರುತ್ತದೆ: ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ" ಎಂದು ಯಾರಾದರೂ ಹೇಳಿದರೆ, ಅಲ್ಲಿ ನೆಮ್ಮದಿಯಿಂದ ನಿದ್ರಿಸಲಾಗುವುದೇ? - ಎಂಬ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಡುತ್ತಿದ್ದರು.
ಶರೀರವನ್ನು ಗೃಹವೆಂದೂ ಪುರವೆಂದೂ ನೋಡಿದ್ದಾಯಿತು. ಈ ಪುರದಲ್ಲಿ ತಾನೇ ತಾನಾಗಿ ನೆಮ್ಮದಿಯಾಗಿ ಶಯಿಸುವ ಜೀವನನ್ನೇ "ಪುರುಷ" ಎನ್ನುವುದು. "ಪುರಿ ಶೇತೇ ಇತಿ ಪುರುಷಃ" ಎಂಬ ಮಾತಿಗೆ ಇದೇ ಅರ್ಥ.
ಜೀವವೆಂದರೆ ಜನ್ಮಾನುಸಾರಿಯಾಗಿ ಗಂಡಾದರೂ ಆಗಬಹುದು, ಹೆಣ್ಣಾದರೂ ಆಗಬಹುದು. ಎಂದೇ ಮೊದಲು ಹೇಳಿದುದು, ಗಂಡಸರೂ ಹೆಂಗಸರೂ "ಪುರುಷ"ರೆಂದೇ. ಎಲ್ಲ ಪುರುಷರಿಗೂ – ಎಂದರೆ ಎಲ್ಲ ಗಂಡಸರಿಗೂ ಎಲ್ಲ ಹೆಂಗಸರಿಗೂ - ಏನು ಅಪೇಕ್ಷ್ಯವೋ ಅದನ್ನೇ ಪುರುಷಾರ್ಥವೆನ್ನುವುದು. ಹೀಗಾಗಿ ಪುರುಷಾರ್ಥವೆಂಬುದು ಗಂಡಸರಿಗೂ ಹೆಂಗಸರಿಗೂ ಇಬ್ಬರಿಗೂ ಬೇಕಾದುದೇ.
ಯಾವ ಯಾವುದನ್ನು ನಾವೆಲ್ಲ ಅಪೇಕ್ಷಿಸುವೆವೋ ಅವೆಲ್ಲವೂ ಒಂದರ್ಥದಲ್ಲಿ "ಅರ್ಥ"ವೇ. ಸುಖವನ್ನು ಪಡೆಯಲೊಂದಿಷ್ಟು ಹಣ ಬೇಕು. ಹೀಗಾಗಿ ಅರ್ಥವೆಂದರೆ ಹಣವೂ ಹೌದು. ನಾವು ಬಯಸುವುದೆಲ್ಲವೂ ಕಾಮವಾದರೆ, ಕಾಮಕ್ಕೆ ಸಾಧನವಾದುದು ಅರ್ಥ. ಇವೇ ಅರ್ಥ-ಕಾಮಗಳು.
ಅರ್ಥಕಾಮಗಳನ್ನೇ ಕೆಟ್ಟದಾರಿಯಿಂದ ಸಂಪಾದಿಸಬಾರದಲ್ಲವೇ? ಅವನ್ನು ಸಂಪಾದಿಸುವ, ಭೋಗಿಸುವ ಸರಿಯಾದ ಪರಿಯೇ ಧರ್ಮವೆನಿಸುತ್ತದೆ.
ಜೀವನದಲ್ಲಿ ಎಷ್ಟೋ ಅಂಟುಗಳುಂಟು, ನಂಟುಗಳುಂಟು: ಇವೆಲ್ಲವೂ ಗಂಟುಗಳೇ, ಕಗ್ಗಂಟುಗಳೇ ಆದಾವು. ಇವೆಲ್ಲವುಗಳಿಂದಲೂ ಬಿಡುಗಡೆಯು ಬೇಕಲ್ಲವೇ? ಅದುವೇ ಮೋಕ್ಷ. ಇವೇ ಧರ್ಮ-ಮೋಕ್ಷಗಳು.
ಎಲ್ಲ ಪುರುಷರಿಗೂ, ಎಂದರೆ ಎಲ್ಲ ಜೀವಿಗಳಿಗೂ, ಹೀಗೆ ಬೇಕಾದವೇ ಈ ನಾಲ್ಕು: ಧರ್ಮಾರ್ಥಕಾಮಮೋಕ್ಷಗಳು.
ಏನನ್ನು ಸಾಧಿಸಲೂ ನೆಲೆಯೊಂದಿರಬೇಕು. ಮನೆಯೊಂದು ನೆಲೆ. ಮನೆಯಲ್ಲಿರುವವರನ್ನೆಲ್ಲ ಗೃಹ-ಸ್ಥ ಎನ್ನುವುದಿಲ್ಲ. ಪುರುಷಾರ್ಥ-ಚತುಷ್ಟಯದ ಸಹಸಾಧನೆಗಾಗಿ ಬಾಳಸಂಗಾತಿಯಾಗಿ ಬರುವವಳನ್ನೇ ಗೃಹಿಣಿಯೆನ್ನುವುದು. ಅಂತಹ ಗೃಹಿಣಿಯೇ ಗೃಹ. ಗೃಹಿಣಿಯೊಂದಿಗಿರುವವನೇ ಗೃಹಸ್ಥ.
ಬಹುಮಂದಿಗೆ ಸಂಸಾರವನ್ನು ತೂಗಿಸುವುದೇ ಕಡುಕಷ್ಟ. ಹಾಗಿದ್ದವರು ಹಿರಿದಾದುದನ್ನೇನು ಸಾಧಿಸಿಯಾರು? ಸಂಸಾರವೇ ಬಂಧ - ಎನಿಸಿಬಿಡುವುದುಂಟು. ಹಾಗಿದ್ದರೆ ಮೋಕ್ಷವೆಂಬುದು ನಮಗೆಲ್ಲಿ? - ಎಂದು ಸಂಸಾರಸ್ಥರಿಗೆ ತೋರಿದರೆ ಆಶ್ಚರ್ಯವಿಲ್ಲ.
ಹಾಗಲ್ಲ - ಎನ್ನುತ್ತದೆ, ಯಾಜ್ಞವಲ್ಕ್ಯಸ್ಮೃತಿ. ಈ ಐದು ನಿಯಮಗಳನ್ನು ಪಾಲಿಸುವವನಾದರೆ ಗೃಹಸ್ಥನಿಗೂ ಮೋಕ್ಷವುಂಟು. ಏನವು? ನ್ಯಾಯಮಾರ್ಗದಿಂದ ಧನವನ್ನು ಸಂಪಾದಿಸಬೇಕು. ಅತಿಥಿಗಳನ್ನು ಸತ್ಕರಿಸುವವನಾಗಬೇಕು. ಶ್ರಾದ್ಧವನ್ನು ಬಿಡಬಾರದು. ಸತ್ಯವಾದಿಯಾಗಿರಬೇಕು. ಈ ನಾಲ್ಕರೊಂದಿಗೆ, ಮುಖ್ಯವಾಗಿ, ತತ್ತ್ವಜ್ಞಾನ-ನಿಷ್ಠನಾಗಿರಬೇಕು, ಅರ್ಥಾತ್ ಆತ್ಮಧ್ಯಾನ-ನಿರತನಾಗಿರಬೇಕು.
ಈ ಭಾವವು ಎಷ್ಟು ಮುಖ್ಯವೆನ್ನುವುದಕ್ಕೆ ಸಾಕ್ಷಿಯೆಂದರೆ, ಅಗ್ನಿಪುರಾಣವೂ ದೇವೀಭಾಗವತಪುರಾಣವೂ ಇದೇ ಮಾತನ್ನು ಹೇಳುತ್ತವೆ.
ಯೋಗಮಾರ್ಗದಲ್ಲಿ ಸಾಗಲು ಗೃಹಸ್ಥರಿಗೂ ಮಾರ್ಗದರ್ಶನವಿತ್ತು ಗುರಿಮುಟ್ಟಿಸಿದ ಶ್ರೀರಂಗಮಹಾಗುರುಗಳ ಪ್ರಯೋಗಾನುಭವಗಳೂ ಈ ಮಾತಿನ ಸತ್ಯತೆಗೆ ಸಾಕ್ಷಿಯಾಗಬಲ್ಲವು.
ಸೂಚನೆ: 05/7//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.