Monday, July 7, 2025

ಪ್ರಶ್ನೋತ್ತರ ರತ್ನಮಾಲಿಕೆ 22 (Prasnottara Ratnamalike 22)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೩. ಯಾವಾಗಲು ಎಚ್ಚರಿವಿರುವವನು ಯಾರು?

ಉತ್ತರ - ವಿವೇಕ ಉಳ್ಳವನು.

ಪ್ರಕೃತವಾದ ಪ್ರಶ್ನೆ ಸ್ವಲ್ಪ ವಿಚಿತ್ರವಾಗಿದೆ. ಏಕೆಂದರೆ ಯಾವಾಗಲೂ ಎಚ್ಚರವಿರುವವನು ಯಾರು? ಎಂಬುದು ಪ್ರಶ್ನೆ ಇದಾಗಿದೆ. ಸಾಮಾನ್ಯವಾಗಿ ಮನುಷ್ಯರು ದಿನದಲ್ಲಿ ಕೆಲವು ಭಾಗ ಎಚ್ಚರ, ಇನ್ನು ಕೆಲವು ಭಾಗ ಸ್ವಪ್ನ, ಇನ್ನು ಕೆಲವು ಭಾಗ ನಿದ್ರೆ, ಹೀಗೆ ಮೂರು ಹಂತಗಳಲ್ಲಿ ಪ್ರತಿ ದಿನವನ್ನು ಕಳೆಯುವುದನ್ನು ನಾವು ಕಾಣುತ್ತೇವೆ. ಇದರಲ್ಲಿ ಎಚ್ಚರವಿರುವಂತದ್ದು ಜಾಗೃದವಸ್ಥೆಯಲ್ಲಿ ಮಾತ್ರ. ಉಳಿದ ಸಂದರ್ಭದಲ್ಲಿ ಪೂರ್ತಿಯಾಗಿ ಎಚ್ಚರವಿರುವುದಿಲ್ಲ. ನಿದ್ರೆಯಲ್ಲಂತೂ ನಮಗೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ. ಹಾಗಾದರೆ ಯಾವಾಗಲೂ ಎಚ್ಚರ ಇರುವುದೆಂದರೆ ಏನು? ಎಂಬ ಪ್ರಶ್ನೆ ಉಳಿಯುತ್ತದೆ. ಅದಕ್ಕೆ ಉತ್ತರ 'ವಿವೇಕ ಉಳ್ಳವನು' ಎಂದು. ಅಂದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ - ವಿವೇಕ ಎಂದರೇನು ಮತ್ತು ವಿವೇಕದಿಂದ ಹೇಗೆ ಎಚ್ಚರಿಕೆಯು ಬರುತ್ತದೆ? ಎಂಬುದಾಗಿ. 


ವಿವೇಕ ಎಂದರೆ "ವಿವೇಕೋ ವಸ್ತುನೋ ಭೇದಃ ಪ್ರಕೃತೇಃ ಪುರುಷಸ್ಯ ವಾ" ಎಂದು. ಈ ಪ್ರಪಂಚದಲ್ಲಿ ಎರಡು ಬಗೆಯ ವಸ್ತುಗಳು ಮಾತ್ರ ಇವೆ. ಹಾಗಿರುವುದರಿಂದಲೇ ಅಲ್ಲಿನ ವಸ್ತುಸ್ಥಿತಿಯನ್ನು ಅರಿಯುವುದು ಕಠಿಣವಾಗುತ್ತದೆ. ನಿತ್ಯ ಅಥವಾ ಅನಿತ್ಯ ಎಂಬ ಭೇದಬುದ್ಧಿ. ಪುರುಷ ಅಥವಾ ಪ್ರಕೃತಿ ಎಂಬ ಭೇದಬುದ್ಧಿ. ಧರ್ಮ ಅಥವಾ ಅಧರ್ಮ ಎಂಬ ಭೇದಬುದ್ಧಿ. ಸುಖ ಅಥವಾ ದುಃಖ ಎಂಬ ಭೇದಬುದ್ಧಿ. ಇದನ್ನೇ ವಿವೇಕ ಎಂಬುದಾಗಿ ಕರಿಯುತ್ತಾರೆ ಈ ವಿವೇಕ ಉಳ್ಳವನನ್ನೇ ಸದಾ ಎಚ್ಚರಿಕೆ ಉಳ್ಳವನು ಎಂಬುದಾಗಿ ಇಲ್ಲಿ ಹೇಳಲಾಗಿದೆ. ಆದ್ದರಿಂದ ಎಚ್ಚರವಿರುವುದು ಎಂದರೆ ತನ್ನ ಗುರಿಯನ್ನು ಸಾಧಿಸುವುದು ಎಂದರ್ಥ. ಗುರಿಯತ್ತ ಸಾಧಿಸಬೇಕಾದದ್ದು ಕರ್ತವ್ಯ. ಹಾಗಾಗಿ ಈ ವಿವೇಕವೆಂಬುದು ಅವನನ್ನು ಮೈ ಮರೆಯದಂತೆ ಇಟ್ಟು ಗುರಿಯತ್ತ ಕೊಂಡುಯ್ಯುತ್ತದೆ. ಇದೇ ನಿಜವಾದ ಎಚ್ಚರಿಕೆಯ ಸ್ಥಿತಿ. ಇದೇ ನಿಜವಾದ ವಿವೇಕ. ಜೀವನದಲ್ಲಿ ತಿಳಿಯಬೇಕಾದದ್ದು ಇಷ್ಟೇ, ನಿತ್ಯ ಮತ್ತು ಅನಿತ್ಯವಾದ ವಿಷಯಗಳು ಯಾವುವು? ಇವೆರಡರಲ್ಲಿ ಪಡೆಯಬೇಕಾದುದು ನಿತ್ಯವೇ ಹೊರತು ಅನಿತ್ಯವಲ್ಲ ಎಂಬುದನ್ನು. ನಿತ್ಯವನ್ನು ಸಾಧಿಸಬೇಕಾದರೆ ಧರ್ಮ ಅಥವಾ ಅಧರ್ಮ, ಸುಖ-ದುಃಖ ಇಂತ ವಿಷಯಗಳನ್ನು ಕೊಡುವ ಪದಾರ್ಥಗಳು ಯಾವುದು? ಎಂಬುದನ್ನು ಅವಶ್ಯವಾಗಿ ತಿಳಿಯಲೇಬೇಕು. ಅಂದರೆ ಯಾವ ಪದಾರ್ಥಗಳಿಂದ ನಿತ್ಯವಾದದ್ದನ್ನು ನಾವು ಪಡೆಯಬಹುದು ಎಂಬುದನ್ನು ತಿಳಿದರೆ, ಅದು ಪರಿಪೂರ್ಣಜೀವನಕ್ಕೆ ಅನುಕೂಲಿಸುತ್ತದೆ. ಹಾಗಾಗಿ ಇಂಥ ಜೀವನಕ್ಕೆ ವಿವೇಕ ಎಂಬುದು ಅತ್ಯಂತ ಅವಶ್ಯಕ. ಅದೇ ನಿಜವಾದ ಎಚ್ಚರಿಕೆಯ ಸ್ಥಿತಿ. 


ಇಂತಹ ವಿವೇಕ ಉಳ್ಳವನು ಎಂದೂ ತನ್ನ ಗುರಿಯನ್ನು ಮರೆಯಲಾರ. ಆರಂಭಿಸಿದ ಕಾರ್ಯವನ್ನು ಎಂದು ಕೈ ಬಿಡಲಾರ. ಗುರಿ ಮುಟ್ಟುವ ತನಕ ಅವನ ಪ್ರಯತ್ನವು ಇದ್ದೇ ಇರುತ್ತದೆ. ಏಕೆಂದರೆ ಅಲ್ಲಿ ಅವನಿಗೆ ವಿವೇಕಪ್ರಜ್ಞೆಯು ಅವನಿಗೆ ಬೇಕಾದ ಉತ್ಸಾಹವನ್ನು, ಬಲವನ್ನು, ಚೈತನ್ಯವನ್ನು ಕೊಡುವಂತಿರುತ್ತದೆ. ಆ ಪ್ರಯತ್ನದಲ್ಲಿ ವ್ಯರ್ಥವಾದ ಅಂಶವೆಂಬುದೇ ಇರದು. ಹಾಗಾಗಿ ಮಾಡಿದ ಕೆಲಸ ಪರಿಪೂರ್ಣತೆಯನ್ನು ಸಾಧಿಸುತ್ತದೆ. ಆದ್ದರಿಂದ ವಿವೇಕ ಎಂಬುದು ಅತ್ಯಂತ ಅವಶ್ಯಕ.


ಸೂಚನೆ : 6/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.