Sunday, June 7, 2026

ಶ್ರೀರಾಮನಿಗೆ ಅಗಸ್ತ್ಯಮುನಿಗಳ ಮಾರ್ಮಿಕ ಸಂಕೇತ (Śriramanige Agastyamunigala Marmika Sanketa)

  
ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)
image.png

ರಾಮಾಯಣದಲ್ಲಿ ಅಗಸ್ತ್ಯಮುನಿಗಳು ಮುಖ್ಯವಾಗಿ ಎರಡು ಪ್ರಸಂಗಗಳಲ್ಲಿ ಕಾಣಿಸಿಕೊಳ್ಳುತ್ತಾರೆ: ಅರಣ್ಯಕಾಂಡದಲ್ಲೊಮ್ಮೆ ಯುದ್ಧಕಾಂಡದಲ್ಲೊಮ್ಮೆ. ಅಗಸ್ತ್ಯರ ಮಾಹಾತ್ಮ್ಯವು ನಮಗೆ ವಾತಾಪಿ-ಇಲ್ವಲರ ಕಥೆಯ ಮೂಲಕ ರಾಮಾಯಣದಲ್ಲೇ ತಿಳಿದುಬರುತ್ತದೆ. ಅಗಸ್ತ್ಯಮುನಿಗಳ ಆಶ್ರಮಕ್ಕೆ ಶ್ರೀರಾಮ-ಸೀತೆ-ಲಕ್ಷ್ಮಣರು ಹೋಗುವುದನ್ನು ನಾವು ಅರಣ್ಯಕಾಂಡದಲ್ಲಿ ನೋಡುತ್ತೇವೆ.

ಅಗಸ್ತ್ಯರೊಂದಿಗೆ ಭೇಟಿ

ವಿರಾಧನೆಂಬ ರಾಕ್ಷಸನ ಸಂಹಾರವಾದ ಬಳಿಕ, ಶ್ರೀರಾಮಾದಿಗಳು ಆ ಸ್ಥಾನವನ್ನು ಬಿಟ್ಟು ಬೇರೆಲ್ಲಿಗಾದರೂ ಹೊರಡೋಣವೆಂದು ನಿಶ್ಚಯಿಸಿದರು. ಹಾಗೇ ಮುಂದೆ ಸಾಗುತ್ತಾ ಅವರು ಅಗಸ್ತ್ಯರ ಆಶ್ರಮಕ್ಕೆ ಭೇಟಿ ನೀಡಿದರು. ಆ ಮಹಾತ್ಮರ ತಪಸ್ಸಿನ ತೇಜಸ್ಸು-ಬಲಗಳೆಂತಹುದು ಎಂದರೆ ಅವರು ಅಲ್ಲಿ ಕಾಲಿಟ್ಟ ಮೇಲೆ ರಾಕ್ಷಸರು ಅತ್ತ ಕಣ್ಣೆತ್ತಿ ನೋಡಲೂ ಅಂಜುತ್ತಿದ್ದರು. ವೈರಕ್ಕೆ ಅಲ್ಲಿ ಸ್ಥಾನವಿಲ್ಲ. ಕ್ರೂರಕರ್ಮಿಗಳು ಅಲ್ಲಿರಲಾರರು. ಸಜ್ಜನರು ಸಂದರ್ಶಿಸುವ ಸ್ಥಾನವಿದಾಗಿದ್ದು, ಶರಣ್ಯರನ್ನು ರಕ್ಷಿಸುವುದೆಂಬ ಖ್ಯಾತಿಯನ್ನು ದಕ್ಷಿಣದಿಕ್ಕಿಗೇ ತಂದುಕೊಟ್ಟಿತು. ಅವರನ್ನು ಭೇಟಿಯಾಗಬೇಕೆಂಬ ತಮ್ಮ ಉದ್ದೇಶವನ್ನು ಲಕ್ಷ್ಮಣನು ಅವರ ಶಿಷ್ಯರಿಗೆ ತಿಳಿಸಿದನು. ಅದನ್ನು ಕೇಳಿ ಅಗಸ್ತ್ಯರಿಗೆ ಬಹಳ ಆನಂದವಾಯಿತು. ರಾಮನ ಬರುವಿಕೆಯನ್ನು ಕಾದಿದ್ದ ತಾಪಸರಲ್ಲಿ ಇವರೂ ಒಬ್ಬರು.

ಮುನಿಗಳ ಆತಿಥ್ಯ

ಅವರ ಅಪ್ಪಣೆಯಂತೆ ರಾಮಾದಿಗಳನ್ನು ಶಿಷ್ಯರು ಒಳಗೆ ಕರೆತರುತ್ತಿದ್ದಂತೆಯೇ ಅಗಸ್ತ್ಯರು ಅವರನ್ನು ಎದುರ್ಗೊಂಡರು. ತಪಸ್ಸಿನ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಮುನಿಗಳಿಗೆ ಆ ಮೂವರೂ ನಮಸ್ಕರಿಸಿದರು. ಆಗ ಅಗಸ್ತ್ಯರು ರಾಮಾದಿಗಳಿಗೆ ಆದರದ ಸತ್ಕಾರವನ್ನು ಮಾಡಿದರು. ರಾಮನು ಪೂಜ್ಯನೂ ಮಾನ್ಯನೂ ಆದ ಪ್ರಿಯ ಅತಿಥಿಯೆಂದರು. ಹಾಗೆಂದು ಹೇಳಿ, ವಿಶ್ವಕರ್ಮನು ನಿರ್ಮಿಸಿದ್ದ ವಿಷ್ಣುವಿನ ಧನುಸ್ಸನ್ನೂ ಎರಡು ಅಕ್ಷಯತೂಣೀರಗಳನ್ನೂ, ಎಂದರೆ ಮಿತಿಯಿಲ್ಲದಷ್ಟು ಬಾಣಗಳನ್ನು ಕೊಡುವ ಬತ್ತಳಿಕೆಗಳನ್ನೂ, ವೈಷ್ಣವವಾದ ಚಿನ್ನದ ಖಡ್ಗವನ್ನೂ ಕೊಟ್ಟರು. ಪತಿಪ್ರೇಮದಿಂದ ರಾಮನನ್ನು ಹಿಂಬಾಲಿಸಿ ಕಾಡಿಗೆ ಬಂದಿರುವ ಸೀತೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ತಾವು ಮೂವರೂ ಆಶ್ರಮವನ್ನು ಕಟ್ಟಿಕೊಂಡು ಇರಲು ಅನುಕೂಲವಾದ ಸ್ಥಳವೊಂದನ್ನು ಸೂಚಿಸಬೇಕೆಂಬುದಾಗಿ, ರಾಘವನು ಮುನಿಗಳಲ್ಲಿ ಕೋರಿಕೆಯನ್ನು ಇಟ್ಟನು. ಆಗ ಅಗಸ್ತ್ಯರು ಸೂಚಿಸಿದ ಜಾಗವೇ ಪಂಚವಟಿ.

ಅವರು ಅಲ್ಲಿ ಹೇಳುವ ಮಾತುಗಳು ಸೂಕ್ಷ್ಮವೂ ಮಾರ್ಮಿಕವೂ ಆಗಿವೆ. ಗೆಡ್ಡೆ-ಗೆಣಸುಗಳೂ, ಮೃಗಗಳೂ ತುಂಬಿರುವ ಸ್ಥಳವದು. ಗೋದಾವರೀ ನದಿಯೂ ಹತ್ತಿರದಲ್ಲೇ ಇದೆ. ರಮ್ಯವಾಗಿರುವ ಆ ಸ್ಥಾನದಲ್ಲಿ ಸೀತೆಯು ಸುಖವಾಗಿರುತ್ತಾಳೆಂದು ಅವರು ತಿಳಿಸಿದರು. ಜೊತೆಗೇ ಅಲ್ಲಿ ಜನಸಂಚಾರವಿಲ್ಲವೆಂದೂ ಆದರೆ ಸೀತೆಯನ್ನು ರಕ್ಷಿಸುವ ಸಾಮರ್ಥ್ಯ ರಾಘವನಿಗಿದೆಯೆಂದೂ ಅವರು ಹೇಳಿದರು. ತದನಂತರ ರಾಮ-ಲಕ್ಷ್ಮಣ-ಸೀತೆಯರು ಮುನಿಗಳ ಪಾದಕ್ಕೆ ವಂದಿಸಿ ಪಂಚವಟಿಗೆ ತೆರಳಿದರು.

ಪಂಚವಟಿಯೇಕೆ ಮುಖ್ಯ?

ಈ ಮಿಲನದಲ್ಲಿ ಎರಡು ಪ್ರಮುಖವಾದ ವಿಷಯಗಳನ್ನು ಗಮನಿಸುವುದಿದೆ. ಅಗಸ್ತ್ಯಮುನಿಗಳನ್ನು ಭೇಟಿಯಾಗುವ ಹೊತ್ತಿಗೆ ರಾಮಾದಿಗಳು ಹಲವರ್ಷಗಳು ವನವಾಸದಲ್ಲಿ ಕಳೆದಿದ್ದರು. ಈವರೆಗೆ ಈ ಮೂವರ ಕಾಲ ಬಹುಶಃ ಶಾಂತಿಯುತವಾಗಿಯೇ ಕಳೆದಿತ್ತು. ತಾಪಸರನ್ನು ಭೇಟಿಯಾಗುವುದು, ಅವರಿಂದ ಆಖ್ಯಾನಗಳನ್ನು ಕೇಳುವುದು, ಆಗೊಮ್ಮೆ ಈಗೊಮ್ಮೆ ದುಷ್ಟಸಂಹಾರಕಾರ್ಯ ಮಾಡುವುದು - ಹೀಗೆ ಸಾಗಿತ್ತು. ಆದರೆ ಈ ಕಾಲಘಟ್ಟವಾದ ಮೇಲೇ ಘಟನಾವಳಿಗಳು ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ನಡೆಯುತ್ತಾ ಹೋಗುತ್ತve?ದೆ. ಶೂರ್ಪಣಖೆ-ಖರ-ದೂಷಣರಿಗೆ ಸಂಬಂಧಿಸಿದ ಘಟನೆಗಳು, ಮಾಯಾಮೃಗ ಕಾಣಿಸಿಕೊಳ್ಳುವುದು, ಸೀತಾಪಹರಣ - ಈ ಎಲ್ಲವೂ ಪಂಚವಟಿಗೆ ಹೋದ ನಂತರವೇ ಘಟಿಸುವುದು.

ಮುಂಬರುವ ಘಟನೆಗಳ ಹಿನ್ನೆಲೆಯಲ್ಲೇ ರಾಮ-ಲಕ್ಷ್ಮಣರಿಗೆ ಸಹಾಯವಾಗಲೋ ಎಂಬಂತೆ, ಅಗಸ್ತ್ಯರು ಮೊದಲೇ ರಾಮನಿಗೆ ವೈಷ್ಣವವಾದ ಶಸ್ತ್ರಗಳನ್ನು ಕೊಟ್ಟಿದ್ದಾರೆ. ದೇವರಾಜನಾದ ಇಂದ್ರನೇ ಮುನಿಗಳಿಗೆ ಕೊಟ್ಟಿರುವ ಶಸ್ತ್ರಗಳಿವು. ವಿಷ್ಣುವೇ ಹಿಂದೆ ದೈತ್ಯಸಂಹಾರಕ್ಕೆ ಉಪಯೋಗಿಸಿರುವ ಆಯುಧಗಳು. ಮುಂದಾಗಬೇಕಾಗಿರುವ ದುಷ್ಟಸಂಹಾರಕಾರ್ಯಕ್ಕೆ ಇದೊಂದು ನಾಂದಿಯಿದ್ದಂತೆ ಎಂದು ತಿಳಿಯಬಹುದು. "ಅಪಿ ಚಾತ್ರ ವಸನ್ ರಾಮ ತಾಪಸಾನ್ ಪಾಲಯಿಷ್ಯಸಿ", ಎಂದರೆ "ನೀನು ಪಂಚವಟಿಯಲ್ಲಿದ್ದರೆ ತಪಸ್ವಿಗಳ ಪಾಲನೆಯ ಕಾರ್ಯವು ನಡೆಯುವುದು", ಎಂದೂ ಅಗಸ್ತ್ಯರು ಹೇಳುತ್ತಾರೆ. ಈ ಹಿಂದೆ ತಾನೆ ಶ್ರೀರಾಮನು ದಂಡಕಾರಣ್ಯದಲ್ಲಿ ತಪೋನಿರತರಾದ ಋಷಿಗಳಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದನು. ಏನದು ಅವರು ಕೇಳಿದ ಸಹಾಯ?

ತಾಪಸರ ಪಾಲನೆ ಎಂದರೇನು?

ತಾವು ತಪಸ್ಸನ್ನು ನಿರ್ವಿಘ್ನವಾಗಿ ನಡೆಸಲು ರಾಮನು ಅನುಕೂಲ ಮಾಡಿಕೊಡುವುದೇ ಅದು. ಏನು ಆ ಅನುಕೂಲ? ಋಷಿಗಳೆಂದರೆ ತಪಸ್ಸು-ಯಜ್ಞಕರ್ಮಗಳಲ್ಲಿ ನಿರತರಾದವರು. ಆದರೆ ಅವರ ಆ ಲೋಕಕಲ್ಯಾಣಕರವಾದ ಕೆಲಸಕ್ಕೆ ನಿಷ್ಕಾರಣವಾಗಿ ವಿಘ್ನಗಳನ್ನೊಡ್ಡುವವರು ರಾಕ್ಷಸರು. ಅಂತಹವರು ಹಲವರು ದಂಡಕಾರಣ್ಯದಲ್ಲಿದ್ದು, ಅಲ್ಲಿದ್ದ ಋಷಿ-ಮುನಿಗಳಿಗೆ ತೊಂದರೆ ಕೊಡುತ್ತಲೇ ಇದ್ದರು. ಶ್ರೀರಾಮನು ತನ್ನ ವನವಾಸಕ್ಕೆ ಆ ಘೋರಾರಣ್ಯಕ್ಕೆ ಬಂದಾಗ ಸಹಜವಾಗಿಯೇ ಅಲ್ಲಿನ ತಪಸ್ವಿಗಳು ರಾಮನ ಮೊರೆಹೊಕ್ಕರು. ಸ್ವಭಾವಸಹಜವಾಗಿ ಶರಣಾಗತರಕ್ಷಕನಾದ ರಾಘವನು ಅವರಿಗೆ ಅಭಯವಿತ್ತನು. ಇದೇ ರಾಮನು ತಾನು ಮಾಡುವುದಾಗಿ ಪ್ರತಿಜ್ಞೆ ಮಾಡಿರುವ ತಾಪಸ-ಪಾಲನ-ಕಾರ್ಯ. ಶ್ರೀರಂಗಮಹಾಗುರುಗಳು ಈ ಬಗ್ಗೆ ಹೇಳುವುದಿಂತು: "ಶಿಷ್ಟರಕ್ಷಣ ದುಷ್ಟಶಿಕ್ಷಣ, ಇದೇ ಕ್ಷತ್ರಿಯ ಧರ್ಮ...ಕಳೆಯನ್ನು ನಿರ್ಮೂಲ ಮಾಡದೇ ಬೆಳೆಯಿಲ್ಲ...ಆಗಬೇಕಾದುದು ಅಧರ್ಮ ನಿರ್ಮೂಲನ, ಧರ್ಮರಕ್ಷಣೆಗಾಗಿ ಯುದ್ಧ." ಈ ರಾಕ್ಷಸಸಂಹರಣಕ್ಕೆ ಸಹಾಯವಾಗಲೆಂದೇ ಅಗಸ್ತ್ಯರು ಆಯುಧಗಳನ್ನಿತ್ತದ್ದು.

ಪಂಚವಟೀಕ್ಷೇತ್ರಕ್ಕೆ ಶ್ರೀರಾಮನ ಗಮನವನ್ನು ಸೆಳೆದದ್ದೂ ಬಹಳ ಮಹತ್ವದ ಸಂಕೇತವೇ. ರಾಕ್ಷಸರನ್ನು ಒಂದು ಸ್ಥಾನಕ್ಕೆ ಸೆಳೆದು ಅವರ ಸಂಹಾರ ಮಾಡಲು ಬೀಸಿದ ಒಂದು ಬಲೆಯೋ ಎಂಬಂತಿದೆ ಅದು. ರಾಮಾಯಣದ ನಿರ್ಣಾಯಕವಾದ ತಿರುವು - ಎಂದರೆ ಸೀತಾಪಹರಣ - ಆಗಲು ಅಗಸ್ತ್ಯರು ಕೊಟ್ಟ ಈ ಸೂಚನೆಯೇ ಕೀಲಿಯೆನ್ನಬಹುದೇನೋ. ದೇವತಾಕಾರ್ಯವೂ ಲೋಕಕಲ್ಯಾಣಕಾರ್ಯವೂ ಆಗಬೇಕಾದಾಗ ಪೂರ್ವಗಾಮಿಘಟನೆಗಳು ಕೆಲವು ಆಗಬೇಕಾಗುತ್ತವೆ. ಅಲ್ಪಕಾಲಿಕವಾಗಿಯೇ ಆದರೂ ವ್ಯಕ್ತಿತ್ವವೊಂದು ಸಕಾಲಕ್ಕೆ ಪ್ರಕಟವಾಗಿ, ಘಟನಾವಳಿಯ ದಿಕ್ಕನ್ನು ನಿರ್ಧರಿಸುವಂತಾಗಬೇಕು. ಆ ಕಾರ್ಯವನ್ನು ಅಗಸ್ತ್ಯಮುನಿಗಳು ಈ ಸಂದರ್ಭದಲ್ಲಿ ಮಾಡಿರುವರು.

ರಾಮಾಯಣ ನಡೆಯಲು ಅಗಸ್ತ್ಯರೂ ಒಂದು ಕಾರಣವಾಗಿದ್ದಾರೆ, ಅಲ್ಲವೇ?

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.