ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೯. ಮನುಷ್ಯ ಯಾವಾಗ ಶೋಕಿಸಬೇಕಿಲ್ಲ?
ವಿನೀತಳಾದ ಪತ್ನಿ ಇರುವಾಗ ಮತ್ತು ಸನ್ಮಾರ್ಗದಲ್ಲಿ ವೈಭವವಿದ್ದಾಗ.
ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ವಿನೀತಳಾದ ಪತ್ನಿ ಮತ್ತು ಸಂಪತ್ತು ಕಾರಣವಾಗಿದೆ. ಈ ಪ್ರಶ್ನೋತ್ತರದಲ್ಲಿ ಗೃಹಸ್ಥನಿಗೆ ನೆಮ್ಮದಿ ಯಾವಾಗ ಸಿಗುತ್ತದೆ? ಎಂಬ ವಿಷಯ ಇಲ್ಲಿ ಪ್ರಸ್ತಾಪಿತಗೊಂಡಿದೆ. ಅಂದರೆ ಗೃಹಸ್ಥನಿಗೆ ತಾನೇ ಪತ್ನಿ ಇರಬೇಕಾದದ್ದು! ಮತ್ತು ಆತನು ತಾನೇ ವೈಭವವನ್ನು - ಸಂಪತ್ತನ್ನು ಪಡೆದು, ಅದನ್ನು ವಿನಿಯೋಗಿಸುವವ. ಗೃಹಸ್ಥನು ವಿನಯದಿಂದ ಕೂಡಿರುವ ಪತ್ನಿ ಮತ್ತು ತಾನು ಸಂಪಾದಿಸಿದ ಸಂಪತ್ತು ಸನ್ಮಾರ್ಗದಲ್ಲಿ ಬಳಕೆಯಾದಾಗ ಅವನು ಶೋಕಿಸುವ ಅವಶ್ಯಕತೆ ಇಲ್ಲ ಎಂಬುದು ಇದರ ತಾತ್ಪರ್ಯ. ಅಂದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಇದ್ದರೆ ಅದು ದುಃಖಕ್ಕೆ ಕಾರಣ ಎಂಬುದು ಅರ್ಥ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಬಗೆಯ ಆಶ್ರಮ ಜೀವನಗಳಲ್ಲಿ ಗೃಹಸ್ಥನು ಮಾತ್ರ ಸಂಪತ್ತನ್ನು ಸಂಪಾದಿಸಬೇಕು; ಅದನ್ನು ಬ್ರಹ್ಮಚಾರಿ ಮತ್ತು ಸನ್ಯಾಸಿ ಆಶ್ರಮಗಳನ್ನು ಪರಿಪಾಲಿಸಬೇಕಾದದ್ದು ಅವನ ಕರ್ತವ್ಯವಾಗಿದೆ. ಗೃಹಸ್ಥಾಶ್ರಮವೇ ಸಂಪತ್ತನ್ನು ಸಂಪಾದಿಸಲು ಮತ್ತು ಅದನ್ನು ವಿನಿಯೋಗಿಸಲೂ ಕೂಡ ಅರ್ಹತೆಯಿಂದ ಕೂಡಿರುತ್ತದೆ. ಆದರೆ ಇದನ್ನು ವಿನಯೋಗಿಸಬೇಕಾದರೆ ಗೃಹಸ್ಥನ ಜೊತೆಗೂಡಿದ ಗೃಹಿಣಿಯ ಪಾತ್ರವೂ ಅತ್ಯಂತ ಪ್ರಮುಖವಾದದ್ದು. “ಗೃಹಿಣೀ ಗೃಹಮುಚ್ಚ್ಯತೇ” ಗೃಹಿಣಿಯನ್ನು ‘ಗೃಹ’ ಎಂಬ ಮಾತನ್ನು ಕೇಳುತ್ತೇವೆ. ಗೃಹಿಣಿಯನ್ನು ಮಂತ್ರಿ ಎಂಬುದಾಗಿಯೂ ಹೇಳಿದ್ದುಂಟು. ಒಬ್ಬ ರಾಜನಾದವನಿಗೆ ಸರಿಯಾದ ಮಂತ್ರಿ ಇದ್ದರೆ ಅವನ ರಾಜ್ಯ ಹೇಗೆ ಸುಂದರವಾಗಿ ಇರುತ್ತದೆಯೋ, ಅಂತೆಯೇ ಮಂತ್ರಿಸ್ಥಾನದಲ್ಲಿರುವ ಗೃಹಿಣಿಯು ಗೃಹಸ್ಥನ ಎಲ್ಲ ರೀತಿಯ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳಲ್ಲಿ ಪರಿಪೂರ್ಣವಾಗಿ ತನ್ನ ಸಹಯೋಗಿತ್ವವನ್ನು ಮತ್ತು ಸಹಭಾಗಿತ್ವವನ್ನು ನೀಡಬೇಕಾಗುತ್ತದೆ. ಹಾಗೆ ನೀಡಿದಾಗ ಮಾತ್ರ ಆ ಗೃಹಸ್ಥಜೀವನವು ಧನ್ಯ ಎಂಬುದಾಗಿ ಪರಿಗಣಿತವಾಗುತ್ತದೆ. ಆದ್ದರಿಂದಲೇ ಗಂಡನಾದವನು ತನ್ನ ಜೀವನದಲ್ಲಿ ಯಾವುದನ್ನು ಪರಮಪುರುಷಾರ್ಥಕ್ಕೆ ಅನುಗುಣವಾಗಿ ಮಾಡಬೇಕು ಎಂಬುದಾಗಿ ಅಂದುಕೊಂಡಿರುತ್ತಾನೋ, ಅದಕ್ಕೆ ಸ್ವಲ್ಪವೂ ಚ್ಯುತಿ ಬಾರದ ರೀತಿಯಲ್ಲಿ ಪತ್ನಿಯಾದವಳು ಹೆಜ್ಜೆಗೆ ಗೆಜ್ಜೆಯಂತೆ ಅವನ ಪೂರ್ಣಜೀವನಕ್ಕೆ ಸಹಕರಿಸಬೇಕಾಗುತ್ತದೆ. ಆಗ ಅವಳು ತನ್ನ ಪತಿಗೆ ವಿನೀತಳು ಎಂದರ್ಥ. ಮತ್ತೊಂದು ಅರ್ಥವೆಂದರೆ ಒಬ್ಬ ದುರ್ಮಾರ್ಗಗಾಮಿಯಾದ ಪತಿಯನ್ನು ಕೂಡ ಸನ್ಮಾರ್ಗದಲ್ಲಿ ನಡೆಸಿಕೊಂಡು ಬರುವ ಸಾಮರ್ಥ್ಯ ಮತ್ತು ಕರ್ತವ್ಯ ಇವೆರಡು ಕೂಡ ಗೃಹಿಣಿಯಾದವಳಿಗೆ ಇರುತ್ತದೆ ಎಂಬ ವಿಷಯ ಇಲ್ಲಿ ಧ್ವನಿತವಾಗುತ್ತದೆ. ಈ ನೇರದಲ್ಲಿ ಗೃಹಣಿಯಾದವಳು ಗೃಹಸ್ಥನಿಗೆ ಪರಿಪೂರ್ಣ ಸಹಕಾರವನ್ನು ನೀಡಬೇಕಾಗುತ್ತದೆ. ಆಗ ಆ ಗೃಹಸ್ಥನ ಜೀವನ ಸುಖಮಯ.
ಕಾಳಿದಾಸನು ಹೇಳುವಂತೆ “ಯೌವನೇ ವಿಷಯೈಷಿಣಾಂ” ಯೌವನದಲ್ಲಿ ಮಾತ್ರ ಸಂಪಾದಿಸಬೇಕು. ಆ ಸಂಪಾದನೆಯು ಬ್ರಹ್ಮಚರ್ಯ ಆಶ್ರಮದಲ್ಲಿ ಸಂಪಾದಿಸಿದ ವಿದ್ಯೆಯ ಬಲದಿಂದ ಆಗಿರಬೇಕು. ಯಾವಾಗ ಸಂಪಾದನೆಯು ವಿದ್ಯೆಯಿಂದ ಬರುತ್ತದೆಯೋ, ಆ ಸಂಪಾದನೆಯು ಧರ್ಮಕಾರ್ಯದಲ್ಲಿ ವಿನಿಯೋಗವಾಗುತ್ತದೆ ಎಂಬ ಅರ್ಥದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ - “ವಿದ್ಯಾ ದದಾತಿ ವಿನಯಂ ವಿನಯಾತ್ ಯಾತಿ ಪಾತ್ರತಾಮ್। ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಃ ತತಃ ಸುಖಮ್” ಎಂಬುದಾಗಿ. ಅಂದರೆ ವಿದ್ಯೆಯು ಧನವನ್ನು ಕೊಡುವುದರ ಮೂಲಕ ಧರ್ಮವನ್ನು ಕೊಟ್ಟು ಕೊನೆಗೆ ಆತ್ಯಂತಿಕವಾದ ಸುಖವನ್ನು ಕೊಡಲು ಸಮರ್ಥವಾದದ್ದು. ವಿವೇಕದಿಂದ ಕೂಡಿದ ವಿದ್ಯೆಯು ಸರ್ವಸ್ವವನ್ನೂ ಕೊಡುವುದಾದ್ದರಿಂದ ಇದರ ಬಲದಿಂದ ಬಂದ ಸಂಪತ್ತು ಸನ್ಮಾರ್ಗಗಾಮಿಯಾಗಿಯೇ ಇರುತ್ತದೆ. ಅಲ್ಲಿ ಯಾವುದೇ ರೀತಿಯಾದ ಧರ್ಮಚ್ಯುತಿಗೆ ಅವಕಾಶವಿಲ್ಲ ಎಂಬುದು ಇದರ ತಾತ್ಪರ್ಯ.
ಸೂಚನೆ : 7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.