Monday, January 19, 2026

ಕೃಷ್ಣಕರ್ಣಾಮೃತ 90 ಜಲಧಿಯ ಸಲಿಲವೂ ಸಾಲದಾಗದೆ ಹೋಯಿತೇ? (Krishakarnamrta 90)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಹಿಂದೆ ಯಾವನು ವರಾಹಾವತಾರವನ್ನು ಮಾಡಿದ್ದನೋ ಆತನೇ ಈಗ ಕೃಷ್ಣಾವತಾರವನ್ನು ಮಾಡಿರುವುದು. ವರಾಹಾವತಾರವು ವಿಷ್ಣುವಿನ ಮೂರನೇ ಅವತಾರ; ಕೃಷ್ಣನು ಎಂಟನೆಯ ಅವತಾರ. ಆ ಅವತಾರಕ್ಕೂ ಈ ಅವತಾರಕ್ಕೂ ಇರುವ ಭೇದವೇನು? ಅದನ್ನು ಲೀಲಾಶುಕನು ಇಲ್ಲಿ ಹೇಳುತ್ತಿರುವುದು.

ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ. ತನ್ನ ತಪಸ್ಸಿನಿಂದ ಪಡೆದ ವರಗಳಿಂದಾಗಿ ಬಲಿಷ್ಠನಾದ; ಮತ್ತೇನು, ಲೋಕಕಂಟಕನಾದ. ವಿಷ್ಣುವು ವರಾಹಾವತಾರವನ್ನು ತಾಳಿ ಆತನನ್ನು ಸಂಹರಿಸಬೇಕಾಯಿತು. ಸಮುದ್ರದಲ್ಲಿ ಮುಳುಗಿ ಹೋಗಿದ್ದ ಭೂಮಿಯನ್ನು ಮೇಲೆತ್ತಬೇಕಾಯಿತು.

ಸಮುದ್ರವೇನು ಒಂದೇ? ಹಲವು ಸಮುದ್ರಗಳಿವೆ. ಅವನ್ನು ನಾಲ್ಕೆಂದೂ ಏಳೆಂದೂ ಹೇಳುವುದುಂಟು. ಸಮುದ್ರಗಳೊಂದೊಂದೂ ಅದೆಷ್ಟು ವಿಶಾಲವೂ ಆಳವೂ ಆಗಿರುತ್ತವೆ! ಹಾಗಿದ್ದರೂ ಅವೆಲ್ಲವೂ ಸೇರಿಯೂ ಒಂದು ಕೆಲಸವನ್ನು ಮಾಡಲಾಗಲಿಲ್ಲವಂತೆ. ಯಾವ ಕೆಲಸದಲ್ಲಿ ಅವು ಅದಕ್ಷವಾದವು? ಆ ವರಾಹನ ರೋಮ-ರಂಧ್ರಗಳುಂಟಲ್ಲಾ, ಅವನ್ನು ತುಂಬಲು! ಅದು ಸಹ ಅವಕ್ಕಾಗಲಿಲ್ಲವಂತೆ! ಅಷ್ಟು ಬೃಹತ್ತಾಗಿತ್ತು, ವರಾಹಾವತಾರ, ಆ ಅವತಾರದ ಆಕಾರ!

ಅಂದಿನ ಆ ಪರಿಸ್ಥಿತಿಗೂ ಕೃಷ್ಣಾವತಾರದ ಇಂದಿನ ಸ್ಥಿತಿಗೂ ಇರುವ ಅಂತರ ಸುಲಭೋಹ್ಯವಲ್ಲ. ಊಹಾತೀತವಾದ ಅದನ್ನು ಊಹೆಗೆಟುಕುವಂತೆ ಲೀಲಾಶುಕನು ತೋರಿಸಿಕೊಡುತ್ತಿದ್ದಾನೆ.

ಕೃಷ್ಣನಿಲ್ಲೊಂದು ಕೂಸಷ್ಟೆ. ಆ ಎಳೆಹಸುಳೆಗೆ ಆತನ ಸಾಕುತಾಯಿಯಾದ ಯಶೋದೆಯ ಕೈಯಲ್ಲೇ ನಿತ್ಯಸ್ನಾನ.  ಈ ಕೈಕೂಸಿನ ಕಣ್ಣಿನ ಅಂದ ಎದ್ದು ತೋರುವಂತಹುದೇ: ಕಮಲದಂತಹ ಕಣ್ಣುಗಳು! ಈ ಎಳೆಗೂಸಿಗೆ ಸ್ನಾನ ಮಾಡಿಸಲು ನೀರೆಷ್ಟು ಬೇಕು? ಒಂದು ಬೊಗಸೆಯಷ್ಟೇ ಸಾಕು!

ಬೊಗಸೆಯೆಂದರೂ ಅಂಜಲಿಯೇ: ಪಾಣಿ-ದ್ವಯವನ್ನು – ಎಂದರೆ ತನ್ನದೇ ಎಡಗೈ-ಬಲಗೈಗಳನ್ನು - ಒಂದರ ಪಕ್ಕ ಮತ್ತೊಂದನ್ನು ಜೋಡಿಸಿಟ್ಟುಕೊಂಡಾಗ, ಅವುಗಳೊಳಗೆ ನಿಲ್ಲುವ ನೀರೆಷ್ಟೋ, ಅಷ್ಟೇ ಅದರ ಪ್ರಮಾಣ; ಅದನ್ನೇ ಪಾಣಿ-ದ್ವಯಾಂತರ-ಜಲವೆಂದಿರುವುದು.

ರೋಮಕೂಪವೆಂದರೆ ಅದೆಷ್ಟು ಪುಟ್ಟ ಎಡೆ! ರೋಮಕೂಪವೊಂ(ದೊಂ)ದಕ್ಕೂ ಇಡೀ ಸಮುದ್ರಗಳೇ ಸಾಕೆನಿಸದ ಮಹಾಕಾರನಾದ ದೇವನಿಗೇ, ಈಗ - ಎಂದರೆ ಈ ಜನ್ಮಾಂತರದಲ್ಲಿ - ಅರ್ಥಾತ್ ಈ ಪುನರವತಾರದಲ್ಲಿ, ಸ್ನಪಿಸಲು ಬೊಗಸೆ ನೀರು ಸಾಕಾಗಿದೆ! ಸ್ನಪಿಸುವುದೆಂದರೆ ಸ್ನಾನ ಮಾಡಿಸುವುದು.

ಒಂದೊಂದವತಾರದಲ್ಲೂ ಒಂದೊಂದು ವಿಶೇಷವಿರುವುದು! ಜಲ-ಪರಿಮಾಣವು ಆಗ ಸಾಲದೆ ಬಂದುದು, ಈಗ ಅಪಾರವಾಗಿ ಉಳಿಯುವಂತಾಯಿತು! ಆಗ ಅಧಿಕ-ಸಲಿಲವೂ ಅಲ್ಪವೇ; ಈಗ ಅತ್ಯಲ್ಪ-ಜಲವೇ ಅತ್ಯಧಿಕ - ಎಂಬಂತಾಗಿದೆ!

ಆಹಾ, ಒಂದೇ ದೈವದ ಎರಡು ರೂಪಗಳಲ್ಲಿ ಅದೆಷ್ಟು ವಿಸದೃಶತೆ! ಹಿಂದಿನ ಬೃಹತ್ತ್ವ ಅನೂಹ್ಯ; ಈಗಿನದು ನಮ್ಮನಿಮ್ಮಂತೆಯಷ್ಟೆ ಇರುವುದು. ಆ ಪುರಾತನಾವತಾರವು ದನುಜ-ಭೀತಿಕರ; ಈ ಅಧುನಾತನಾವತಾರವು ಮನುಜ-ಪ್ರೀತಿಕರ!

ಹೀಗಿರುವ ಮರಿಕೃಷ್ಣ ಮುದ್ದಲ್ಲದೆ ಮತ್ತೇನು?

ಶ್ಲೋಕ ಹೀಗಿದೆ:

ಯದ್ರೋಮ-ರಂಧ್ರ-ಪರಿಪೂರ್ತಿ-ವಿಧಾವದಕ್ಷಾ/ 

ವಾರಾಹ-ಜನ್ಮನಿ ಬಭೂವುರಮೀ ಸಮುದ್ರಾಃ |

ತಂ ನಾಮ ನಾಥಂ ಅರವಿಂದ-ದೃಶಂ ಯಶೋದಾ/

ಪಾಣಿ-ದ್ವಯಾಂತರ-ಜಲೇ ಸ್ನಪಯಾಂಬಭೂವ!! ||

***

ಏನೋ ಕೆಲಸವಾಗಬೇಕೆಂದಿರುವಾಗ ಚರ್ಚೆ ನಡೆಯುತ್ತಿರಲು, ಕೆಲವರು ತಮ್ಮ ಅಭಿಪ್ರಾಯವನ್ನು ಮಂಡಿಸಲು ಹೀಗೆ ಆರಂಭಿಸುವುದುಂಟು: "ನನ್ನ ಮಾತನ್ನು ಕೇಳುವಿರಾದರೆ..." ಎಂದು.

ಹಾಗೆಯೇ ಇಲ್ಲಿ ಲೀಲಾಶುಕ ಕೃಷ್ಣನಿಗೇ ಒಂದು ಕಿವಿಮಾತನ್ನು ಹೇಳುತ್ತಿದ್ದಾನೆ: "ಕೃಷ್ಣಾ, ನನ್ನ ಮಾತಿಗೆ ನೀನು ಕಿವಿಗೊಡುವೆಯಾದರೆ..." ಎಂದು. ಏನದು? ಶುಶ್ರೂಷೆಯೆಂಬ ಪದವನ್ನು ಸೇವೆಯೆಂಬ ಅರ್ಥದಲ್ಲಿ ಬಳಸುವೆವಲ್ಲವೇ? ಸಂಸ್ಕೃತದಲ್ಲಿ ಆ ಅರ್ಥವೂ ಇದೆ. ಜೊತೆಗೆ, "ಕೇಳುವ ಬಯಕೆ" ಎಂಬ ಇನ್ನೊಂದರ್ಥವೂ ಇದೆ. ಇಲ್ಲಿ ಬಳಸಿರುವುದು ಎರಡನೆಯ ಅರ್ಥದಲ್ಲಿ. "ಶುಶ್ರೂಷಿಸು ನನ್ನ ಮಾತನ್ನು" - ಎನ್ನುತ್ತಿದ್ದಾನೆ, ಕವಿ ಲೀಲಾಶುಕ.

ಕವಿಯೊಬ್ಬನು ಹೇಳುವ ಮಾತಾದರೆ ಅದರಲ್ಲೊಂದು ಎಚ್ಚರಬೇಕು. ಏನದು? ಬೇರೆಯವರು ಹೇಳಿದ್ದನ್ನೇ ಹೇಳಹೊರಟಿರುವುದೋ ಹೇಗೆ? - ಎಂದು ಖಚಿತಪಡಿಸಿಕೊಳ್ಳಬೇಕು. ಏಕೆ? ಅನ್ಯಕವಿಗಳ ಚಿಂತನಗಳನ್ನು ಕದಿಯದ ಕವಿಯೊಬ್ಬನುಂಟೆ? ಅದಕ್ಕೇ ಲೀಲಾಶುಕನೇ ತಾನೇ ಖಚಿತಪಡಿಸುತ್ತಾನೆ: "ಹಿಂದಿನ ಕವಿಗಳು ಯಾರೂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ" - ಎಂದು. ವ್ಯಕ್ತಪಡಿಸುವುದಿರಲಿ, ಇತ್ತ ಕಣ್ಣು ಕೂಡ ಹಾಯಿಸಿಲ್ಲ! – ಎನ್ನುತ್ತಿದ್ದಾನೆ. ಅದನ್ನೇ  "ಇತರಕವಿಗಳು ಕಟಾಕ್ಷಿಸಿಯೂ ಇಲ್ಲ" ಎಂದಿರುವುದು. ಸಾಮಾನ್ಯ-ಕವಿಗಳ ವಿಷಯವನ್ನು ಹೇಳುತ್ತಿಲ್ಲವೆಂದು  ಮೊದಲೇ ಖಚಿತಪಡಿಸುತ್ತಾ, ಹಿಂದಿನ ಅಪೂರ್ವ-ಕವಿಗಳಿಗೂ ಹೊಳೆದಿಲ್ಲದ್ದು ಇದು - ಎನ್ನುತ್ತಾನೆ. ಅ-ಪೂರ್ವ ಎಂದರೆ "ಹಿಂದೆಂದೂ ಇದ್ದಿಲ್ಲದ"; ಅರ್ಥಾತ್, ಅದ್ಭುತ. ಹಿಂದಿನ ಅದ್ಭುತ-ಕವಿಗಳಿಗೂ ಹೊಳೆದಿಲ್ಲದ್ದು ಇದು. ಅವರೂ ಕಟಾಕ್ಷಿಸಿಲ್ಲದ್ದೆಂದರೆ ಅವರೂ ಕಂಡಿಲ್ಲದ್ದು. ಸರಿ, ಹಾಗಿದ್ದರೆ ಇಲ್ಲೇನೋ ವಿಶೇಷವಿರಲೇಬೇಕು.

ಸುಪ್ರಸಿದ್ಧನಾದ ಚಂದ್ರನ ಬಗ್ಗೆಯೇ ಇದು. ಆ ಚಂದ್ರನೊಂದು ಕಡೆ; ಈ ಕೃಷ್ಣನ ಮುಖಚಂದ್ರವೊಂದು ಕಡೆ. ಎರಡೂ ಚಂದ್ರನೆಂದದ್ದರಿಂದ ಮತ್ತೆ ಹೋಲಿಕೆಯಷ್ಟೇಯೋ? ಇಲ್ಲ, ಹೋಲಿಕೆ ತರಲಾಗದೆಂದೇ ಪ್ರತಿಪಾದಿಸಹೊರಟಿರುವುದು ಈಗ!

"ಕೃಷ್ಣನ ಆನನೇಂದುವಿಗೆ – ಎಂದರೆ ಮುಖ-ಚಂದ್ರನಿಗೆ - ಈ ಚಂದ್ರನು ನೀರಾಜನ ಮಾಡಲಷ್ಟೆ ಅರ್ಹ!" - ಎನ್ನುತ್ತಿದ್ದಾನೆ, ಲೀಲಾಶುಕ. ನೀರಾಜನವೆಂದರೆ ಮಂಗಳಾರತಿ. ಮಂಗಳಾರತಿ ಮಾಡುವುದೆಂದರೆ ಸಾಮಾನ್ಯವಾಗಿ  ಹಣತೆಯಿಂದಲ್ಲವೇ? ಹೌದು, ಈಗ ಚಂದ್ರನೇ ಒಂದು ದೀಪದಂತೆ; ಎಂದೇ ಶಶಿಯೇ ಒಂದು ಪ್ರದೀಪ - ಎಂದಿರುವುದು. ಚೆನ್ನಾಗಿ ಬೆಳಗುವ ದೀಪವೇ ಪ್ರದೀಪ.

ಏನೋ ನೆಪಕ್ಕೆ ನೀರಾಜನವೆಂದದ್ದಲ್ಲ. ನಿರ್ವ್ಯಾಜವಾಗಿ ಅರ್ಥಾತ್ ನಿಷ್ಕಪಟವಾಗಿ ಹೇಳುವುದಾದರೆ, ಚಂದ್ರನಿಗೆ ಇರುವ ಅರ್ಹತೆಯೆಂದರೆ ಅದೊಂದಕ್ಕೇ! – ಎನ್ನುತ್ತಾನೆ ಕವಿ.

ಮತ್ತು ಈ ಮಂಗಳಾರತಿಯಲ್ಲಿ ಒಂದು ವಿಶೇಷವೂ ಇದೆ. ಲೋಕಸಾಮಾನ್ಯವಾಗಿ ಮಾಡುವ ದೀಪದ ಮಂಗಳಾರತಿಯಲ್ಲಿ ಬಿಸಿಯುಂಟು: ದೀಪದಲ್ಲಿಯ  ಅಗ್ನಿಯಲ್ಲಿ ಉಷ್ಣತೆಯಿರದೇ? ತೀರ ಹತ್ತಿರದಿಂದ ನೋಡಿದರೆ ಕಣ್ಣಿಗಷ್ಟು ಹಿತವೂ ಅಲ್ಲ, ಅದು.

ಆದರೆ ಚಂದ್ರನೋ ಶೀತ-ರಶ್ಮಿ; ಆತನ ಕಿರಣಗಳು ಸದಾ ತಂಪೇ.

ಆದರೆ ಕೃಷ್ಣನ ಮುಖವಂತೂ, ಜಗತ್ತೆಲ್ಲವನ್ನೂ ತನ್ನ ಅಮೃತ-ಕಿರಣಗಳಿಂದ ಎಲ್ಲ ಚೇತನಾಚೇತನಗಳನ್ನು ಆಪ್ಲಾವಿಸಿ, ಎಂದರೆ ಮುಳುಗಿಸಿ, ಆಹ್ಲಾದಗೊಳಿಸುವಂತಹುದು. ಹಾಗಿರುವಾಗ, ಈ ಕೃಷ್ಣಮುಖಚಂದ್ರನ ಮುಂದೆ ಆಕಾಶಚಂದ್ರ ಎಲ್ಲಿಯ ಲೆಕ್ಕ?

ಹೋಲಿಕೆಯೆಂಬುದು ಸಲ್ಲುವುದು ಹೆಚ್ಚುಕಡಿಮೆ ಸಮಾನವಾಗಿರುವ ವ್ಯಕ್ತಿ/ವಸ್ತುಗಳ ನಡುವೆ ಮಾತ್ರವೇ.  ಇಲ್ಲಾವ ಸಮತ್ವ?

ಹೀಗಾಗಿ, ಕೃಷ್ಣನ ಆನನೇಂದುವಿಗೆ ಮಂಗಳಾರತಿ ಮಾಡುವುದಕ್ಕಷ್ಟೇ ಯೋಗ್ಯ, ಆಗಸದ ಚಂದ್ರ. ಒಳ್ಳೆಯ ಕರ್ಪೂರ-ದೀಪದಂತೆಯೂ ಆತ ಬೆಳಗುವನೆಂದರಾಯಿತು.

ಒಟ್ಟಿನಲ್ಲಿ, ದೃಷ್ಟಿ ನಿವಾಳಿಸಿ ಹೊರಬಿಸಾಕುತ್ತಾರಲ್ಲವೆ, ಅದಕ್ಕಷ್ಟೆ ಯೋಗ್ಯ, ಈ ಚಂದ್ರ!

ಕೃಷ್ಣನ ಮುಖ-ಚಂದ್ರಕ್ಕೆ ಎಣೆಯೆಂಬುದೊಂದುಂಟೇ? - ಎಂದು ಧ್ವನಿಮರ್ಯಾದೆಯಿಂದ ಹೀಗೆ ಹೇಳುತ್ತಿದ್ದಾನೆ, ಲೀಲಾಶುಕ.

ಶುಶ್ರೂಷಸೇ ಯದಿ ವಚಃ ಶೃಣು ಮಾಮಕೀನಂ /

ಪೂರ್ವೈರ್ ಅಪೂರ್ವ-ಕವಿಭಿರ್ ನ ಕಟಾಕ್ಷಿತಂ ಯತ್ |

ನೀರಾಜನ-ಕ್ರಮ-ಧುರಾಂ ಭವದಾನನೇಂದೋಃ /

ನಿರ್ವ್ಯಾಜಮ್ ಅರ್ಹತಿ ಚಿರಾಯ ಶಶಿ-ಪ್ರದೀಪಃ! ||

ಸೂಚನೆ : 17/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.