ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅರ್ಜುನೋಕ್ತಿಯ ಬಳಿಕ ಕೃಷ್ಣನು ಮಾತನಾಡುತ್ತಾ, ಜರಾಸಂಧವಧೆಗೆ ಕುಟಿಲೋಪಾಯವೊಂದನ್ನು ಸೂಚಿಸುತ್ತಿದ್ದಾನೆ:
"ನಮ್ಮ ಕಡೆಯಿಂದ ಯಾವ ದೋಷವೂ ಆಗದಂತೆ ನೋಡಿಕೊಂಡು, ಯಾರಿಗೂ ಗೊತ್ತಾಗದಂತೆ ನಾವು ಆ ಜರಾಸಂಧನ ಅರಮನೆಯನ್ನು ಪ್ರವೇಶಿಸಬೇಕು. ಪ್ರವೇಶಿಸಿ, ಆತನ ಮೇಲೆ ಆಕ್ರಮಣವನ್ನು ಮಾಡಿದೆವೆಂದರೆ ನಮ್ಮ ವಾಂಛಿತವನ್ನು ಈಡೇರಿಸಿಕೊಂಡಂತೆಯೇ. ಸರ್ವಭೂತಗಳಲ್ಲೂ ಅಂತರಾತ್ಮನು ಬೆಳಗುವ ಹಾಗೆ, ಈ ಶತ್ರುವಾದ ಜರಾಸಂಧನು ಎಲ್ಲರ ಮಧ್ಯದಲ್ಲಿ ನಿಂತು, ರಾಜ್ಯಲಕ್ಷ್ಮಿಯಿಂದ ಕಂಗೊಳಿಸುತ್ತಿದ್ದಾನೆ.
ಅಥವಾ ಹೀಗೂ ಆಗಬಹುದು: ಈ ಜರಾಸಂಧನನ್ನು ಯುದ್ಧದಲ್ಲಿ ನಾವು ಕೊಂದ ಬಳಿಕ, ಒಂದು ವೇಳೆ ಉಳಿದ ಅವನ ಕಡೆಯವರೇ ನಮ್ಮನ್ನು ಕೊಲ್ಲಬಹುದೆಂದುಕೋ. ಹಾಗೂ, ನಾವು ನಮ್ಮ ಬಂಧುಜನರನ್ನು ರಕ್ಷಿಸುವ ಕಾರ್ಯದಲ್ಲೇ ತತ್ಪರರಾಗಿದ್ದು ಸಾವನ್ನಪ್ಪಬೇಕಾಯಿತೆಂದರೆ, ಹಾಗೂ ಬಳಿಕ ಸ್ವರ್ಗವನ್ನು ಪಡೆಯತಕ್ಕವರೇ ಸರಿ!" ಎಂದನು, ಕೃಷ್ಣ.
ಆಗ ಯುಧಿಷ್ಠಿರನು ಮರುಪ್ರಶ್ನೆಯನ್ನು ಹಾಕಿದನು: "ಕೃಷ್ಣಾ, ವಾಸ್ತವವಾಗಿ ಯಾರೀ ಜರಾಸಂಧ? ಆತನ ಬಲವೆಂತಹುದು? ಪರಾಕ್ರಮವೆಂತಹುದು? ಅಗ್ನಿಯನ್ನು ಮುಟ್ಟಿದ ಪತಂಗದ ಹುಳುವು ಸುಟ್ಟುಹೋಗುವದಲ್ಲವೇ? ಹಾಗೆ, ನಿನ್ನ ಸ್ಪರ್ಶವನ್ನು ಹೊಂದಿ ಆತನು ಮರಣವನ್ನಪ್ಪಬೇಕಿತ್ತಲ್ಲವೇ? ಆದರೂ ಆತನೇಕಿನ್ನೂ ಸತ್ತಿಲ್ಲ?" – ಎಂದನು.
ಅದಕ್ಕೆ ಕೃಷ್ಣನು ಹೇಳಿದನು:
"ರಾಜಾ ಯುಧಿಷ್ಠಿರನೇ, ಜರಾಸಂಧನ ವೀರ್ಯವೇನು, ಪರಾಕ್ರಮವೇನು! ಅನೇಕಬಾರಿ ಆತನು ನಮಗೆ ವಿಪ್ರಿಯವನ್ನು ಮಾಡಿದ್ದರೂ, ಎಂದರೆ ಕೆರಳುವಂತೆ ಮಾಡಿದ್ದರೂ ಸಹ, ನಾವೇಕೆ ಆತನನ್ನು ಉಪೇಕ್ಷೆ ಮಾಡಿದ್ದೇವೆ? - ಎಂಬುದೆಲ್ಲವನ್ನೂ ಹೇಳುವೆ, ಕೇಳು.
ಮೂರು ಅಕ್ಷೌಹಿಣೀ-ಸೈನ್ಯಕ್ಕೆ ಒಡೆಯನಾಗಿ ಮಹಾಬಲಶಾಲಿಯೆನಿಸಿದ್ದ ಬೃಹದ್ರಥನೆಂಬ ರಾಜನಿದ್ದನು. ಮಗಧ-ದೇಶದ ಒಡೆಯನಾತ. ಸಮರಗಳಲ್ಲಿ ಆತನ ದರ್ಪವೇ ದರ್ಪ. ಬಲ-ಪರಾಕ್ರಮಗಳಿಗೆ ಸಾಟಿಯಿಲ್ಲದವ. ಅವನು ಮತ್ತೊಬ್ಬ ಇಂದ್ರನೋ ಎಂಬಂತಿದ್ದ. ಸದಾ ದೀಕ್ಷಾಂಕಿತವಾಗಿತ್ತು, ಆತನ ಶರೀರ. ರೂಪಶಾಲಿಯೂ ಹೌದು ಆತ. ತೇಜಸ್ಸಿನಲ್ಲಿ ಸೂರ್ಯನಂತೆ, ಕ್ಷಮೆಯಲ್ಲಿ ಭೂಮಿಯಂತೆ, ಕ್ರೋಧದಲ್ಲಿ ಯಮನಂತೆ ಸಂಪತ್ತಿನಲ್ಲಿ ಕುಬೇರನಂತೆ. ಉತ್ತಮಕುಲದಲ್ಲಿ ಜನ್ಮ, ಅನೇಕ ಸದ್ಗುಣಗಳು - ಇವುಗಳು ಭೂಮಿಯನ್ನೇ ವ್ಯಾಪಿಸಿದ್ದವು - ಸೂರ್ಯನ ಕಿರಣಗಳು ವ್ಯಾಪಿಸುವ ಹಾಗೆ.
ಆ ಬೃಹದ್ರಥ ಮದುವೆಯಾದದ್ದು ಕಾಶಿರಾಜನ ಇಬ್ಬರು ಹೆಣ್ಣುಮಕ್ಕಳನ್ನು. ಅವರು ಅವಳಿಮಕ್ಕಳು, ರೂಪೈಶ್ವರ್ಯ-ಸಂಪನ್ನರು. ಅವರಿಬ್ಬರಿಗೂ ಏಕಾಂತದಲ್ಲಿ ಆ ಬೃಹದ್ರಥನು ಹೇಳಿದುದು - ನಿಮ್ಮಿಬ್ಬರನ್ನೂ ನಾನು ಏಕ-ರೀತಿಯಿಂದಲೇ ನೋಡುವೆ - ಎಂಬುದಾಗಿ. ತನಗೆ ಪ್ರಿಯರೂ ಅನುರೂಪರೂ ಆದ ಇಬ್ಬರೂ ಪತ್ನಿಯರೊಂದಿಗೆ ಆ ಬೃಹದ್ರಥನು ಶೋಭಿಸಿದನು - ಎರಡು ಹೆಣ್ಣಾನೆಗಳೊಂದಿಗೆ ಶ್ರೇಷ್ಠಗಜವು ಹೇಗೆ ರಮಿಸುವುದೋ ಹಾಗೆ; ಗಂಗೆ-ಯಮುನೆಯರ ನಡುವೆ ಸಾಗರವು ಹೇಗೆ ಕಂಗೊಳಿಸುವುದೋ ಹಾಗೆ ಅವರಿಬ್ಬರ ನಡುವೆ ರಾರಾಜಿಸಿದನು.
ಇಂದ್ರಿಯ-ಸುಖಗಳಲ್ಲೇ ಮುಳುಗಿದ್ದ ಆ ರಾಜನ ಯೌವನವು ಕಳೆಯಿತು. ಆದರೆ ಆತನಿಗೆ ಮಕ್ಕಳಾಗಲಿಲ್ಲ. ಮಂಗಳಕಾರಿಯಾದ ಅನೇಕ ಹೋಮಗಳನ್ನು ಮಾಡಿದನು - ಪುತ್ರಕಾಮೇಷ್ಟಿ ಮುಂತಾದವುಗಳನ್ನು. ಆದರೂ ಸಹ ಕುಲ-ವರ್ಧಕನಾದ ಪುತ್ರನೊಬ್ಬನನ್ನು ಮಾತ್ರ ಪಡೆಯಲಿಲ್ಲ.
ಒಮ್ಮೆ ರಾಜನು ಕಾಕ್ಷೀವಂತನ ಪುತ್ರನೂ ಗೌತಮವಂಶ-ಪ್ರದೀಪನೂ ಆದ ಚಂಡ-ಕೌಶಿಕನ ಬಗ್ಗೆ ಕೇಳಿತಿಳಿದನು. ತಪಸ್ಸಿನಿಂದ ವಿರತನಾಗಿ ಆ ಕೌಶಿಕನು ಅಕಸ್ಮಾತ್ತಾಗಿ ಇತ್ತ ಬಂದಿರುವನೆಂದೂ ಮರದ ಬುಡವೊಂದರಲ್ಲಿ ಕುಳಿತಿರುವನೆಂದೂ ಅರಿತುಕೊಂಡನು. ತನ್ನಿಬ್ಬರೂ ಪತ್ನಿಯರೊಂದಿಗೆ ಹೋಗಿ ಎಲ್ಲ ಬಗೆಯ ರತ್ನಗಳನ್ನೂ ಆತನಿಗಿತ್ತು ಆತನನ್ನು ಸಂತೋಷಪಡಿಸಿದನು.
ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.