ಲೇಖಕರು: ಡಾ. ರಾಮಮೂರ್ತಿ ಟಿ.ವಿ
(ಪ್ರತಿಕ್ರಿಯಿಸಿರಿ lekhana@ayvm.in)
ಭಗವಾನ್ ಶ್ರೀಕೃಷ್ಣನು ನಮಗಾಗಿ ಭಗವದ್ಗೀತೆಯಲ್ಲಿ ತಿಳಿಸಿರುವ ಪ್ರಸಿದ್ಧ ಹಿತವಚನ ಹೀಗಿದೆ –"ನನ್ನಲ್ಲೇ ಮನಸ್ಸಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು. ನನಗೆ ತಲೆಬಾಗು. ಮನಸ್ಸನ್ನು ಹೀಗೆ ಅಣಿಗೊಳಿಸಿ ನನ್ನನ್ನು ಮೊರೆಹೊಕ್ಕಾಗ ನನ್ನನ್ನೇ ಸೇರುವೆ" . ಪಾದಸೇವೆ ,ದಾಸ್ಯ,ಆತ್ಮನಿವೇದನ, ಶರಣಾಗತಿ(ಪ್ರಪತ್ತಿ) ಎಂಬ ಭಕ್ತಿಯ ವಿಧಗಳು ಪರ್ಯಾಯಪದಗಳಲ್ಲವಾದರೂ ಹತ್ತಿರದಪದಗಳಾಗಿ ಗೀತಾಚಾರ್ಯನ ಹಿತನುಡಿಗೆ ಪೋಷಕವಾಗಿದೆ. ಮಹಾಲಕ್ಷ್ಮೀ , ಹನುಮಂತ , ಮೀರಾ, ದ್ರೌಪದೀ ಮೇಲ್ಕಂಡ ಭಕ್ತಿವಿಧಗಳ ಜ್ವಲಂತ ಉದಾಹಣೆಗಳು. ಈ ಭಕ್ತಿಯ ವಿಧಗಳು ಮಾನಸಿಕವಾಗಿ ನಡೆಯುವ ಕ್ರಿಯೆಗಳು. "ನಾನು ನನ್ನದೇನು ಇಲ್ಲ" ವೆಂಬ ವಸ್ತುಸ್ಥಿತಿಯ ಗುರುತಿಸುವಿಕೆಯೇ ಹೊರತು ದೈನ್ಯಭಾವವಾಗಲೀ, ಆತ್ಮವಿಶ್ವಾಸ ಕಳೆಯುವಿಕೆಯಾಗಲೀ ಅಲ್ಲ. ಆದಿಶಂಕರರ ಭಗವನ್ಮಾನಸಪೂಜಾ ಸ್ತೋತ್ರದಲ್ಲಿ ಈ ಭಾವಗಳನ್ನು " ನಮಸ್ಕಾರೋsಷ್ಟಾಂಗಃ , ಅಹಮಪಿ ಚ ದಾಸಃ " ಎಂಬುದಾಗಿ ಬಿಂಬಿಸಿದ್ದಾರೆ.
ಸಾಧಕನಿಗೆ ಈ ಮಾರ್ಗದಲ್ಲಿ ಹೆಜ್ಜೆಯಿಡಬೇಕಾದರೆ ಅವಲಂಬನೆ ಬೇಕಾಗುತ್ತದೆ. ಇಂತಹ ಶ್ರೇಷ್ಠವಾದ ಅವಲಂಬನೆಗಳು-ಸಂತರಿಂದ ಗೌರಾವಿಸಲ್ಪಟ್ಟ ಪರಮಾತ್ಮನ ಪಾದ ಮತ್ತು ಅವನು ಸಂಕಲ್ಪಪೂರಿತವಾಗಿ ಮೆಟ್ಟಿದ ಅವನ ಪ್ರತಿನಿಧಿಯೇ ಆಗಿರುವ ಪಾದುಕೆ. ಈ ಪ್ರತೀಕಗಳ ಬಗ್ಗೆ ಶ್ರೀರಂಗಮಹಾಗುರುಗಳು ಕೊಡುತ್ತಿದ್ದ ವೈಣಿಕನ ಉದಾಹರಣೆ ಸ್ಮರಣೀಯ. ವಾದ್ಯಗಾರರು ವಾದ್ಯದ ಮೂಲಕ ತಮ್ಮ ಮನೋಧರ್ಮವನ್ನು ಹರಿಸಬಲ್ಲರು. ಆ ನಾದಲಹರಿಯನ್ನು ಕೇಳಿ ಸಂಗೀತಜ್ಙನಾದವನು ವಾದ್ಯಗಾರರ ಇಂಗಿತವನ್ನು ಅರ್ಥಮಾಡಿಕೊಳ್ಳಬಲ್ಲ. ರಸಿಕರು ಕೀರ್ತನೆಯ ಪದಗಳು ವಾದ್ಯದಲ್ಲಿ ಬರದಿದ್ದರೂ, ಕೀರ್ತನೆ ಚೆನ್ನಾಗಿ ಹರಿದುಬಂತು ಎಂದು ಉದ್ಘಾರ ಮಾಡುತ್ತಾರೆ. ಹಾಗೆಯೇ ಭಾವಗ್ರಾಹಿ ಜನಾರ್ಧನ, ಭಕ್ತನ ಮನೋಧರ್ಮವನ್ನು ಸುಲಭವಾಗಿ ಪತ್ತೆಹಚ್ಚಬಲ್ಲ. ಶ್ರೀರಾಮನ ಪಾದುಕೆಯು ಭರತನಿಗೆ ನಿರ್ದೇಶನವಿತ್ತು ರಾಜ್ಯಭಾರ ಮಾಡಲಿಲ್ಲವೇ? ಶ್ರೀರಂಗಮಹಾಗುರುಗಳ ವಾಣಿಯಂತೆ, "ಆ ಜೀವನು ತನ್ನ ನೆಲೆ ಸೇರಲು, ಈ ಪಾದವನ್ನವಲಂಬಿಸಿದರೆ ತಾನೇ ಸಾಧ್ಯವಪ್ಪಾ! ಅವನ ಪಾದವು ಎಲ್ಲ ಕ್ಷೇತ್ರದಲ್ಲೂ ವ್ಯಾಪಿಸಿಕೊಂಡಿದೆ" .
ಈ ಪ್ರತೀಕಗಳ ಮೇಲಿನ ಮನೋಧರ್ಮದ ವೃದ್ಧಿಗಾಗಿ ಇಂದಿಗೂ ಸದಾಚಾರದ ಪದ್ದತಿ ಅನೇಕ ವೈಷ್ಣವ ದೇವಾಲಯಗಳಲ್ಲಿ ನೋಡಬಹುದಾಗಿದೆ. ಇದನ್ನು ಶಠಾರಿ ಎನ್ನುತ್ತಾರೆ. ಇದರ ಮುಖಭಾಗವು " ನಮ್ಮಾಳ್ವಾರ್ " ಎಂಬ ಭಕ್ತರ ಸಂಕೇತವಾಗಿದ್ದು, ಮೇಲೆ ಭಗವಂತನ ಪಾದಮುದ್ರೆಗಳಿರುತ್ತವೆ. ಶಠಾರಿಯನ್ನು ದೇವರ ದರ್ಶನಕ್ಕಾಗಿ ಬಂದ ಎಲ್ಲ ಆಸ್ತಿಕರ ಶಿರಸ್ಸಿನ ಮೇಲಿಡುತ್ತಾರೆ. ಕೆಳಗಿನ ಮಹಿಮಾನ್ವಿತ ವಿಷಯಗಳು - "ಶ್ರೀರಾಮನ ಪಾದಸ್ಪರ್ಶದಿಂದ ಕಲ್ಲಿಗೇ ಜೀವ ಬಂತು ಮತ್ತು ಅಹಲ್ಯೆಗೆ ಶಾಪವಿಮೋಚನೆಯಾಯಿತು. ಭಗವಂತನು ವಟಪತ್ರಶಾಯಿಯಾಗಿ ತನ್ನ ಪಾದಾಂಗುಷ್ಟವನ್ನು ಸವೆಯುತ್ತಿದ್ದಾನೆ. ಪರಮಾತ್ಮನ ಪಾದದ ಮಹಿಮೆಯನ್ನು ಅರಿತು, ತಿರುಮಲ ಕ್ಷೇತ್ರದಲ್ಲಿ ವಾರಕ್ಕೊಮ್ಮೆ "ನಿಜಪಾದ ದರ್ಶನ ಸೇವೆ" ನಡೆಯುತ್ತದೆ." ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಮುದ್ರಿತವಾಗಿರಬಹುದು. "ದಾಸರಂದರೆ ಪುರಂದರದಾಸರಯ್ಯಾ" ರವರು ಪುರಂದರವಿಠ್ಠಲನಲ್ಲಿ ವಿನಂತಿಸುವಂತೆ " ಕಡೆಹಾಯಿಸುವ ಭಾರ ನಿನ್ನದದಕೆ ನಾ ಬಿಡೆ ನಿನ್ನ ಪಾದವ ಬಿಂಕವಿದೇತಕೆ ", ಆ ಭಗವಂತನನ್ನು ನೆನೆಯುತ್ತಾ ನಮ್ಮನ್ನು ಸಾಧನಮಾರ್ಗದಲ್ಲಿ ಕೈಹಿಡಿದು ನಡೆಸು ಎಂದು ಪ್ರಾರ್ಥಿಸೋಣ. ಸರ್ವಂ ಶ್ರೀಕೃಷ್ಣಾರ್ಪಣಮಸ್ತು.