Saturday, October 11, 2025

ಭಗವತನ ಸಂಕಲ್ಪಕ್ಕೆ ಇರುವ ಶಕ್ತಿ (Bhagavatana Sankalpakke iruva Shakti)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)


 


ಭರತವಂಶ ಪ್ರದೀಪಕನಾದ ಅಭಿಮನ್ಯು ಅರ್ಜುನ ಮತ್ತು ಸುಭದ್ರೆಯ ಸುಪುತ್ರ.  ಅವನು ತನ್ನ ಸದ್ಗುಣಗಳಿಂದ ಹಾಗೂ ಶೌರ್ಯದಿಂದ ಶ್ರೀಕೃಷ್ಣ ಪರಮಾತ್ಮನ ಪ್ರೀತಿಗೆ ಪಾತ್ರನಾಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಅಪ್ರತಿಮ ಶೌರ್ಯವನ್ನು ತೋರಿದ ಅಭಿಮನ್ಯು, ಕೌರವರ ಅಧರ್ಮಕ್ಕೆ ಗುರಿಯಾಗಿ ವೀರಮರಣವನ್ನು ಹೊಂದುತ್ತಾನೆ. ಯುದ್ಧದ ನಂತರ  ಭರತ ವಂಶವೇ ನಾಶವಾಗುವಂತಹ ಸ್ಥಿತಿ ತಲೆದೋರಿರುವಂತಹ ಸಂದರ್ಭ, ಆಗ ಅಭಿಮನ್ಯುವಿನ ಪತ್ನಿಯಾದಂತಹ ಉತ್ತರೆಯ ಗರ್ಭದಲ್ಲಿ ಭರತ ವಂಶದ ಏಕಮಾತ್ರ ಕುಡಿಯು ಬೆಳೆಯುತ್ತಿರುತ್ತದೆ. ಆದರೆ ಅದನ್ನು ನಾಶ ಮಾಡುತ್ತೇನೆ ಎಂಬ  ಹಠದಿಂದ ಮೂರ್ಖನಾದ ಅಶ್ವತ್ಥಾಮ ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಅದು ಹೊಟ್ಟೆಯಲ್ಲಿಯೇ ದಹಿಸಲ್ಪಟ್ಟು, ಆರೇ ತಿಂಗಳಿಗೆ ಭೂಮಿಗೆ ಬಂದು ಚೈತನ್ಯ ರಹಿತವಾದ ಸ್ಥಿತಿಯಲ್ಲಿ ಇರುತ್ತದೆ.


 ಭರತ ವಂಶ ಬೆಳೆಯಬೇಕು, ಧರ್ಮರಾಜ್ಯ ಮುಂದುವರಿಯಬೇಕು ಎಂಬುದು ಶ್ರೀ ಕೃಷ್ಣ ಪರಮಾತ್ಮನ ಸಂಕಲ್ಪ, ಹಾಗಾಗಿ ಶ್ರೀ ಕೃಷ್ಣನು ತನ್ನ ದಿವ್ಯವಾದ ಶಕ್ತಿಯಿಂದ ಆ ಮಗುವಿಗೆ ಚೈತನ್ಯವನ್ನು ನೀಡಿ ಅದರ ಮರುಹುಟ್ಟಿಗೆ ಕಾರಣನಾಗುತ್ತಾನೆ.ಆ ಶಿಶುವನ್ನು ಸಜೀವಗೊಳಿಸಿದ ನಂತರ ವಾಸುದೇವನು, 'ಕ್ಷೀಣಿಸಿ ಹೋಗುವುದರಲ್ಲಿದ್ದ ಕುಲದಲ್ಲಿ ಹುಟ್ಟಿ ಈ ಕುಲದ ವೃದ್ಧಿಗೆ ಕಾರಣನಾದ ಇವನು ಪರೀಕ್ಷಿತನೆಂದೇ ಪ್ರಸಿದ್ಧನಾಗಲಿ' ಎಂಬುದಾಗಿ ಉದ್ಘೋಷಿಸುತ್ತಾನೆ ಎಂಬುದು ಶ್ರೀಮನ್ಮಹಾಭಾರತ ಗ್ರಂಥದಲ್ಲಿ ಉಲ್ಲೇಖಿತವಾಗಿದೆ. ನಂತರ ಅವನು ಪರೀಕ್ಷಿತನೆಂದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾನೆ. ಹೀಗೆ ಪರಮಾತ್ಮನ ಸಂಕಲ್ಪದಿಂದ ಭರತ ವಂಶವು ಮುಂದುವರಿಯುತ್ತದೆ.


ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಂಡವನ್ನೇ ನಾಶ ಮಾಡುವ ಶಕ್ತಿ ಇರುತ್ತದೆ. ಅಂತಹ ಅಸ್ತ್ರಕ್ಕೆ ಗುರಿಯದವರು ಉಳಿಯುವುದು ಅಸಾಧ್ಯವೇ ಸರಿ. ಆದರೂ ಭಗವಂತನ ಸಂಕಲ್ಪಕ್ಕೆ  ಎಂತಹ ಅದ್ಭುತ ಶಕ್ತಿ ಇದೆ ಎಂಬುದನ್ನು ನಾವು ಪರೀಕ್ಷಿತನ ಚರಿತ್ರೆಯಿಂದ ಅರಿಯಬಹುದು. ಭಗವಂತನ ಸಂಕಲ್ಪಕ್ಕೆ ಮೂಕನನ್ನೂ ವಾಚಾಳಿಯನ್ನಾಗಿಸುವ, ಕಾಲಿಲ್ಲದವನನ್ನೂ ಬೆಟ್ಟ ಹತ್ತುವಂತೆ ಮಾಡುವ ಶಕ್ತಿ ಇದೆ ಎಂಬುದನ್ನು ಭಗವದ್ಗೀತೆಯ ಧ್ಯಾನ ಶ್ಲೋಕ ಸಾರುತ್ತದೆ. ಹಾಗಾಗಿ ಭಗವತ್ಸಂಕಲ್ಪ ಅನ್ನುವುದು ಪ್ರಕೃತಿಯನ್ನೂ  ಮೀರಿ ಕೆಲಸ ಮಾಡುವಂತಹದ್ದು.


  ನಾವು ಮಾಡುವ ಪ್ರತಿಯೊಂದು ಕಾರ್ಯದ ಪೂರ್ವದಲ್ಲಿಯೂ ಭಗವಂತ ನಿನ್ನ ಸಂಕಲ್ಪಕ್ಕೆ ಅನುಗುಣವಾಗಿ ಈ ಕಾರ್ಯವು ನೆರವೇರಲಿ ಎಂಬ ಪ್ರಾರ್ಥನೆ ಇದ್ದಾಗ ಆ ಕಾರ್ಯವು ಸುಸಂಪನ್ನವಾಗುವುದರಲ್ಲಿ ಸಂಶಯವಿಲ್ಲ, ಏಕೆಂದರೆ ಪಲಾಫಲಗಳ ಪರಿಪೂರ್ಣವಾದ ಜ್ಞಾನ ಸಮಸ್ತ ಲೋಕ ಹಿತಚಿಂತಕನಾದ ಭಗವಂತನಿಗೆ ಮಾತ್ರ ಇರುವುದಕ್ಕೆ ಸಾಧ್ಯ.


 "ಸಂಕಲ್ಪವು ಸದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ. ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ. ದಾರ ಸುತ್ತಿ ಬುಗುರಿಯನ್ನು ಆಡಿಸಿ ಬಿಟ್ಟರೆ ದಾರದ ಸಂಬಂಧ ತಪ್ಪಿದರೂ ಬುಗುರಿ ಆಡುತ್ತಲೇ ಇರುತ್ತದೆ. ಸಂಕಲ್ಪ ಹರಿದುದಕ್ಕೆ ಅಷ್ಟು ದೂರ ಕೆಲಸ ಉಂಟು. ಆದ್ದರಿಂದ ದೃಢ ಸಂಕಲ್ಪವಿರಲಿ". ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.


  ಪ್ರತಿಯೊಬ್ಬರೂ ಮನಸ್ಸಿನಲ್ಲಿ ಭಗವಂತನ ಸ್ಮರಣೆಯೊಂದಿಗೆ ಸತ್ಸಂಕಲ್ಪವನ್ನು ಮಾಡಿಕೊಂಡು ಜೀವನದ ಹೆಜ್ಜೆಗಳನ್ನು ಇಡುತ್ತಾ ಹೋದಾಗ ಭಗವಂತನ ಸಂಕಲ್ಪವೂ ನಮ್ಮ ಮೇಲೆ ಹರಿದು  ಐಹಿಕ ಹಾಗೂ ಪಾರಮಾರ್ಥಿಕ ಜೀವನದ ಪರಿಪೂರ್ಣ ಸೊಬಗನ್ನು ಅನುಭವಿಸಬಹುದಾಗಿದೆ.


ಸೂಚನೆ : 11/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.