ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳಿಗೆ ಒಂದು ವಿಶೇಷವಾದ ಸ್ಥಾನವಿದೆ. ಜೀವನಚಕ್ರದಲ್ಲಿ ಬರುವ ಹತ್ತುಹಲವು ಘಟ್ಟಗಳನ್ನು ಉತ್ಸವಗಳಾಗಿ ನಾವು ಆಚರಿಸುತ್ತೇವಲ್ಲವೇ? ಹಾಗೆಯೇ, ಋತುಚಕ್ರದ ಪ್ರಮುಖವಾದ ದಿನಗಳನ್ನೂ ಆಚರಿಸುತ್ತೇವೆ. ಇವುಗಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳುಂಟಷ್ಟೆ. ಅಷ್ಟೇ ಅಲ್ಲದೆ, ಸಾಮಾಜಿಕ ಮಹತ್ತ್ವವೂ ಉಂಟು.
ವರ್ಷದಲ್ಲಿ ಹಲವು ಹಬ್ಬಸಾಲುಗಳು ಬರುವುದುಂಟು. ಹಬ್ಬಸಾಲೆಂದರೆ ಸಾಲುಸಾಲಾಗಿ ಹಬ್ಬಗಳನ್ನಾಚರಿಸುವುದು. ಒಂದೇ ಕಾಲಘಟ್ಟದಲ್ಲಿ ಒಂದರ ಹಿಂದೊಂದಂತೆ ಸರಮಾಲೆಯಾಗಿ ಬರುವ ಹಬ್ಬಗಳಿವೆಯಲ್ಲವೇ? ಉದಾಹರಣೆಗೆ ವಸಂತಕಾಲದಲ್ಲಿ ಯುಗಾದಿ, ವಸಂತನವರಾತ್ರ, ರಾಮನವಮಿ, ಹನೂಮಜ್ಜಯಂತಿಗಳು ಬರುತ್ತವೆ. ವರ್ಷರ್ತುವಿನಲ್ಲಿ ನಾಗಪಂಚಮಿ, ವರಮಹಾಲಕ್ಷ್ಮಿ, ಗೌರೀ-ಗಣೇಶ ಹಬ್ಬಗಳು. ಶರತ್ಕಾಲದಲ್ಲಿ ನವರಾತ್ರಿ, ದೀಪಾವಳಿ, ತುಲಸೀಹಬ್ಬ, ಕಾರ್ತಿಕ ದೀಪೋತ್ಸವಗಳ ದೊಡ್ದ ಹಬ್ಬಸಾಲು!
ಇವಲ್ಲಿ ಕೆಲವು ಋತು-ಸಂಬಂಧಿಯಾದ ಪರ್ವದಿನಗಳು. ಉದಾಹರಣೆಗೆ, ಸಂಕ್ರಾಂತಿ, ಯುಗಾದಿ. ಮತ್ತೆ ಕೆಲವು ದೇವತಾ-ಸಂಬಂಧಿಯಾದವುಗಳು. ಉದಾಹರಣೆಗೆ, ರಾಮನವಮಿ, ಕೃಷ್ಣಜನ್ಮಾಷ್ಟಮಿ.
ಸುಖ-ದುಃಖಗಳು, ಆರೋಗ್ಯ-ಅನಾರೋಗ್ಯಗಳು, ಸಮಾಧಾನ-ದುಗುಡಗಳು ಚಕ್ರದಂತೆ ಜೀವನದಲ್ಲಿ ಏರುಪೇರು ಮಾಡುತ್ತಿರುತ್ತವೆ. ಇದಕ್ಕೆ ಪ್ರತಿಯಾಗಿ, ನಮ್ಮನ್ನು ದೃಢವಾಗಿ ಧ್ರುವವಾಗಿ ನಿಲ್ಲಿಸುವುದು ಭಗವದಭಿಮುಖತೆಯೊಂದೇ. ಅದನ್ನು ಮಾಡಲೋಸುಗವೇ ನಮ್ಮ ಋಷಿಪರಂಪರೆಯು ಈ ಹಬ್ಬ-ಹರಿದಿನಗಳನ್ನೂ ಪುಣ್ಯಕಾಲಗಳನ್ನೂ ರೂಪಿಸಿಕೊಟ್ಟಿರುವುದು. ಅವುಗಳ ತತ್ತ್ವಗಳನ್ನರಿತು ಆಚರಿಸಿದಾಗ ಚತುರ್ಭದ್ರವೂ ಲಭ್ಯ. ಎಂದರೆ ನಾಲ್ಕು ಪುರುಷಾರ್ಥಗಳೂ ನಮಗೆ ದೊರೆಯುವುವು. ಇಲ್ಲಿ ಶ್ರೇಯಸ್ಸೂ ಉಂಟು ಪ್ರೇಯಸ್ಸೂ ಉಂಟು. ಹಾಗೆಂದರೆ, ಪರದಲ್ಲಿ ಒಳಿತೂ ಉಂಟು, ಇಹದಲ್ಲಿ ದೊರೆಯುವ ಇಂದ್ರಿಯಗಳ ಸುಖವೂ ಉಂಟು.
ಈ ಅಭಿಮುಖತೆಯನ್ನೇ ಸಾಮಾನ್ಯಜೀವನದಲ್ಲೂ ಅಳವಡಿಸಿಕೊಳ್ಳಬೇಕು – ಎನ್ನುತ್ತಾರೆ, ಮಹಾತ್ಮರು. ಉದಾಹರಣೆಗೆ, ಕನಕದಾಸರು "ತನು ನಿನ್ನದು ಜೀವನ ನಿನ್ನದು, ರಂಗಾ" ಎಂಬ ಕೃತಿಯಲ್ಲಿ ಇಂದ್ರಿಯಗಳು ಭೋಗಿಸುವ ವಸ್ತುಗಳನ್ನೆಲ್ಲಾ ಭಗವದರ್ಪಣ ಮಾಡಿ ಕೃತಾರ್ಥರಾಗಿರಿ - ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಮುಕುಂದಮಾಲೆಯಲ್ಲಿ ಬರುವ "ಜಿಹ್ವೇ ಕೀರ್ತಯ ಕೇಶವಂ" ಎಂಬ ಶ್ಲೋಕವು, ಎಲ್ಲ ಇಂದ್ರಿಯಗಳಿಗೂ ಭಗವತ್ಸಂಬಂಧಿಯಾದ ವಿಷಯವನ್ನು ಕೊಡುವಂತೆ ತಿಳಿಹೇಳುತ್ತದೆ.
ಇಂದ್ರಿಯ-ಜಗತ್ತಿನಲ್ಲಿದ್ದುಕೊಂಡೂ ಭಗವಂತನಿಗೆ ಅಭಿಮುಖವಾಗಿ ಇರುವುದೇ ಎರಡೂ ಹಾದಿಗಳಲ್ಲೂ ಏಕೋದ್ದೇಶವಾಗಿದೆ. ಇದೇ ಉದ್ದೇಶವನ್ನು ಮತ್ತೂ ವಿಶೇಷವಾಗಿ ಹಬ್ಬ-ಹರಿದಿನಗಳಂದು ನಡೆಸುವುದಾಗುತ್ತದೆ. ಏಕೆಂದರೆ, ಈ ಪರ್ವದಿನಗಳು ಆಧ್ಯಾತ್ಮಿಕಪ್ರಗತಿಗೆ ಹೇಳಿಮಾಡಿಸಿದಂತಹ ಕಾಲಘಟ್ಟಗಳು. ಆದಾಗ್ಯೂ ಅದರೊಂದಿಗೇ ಇಂದ್ರಿಯಗಳಿಗೂ ಹಬ್ಬವಾಗುತ್ತವೆ.
ನಮ್ಮಲ್ಲಿ ಹಲವರಿಗೆ ಹಬ್ಬ ಎಂದರೆ ಹೊಸಬಟ್ಟೆ, ರುಚಿಯಾದ ತಿಂಡಿತಿನಿಸುಗಳು, ಹಲವಾರು ಬಂಧು-ಸ್ನೇಹಿತರೊಂದಿಗೆ ಕಾಲ-ಯಾಪನ (ಎಂದರೆ ಕಾಲ ಕಳೆಯುವುದು) - ಮುಖ್ಯವಾಗಿ ಇಷ್ಟೇ. ಇನ್ನು ಕೆಲವರಿಗೆ ದೇವರ ಪೂಜೆ, ದೇವರಿಗೆ ಮಾಡುವ ಹೂವಿನ ಅಲಂಕಾರ ಇವುಗಳಲ್ಲಿ ಆಸಕ್ತಿ.
ಆದರೆ ಇವೆಲ್ಲಕ್ಕೂ ಸಾರಭೂತವಾದದ್ದೆಂದರೆ ಆ ಹಬ್ಬದ ಆಚರಣೆಯ ಹಿಂದಿರುವ ತತ್ತ್ವದ ಜ್ಞಾನ. ಅದನ್ನು ತಿಳಿದಾಗಲೇ, ನಾವು ಆಚರಣೆ ಮಾಡುತ್ತಿರುವ ರೀತಿಯಲ್ಲಿ ಆ ತತ್ತ್ವಕ್ಕೆ ವಿರುದ್ಧವಾದದ್ದೇನೂ ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲು ಸಾಧ್ಯ.
ಉದಾಹರಣೆಗೆ, ಸಂತೋಷವಾಗಿ ನಮ್ಮವರೊಂದಿಗೆ ಕುಳಿತು, ನೈವೇದ್ಯ ಮಾಡಿರುವಂತಹ ರುಚಿಯಾದ ಆಹಾರವನ್ನು ಸೇವಿಸುವುದು ಹಬ್ಬದ ಒಂದು ಉದ್ದೇಶವೇ ಆದರೂ, ಅದರೊಂದಿಗಿನ ಮುಖ್ಯೋದ್ದೇಶವನ್ನು ಮರೆಯುವಂತಿಲ್ಲ. ಶ್ರೀರಂಗಮಹಾಗುರುಗಳ ಮಾತುಗಳಲ್ಲಿ ಹೇಳಬೇಕೆಂದರೆ "ಅಂದು ಸೇವಿಸುವ ಆಹಾರ ಪಾನೀಯಗಳು ಕೇವಲ ಉದರತೃಪ್ತಿಯಲ್ಲಿ ನಿಲ್ಲದೆ ದಾಮೋದರನ ಸಂತೃಪ್ತಿಯಲ್ಲಿ ವಿಶ್ರಾಂತಿ ಹೊಂದಬೇಕು".
ಹಬ್ಬವೇನೋ ಗೊತ್ತು, ಹರಿದಿನಗಳೆಂದರೇನು? ಹರಿದಿನ ಎಂದರೆ ಹರಿಯ ದಿನ, ಎಂದರೆ ಭಗವದಾರಾಧನೆಗೆ ಮಾತ್ರ ಸಮರ್ಪಿತವಾದ ದಿನ. ಹಬ್ಬಗಳಲ್ಲಾದರೂ ಭಗವಂತನ ಆರಾಧನೆಯೊಂದಿಗೆ ಇಂದ್ರಿಯಪ್ರೀತಿಯಾಗುವ ವಿಷಯಗಳನ್ನು ಕೊಡುವುದುಂಟು.
ಇವುಗಳಲ್ಲಿ ಕೆಲವು ವಿಶೇಷವಾದ "ಉಪವಾಸ"ದ ಪರ್ವಗಳಿವೆ - ಶಿವರಾತ್ರಿ, ಏಕಾದಶಿಯಂತಹವು. ಭಗವದಾರಾಧನೆಗೇ ಒತ್ತು, ಹೊಟ್ಟೆಗೆ ಉಪವಾಸ, ಆತ್ಮನಿಗೆ "ಉಪ-ವಾಸ", ಎಂದರೆ ದೇವರ ಸಂನಿಧಿಯಲ್ಲಿ ವಾಸ, ಹಾಗೂ ಅದರ ಮೂಲಕ ಆನಂದದೌತಣ.
ಇನ್ನು ಅವುಗಳ ಆಚರಣೆಗೆ ಬಂದರೆ, ಹಬ್ಬ-ಹರಿದಿನಗಳಲ್ಲಿ ನಮ್ಮ ಮನಃಸ್ಥಿತಿಯನ್ನು ಹೇಗಿಟ್ಟುಕೊಂಡಿರಬೇಕು? ಭರ್ಜರಿಯಾಗಿ ಪೂಜೆ ಮಾಡಲು ಅಣಿಮಾಡಿಕೊಳ್ಳುವ ಭರದಲ್ಲಿ ಮನಸ್ಸಿಗೆ ಟೆನ್ಷನ್ ಅನ್ನೋ ಕೆಲಸ ಸಾಗದಿದ್ದಾಗ ಬೇರೆಯವರ ಮೇಲೆ ಕಿಡಿಗಾರುವುದೋ ಅಥವಾ ಆಗುವ ಖರ್ಚಿಗೆ ಕೊರಗುತ್ತಲೋ ಇರುವುದು ಸರಿಯಲ್ಲ.
ಭಗವಂತನ ಪೂಜೆಗೆ ಮೊಟ್ಟಮೊದಲು ಬೇಕಾದದ್ದು ಮನಸ್ಸಿನ ಶಾಂತಿ, ತದನಂತರ ಯಥಾಶಕ್ತಿ ತಯಾರಿ. ಉದ್ವೇಗದಿಂದ ಮಾಡುವ ಕಾರ್ಯವಲ್ಲ ಇದು. ನೀರಿನ ಮೇಲೆ ರಂಗೋಲೆ ಹಾಕುವುದನ್ನು ಕೇಳಿರಬಹುದು ನೀವು. ಅದಕ್ಕೆ ತಟ್ಟೆಯಲ್ಲಿ ನಿಶ್ಚಲವಾದ ನೀರಿನ ಮೇಲೆ ಇಜ್ಜಲಿನ ಪುಡಿಯ ಒಂದು ಪದರವನ್ನು ತೆಳ್ಳಗೆ ಉದುರಿಸಿ, ನಂತರ ಅದರ ಮೇಲೆ ರಂಗೋಲೆ ಹಾಕಲಾಗುತ್ತದೆ! ನೀರು ನಿಶ್ಚಲವಾಗಿ ಇರದಿದ್ದರೆ, ಅಲ್ಲಿ ರಂಗೋಲೆ ಹಾಕುವುದು ಅಸಾಧ್ಯವಾಗುತ್ತದೆ. ಅದೇ ರೀತಿ ಇಲ್ಲೂ - ಶಾಂತಚಿತ್ತರಾಗಿ ಪೂಜೆ ಮಾಡಿದಾಗಲೇ ನಮಗೆ ಭಗವಂತನೆಡೆಗೆ ಮನಸ್ಸನ್ನು ಸಂಪೂರ್ಣ ಕೊಡಲಾಗುವುದು.
ಐತಿಹಾಸಿಕವಾಗಿ, ನಮ್ಮಲ್ಲಿ ಜಗನ್ನಾಥಪುರಿಯ ರಥೋತ್ಸವದಂತಹ ಉತ್ಸವಗಳೂ ಕುಂಭಮೇಳದಂತಹ ಧಾರ್ಮಿಕ ಸೇರ್ವೆಗಳೂ ಸಾಮೂಹಿಕವಾದ ಆಚರಣೆಗಳಾಗಿವೆ, ಹಬ್ಬಗಳಲ್ಲ. ಆದರೆ ಮಹಾರಾಷ್ಟ್ರ ಪ್ರಾಂತದಲ್ಲಿ ಗಣೇಶೋತ್ಸವವನ್ನು ಆಚರಿಸುವುದರ ಮೂಲಕ ಹಬ್ಬಗಳನ್ನು ಸಾಮೂಹಿಕವಾದ ಆಚರಣೆಯಾಗಿ ಮಾಡಲು ಪ್ರಾರಂಭಿಸಿ ಸನಾತನಿಗಳನ್ನು ಒಗ್ಗೂಡಿಸಿದ್ದು ಬಾಲಗಂಗಾಧರ ಟಿಳಕರು.
ಸಾಮೂಹಿಕವಾಗಿ ಪರ್ವದಿನವನ್ನು ಆಚರಿಸುವಾಗಲಂತೂ ವಿಶೇಷವಾಗಿ ಅದರ ಮೂಲತತ್ತ್ವಕ್ಕೆ ವಿರುದ್ಧವಾಗಿ ನಾವೇನೂ ಮಾಡುತ್ತಿಲ್ಲ ತಾನೇ? - ಎಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಉದಾಹರಣೆಗೆ, ಹಲವೆಡೆಗಳಲ್ಲಿ ಗಣೇಶನ ಹಬ್ಬ ಆಚರಿಸುವ ಹೆಸರಲ್ಲಿ ಸಭ್ಯವೆನಿಸದ ಸಿನಿಮಾ-ಸಂಗೀತವನ್ನು ಧ್ವನಿವರ್ಧಕಗಳ ಮೂಲಕ ಹಾಕುವುದು ಯಾವ ರೀತಿಯಲ್ಲೂ ಆ ದೇವತಾರಾಧನೆಗಾಗಲಿ, ಅದು ತಂದುಕೊಡಬೇಕಾದ ಮನೋವೃತ್ತಿಗಾಗಲಿ, ಪೂರಕವಾದದ್ದಲ್ಲ.
ಕಾಲಧರ್ಮವು ಪೋಷಕವಾಗಿರುವಾಗ ಆಧ್ಯಾತ್ಮಿಕಪ್ರಗತಿಗೆ ನಾವು ಶ್ರಮಿಸಬೇಕು. ಅದಕ್ಕೆ, ಶ್ರೀರಂಗಮಹಾಗುರುಗಳು ಹೇಳಿದ ಸೂತ್ರ "ಗಾಳಿ ಬಂದಾಗ ತೂರಿಕೋ" - ಎಂಬುದಾಗಿ. ಅದನ್ನು ನೆನೆದು, ಈ ಮುಂದೆ ಬರುವ ಪರ್ವದಿನಗಳನ್ನು ತತ್ತ್ವವನ್ನು ತಿಳಿದು, ಶಾಂತರಾಗಿ ಆಚರಿಸುವತ್ತ ನಾವು ಮನಸ್ಸು ಕೊಡಬೇಕು, ಅಲ್ಲವೇ?
ಸೂಚನೆ : 11/10/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.