Saturday, August 30, 2025

ಅಷ್ಟಾಕ್ಷರೀ 88 ಮೂಷಕವಾಹನಮ್ (Astaksari 88)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಗಣಪನ ಹೊರುವವ ಇಲಿಯೇ ಏಕೆ?

ಈಗಷ್ಟೇ ಗೌರಿ-ಗಣೇಶ ಹಬ್ಬಗಳು ಮುಗಿದಿವೆ. ಅವುಗಳತ್ತ ಒಂದು ಹಿನ್ನೋಟವು ಅನುಚಿತವೇನಾಗಲಾರದು.

"ಗಣಪನಿಲ್ಲದ ಗ್ರಾಮವಿಲ್ಲ" ಎಂಬ ಗಾದೆಯೇನೋ ಕನ್ನಡದಲ್ಲಿದೆ. ಇತರ-ದೇವತೆಗಳ ಪೂಜೆಯಂತೆ ಗಣಪತಿ-ಪೂಜೆಯೂ ಮನೆಮನೆಗಳಲ್ಲಷ್ಟೆ ನಡೆಯುತ್ತಿದ್ದದ್ದು. ಅದನ್ನೊಂದು ರಾಷ್ಟ್ರೀಯ ಹಬ್ಬವನ್ನಾಗಿಸಿದವರು ಬಾಲಗಂಗಾಧರತಿಲಕರು. ಆಗ ಹೇಗಿತ್ತು?: ಆಂಗ್ಲರ ದಬ್ಬಾಳಿಕೆ ಮಿತಿಮೀರಿತ್ತು; ಜನರಲ್ಲಿ ದೇಶಭಕ್ತಿ ಕ್ಷೀಣಿಸಿತ್ತು; ಸ್ವಸಂಸ್ಕೃತಿಯ ಅಭಿಮಾನ ನಷ್ಟವಾಗಿತ್ತು; ಆಗ ಗಣೇಶೋತ್ಸವವನ್ನೇ ಬಳಸಿಕೊಂಡು ಜನಜಾಗರಣವನ್ನುಂಟುಮಾಡಿ, ಸ್ವಾತಂತ್ರ್ಯಾಂದೋಳನದ ಕೆಚ್ಚನ್ನು ಹೆಚ್ಚಿಸಿದವರೇ ಲೋಕಮಾನ್ಯರು. 

ಬ್ರಿಟಿಷರನ್ನು ಒದ್ದೋಡಿಸಿದ್ದೇನೋ ಆಯಿತು. ಆದರೆ ಪಾಶ್ಚಾತ್ತ್ಯರನ್ನು ನಾವು ಸಂಪೂರ್ಣವಾಗಿ ತೊಲಗಿಸಲಾಗಿಲ್ಲ. ಹೇಗೆ? ನಮ್ಮ ಪ್ರಾಚೀನ-ಸಾಹಿತ್ಯಗಳಿಗಾಗಲಿ, ಕಲೆ-ಶಿಲ್ಪಗಳಿಗಾಗಲಿ, ಅವರಿತ್ತ ವ್ಯಾಖ್ಯಾನಗಳೇ ಇನ್ನೂ ನಮ್ಮ ತಲೆ ತಿನ್ನುತ್ತಿವೆ. ಅಲ್ಲಿಗೆ, ಭೌತಿಕವಾಗಿ ಅವರನ್ನು ಓಡಿಸಿದ್ದಾಯಿತು, ಬೌದ್ಧಿಕವಾಗಿ ಓಡಿಸಲಾಗಿಲ್ಲ. ಪಾಶ್ಚಾತ್ಯರ ಮಾನಸ-ಪುತ್ರರೇ ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲೆಲ್ಲಾ ತುಂಬಿಹೋಗಿದ್ದಾರೆ!

ನಮ್ಮಲ್ಲಿಯ ಪಂಚಾಯತನ-ಪೂಜೆಯಲ್ಲಿ ಒಂದನ್ನು ಪ್ರಧಾನದೇವತೆಯನ್ನಾಗಿಯೂ ಉಳಿದವನ್ನು ಗೌಣದೇವತೆಗಳನ್ನಾಗಿಯೂ ಭಾವಿಸುವುದಿದೆ. ಅಲ್ಲಿಯ ಐದು ದೇವತೆಗಳೆಂದರೆ ಆದಿತ್ಯ, ಅಂಬಿಕೆ, ವಿಷ್ಣು, ಗಣನಾಥ, ಹಾಗೂ ಮಹೇಶ್ವರ. ಸ್ವ-ಸ್ವ-ಸಂಪ್ರದಾಯಾನುಸಾರ ಗೌಣ-ಪ್ರಧಾನಗಳನ್ನು ಗುರುತಿಸಲಾಗುತ್ತದೆ. ಹೀಗೆ ಪೂಜಾಸಂಪ್ರದಾಯದಲ್ಲಿ ಗಣಾಧಿಪನಿಗೆ ಸ್ಥಾನವು ಸ್ಪಷ್ಟವಾಗಿದೆ.

ಈ ವಿಘ್ನರಾಜನ ಸ್ವರೂಪ-ಉಪಾಸನಾಕ್ರಮಫಲಗಳನ್ನು ಪುರಾಣಗಳಲ್ಲಿ ಹೇಳಿದೆ. ಉಪನಿಷತ್ತುಗಳಲ್ಲಿ ಗಜಾನನನ ಗರಿಮೆಯ ಚಿತ್ರಣವಿದೆ. ವೇದಗಳಲ್ಲಿ ಗಣಪತಿಯೆಂಬುದನ್ನು ವಿಶೇಷಣವಾಗಿಯೂ ನಾಮವಾಗಿಯೂ ಬಳಸಿದೆ. ಗೃಹ್ಯಸೂತ್ರ-ಧರ್ಮಸೂತ್ರಗಳಲ್ಲೂ ಗಣೇಶ್ವರನ ವಿಘ್ನಕಾರಿತ್ವವನ್ನೋ ವಿಘ್ನಹಾರಿತ್ವವನ್ನೋ ಹೇಳಿದೆ. ಜೈನ-ಬೌದ್ಧ-ಸಾಹಿತ್ಯಗಳಲ್ಲೂ ವಿನಾಯಕ-ಪೂಜಾ-ಸಂಪ್ರದಾಯದ ಚಿತ್ರಣವಿದೆ.

ಹೀಗಿದ್ದರೂ, ನಮ್ಮ ಲಂಬೋದರನು ಒಬ್ಬ ದ್ರಾವಿಡದೇವತೆಯೆಂದೂ, ಮುಂದೆ ಆರ್ಯಜನಾಂಗದಿಂದ ಸ್ವೀಕೃತನಾದನೆಂದೂ ಪಾಶ್ಚಾತ್ತ್ಯರ ವಾದವಾಗಿದೆ.

ಗಣೇಶನು ಗಣಗಳಿಗೊಡೆಯ. ಗಣಗಳು ವಿಘ್ನಕಾರಿಗಳೋ ವಿಘ್ನಹಾರಿಗಳೋ? - ಎಂಬ ಪ್ರಶ್ನೆಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಉತ್ತರವು ಸಮಂಜಸವಾಗಿದೆ. "ರುದ್ರನು ಸಂಹಾರಕ್ಕೆ ಅಧಿದೇವತೆ. ಬೇರೆ ಬೇರೆ ಸಮಯಗಳಲ್ಲಿ ಪ್ರಾಣಿಗಳನ್ನು ರಕ್ಷಿಸುವ ಸಾಮರ್ಥ್ಯವೂ ಭಕ್ಷಿಸುವ ಸಾಮರ್ಥ್ಯವೂ ಗಣಗಳಿಗುಂಟು."

ಗಣೇಶನಿಗೆ ಆನೆಯ ತಲೆಯೇ ಏಕೆ? ಮೂಷಕವೇ ವಾಹನವೇಕೆ? – ಎಂಬ ಪ್ರಶ್ನೆಗಳ ಉತ್ತರವು ಲೌಕಿಕವಾದ ಊಹೆಗಳಿಂದ ದಕ್ಕುವುದಲ್ಲ.

ಇಲಿಯು ದವಸ-ಧಾನ್ಯಗಳನ್ನು ತಿಂದುಬಿಡುವುದು; ಆನೆಗಳು ಹೊಲ-ಗದ್ದೆಗಳಿಗೆ ನುಗ್ಗಿ ಸಸ್ಯರಾಶಿಯನ್ನು ಹಾಳುಮಾಡುವುವು.  ಈ ತೊಂದರೆಗಳನ್ನು ಕೊನೆಗಾಣಿಸಲೆಂದೇ ಗಜಮುಖವನ್ನೂ ಮೂಷಕವಾಹನವನ್ನೂ ಉಳ್ಳ ದೇವರನ್ನು ರೈತರು ಸೃಷ್ಟಿಸಿಕೊಂಡರು - ಎಂದು ವಿವರಿಸುವವರುಂಟು.

ಹಾಗೆಯೇ, ಆನೆಯು ಬೃಹತ್ತಾದ ಪ್ರಾಣಿ, ಇಲಿಯು ಕಿರಿದಾದದ್ದು - ಎರಡು ಬಗೆಗಳಿಂದಲೂ ನುಗ್ಗಲೋ ನುಸುಳಲೋ ಆಗುವಿಕೆಯನ್ನು ಮೇಲೂ ಕೆಳಗೂ ಇರುವ ಈ ಪ್ರಾಣ್ಯಂಗಗಳು ಸೂಚಿಸುತ್ತವೆ - ಎಂದೂ ವಿವರಿಸಲು ಯತ್ನಿಸುವವರುಂಟು.

ಇವುಗಳೆಲ್ಲವೂ ಸ್ವಕಪೋಲಕಲ್ಪಿತಗಳೇ - ಎಂದರೆ ಬರೀ ಊಹೆಗಳೇ. ಹಾಗಾದರೆ ಸೊಳ್ಳೆ-ತಿಗಣೆಗಳ ಕಾಟಕ್ಕೋ ಜಿಂಕೆ-ಜಿರಲೆಗಳ ಕಾಟಕ್ಕೋ ಒಂದೊಂದು ದೇವರನ್ನೋ ದೇವರ ಆಯುಧ/ವಾಹನಗಳನ್ನೋ ಕಲ್ಪಿಸಬಹುದಿತ್ತಲ್ಲ? ಅವೇಕಿಲ್ಲ?

ಪ್ರಕೃತ, ಗಣೇಶನು ಮೂಷಿಕವನ್ನು ವಾಹನವನ್ನಾಗಿಸಿಕೊಂಡಿರುವುದರ ತತ್ತ್ವವನ್ನು ಮಾತ್ರ ಇಲ್ಲಿ ಪರಿಶೀಲಿಸಿದೆ.  ಇಲಿಗೆ ಮೂಷಕ/ಮೂಷಿಕ ಎಂಬ ಹೆಸರಿದೆಯಷ್ಟೆ? ಇದು ಬಂದಿರುವುದು ಸಂಸ್ಕೃತದ ಮುಷ್ ಎಂಬ ಧಾತುವಿನಿಂದ. ಅದಕ್ಕೆ ಕದಿಯುವುದೆಂಬ ಅರ್ಥ. ಇಂಗ್ಲೀಷಿನ mouse ಎಂಬ ಪದವು ಸಂಸ್ಕೃತಪದಕ್ಕೆ ಜ್ಞಾತಿಪದವೇ ಆಗಿದೆ.

ಮೂಷಕನೊಬ್ಬ ಅಸುರ; ವಿಘ್ನೇಶ್ವರನ ಮೇಲೇ ಯುದ್ಧಮಾಡಿದ; ಸೋತು ಶರಣಾದ; ವಾಹನರೂಪವಾಗಿದ್ದುಕೊಂಡು ನನಗೆ ಸೇವೆಯನ್ನು ಸಲ್ಲಿಸು - ಎಂಬುದಾಗಿ ಅನುಗ್ರಹವನ್ನಾತನಿಗೆ  ಗಣೇಶನು ಮಾಡಿದ - ಎಂಬುದಾಗಿ ಪುರಾಣ-ಕಥೆಯಿದೆ. ನಟರಾಜನು ಅಪಸ್ಮಾರನನ್ನು ಮೆಟ್ಟಿರುವಂತೆಯೇ ಇದೂ.

ಇದರ ವಿವರಣೆಯನ್ನು ಮಹಾಯೋಗಿಗಳಾದ ಶ್ರೀರಂಗಮಹಾಗುರುಗಳು ಹೀಗೆ ಕೊಟ್ಟಿರುವರು:

"ಯಜ್ಞ-ಯಾಗಾದಿಗಳನ್ನು ಆಚರಿಸುವಾಗ ಆಸುರೀಶಕ್ತಿಗಳು ಅಡ್ಡಿಮಾಡಿ ದೇವತೆಗಳಿಗೆ ಸಲ್ಲಬೇಕಾದದ್ದು ಸಲ್ಲದಂತೆ ಮಾಡುವುದುಂಟು. ಯೋಗಮಾರ್ಗದಲ್ಲಿ ಸಾಗುವಾಗ ಚಿತ್ತಚಾಂಚಲ್ಯವೇ ಮುಂತಾದ ಯೋಗವಿಘ್ನಗಳು ಬರುವುದುಂಟು. ಹೀಗೆ ಧ್ಯಾನೋಪಾಸನೆಗಳಲ್ಲಿ ಅಡ್ಡಿಯೊಡ್ಡುವ ದುಷ್ಟಶಕ್ತಿಗಳ ಮೂಲಮೂರ್ತಿಯೇ ಗಣೇಶ-ವಾಹನವಾದ ಈ ಮೂಷಕವೆಂಬುದು. ಅದನ್ನೇ ದಮನ ಮಾಡಿ ತನ್ನನ್ನು ಹೊರುವ ಸೇವೆಗದನ್ನು ನೇಮಿಸಿಕೊಂಡಿರುವವನೇ ಗಣೇಶ. ಆರಂಭದಲ್ಲಿಯೇ ಆತನ ಅನುಗ್ರಹವು ಸಂಪಾದ್ಯ. ಅದಿಲ್ಲದೆ ಯೋಗವಿಘ್ನಗಳನ್ನು ಹತ್ತಿಕ್ಕುವುದು ಮಹಾಕಷ್ಟವೇ ಸರಿ." 

ಎಂದೇ "ನೌಮಿ ಮೂಷಕವಾಹನಮ್" (ಮೂಷಕವಾಹನನನ್ನು ಸ್ತುತಿಸುವೆ) – ಎಂಬ ನುಡಿಯಿರುವುದು.

ಹೀಗೆ, ಉಪಾಸನೆಗೆ ಸಂಬಂಧಪಟ್ಟ ಯೋಗಗಮ್ಯ-ವಿಷಯಗಳ ನೆಲೆಯನ್ನು ತತ್ತ್ವದರ್ಶಿಗಳಾದ ಜ್ಞಾನಿಗಳಿಂದ ಪಡೆಯತಕ್ಕದ್ದೇ ವಿನಾ, ಪೊಳ್ಳಾದ ಟೊಳ್ಳಾದ ಊಹಾಪೋಹಗಳಲ್ಲಿ ನಿರತರಾದವರಿಂದ ಅಲ್ಲ.

ಸೂಚನೆ: 30/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.